2015ರಲ್ಲಿ ಹಿಂದಿಯಲ್ಲಿ `ಭಜರಂಗಿ ಭಾಯಿಜಾನ್’ ಸಿನಿಮಾ ಬಂದಿತ್ತು. ಬಾಲಿವುಡ್ ಸುಲ್ತಾನ್ ಸಲ್ಮಾನ್ ಧಗಧಗಿಸಿದ್ದ ಆ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಕೋಟಿ ಕೋಟಿ ಮೂಟೆ ಕಟ್ಟಿ ಹೊಸ ದಾಖಲೆ ಬರೆದಿತ್ತು. ಸರೀ, ಹೀಗ್ಯಾಕೆ ಈ ಚಿತ್ರದ ಬಗ್ಗೆ ಮತ್ತೆ ಸುದ್ದಿ ಅಂದರೆ ಮುಂಬೈನಲ್ಲಿ `ಭಜರಂಗಿ ಭಾಯ್‍ಜಾನ್’ ದರ್ಶನ ಆಗಿದೆ. ಅದು ನಮ್ಮ ಕನ್ನಡದ ಭಜರಂಗಿ ಹಾಗೂ ಬಾಲಿವುಡ್‍ನ ಭಾಯಿಜಾನ್ ಅನ್ನೋದು ಇಂಟ್ರೆಸ್ಟಿಂಗ್ ಸಂಗತಿ.

ಹೌದು, ನಮ್ಮ ಭಜರಂಗಿ ಶಿವಣ್ಣ, ಬಿಟೌನ್ ಸುಲ್ತಾನ್ ಸಲ್ಮಾನ್ ಅಣ್ಣ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಅಕ್ಕ-ಪಕ್ಕ ನಿಂತ್ಕೊಂಡು ಫೋಟೋ ತೆಗೆಸಿಕೊಂಡಿದ್ದು ಸ್ವತಃ ಶಿವಣ್ಣನೇ ಫೋಟೋನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಭಜರಂಗಿ ಭಾಯಿಜಾನ್ ಮುಖಾಮುಖಿಯಾಗಿರುವುದು ಒಟ್ಟಿಗೆ ಸಿನಿಮಾ ಮಾಡಲಿಕ್ಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ, ಬಾಲಿವುಡ್ ಟೈಗರ್ ನ ನಮ್ಮ ಟಗರು ಶಿವಪ್ಪ ಮೀಟ್ ಮಾಡಿರುವ ಉದ್ದೇಶ ಬೇರೆನೇಯಿದೆ. ಅದೇನು ಹೇಳ್ತೀವಿ ಕೇಳಿ.
ಸದ್ಯ, ನಮ್ಮ ಸೆಂಚುರಿಸ್ಟಾರ್ ಶಿವಣ್ಣಾವ್ರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಬಹುನಿರೀಕ್ಷಿತ ಘೋಸ್ಟ್ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿಯಲ್ಲೂ ಏಕಕಾಲಕ್ಕೆ ರಿಲೀಸ್ ಆಗ್ತಿರುವುದರಿಂದ ಅದರ ಪ್ರಚಾರಕ್ಕಾಗಿ ಮಾಸ್ ಲೀಡರ್ ಹಿಂದಿ ಬೆಲ್ಟ್‍ಗೆ ಲಗ್ಗೆ ಇಟ್ಟಿದ್ದಾರೆ. ಈ ನಡುವೆ ಇಂದು ಅಹಮದಾಬಾದ್‍ನಲ್ಲಿ ನಡೆಯುತ್ತಿರುವ ಇಂಡಿಯಾ-ಪಾಕಿಸ್ತಾನ ಮ್ಯಾಚ್ ವೀಕ್ಷಿಸಲು, ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಹ್ಯಾಟ್ರಿಕ್ ಹೀರೋ ಅಹಮದಾಬಾದ್ ಕ್ರೀಡಾಂಗಣದತ್ತ ಧಾವಿಸಿದ್ದರು. ಇಲ್ಲಿಗೆ ಬಾಲಿವುಡ್ ಭಾಯಿಜಾನ್ ಕೂಡ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದು, ಅಲ್ಲಿ `ಭಜರಂಗಿ ಭಾಯಿಜಾನ್’ ಭೇಟಿಯಾಗಿದೆ. ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡ ಇಬ್ಬರು ಸೂಪರ್ ಸ್ಟಾರ್ ಗಳು ಹಾಗೆಯೇ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಘೋಸ್ಟ್‍ಗೆ ದಬಾಂಗ್ ಹೀರೋ ವಿಶ್ ಮಾಡಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಶಿವಣ್ಣ ಮಾತ್ರ ಸಲ್ಮಾನ್ ಖಾನ್ ಮುಂದಿನ ಪಿಕ್ಚರ್ `ಟೈಗರ್-3’ಗೆ ಶುಭಕೋರಿದ್ದಾರೆ.
ಇನ್ನೂ ಮುಂಬೈನಲ್ಲಿ ಉಳಗನಾಯಗನ್ ಕಮಲ್ ಹಾಸನ್ ಭೇಟಿಯಾಗಿರುವ ಫೋಟೋ ಕೂಡ ವೈರಲ್ ಆಗ್ತಿದೆ. ಇಬ್ಬರು ದಿಗ್ಗಜರು ಮುಖಾಮುಖಿಯಾಗಿರುವ ಫೋಟೋ ಕಂಡು ಸೈಲೆಂಟಾಗಿ ಇಬ್ಬರು ಕೂಡಿ ಸಿನಿಮಾ ಮಾಡ್ತಿರಬಹುದಾ ಎನ್ನುವ ಸಂಶಯ ಮೂಡಿದೆ. ಜೈಲರ್' ನಂತರ ಪರಭಾಷಾ ಸಿನಿಮಾಗಳಿಗೆ ಶಿವಣ್ಣ ಕಾಲ್ ಶೀಟ್ ಕೊಡ್ತಿದ್ದಾರೆ. ಪೃಥ್ವಿ ರಾಜ್ ಸುಕುಮಾರನ್ ನಿರ್ದೇಶನದ `ಎಂಪೂರಾನ್' ಹಾಗೂ ವಿಷ್ಣು ಮಂಚು ನಟನೆಯ ಕಣ್ಣಪ್ಪ’ ಸಿನಿಮಾಗೆ ಕರುನಾಡ ಚಕ್ರವರ್ತಿ ಓಕೆ ಎಂದಿದ್ದಾರೆ. ಈ ಮಧ್ಯೆ `ದಿ ಕೇರಳ ಸ್ಟೋರಿ’ ಡೈರೆಕ್ಟರ್ ಸುದೀಪ್ತೋ ಸೇನ್ ದೊಡ್ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಹೋಗಿದ್ದಾರೆ. ಹೀಗಾಗಿ, ಶಿವಣ್ಣ ಯಾರ ಜೊತೆ ಕಾಣಿಸಿಕೊಂಡರೂ ಕೂಡ ಸಿನಿಮಾ ಬಗ್ಗೇನೆ ಚರ್ಚೆಯಾಗುತ್ತೆ. ಅದರಂತೇ. ಈಗ ಕಮಲ್ ಹಾಸನ್ ಹಾಗೂ ಸಲ್ಮಾನ್ ಖಾನ್ ಭೇಟಿ ಕೂಡ ಮೂವೀ ಕುರಿತಾಗಿಯೇ ಚರ್ಚೆಯಾಗ್ತಿದೆ.






