ಪ್ರತಿವರ್ಷ ಬೆಳ್ಳಿಭೂಮಿ ಅಂಗಳದಲ್ಲಿ `ದಸರಾ ದಂಗಲ್’ ನಡೆಯುವ ಬಗ್ಗೆ ನಿಮಗೆಲ್ಲ ಮಾಹಿತಿ ಇದ್ದೇ ಇದೆ. ಅದರಂತೇ, ಈ ವರ್ಷವೂ `ದಸರಾ ದಂಗಲ್’ ಜೋರಾಗಲಿದೆ. ಟಾಲಿವುಡ್ ನಟಸಿಂಹ ಹಾಗೂ ಸ್ಯಾಂಡಲ್‍ವುಡ್ ನರಸಿಂಹ ಇಬ್ಬರು ಅಖಾಡಕ್ಕಿಳಿಯುತ್ತಿದ್ದು, ಇವರಿಬ್ಬರ ಮುಂದೆ ಟಾಲಿವುಡ್ ದಳಪತಿ ತೊಡೆತಟ್ಟಲು ರೆಡಿಯಾಗಿದ್ದಾರೆ. ಅಚ್ಚರಿ ಅಂದರೆ ಈ ಭಾರಿಯ ದಸರಾ ದಂಗಲ್‍ನಲ್ಲಿ ಬಾಲಿವುಡ್ ಟೈಗರ್ ಹಾಗೂ ಟಾಲಿವುಡ್ ಟೈಗರ್ ಮುಖಾಮುಖಿಯಾಗ್ತಿದ್ದಾರೆ. ಹೀಗಾಗಿ, ಬೆಳ್ಳಿತೆರೆ ಅಖಾಡ ಧಗಧಗಿಸುತ್ತಿದೆ. ಬಾಕ್ಸ್ ಆಫೀಸ್ ಅಂಗಳದಲ್ಲಿ ನೆಕ್ ಟು ನೆಕ್ ಫೈಟ್ ನಡೆಯಲಿದ್ದು, ಗೆಲುವಿನ ಗದ್ದುಗೆ ಏರಿ ಗಹಗಹಿಸೋದ್ಯಾರು ಎಂಬ ಪ್ರಶ್ನೆ ಚಾಯ್ ಪೇ ಚರ್ಚೆಯಾಗ್ತಿದೆ.
ಅಂದ್ಹಾಗೇ, ಸ್ಯಾಂಡಲ್‍ವುಡ್ ನರಸಿಂಹ( ಶಿವರಾಜ್‍ಕುಮಾರ್) ಟಾಲಿವುಡ್ ನಟಸಿಂಹ (ನಂದಮೂರಿ ಬಾಲಕೃಷ್ಣ) ಇಬ್ಬರು ಆತ್ಮೀಯರು. ಆ ಬಾಂದವ್ಯಕ್ಕೆ `ಗೌತಮಿಪುತ್ರ ಶಾತಕರ್ಣಿ’ ಸಿನಿಮಾ ಸಾಕ್ಷಿಯಾಗಿತ್ತು. ಇದೀಗ ಇವರಿಬ್ಬರು ಬಾಕ್ಸ್ ಆಫೀಸ್ ಅಂಗಳದಲ್ಲಿ ಮುಖಾಮುಖಿಯಾಗಿ ಸಂದರ್ಭ ಎದುರಾಗಿದೆ. ಜೈಲರ್ ಸಿನಿಮಾದಲ್ಲಿ ಮಂಡ್ಯ ನರಸಿಂಹನಾಗಿ ಆರ್ಭಟಿಸಿದ ಮಾಸ್ ಲೀಡರ್ ಶಿವಣ್ಣ, `ಘೋಸ್ಟ್’ ಮೂಲಕ ದಸರಾ ದಂಗಲ್‍ಗೆ ಗ್ರ್ಯಾಂಡ್ ಎಂಟ್ರಿಕೊಡ್ತಿದ್ದಾರೆ. ಅತ್ತ ಟಾಲಿವುಡ್ ನಟಸಿಂಹ ಲೆಜೆಂಡರಿ ಆ್ಯಕ್ಟರ್ ಬಾಲಯ್ಯ `ಭಗವಂತ್ ಕೇಸರಿ’ ಸಿನಿಮಾದ ಮೂಲಕ ಕಣಕ್ಕಿಳಿಯುತ್ತಿದ್ದಾರೆ. ಎರಡು ಚಿತ್ರಗಳು ಹೈವೋಲ್ಟೇಜ್ ಆ್ಯಕ್ಷನ್ ಜಾನರ್ ನಿಂದ ಕೂಡಿದ್ದು ಟೀಸರ್, ಟ್ರೇಲರ್, ಹಾಡುಗಳ ಮೂಲಕ ಸಿನಿದುನಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡ್ಲೆಬೇಕು ಎನ್ನುವ ಮಟ್ಟಿಗೆ ಸಿನಿಮಾ ಪ್ರೇಮಿಗಳನ್ನು ಹುಚ್ಚೆಬ್ಬಿಸಿವೆ.
ಇಂಟ್ರೆಸ್ಟಿಂಗ್ ಅಂದರೆ ಭಗವಂತ್ ಕೇಸರಿ ದರ್ಶನಕ್ಕೂ ಮೊದಲೇ ಶ್ರೀನಿ ನಿರ್ದೇಶನದ `ಘೋಸ್ಟ್’ ಪ್ರದರ್ಶನ ಶುರುವಾಗಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಅಕ್ಟೋಬರ್ 18ರ ಮಧ್ಯರಾತ್ರಿಯೇ ಕರುನಾಡಿನಲ್ಲಿ ಫ್ಯಾನ್ಸ್ ಶೋ ಆರಂಭವಾಗಲಿದೆ. ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋದನ್ನ ಸಿನಿಮಾದಿಂದ ಸಿನಿಮಾಗೆ ಪ್ರೂವ್ ಮಾಡಿಕೊಂಡೇ ಹೊರಟಿರುವ ಸೆಂಚುರಿಸ್ಟಾರ್ ಶಿವಣ್ಣ, `ಘೋಸ್ಟ್’ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಲಿದ್ದಾರೆ. ಮಾಸ್ ಡೈಲಾಗ್ಸ್, ಮಸ್ತ್ ಆ್ಯಕ್ಷನ್ ಮೂಲಕ ಕಿಕ್ಕೇರಿಸಿರೋ ಕರುನಾಡ ಚಕ್ರವರ್ತಿಗೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್, ಜಯರಾಮ್ ಸೇರಿದಂತೆ ಬಿಗ್‍ಸ್ಟಾರ್ಸ್‍ಗಳು ಸಾಥ್ ನೀಡಿದ್ದಾರೆ. ನಿರ್ಮಾಪಕರಾದ ಸಂದೇಶ್ ನಾಗರಾಜ್ `ಘೋಸ್ಟ್’ ಸಿನಿಮಾನ ಗ್ಲೋಬಲ್ ಲೆವೆಲ್‍ನಲ್ಲಿ ರೀಚ್ ಮಾಡಿಸುವ ಪ್ರಯತ್ನದಲ್ಲಿದ್ದಾರೆ. ಅಕ್ಟೋಬರ್ 19ರಂದು ಪಂಚಭಾಷೆಯಲ್ಲಿ `ಘೋಸ್ಟ್’ ಅಖಾಡಕ್ಕಿಳಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.
ಇತ್ತ `ವೀರಸಿಂಹ ರೆಡ್ಡಿ’ ಬಾಲಯ್ಯ `ಭಗವಂತ್’ ಕೇಸರಿ ಮೂಲಕ ಮಗದೊಂದು ಹಿಟ್ ಕೊಡುವ ಭರವಸೆ ಮೂಡಿಸಿದ್ದಾರೆ. ಸರಿಲೇರು ನೀಕೆವ್ವರು ಸಿನಿಮಾ ಸಾರಥಿ ಅನಿಲ್ ರವಿಪುಡಿ ನಿರ್ದೇಶನದಲ್ಲಿ `ಭಗವಂತ್ ಕೇಸರಿ’ ಚಿತ್ರ ತಯಾರಾಗಿದ್ದು, ಮಗಧೀರನ ರಾಣಿ ಕಾಜಲ್ ಅಗರ್ವಾಲ್ ಕಂಬ್ಯಾಕ್ ಮಾಡಿದ್ದಾರೆ. ಕನ್ನಡತಿ ಶ್ರೀಲೀಲಾ ಲೆಜೆಂಡರಿ ಆ್ಯಕ್ಟರ್ ಬಾಲಯ್ಯ ಜೊತೆ ಸ್ಕ್ರೀನ್ ಶೇರ್ ಮಾಡಿ ಸೌಂಡ್ ಮಾಡುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟ ಅರ್ಜುನ್ ರಾಮ್ ಪಾಲ್ ಖಳನಾಯಕನಾಗಿ ನಟಸಿಂಹನ ಎದುರು ತೊಡೆತಟ್ಟಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಕಥೆಯ ಭಗವಂತ್ ಕೇಸರಿ ಸಿನಿಮಾ ಅಕ್ಟೋಬರ್ 19ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.
ಇದೇ ದಿನದಂದು ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ `ಲಿಯೋ’ ಚಿತ್ರವೂ ಬಿಡುಗಡೆಯಾಗ್ತಿದೆ. ಜೈಸಿಂಹನ ಭಗವಂತ್ ಕೇಸರಿ ಸಿನಿಮಾದಷ್ಟೇ ದಳಪತಿ `ಲಿಯೋ’ ಕ್ರೇಜ್ ಸೃಷ್ಟಿಸಿದೆ. ವಿಕ್ರಮ್, ಖೈದಿ ಡೈರೆಕ್ಟರ್ ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಸಂಜಯ್ ದತ್, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿಜಯ್ ಎದುರು ಘರ್ಜಿಸಿದ್ದು, ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಹಾಗೂ ಪ್ರೀ ರಿಲೀಸ್ ಬ್ಯುಸಿನೆಸ್ ನಲ್ಲಿ ಧಮಾಕ ಎಬ್ಬಿಸಿರುವ ಲಿಯೋ ಮೇಲೆ ದೊಡ್ಡ ನಿರೀಕ್ಷೆ ಇದೆ. ಲೋಕೇಶ್ ತಮ್ಮದೇ ಸಿನಿಮ್ಯಾಟಿಕ್ ಯುನಿವರ್ಸ್ ಮೂಲಕ ಕಥೆ ಹೇಳುವ ರೀತಿ ಸಿನಿರಸಿಕರಿಗೆ ಬಲುಇಷ್ಟವಾಗಿದೆ. ಲಿಯೋ ಅಂಗಳದಿಂದ ಹೊರಬಿದ್ದಿರುವ ಲೇಟೆಸ್ಟ್ ಖಬರ್ ಸಿನಿಮಾ ಪ್ರೇಮಿಗಳನ್ನ ಪುಳಕಿತರನ್ನಾಗಿ ಮಾಡಿದೆ. ಹೌದು,ಆಕ್ಷನ್ ಥ್ರಿಲ್ಲರ್ ಗ್ಯಾಂಗ್ ಸ್ಟಾರ್ ಲಿಯೋ ಸಿನಿಮಾದಲ್ಲಿ ಉಳಗನಾಯಗನ್ ಕಮಲ್ ಹಾಸನ್ ನಟಿಸಿದ್ದಾರೆ ಎನ್ನಲಾಗ್ತಿದೆ. ಈ ವಿಷ್ಯ ಕೇಳಿ ದಳಪತಿ ಹಾಗೂ ಕಮಲ್ ಹಾಸನ್ ಫ್ಯಾನ್ಸ್ ಮತ್ತಷ್ಟು ಥ್ರಿಲ್ ಆಗಿದ್ದಾರೆ.
ಇನ್ನೂ ಈ ಭಾರಿಯ ದಸರಾ ದಂಗಲ್ `ಟೈಗರ್ ವರ್ಸಸ್ ಟೈಗರ್’ ಕಾಳಗಕ್ಕೆ ಸಾಕ್ಷಿಯಾಗಲಿದೆ. ಮಾಸ್ ಮಹರಾಜ ರವಿತೇಜಾ ನಟನೆಯ ಮೋಸ್ಟ್ ಎಕ್ಸ್ ಪೆಕ್ಟೆಡ್ `ಟೈಗರ್ ನಾಗೇಶ್ವರ್ ರಾವ್’ ಚಿತ್ರ ಇದೇ ಅಕ್ಟೋಬರ್ 20ರಂದು ವಲ್ರ್ಡ್‍ವೈಡ್ ರಿಲೀಸ್ ಆಗ್ತಿದೆ. ಅದೇ ದಿನ ಬಾಲಿವುಡ್ ಟೈಗರ್ ಶ್ರಾಫ್ ಅಭಿನಯದ `ಗಣಪತ್’ ವಿಶ್ವದಾದ್ಯಂತ ಗ್ರ್ಯಾಂಡ್ ಎಂಟ್ರಿಕೊಡ್ತಿದೆ. ಟೆಕ್ನಿಕಲಿ ಈ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ಟೀಸರ್, ಟ್ರೇಲರ್ ಗೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿದ್ದು, ಕರ್ನಾಟಕದಲ್ಲೂ ಈ ಭಾರಿ ಟೈಗರ್ ಶ್ರಾಫ್ ಅದೃಷ್ಟಪರೀಕ್ಷೆ ಗಿಳಿಯುತ್ತಿದ್ದಾರೆ. ಅದರಂತೇ ರವಿತೇಜಾ ಕೂಡ ದಸರಾ ಹಬ್ಬದಂದು ಬಾಕ್ಸ್ ಆಫೀಸ್ ಬೇಟೆಯಾಡಲು ಸಿದ್ದರಿದ್ದಾರೆ.

ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾವನ್ನು ಕಾಶ್ಮೀರಿ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ತಮ್ಮದೇ ಅಭಿಷೇಕ್ ಅಗವಾಲ್ ಆರ್ಟ್ಸ್ ನಡಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಸಿನಿಮಾ ಮೂಡಿಬಂದಿದ್ದು, 70ರ ಕಾಲಘಟ್ಟದ ಹೈದ್ರಾಬಾದ್ ದ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದೆ. ಒಟ್ನಲ್ಲಿ, ಘೋಸ್ಟ್, ಭಗವಂತ್ ಕೇಸರಿ, ಟೈಗರ್ ನಾಗೇಶ್ವರ್ ರಾವ್, ಗಣಪತ್ ಹೀಗೆ ಬಿಗ್ ಬಜೆಟ್ ಚಿತ್ರಗಳ ನಡುವೆ ದಸರಾ ದಂಗಲ್ ಏರ್ಪಟ್ಟಿದೆ. ಇವರಲ್ಲಿ ಯಾರು ಗೆದ್ದು ಗಹಗಹಿಸ್ತಾರೆ? ಯಾರು ಪ್ರೇಕ್ಷಕ ಮಹಾಷಯರ ಮನಸ್ಸು ಗೆಲ್ತಾರೆ ಕಾದುನೋಡಬೇಕು.






