ಇತ್ತೀಚೆಗಷ್ಟೇ ‘ಸಂಜು ವೆಡ್ಸ್ ಗೀತಾ-2’ ಚಿತ್ರಕ್ಕೆ ಚಾಲನೆ ನೀಡಿದ್ದ ನಿರ್ದೇಶಕ ನಾಗಶೇಖರ್, ಅದರ ಬೆನ್ನಲ್ಲೇ ಮತ್ತೊಂದು ಬಿಗ್ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ರೆವಲ್ಯೂಷನರಿ ಸಬ್ಜೆಕ್ಟ್ ಇಟ್ಟುಕೊಂಡು ನೈಜ ಘಟನೆಯನ್ನು ತೆರೆಯ ಮೇಲೆ ಹೇಳಹೊರಟಿದ್ದಾರೆ. ಅದಕ್ಕೆ ಕೊಟ್ಟಿರುವ ಹೆಸರು ‘ಭೀಮಾ ಕೋರೇಗಾಂವ’
‘ನಾಗಶೇಖರ್ ಮೂವೀಸ್’ ಹಾಗೂ ‘ಪವಿತ್ರಇಂಟರ್ ನ್ಯಾಷನಲ್ ಮೂವೀಮೇಕರ್ಸ್’ ಬ್ಯಾನರ್ ಅಡಿ ಛಲವಾದಿ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಹು ಸೂಕ್ಷ್ಮ ವಿಚಾರ ಇಟ್ಟುಕೊಂಡು ಮಾಡುತ್ತಿರುವ ಚಲನಚಿತ್ರ ಇದಾಗಿದ್ದು, ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಬಿಡುಗಡೆ ಮಾಡಿದರು.
ನಿರ್ದೇಶಕ ನಾಗಶೇಖರ್ ಮಾತನಾಡಿ, ‘1818 ರ ಜ.1 ರಂದು ನಡೆದ ರೆವಲ್ಯೂಷನರಿ ಸಬ್ಜೆಕ್ಟ್. ಶೋಷಿತರ ಬದುಕಿಗೆ ಬೆಳಕು ಹಚ್ಚುವ ಕೆಲಸಕ್ಕೆ ದೀಪ ಹಚ್ಚುವ ಮೂಲಕ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ಇದು ಬಹಳ ದೊಡ್ಡ ವಿಚಾರವಾಗಿದೆ. ನನಗೆ ಪ್ರೇರೇಪಿಸಿದ್ದು ರೈಟರ್ ಚಂದ್ರಚೂಡ್, ಜಾಸ್ತಿ ಬಂಡವಾಳ ಕೇಳುತ್ತೆ. ಚಿತ್ರದ ಬಜೆಟ್ 120 ಕೋಟಿ ಆಗಬಹುದು. ನಿರ್ಮಾಪಕ ಕುಮಾರ್ ಎಷ್ಟೇ ಆದರೂ ಖರ್ಚು ಮಾಡಲು ರೆಡಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ಒಬ್ಬರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರನ್ನು ನಾಯಕಿ ಪಾತ್ರಕ್ಕೆ ಕರೆತರುವ ಉದ್ದೇಶವಿದೆ. 54 ಕೋಟಿ ಶೋಷಿತರಿಗೆ ಬೆಳಕಾಗುವ ಕಥಾನಕವಿದು. ಚಂದ್ರಚೂಡ್ ನೇತೃತ್ವದಲ್ಲಿ ಬರಹಗಾರರ ತಂಡ ಕಟ್ಟಿ ಭಾಗ-1, ಭಾಗ-2 ಮಾಡುವ ಯೋಚನೆಯಿದೆ. ಪ್ರೀ ಪ್ರೊಡಕ್ಷನ್ ಗೆ 365 ದಿನ ತೆಗೆದುಕೊಂಡಿದ್ದೇನೆ. ಈ ಕಥೆಯನ್ನು ಕಣ್ಣಿಗೆ ಕಟ್ಟುವ ಹಾಗೆ ಮನಸಿಗೆ ಮುಟ್ಟುವ ಹಾಗೆ ಕಟ್ಟಿಕೊಡುವ ಜವಾಬ್ದಾರಿ ನನ್ನ ಮೇಲಿದೆ’ ಎಂದರು.

ಸ್ವಾಭಿಮಾನಿ ಬದುಕಿಗೋಸ್ಕರ ನಡೆದ ಘನಘೋರ ಯುದ್ಧ. 2ನೇ ಬಾಜೀರಾಯನ ಘೋರ ಕೃತ್ಯಗಳನ್ನು ವಿರೋಧಿಸಿ ಮೆಹರ್ ಸೈನಿಕರು ನಡೆಸಿದ ಯುದ್ದ, ಭಾರತದ ನೆಲದಲ್ಲಿ ಬಾಜೀರಾಯ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಂಡಿದ್ದ, ಯಾವ ರೀತಿ ನೋಡಿಕೊಂಡಿದ್ದ ಯಾವ ಉದ್ದೇಶಕ್ಕೆ ಈ ಯುದ್ದ ನಡೆಯಿತು ಎಂಬುದನ್ನು ಈ ಸಿನಿಮಾದಲ್ಲಿ ದಾಖಲು ಮಾಡಲಾಗುತ್ತೆ ಎಂದಿದೆ ಚಿತ್ರತಂಡ.





