ನಟಿ ಅದ್ವಿತಿ ಶೆಟ್ಟಿ ನಾಯಕಿಯಾಗಿರುವ, ನವ ನಟ ರಾಕೇಶ್ ಬಿರಾದರ್ ನಾಯಕನಾಗಿ ಅಭಿನಯಿಸಿರುವ ಹೊಸ ಸಿನಿಮಾ ‘ಧೀರ ಸಾಮ್ರಾಟ್’ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಧೀರ ಸಾಮ್ರಾಟ್’ ಸಿನಿಮಾದ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದ್ದು, ಇದೇ ನವೆಂಬರ್ 17ಕ್ಕೆ ‘ಧೀರ ಸಾಮ್ರಾಟ್’ ಸಿನಿಮಾ ಬಿಡುಗಡೆಯಾಗಿ ಥಿಯೇಟರಿಗೆ ಬರುತ್ತಿದೆ.

‘ತನ್ವಿ ಪ್ರೊಡಕ್ಷನ್ ಹೌಸ್’ ಬ್ಯಾನರಿನಲ್ಲಿ ನಿರ್ಮಾಪಕ ಗುರು ಬಂಡಿ ನಿರ್ಮಾಣದಲ್ಲಿ ಮೂಡಿಬಂದಿರುವ ಈ ‘ಧೀರ ಸಾಮ್ರಾಟ್’ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ ಮತ್ತು ರಾಕೇಶ್ ಬಿರಾದಾರ್ ಜೊತೆಗೆ ನಾಗೇಂದ್ರ ಅರಸ್, ಸಂಕಲ್ಪ ಪಾಟೀಲ್, ಬಾಲರಾಜ್ ವಾಡಿ, ರಮೇಶ್ ಭಟ್, ಶೋಭರಾಜ್, ಯತಿರಾಜ್, ಶಂಕರ್ ಭಟ್, ಮನಮೋಹನ್ ರೈ, ರವೀಂದ್ರನಾಥ್, ಜ್ಯೋತಿ ಮೂರೂರು, ಇಂಚರಾ, ಹರೀಶ್ ಅರಸು, ರವಿರಾಜ್, ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಿರ್ದೇಶಕ ಪವನ್ ಕುಮಾರ್ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದ್ದು, ಅದರಲ್ಲಿ ‘ಏನ್ ಚಂದ ಕಾಣಿಸ್ತಾಳೆ ನಮ್ ಹುಡುಗಿ…’ ಎಂಬ ಹಾಡು ಸೋಶಿಯಲ್ ಮೀಡಿಯಾದಲ್ಲಿ 2 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಸದ್ಯ ‘ಧೀರ ಸಾಮ್ರಾಟ್’ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸಲು ಭರದಿಂದ ತಯಾರಿ ಮಾಡಿಕೊಂಡಿದೆ ಚಿತ್ರತಂಡ.





