ಇತ್ತೀಚೆಗೆ ಶೀರ್ಷಿಕೆ ಅನಾವರಣ ಮತ್ತು ಅದಕ್ಕಾಗಿ ಪ್ರಯೋಗಿಸಿದ್ದ ಕ್ರಿಯಾಶೀಲ ನಡೆಗಳಿಂದ ಗಮನ ಸೆಳೆದಿದ್ದ ಚಿತ್ರ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’. ಅರುಣ್ ಅಮುಕ್ತ ನಿರ್ದೇಶನದ ಈ ಚಿತ್ರದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಶೀರ್ಷಿಕೆ ಕೇಳಿದಾಕ್ಷಣವೇ ಇದೊಂದು ಕಾಲೇಜು ಬದುಕಿನ ರಂಗು ತುಂಬಿರುವ ಸಿನಿಮಾ ಎಂಬುದು ಮನದಟ್ಟಾಗುತ್ತದೆ. ಅದಕ್ಕೆ ಸರಿಯಾಗಿ ರಾಜ್ಯದ ನಾನಾ ದಿಕ್ಕುಗಳಲ್ಲಿ ಕಾಲೇಜು ವಿದ್ಯಾರ್ಥಿಗಳೇ ಟೈಟಲ್ ಅನಾವರಣಗೊಳಿಸಿದ್ದರು. ಇದೀಗ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಕೆಲಸ ಕಾರ್ಯಗಳೆಲ್ಲ ಅಂತಿಮ ಘಟ್ಟ ತಲುಪಿಕೊಂಡಿದೆ.

ಹೇಳಿಕೇಳಿ ರ್ಯಾಪ್ ಸಾಂಗುಗಳ ಮೂಲಕವೇ ಪ್ರಖ್ಯಾತರಾಗಿರುವವರು ಚಂದನ್ ಶೆಟ್ಟಿ. ಅವರು ನಾಯಕನಾಗಿ ನಟಿಸಿರುವ ಚಿತ್ರವೆಂದ ಮೇಲೆ ಹಾಡುಗಳ ಬಗ್ಗೆ ವಿಶೇಷವಾದ ನಿರೀಕ್ಷೆಗಳಿರುತ್ತವೆ. ಅದನ್ನು ಇಷ್ಟರಲ್ಲಿಯೇ ತಣಿಸುವ ಸಲುವಾಗಿ ಚಿತ್ರತಂಡ ತಯಾರಿ ನಡೆಸುತ್ತಿದೆ. ದೀಪಾವಳಿಯ ಆಸುಪಾಸಿನಲ್ಲಿಯೇ ವಿಶೇಷವಾದೊಂದು ಹಾಡು ಬಿಡುಗಡೆಗೊಳ್ಳಲಿದೆ. ಸದ್ಯದ ಮಟ್ಟಿಗೆ ಆ ಹಾಡಿನ ಬಗ್ಗೆ ಹೆಚ್ಚೇನೂ ಮಾಹಿತಿಯನ್ನು ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಆದರೆ, ಅದು ಚಂದನ್ ಶೆಟ್ಟಿಯ ಇದುವರೆಗಿನ ರೆಕಾರ್ಡುಗಳನ್ನು ಸರಿಗಟ್ಟುವಷ್ಟು ಚೆಂದಗಿರಲಿದೆ ಎಂಬ ಭರವಸೆ ಸಿನಿಮಾ ತಂಡದಲ್ಲಿದೆ.
ಹೀಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಹಂತ ಹಂತವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಸಾಗಿ ಬರುತ್ತಿದೆ. ಇದರ ಸಾರಥಿ ಅರುಣ್ ಅಮುಕ್ತ ಪಾಲಿಗಿದು ಎರಡನೇ ಸಿನಿಮಾ. ಈ ಹಿಂದೆ ಲೂಸ್ ಗಳು ಅಂತೊಂದು ಚಿತ್ರವನ್ನು ಅರುಣ್ ನಿರ್ದೇಶನ ಮಾಡಿ ಗೆದ್ದಿದ್ದರು. ಸಾಮಾನ್ಯವಾಗಿ, ಸಿನಿಮಾ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಅಂದುಕೊಂಡಿದ್ದನ್ನು ಮಾಡಿದವರ ಹಿಂದೆ ಸ್ಫೂರ್ತಿದಾಯಕ ಕಥೆಗಳಿರುತ್ತವೆ. ಅರುಣ್ ಅಮುಕ್ತ ಜೀವನ ಕೂಡಾ ಅದಕ್ಕೆ ಹೊರತಾಗಿಲ್ಲ. ಈ ಕ್ಷಣಕ್ಕೂ ಬಸ್, ಇಂಟರ್ ನೆಟ್, ವಿದ್ಯುತ್ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ಊರು ಚನ್ನಗಿರಿಯ ಮಳಲಿ. ಆ ಊರಿಂದಲೇ ಪಿಯುಸಿ ಮುಗಿಸಿಕೊಂಡು ಬದುಕಿನ ಅನಿವಾರ್ಯತೆಗೆ ಸಿಕ್ಕು ಬೆಂಗಳೂರಿಗೆ ಬಂದಿದ್ದ ಅರುಣ್ ಅಮುಕ್ತ, ಆ ನಂತರ ಸಿನಿಮಾ ಸೆಳೆತಕ್ಕೆ ಸಿಕ್ಕವರು. ನಾನಾ ಕೆಲಸ ಕಾರ್ಯಗಳನ್ನು ಮಾಡುತ್ತಾ, ಅದರ ನಡುವಲ್ಲಿಯೇ ಸಿನಿಮಾ ಸಂಬಂಧಿತ ಕೋರ್ಸ್ ಒಂದನ್ನು ಮುಗಿಸಿಕೊಂಡಿದ್ದ ಅರುಣ್, ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದದ್ದು ಸೆಟ್ ಬಾಯ್ ಆಗಿ. ಆ ನಂತರ ಒಂದೊಂದೇ ಹಂತಗಳನ್ನು ಕ್ರಮಿಸುತ್ತಾ ಬಂದು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ಪಡೆದುಕೊಂಡಿದ್ದ ಅರುಣ್, ಆ ನಂತರ ಹತ್ತು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಅನುಭವ ಪಡೆದುಕೊಂಡಿದ್ದರು. ಕಡೆಗೂ ಇದೀಗ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಮೂಲಕ ಎರಡನೇ ಹೆಜ್ಜೆಯನ್ನಿಡುತ್ತಿದ್ದಾರೆ.
ಜಾಹೀರಾತು ಕಂಪೆನಿಯನ್ನು ಕಟ್ಟಿ, ಇದೀಗ ಆನಿಮೇಷನ್ ಸಂಸ್ಥೆಯನ್ನೂ ರೂಪಿಸಿರುವ ಅರುಣ್ ಅಮುಕ್ತ ಪಾಲಿಗಿದು ಮಹತ್ವಾಕಾಂಕ್ಷೆಯ ಚಿತ್ರ. ಕನ್ನಡದಲ್ಲಿ ಕಾಲೇಜು ಬೇಸಿನ ಅನ ಏಕ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಈ ಸಿನಿಮಾ ಕೂಡಾ ಆ ಸಾಲಿಗೆ ಸೇರಲಿದೆ ಎಂಬ ಗಾಢ ನಂಬಿಕೆ ಅರುಣ್ ಅವರಲ್ಲಿದೆ. ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ಭಿನ್ನವಾಗಿ ಕಟ್ಟಿಕೊಡಲು ಚಿತ್ರತಂಡ ತಯಾರಾಗಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭಣವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರದ ಚೆಂದದ ಹಾಡೊಂದು ನಿಮ್ಮೆಲ್ಲರನ್ನು ತಲುಪಿಕೊಳ್ಳಲಿದೆ.





