ಕನ್ನಡಿಗರು ಗರ್ವ ಪಡುವಂತೆ ಮಾಡಿದ್ದ, ಕನ್ನಡ ಚಿತ್ರರಂಗದ ಶಕ್ತಿಯೇನು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿದ್ದ, ಗಂಧದಗುಡಿಗೆ ಚಿನ್ನದ ಕಿರೀಟ ತೊಡಿಸಿದ್ದ `ಕಾಂತಾರ’ ಎನ್ನುವ ಮೂರಕ್ಷರದ ಮುತ್ತಿನಂತಹ ಸಿನಿಮಾಗೆ ವರ್ಷದ ಸಂಭ್ರಮ. ಯಸ್, ಡಿವೈನ್‍ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ `ಕಾಂತಾರ’ ಚಿತ್ರ ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ಇದೇ ದಿನದಂದು `ಕಾಂತಾರ’ ಚಿತ್ರ ಕಣಕ್ಕಿಳಿದಿತ್ತು. ಹೊಂಬಾಳೆ ತೇರಲ್ಲಿ ಕರುನಾಡ ಅಂಗಳದ ತುಂಬೆಲ್ಲಾ ಮೆರವಣಿಗೆ ಹೊರಟಿತ್ತು. ಮೂರೇ ದಿನದಲ್ಲಿ ಆರೂವರೆ ಕೋಟಿ ಕನ್ನಡಿಗರಿಂದ ಜೈಕಾರ ಹಾಕಿಸಿಕೊಂಡ `ಕಾಂತಾರ’, ಡಿವೈನ್ ಹಿಟ್ ಕಿರೀಟ ಧರಿಸಿದ್ದು, ವಾರ ಕಳೆಯವುದರೊಳಗೆ ಸಪ್ತಸಾಗರ ದಾಟಲು ಅಣಿಯಾಗಿದ್ದು, ಮುತ್ತಿನ ಥೇರಲ್ಲೇ ದೇಶಾದ್ಯಂತ ದಿಬ್ಬಣ ಹೋಗಿಬಂದಿದ್ದು, ಕೋಟ್ಯಾಂತರ ಕಣ್ಣುಗಳಲ್ಲಿ ನೆಲೆನಿಂತಿದ್ದು, ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸ ಕೆತ್ತಿದ್ದು ಕಣ್ಣಮುಂದಿರುವ ಸತ್ಯ.
ಇವತ್ತು ಕನ್ನಡಿಗರು ಮಾತ್ರವಲ್ಲ ಆಲ್ ಓವರ್ ಇಂಡಿಯಾದ ಮಂದಿಯೇ ಕಣ್ಣರಳಿಸಿದ್ದಾರೆ. `ಕಾಂತಾರ-2′ ಸೆಟ್ಟೇರುವ ಘಳಿಗೆಗಾಗಿ ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯುತ್ತಿದ್ದಾರೆ. ಚರಿತ್ರೆ ಸೃಷ್ಟಿಸಿರುವ ಕಾಡುಬೆಟ್ಟು ಶಿವಪ್ಪನ ಮೊದಲ ಅವತಾರ ಹೇಗಿರಬಹುದು ಅಂತ ಎದುರುನೋಡ್ತಿದ್ದಾರೆ. ಹೀಗೆ, ಭರ್ತಿ ಒಂದು ವರ್ಷ ಕಾಯಿಸಿರುವ ಶೆಟ್ರು ಮತ್ತು ಹೊಂಬಾಳೆ ಮಾಲೀಕರು `ಕಾಂತಾರ’ ವರ್ಷದ ಸಂಭ್ರಮಕ್ಕೆ ಸಿಹಿಸುದ್ದಿ ಕೊಡಬಹುದು. ಬಹುಷಃ ಅದೇ ದಿನ ಕಾಂತಾರ ಪ್ರೀಕ್ವೆಲ್ ಪ್ರಾರಂಭ ಮಾಡಬಹುದು ಅಂತಲೇ ಎಲ್ಲರೂ ಭಾವಿಸಿದ್ದರು. ಅದ್ಯಾಕೋ ಏನೋ `ಕಾಂತಾರ’ ಖ್ಯಾತಿಯ ಸಾರಥಿ ಮತ್ತು ಅಧಿಪತಿ ದೊಡ್ಡ ಮನಸ್ಸು ಮಾಡಲಿಲ್ಲ. ವರ್ಷ ಮಾಗಿದ ಕುತೂಹಲಕ್ಕೆ ವರ್ಷದ ಸಂಭ್ರಮದಂದು ತೆರೆ ಎಳೆಯುವ ಪ್ರಯತ್ನ ಮಾಡಲಿಲ್ಲ. ಆದರೆ, `ಕಾಂತಾರ’ ಡಿವೈನ್ ಹಿಟ್ಟಾಗಲಿಕ್ಕೆ ಕಾರಣವಾದ, ಕಲಾಭಿಮಾನಿಗಳ ಹೃದಯಸ್ಪರ್ಶಿಸಿದ `ವರಾಹ ರೂಪಂ’ ಗೀತೆಯನ್ನು ಬಿಡುಗಡೆಗೊಳಿಸಿದ್ದಾರೆ. ಕಾಂತಾರ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕಾರಣಿಭೂತರಾದ ಪ್ರೇಕ್ಷಕ ಮಹಾಷಯರಿಗೆ ಶೆಟ್ರು ಹಾಗೂ ವಿಜಯ್ ಕಿರಗಂದೂರ್ ಸಾಹೇಬ್ರು ಶರಣು ಶರಣೆಂದಿದ್ದಾರೆ.
ಅಂದ್ಹಾಗೇ, ಶೆಟ್ರು ಮನಸ್ಸು ಮಾಡಿದ್ದರೆ ಇಷ್ಟೊತ್ತಿಗೆ ಕಾಂತಾರ ಪ್ರೀಕ್ವೆಲ್ ರೆಡಿಯಾಗ್ಬೇಕಿತ್ತು. ಕಾಂತಾರ ಚಿತ್ರದ ಮೊದಲ ವರ್ಷದ ಆ್ಯನಿವರ್ಸರಿಗೆ ಸ್ಪೆಷಲ್ಲಾಗಿ ಕಾಂತಾರ ಪ್ರೀಕ್ವೆಲ್ ರಿಲೀಸ್ ಆಗ್ಬೇಕಿತ್ತು. ಆದರೆ, ಅದ್ಯಾಕೋ ಶೆಟ್ರು ಸ್ಪೀಡ್ ಬ್ರೇಕ್ ಹಾಕಿದಂತೆ ಕಾಣ್ತಿದೆ. ಕಾಂತಾರ ಡಿವೈನ್ ಹಿಟ್ ಲಿಸ್ಟ್ ಸೇರಿರುವುದರಿಂದ ನಿರೀಕ್ಷೆ ಸಪ್ತಸಾಗರ ದಾಟಿದೆ. ಪ್ಯಾನ್ ಇಂಡಿಯಾ ಜೊತೆಗೆ ಪ್ಯಾನ್ ವಲ್ರ್ಡ್ ಜವಾಬ್ದಾರಿಯೂ ರಿಷಬ್ ಹೆಗಲೇರಿದ್ದು, ಶೆಟ್ರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಣಕ್ಕಿಳಿಯುವಂತಾಗಿದೆ. ಈಗಾಗಲೇ ಕಥೆ ಬರೆದು ಮುಗಿಸಿರುವ ರಿಷಬ್, ಸ್ಟೋರಿಬೋರ್ಡ್‍ನ ತಮ್ಮ ರೈಟಿಂಗ್ ಟೀಮ್‍ಗೆ ಹ್ಯಾಂಡೋವರ್ ಮಾಡಿದ್ದಾರೆ. ಡಿವೈನ್‍ಸ್ಟಾರ್ ಕೆತ್ತಿರೋ ಕಥೆಗೆ ಸ್ಕ್ರೀನ್ ಪ್ಲೇ, ಡೈಲಾಗ್ಸ್ ರಚಿಸುವುದರಲ್ಲಿ ಬರಹಗಾರರ ತಂಡ ನಿರತವಾಗಿದೆ. ಅನಿರುದ್ದ್ ಮಹೇಶ್, ಶನೀಲ್ ಗುರು ತಂಡ ಈಗಾಗಲೇ ಮಂಗಳೂರಿಗೆ ಹೋಗಿ ನೆಲೆಸಿದ್ದು, ಕಾಂತಾರ ಪ್ರೀಕ್ವೆಲ್ ಸ್ಟೋರಿನಾ ಸಿದ್ದಪಡಿಸುತ್ತಿದ್ದಾರೆ.
ಇತ್ತ ರಿಷಬ್ ಪಾತ್ರಕ್ಕಾಗಿ ತಯ್ಯಾರಿ ಮಾಡಿಕೊಳ್ಳುತ್ತಿದ್ದಾರೆ. ಸುಮಾರು 11ಕೆಜಿ ಯಷ್ಟು ದೇಹದ ತೂಕ ಕಡಿಮೆಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಕಾಂತಾರ ಮೊದಲ ಭಾಗದಲ್ಲಿ ಶೆಟ್ರು ಡಬಲ್ ರೋಲ್ ಪ್ಲೇ ಮಾಡಿದ್ದರು. ಕಾಡುಬೆಟ್ಟು ಶಿವಪ್ಪನಾಗಿ ಹಾಗೂ ಶಿವಪ್ಪನ ತಂದೆಯಾಗಿ ಕಮಾಲ್ ಮಾಡಿದ್ದರು. ಈಗ `ಕಾಂತಾರ’ ಪಾರ್ಟ್2 ಪ್ರೀಕ್ವೆಲ್ ಕಥೆಯಾಗಿರುವುದರಿಂದ ಕುತೂಹಲ ಹೆಚ್ಚಿದೆ. ಕೋಲ ಕಟ್ಟಿಕೊಂಡು ಕಾಡೊಳಗೆ ಕಾಣೆಯಾದ ತಂದೆಯ ಪಾತ್ರಕ್ಕೆ ಸ್ವತಃ ರಿಷಬ್ ಅವರೇ ಜೀವ ತುಂಬುತ್ತಾರಾ ಅಥವಾ ಬೇರೆ ಕಲಾವಿದರನ್ನ ಕರೆತರುತ್ತಾರಾ? ಹೀಗೊಂದು ಪ್ರಶ್ನೆ ಎದ್ದಿದೆ. ಈ ಹಿಂದೆ ಕಾಡುಬೆಟ್ಟು ಶಿವಪ್ಪನ ತಂದೆಯ ಪಾತ್ರಕ್ಕೆ ಪಡೆಯಪ್ಪನನ್ನು ಕರೆದುಕೊಂಡು ಬರುತ್ತಾರೆಂದು ಸುದ್ದಿಯಾಗಿತ್ತು. ಕಾಂತಾರ ಸಿನಿಮಾ ನೋಡಿ ಬೆರಗಾದ ತಲೈವಾ ಖುದ್ದಾಗಿ ರಿಷಬ್‍ಗೆ ಕಾಲ್ ಮಾಡಿ ಮಾತನಾಡಿದ್ದರು. ಚೆನ್ನೈ ಮನೆಗೆ ಕರೆಸಿಕೊಂಡು ಗಂಟೆಗಟ್ಟಲೇ ಕಾಂತಾರ ನಿರ್ಮಾಣಗೊಂಡಿದ್ದರ ಬಗ್ಗೆ ಪ್ರಶ್ನೆ ಮಾಡುತ್ತಾ ಅಚ್ಚರಿ ವ್ಯಕ್ತಪಡಿಸಿದ್ದರು. ಅದೇ ವೇಳೆ ಡಿವೈನ್‍ಸ್ಟಾರ್ ಕೊರಳಿಗೆ ಬಾಬಾ ಲಾಕೆಟ್ ಹಾಕಿ ಶುಭಹಾರೈಸಿದ್ದರು. ಉಳಗನಾಯಗನ್ ಕಮಲ್ ಹಾಸನ್, ಎಸ್ ಎಸ್ ರಾಜಮೌಳಿ, ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಸೌತ್-ನಾರ್ತ್ ಸೂಪರ್ ಸ್ಟಾರ್ ಗಳೆಲ್ಲಾ ಡಿವೈನ್‍ಸ್ಟಾರ್ ನ ಹಾಡಿಹೊಗಳಿದ್ದು ಮರೆಯುವಂತಿಲ್ಲ
ಇನ್ನೂ ಕಳೆದ ವರ್ಷ ಇದೇ ದಿನ (ಸೆಪ್ಟೆಂಬರ್-30-2022) ರಂದು ರಿಷಬ್ ಕನ್ನಡದ ಮಟ್ಟಿಗೆ ಸ್ಟಾರ್ ಆಗಿದ್ದರು. ಆದರೆ, ಕಾಂತಾರ ಅನ್ನೋ ಒಂದೇ ಒಂದು ಸಿನಿಮಾ ಅವ್ರನ್ನ ಪ್ಯಾನ್ ಇಂಡಿಯಾ ಸ್ಟಾರ್ ಆಗುವಂತೆ ಮಾಡ್ತು. ನ್ಯಾಷನಲ್ ಹಾಗೂ ಇಂಟರ್‍ನ್ಯಾಷನಲ್ ವೇದಿಕೆಗಳಲ್ಲಿ ಕನ್ನಡದ ಕಂಪು ಹರಡುವುದಕ್ಕೆ ಅವಕಾಶ ಸಿಗ್ತು. ದೇಶಾದ್ಯಂತ ಜನಪ್ರಿಯತೆ, ಜನಬೆಂಬಲ, ಹಣಬಲ ಎಲ್ಲವನ್ನೂ ದಕ್ಕಿಸಿಕೊಡ್ತು. ಆ ಕೃತಜ್ಞತೆಗೆ ರಿಷಬ್ ಪರಭಾಷಾ ಆಫರ್ ನ್ನೆಲ್ಲಾ ಎಡಗೈನಲ್ಲಿ ತಿರಸ್ಕರಿಸಿದ್ದಾರೆ. ನನ್ನ ಮೊದಲ ಆದ್ಯತೆ ಕನ್ನಡ ಸಿನಿಮಾ ಮತ್ತು ಕನ್ನಡಿಗರೆಂದು `ಕಾಂತಾರ-2′ ಗೆ ಕೈ ಹಾಕಿದ್ದಾರೆ. ದೈವ ಹಾಗೂ ದೈವರಾಧಕರ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸರಿಯಾದ ಉತ್ತರ ನೀಡಲಿಕ್ಕೆ ರಿಷಬ್ ಸಜ್ಜಾಗಿದ್ದಾರಂತೆ. ಪಂಜುರ್ಲಿ ಹಾಗೂ ಗುಳಿಗ ದೈವದ ಮೂಲ ಮತ್ತು ದೈವಾರಾಧಕರ ಮಹತ್ವವನ್ನು `ಕಾಂತಾರ’ ಪ್ರೀಕ್ವೆಲ್ ಮೂಲಕ ಬೆಳ್ಳಿತೆರೆ ಮೇಲೆ ಕಟ್ಟಿಕೊಡಲು ಹೊರಟಿದ್ದಾರಂತೆ. ಕ್ರಿಶ 300 ರಿಂದ 400ರ ಕಾಲಘಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು ನವೆಂಬರ್ ನಿಂದ ಶೂಟಿಂಗ್ ಶುರುವಾಗಲಿದೆಯಂತೆ. ಸುಮಾರು 125ಕೋಟಿ ಬಜೆಟ್‍ನಲ್ಲಿ ಪಾರ್ಟ್-2 ತಯ್ಯಾರಾಗಲಿದೆಯಂತೆ. ನಿಮಗೆಲ್ಲ ಗೊತ್ತಿರುವಂತೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ ಚಾಪ್ಟರ್ 1′ ಬರೀ 16 ಕೋಟಿ ವೆಚ್ಚದಲ್ಲಿ ತಯ್ಯಾರಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಯನ್ನ ಬರೆದಿತ್ತು. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ತುಳುನಾಡಿನ ದೈವಾರಾಧನೆ ಹಾಗೂ ಕರಾವಳಿ ಮಣ್ಣಿನ ಸೊಗಡಿರುವ `ಕಾಂತಾರ’ ನೋಡಿ ದೇಶಕ್ಕೆ ದೇಶವೇ ಮೆಚ್ಚಿಕೊಂಡಿತ್ತು.

ಬಟ್ ಕಾಂತಾರ-2ಗಾಗಿ ಹೊಂಬಾಳೆ ಹೂಡ್ತಿರೋ ಬಜೆಟ್ ನೋಡಿದರೆ ಸಿನಿಮಾ ಪ್ಯಾನ್ ವಲ್ರ್ಡ್ ಲೆವೆಲ್ ಗೆ ರೆಡಿಯಾಗೋದಂತೂ ಪಕ್ಕಾ. ಸದ್ಯ ಹೊಂಬಾಳೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಲಾರ್, ಯುವ, ರಿಚರ್ಡ್ ಆ್ಯಂಟನಿ, ಬಘೀರ, ಟೈಸನ್, ರಘುತಾತ ಸೇರಿದಂತೆ ಎಂಟು ಪಿಕ್ಚರ್ ಗಳು ತಯ್ಯಾರಾಗುತ್ತಿವೆ. ಇದರಲ್ಲಿ ಸಲಾರ್ ಗಾಗಿ ಎಷ್ಟು ಮಂದಿ ಕುತೂಹಲದಿಂದ ಕಾಯ್ತಿದ್ದಾರೋ, ಅಷ್ಟೇ ಮಂದಿ ಒಂಟಿಕಾಲಿನಲ್ಲಿ ನಿಂತು ಶೆಟ್ರು ಕಣ್ಣಕ್ಕಿಳಿಯೋದನ್ನ ನೋಡ್ತಿದ್ದಾರೆ. ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ನವೀನ್ ಡಿ ಪಡೀಲ್, ದೀಪಕ್ ರೈ ಪಾಣಾಜೆ, ಮಾನಸಿ ಸುಧೀರ್, ಪ್ರಕಾಶ್ ತುಮ್ಮಿನಾಡು ಮುಂತಾದವರು ನಟಿಸಿದ್ದರು. ಇದೀಗ ಪಾರ್ಟ್ 2ರಲ್ಲಿ ಇವರಲ್ಲಿ ಯಾರೆಲ್ಲ ಇರಲಿದ್ದಾರೆ? ಯಾರೆಲ್ಲ ಹೊಸದಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಇದೆ. ಒಟ್ನಲ್ಲಿ 125 ಕೋಟಿ ಇನ್ವೆಸ್ಟ್ ಮೆಂಟ್ ಮಾಡಿಸ್ತಿರೋ ಶೆಟ್ರು ಮುಂದೆ 1000 ಕೋಟಿ ಟಾರ್ಗೆಟ್ ಇದೆ. 16 ಕೋಟಿ ಹಾಕ್ಸಿ 400 ಕೋಟಿ ಬಾಚಿಕೊಟ್ಟಿರೋ ಡಿವೈನ್‍ಸ್ಟಾರ್ ಗೆ 1000 ಕೋಟಿ ಲೆಕ್ಕಕ್ಕಿಲ್ಲ ಅನ್ನೋದು ಅವರ ಫ್ಯಾನ್ಸ್ ಮಾತು. ಅಚ್ಚರಿ ಅಂದರೆ ಡಿವೈನ್ ಸ್ಟಾರ್ ಅಭಿಮಾನಿಗಳಿಗೆ ಒಂದು ಕನಸಿದೆ. ಕಾಂತಾರ ಪ್ರಚಾರಕ್ಕೆ ಖಾಸಗಿ ಜೆಟ್‍ನಲ್ಲಿ ದೇಶ ಸುತ್ತಿದ ಕೆರಾಡಿ ಹೀರೋ, ಕಾಂತಾರ-2 ಪ್ರಮೋಷನ್‍ಗೆ ಪ್ರೈವೇಟ್ ಜೆಟ್‍ನಲ್ಲಿ ಹೋಗ್ಬೇಕು. ಕಾಂತಾರ ಪಾರ್ಟ್-2 ನಿಂದ ಪ್ರೈವೆಟ್ ಜೆಟ್ ಖರೀದಿ ಮಾಡುವಂತಾಗ್ಬೇಕು ಅನ್ನೋದು. ಆ ದೈವದ ಆಶೀರ್ವಾದ ಇದ್ದರೆ ಅಭಿಮಾನಿಗಳ ಈ ಕನಸು ಈಡೇರಬಹುದು. ಕೆರಾಡಿ ಟು ಕೆನಾಡವರೆಗೂ ರೀಚ್ ಆಗಿರುವ ರಿಷಬ್‍ಗಾರು, ಪಠಾಣ್, ಜವಾನ್ ಬಗ್ಗುಬಡಿದು ಬಾಕ್ಸ್ ಆಫೀಸ್ ಸಿಇಓ ಆಗ್ಬೋದು. ಆ ಕ್ಷಣಕ್ಕೆ ಕನ್ನಡಿಗರು ಸಾಕ್ಷಿಯಾದರೆ ಅದಕ್ಕಿಂತ ಇನ್ನೇನು ಬೇಕು.





