ಸ್ಯಾಂಡಲ್ವುಡ್ ಅಭಿಮನ್ಯು ಹಾಗೂ ಸ್ಯಾಂಡಲ್ವುಡ್ ಭೀಮ ಇಬ್ಬರು ಒಂದಾಗಿ ಸಿನಿಮಾ ಮಾಡ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಇನ್ನೂ ಹೆಸರಿಡದ ಈ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ಭರದಿಂದ ಸಾಗ್ತಿದ್ದು, ಅಭಿಮನ್ಯು ನೋಡೋದಕ್ಕೆ ಭೀಮ ಶೂಟಿಂಗ್ ಸೆಟ್ಗೆ ಹೋಗಿದ್ದಾರೆ. ಸರ್ ಪ್ರೈಸ್ ಆಗಿ ವಿಸಿಟ್ ಕೊಟ್ಟ ದುನಿಯಾ ವಿಜಯ್ ರನ್ನ ಯುವರಾಜ್ ನಿಖಿಲ್ ವೆಲ್ಕಮ್ ಮಾಡಿಕೊಂಡು ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಭೇಟಿಯ ಫೋಟೋಗಳು ವೈರಲ್ ಆಗಿದ್ದು, ಅಭಿಮನ್ಯು ಹಾಗೂ ಭೀಮನ ಲುಕ್-ಗೆಟಪ್ ಗಮನ ಸೆಳೆಯುತ್ತಿದೆ.

ಗಂಧದಗುಡಿಯ ರೈಡರ್ ನಿಖಿಲ್ ನಟನೆಯ ಈ ಸಿನಿಮಾದ ಚಿತ್ರೀಕರಣ ಹೈ ಸ್ಪೀಡ್ನಲ್ಲಿ ನಡೆಯುತ್ತಿದೆ. ಹೈ ಬಜೆಟ್ನಲ್ಲಿ ನಿರ್ಮಾಣವಾಗ್ತಿರೋ ಈ ಚಿತ್ರಕ್ಕೆ ಯುವ ನಿರ್ದೇಶಕ ಲಕ್ಷ್ಮಣ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಬಂಡವಾಳ ಹೂಡ್ತಿರುವ ಮೊದಲ ಕನ್ನಡದ ಚಿತ್ರ ಇದಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯುವರಾಜನ ಸಿನಿಮಾ ತಯಾರಾಗ್ತಿದೆ. ಈ ಚಿತ್ರಕ್ಕೆ ಸ್ಯಾಂಡಲ್ವುಡ್ ಒಂಟಿಸಲಗ ಎಂಟ್ರಿಕೊಟ್ಟಿದ್ದು ನಿರೀಕ್ಷೆ ಹೆಚ್ಚಿದೆ. ಬಿಗ್ ಸ್ಕ್ರೀನ್ ಮೇಲೆ ಭೀಮ ಹಾಗೂ ಅಭಿಮನ್ಯು ಜುಗಲ್ ಬಂಧಿ ನೋಡೋದಕ್ಕೆ ಅಭಿಮಾನಿ ಬಳಗ ಕಣ್ಣರಳಿಸಿದೆ.

ಬಹು ನಿರೀಕ್ಷಿತ ಈ ಚಿತ್ರದಲ್ಲಿ ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಪ್ರಮುಖ ಪಾತ್ರ ಎಂದಷ್ಟೇ ಫಿಲ್ಮ್ ಟೀಮ್ ಮಾಹಿತಿ ಕೊಟ್ಟಿರುವುದರಿಂದ, ಜಯಮ್ಮನ ಮಗ ನಿಖಿಲ್ ಗೆ ಸಾಥ್ ಕೊಡ್ತಾರಾ ಅಥವಾ ವಿಲನ್ನಾಗಿ ಎದುರಾಕಿಕೊಳ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇತ್ತೀಚೆಗೆ ತೆಲುಗಿನ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಎದುರು ದುನಿಯಾ ವಿಜಯ್ ವಿಲನ್ ಪಾತ್ರ ಮಾಡಿ, ಟಾಲಿವುಡ್ ಪ್ರೇಕ್ಷಕರನ್ನ ಇಂಪ್ರೇಸ್ ಮಾಡಿದ್ರು.. ಹೀಗಾಗಿ ಈ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ಅಬ್ಬರಿಸಿರುತ್ತಾರಾ? ಹೀಗೊಂದು ಪ್ರಶ್ನೆಯಂತೂ ಇದ್ದೇ ಇದೆ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಮೂಲಕ ಬಾಲಿವುಡ್ ನಟಿ ಯುಕ್ತಿ ತಾರೇಜ ಸ್ಯಾಂಡಲ್ವುಡ್ ಗೆ ಪ್ರವೇಶ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ವಂಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ಸದ್ಯ ದುನಿಯಾ ವಿಜಯ್ ಭೀಮ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ಧಾರೆ. ಭೀಮ ಚಿತ್ರಕ್ಕೆ ವಿಜಯ್ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು. ಸಲಗ ಚಿತ್ರದ ನಂತರ ವಿಜಯ್ ಅವರೇ ನಿರ್ದೇಶಿಸಿ ನಟಿಸಿರುವ ಭೀಮ ಚಿತ್ರದ ಹಾಡುಗಳು ಈಗಾಗಲೇ ಸೆನ್ಸೇಷನ್ ಸೃಷ್ಟಿಸಿವೆ. ಈ ಮಧ್ಯೆ ಭೀಮ ಅಭಿಮನ್ಯು ಪಕ್ಕದಲ್ಲಿ ನಿಂತು ಥಂಬ್ ಸಪ್ ಮಾಡಿದ್ದಾರೆ. ಲಕ್ಷ್ಮಣ್ ಹೊಸೆದಿರುವ ಕಥೆ ಕೇಳಿ ಥ್ರಿಲ್ಲಾಗಿರೋ ಜಾಕ್ಸನ್, ಜಾಗ್ವಾರ್ ಜೊತೆ ಅಖಾಡಕ್ಕಿಳಿದಿದ್ದಾರೆ. ಶೀಘ್ರದಲ್ಲೇ ಆ ಫೋಟೋವೂ ಫೀಲ್ಡಿಗಿಳಿಯಲಿದ್ದು ಅಲ್ಲಿವರೆಗೂ ಕುತೂಹಲದಿಂದ ಎದುರುನೋಡಬೇಕು.





