ನಟ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ ‘ಬಾನ ದಾರಿಯಲಿ…’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹಾಜರಿದ್ದು ಸಿನಿಮಾದ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡರು.
ಇದೇ ವೇಳೆ ಮಾತನಾಡಿದ ನಾಯಕ ನಟ ಗಣೇಶ್, ‘ಇಲ್ಲಿಯವರೆಗೂ ನಾನು ಮಾಡಿರದಂಥ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದೇನೆ. ‘ಬಾನ ದಾರಿಯಲಿ…’ ಪ್ರೀತಿಯ ಬಗೆಗಿನ ಚಿತ್ರ. ಪುನೀತ್ ರಾಜಕುಮಾರ್ ಅಭಿನಯಿಸಿದ್ದ ಈ ಯಶಸ್ವಿ ಹಾಡಿಗೂ ನಮ್ಮ ಸಿನಿಮಾ ಕಥೆಗೆ ಹೊಂದಾಣಿಕೆಯಾಗುತ್ತದೆ. ಹಾಗಾಗಿ ‘ಬಾನ ದಾರಿಯಲಿ…’ ಅಂಥ ಟೈಟಲ್ ಇಟ್ಟಿದ್ದೇವೆ. ಈ ಚಿತ್ರ ಎಲ್ಲರ ಮನಸ್ಸಿಗೂ ಬಹಳ ಹತ್ತಿರವಾಗುತ್ತದೆ. ಕೀನ್ಯಾ, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ’ ಎಂದರು.
‘ಈ ಸಿನಿಮಾದಲ್ಲಿ ನಾನು ಲೀಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ಚೆನ್ನಾಗಿ ಬಂದಿದೆ. ನಾನು ಈ ಚಿತ್ರಕ್ಕಾಗಿ ಸರ್ಫಿಂಗ್ ಕಲಿತ್ತಿದ್ದೇನೆ’ ಎಂದಿದ್ದಾರೆ ನಾಯಕಿ ರುಕ್ಮಿಣಿ ವಸಂತ್. ‘ಈ ಸಿನಿಮಾದಲ್ಲಿ ನಾನು ಕಾದಂಬರಿ ಎಂಬ ಪಾತ್ರ ನಿರ್ವಹಿಸಿದ್ದೇನೆ. ಈ ಸಿನಿಮಾದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ’ ಎಂಬುದು ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ ಮಾತು.

‘ಶ್ರೀವಾರಿ ಟಾಕೀಸ್’ ನಿರ್ಮಾಣದ ‘ಬಾನದಾರಿಯಲಿ…’ ಸಿನಿಮಾದ ಟ್ರೇಲರ್ ‘ಆನಂದ್ ಆಡಿಯೋ’ ಯು-ಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಹಾಪೂರವೆ ಹರಿದು ಬರುತ್ತಿದೆ.‘ಬಾನ ದಾರಿಯಲಿ…’ ಸಿನಿಮಾ ಇದೇ ಸೆಪ್ಟೆಂಬರ್ 28 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.





