ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ನಟಿಸಿ, ನಿರ್ದೇಶಿಸಿರುವ ‘ಗರುಡ ಪುರಾಣ’ ಚಿತ್ರದ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಮಾಜಿ ಶಾಸಕರಾದ ರಾಜು ಗೌಡ, ತಿಪ್ಪರಾಜು, ಡಿ.ಎಸ್.ಮ್ಯಾಕ್ಸ್ ನ ದಯಾನಂದ್, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಕೂಚ್ಚಣ್ಣ, ನಟ ಮಣಿಕಂಠ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ‘ಕಾಂತಾರ’ ಸೇರಿದಂತೆ ಹದಿನೆಂಟು ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿರುವ ಮಂಜುನಾಥ್ ನಾಗಬಾ ಈ ಸಿನಿಮಾದ ಮೂಲಕ ನಾಯಕ ಕಂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಇನ್ನು ‘ಗರುಡ ಪುರಾಣ’ ಚಿತ್ರದ ಕುರಿತು ಹೇಳಬೇಕಾದರೆ, ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಅಂಶ ನಮ್ಮ ಸಿನಿಮಾದಲ್ಲಿರುವುದರಿಂದ ‘ಗರುಡ ಪುರಾಣ’ ಎಂದು ಹೆಸರಿಟ್ಟಿದ್ದೇವೆ. ಮೂರು ಆಯಾಮಗಳಲ್ಲಿ ಚಿತ್ರದ ಕಥೆ ಸಾಗುತ್ತದೆ. ಚಿತ್ರೀಕರಣ ಮುಕ್ತಾಯವಾಗಿ, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಎಂಬುದು ಚಿತ್ರದ ನಾಯಕ ಹಾಗೂ ನಿರ್ದೇಶಕ ಮಂಜುನಾಥ್ ನಾಗಬಾ ನೀಡಿರುವ ಮಾಹಿತಿ.
‘ಗರುಡ ಪುರಾಣ’ ಚಿತ್ರದಲ್ಲಿ ದಿಶಾ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ, ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘27 ಫ್ರೇಮ್ ಕ್ರಿಯೇಷನ್ಸ್’ ಲಾಂಛನದಲ್ಲಿ ಸಿಂಧು ಕೆ. ಎಂ ಮತ್ತು ಬಿ. ಎಲ್ ಯೋಗೇಶ್ ಕುಮಾರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.





