ಡಾರ್ಲಿಂಗ್ ಪ್ರಭಾಸ್ ಹಾಗೂ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತಹ, ಸರಪಟಾಕಿ ಹಚ್ಚಿ ಸಂಭ್ರಮಿಸುವಂತಹ ಸುದ್ದಿಯೊಂದು ಕೇಳಿಬರುತ್ತಿದೆ. ಸದ್ಯ ಟಾಲಿವುಡ್ ಫಿಲ್ಮ್ ನಗರದಲ್ಲಿ ಹರಿದಾಡುತ್ತಿರುವ ರೂಮರ್ಸ್ ಪ್ರಕಾರ ಪ್ರಭಾಸ್ ಹಾಗೂ ನಯನ್ ಭರ್ತಿ 16 ವರ್ಷಗಳು ಕಳೆದ ಮೇಲೆ ಒಂದಾಗುತ್ತಿದ್ದಾರೆ. 2007 ರಲ್ಲಿ ಯೋಗಿ ಸಿನಿಮಾದಲ್ಲಿ ಈ ಜೋಡಿ ಒಂದಾಗಿ ಚಿತ್ರಪ್ರೇಮಿಗಳು ಹುಚ್ಚೇಳುವಂತೆ ಮಾಡಿತ್ತು. ಇದೀಗ, ಮತ್ತೊಮ್ಮೆ ಇವರಿಬ್ಬರು ಸ್ಕ್ರೀನ್ ಶೇರ್ ಮಾಡುವ ಟೈಮ್ ಬಂದಿದ್ದು, ವಿಷ್ಣುಮಂಚು ನಟನೆಯ `ಕಣ್ಣಪ್ಪ’ ಸಿನಿಮಾದಲ್ಲಿ ಶಿವ-ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಇತ್ತೀಚೆಗೆ ಪ್ರಭಾಸ್ ಶಿವಪ್ಪನಾಗಿ ಕಾಣಿಸಿಕೊಳ್ಳುವ ಬಗ್ಗೆ ಸುದ್ದಿಯಾಗಿತ್ತು. ಗೆಳೆಯ ವಿಷ್ಣು ಮಂಚುಗೋಸ್ಕರ ರೆಬೆಲ್‍ಸ್ಟಾರ್, ಲಾರ್ಡ್ ಶಿವನ ಪಾತ್ರಕ್ಕೆ ಜೀವ ತುಂಬಲು ಒಪ್ಪಿಕೊಂಡಿದ್ದಾರೆನ್ನುವ ಸುದ್ದಿ ಸಂಚಲನ ಮೂಡಿಸಿತ್ತು. ಇದೀಗ, ಪಾರ್ವತಿ ಪಾತ್ರಕ್ಕೆ ದಕ್ಷಿಣ ಭಾರತದ ಸ್ಟಾರ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಅವ್ರನ್ನ ಅಪ್ರೋಚ್ ಮಾಡಿರುವ ಬಗ್ಗೆ ಸುದ್ದಿಯಾಗಿದೆ. ಅಷ್ಟಕ್ಕೂ, ಈ ಸುದ್ದಿ ಎಷ್ಟು ನಿಜಾನೋ ಏನೋ ಗೊತ್ತಿಲ್ಲ. ಬಟ್, ಸುದ್ದಿ ಕಿವಿಗೆ ಬಿದ್ದಿದ್ದೇ ತಡ ಡಾರ್ಲಿಂಗ್ ಫ್ಯಾನ್ಸ್, ಸೂಪರ್ ಚೆಲುವೆಯ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. `ಯೋಗಿ’ ಜೋಡಿನಾ ಮತ್ತೊಮ್ಮೆ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಜವಾನ್ ಸಿನಿಮಾದ ಮೂಲಕ ಬಿಟೌನ್‍ಗೆ ಲಗ್ಗೆ ಇಟ್ಟು ಪ್ಯಾನ್ ಇಂಡಿಯಾ ತಲುಪಿರೋ ದರ್ಬಾರ್ ಬೆಡಗಿ, `ಕಣ್ಣಪ್ಪ’ ಚಿತ್ರಕ್ಕೆ ಓಕೆ ಎನ್ನುತ್ತಾರಾ? ಅಮರೇಂದ್ರ ಬಾಹುಬಲಿ ಪಕ್ಕದಲ್ಲಿ ಪಾರ್ವತಿಯಾಗಿ ನಿಲ್ಲುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ. ಇನ್ನೂ, ಬಾಲಿವುಡ್ ನಟಿ ನೂಪುರ್ ಸನಾನ್ `ಕಣ್ಣಪ್ಪ’ ಚಿತ್ರದ ನಾಯಕಿಯಾಗಿದ್ದರು. ಇದೀಗ, ಡೇಟ್ ಕ್ಲಾಶ್‍ನಿಂದ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ. ಸದ್ಯ, ಫೀಮೇಲ್ ಲೀಡ್ ಪಾತ್ರಕ್ಕೆ ಬೇರೊಬ್ಬ ನಟಿಯ ಹಂಟಿಂಗ್ ಕೂಡ ನಡೆಯುತ್ತಿದೆ.
ಕಣ್ಣಪ್ಪ ಚಿತ್ರ `ಭಕ್ತ ಕಣ್ಣಪ್ಪ’ ಸಿನಿಮಾದ ರಿಮೇಕ್. ಆ ಭಕ್ತ ಕಣ್ಣಪ್ಪ ನಮ್ಮ ಅಣ್ಣಾವ್ರ ಬೇಡರ ಕಣ್ಣಪ್ಪ ಚಿತ್ರದ ರಿಮೇಕ್ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಈ ಸಿನಿಮಾದಿಂದ ವರನಟ ಡಾ. ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕನಟರಾಗಿ ಪದಾರ್ಪಣೆ ಮಾಡಿದ್ದರು. ಆ ಸಿನಿಮಾ ಬೆಳ್ಳಿತೆರೆ ಮೇಲೆ ವಿಜೃಂಭಿಸಿ ಬ್ಲಾಕ್‍ಬಸ್ಟರ್ ಹಿಟ್ ಆಗಿತ್ತು. ಅವತ್ತಿಗೆ ಆ ಚಿತ್ರದ ರಿಮೇಕ್ ರೈಟ್ಸ್ ತೆಗೆದುಕೊಂಡು ಹೋಗಿದ್ದ ಪ್ರಭಾಸ್ ಅವರ ತಂದೆ ಉಪ್ಪಲಪಟ್ಟಿ ಸೂರ್ಯನಾರಾಯಣ ರಾಜು ಅವರು, ಸಹೋದರ ಕೃಷ್ಣಂ ರಾಜು ಅವರನ್ನ ನಾಯಕರನ್ನಾಗಿ ಮಾಡಿ `ಭಕ್ತ ಕಣ್ಣಪ್ಪ’ ಸಿನಿಮಾ ಮಾಡಿದ್ದರು. ಈ ಚಿತ್ರ ಅವರಿಗೂ ದೊಡ್ಡ ಹೆಸರು ತಂದುಕೊಟ್ಟಿತ್ತು, ವೃತ್ತಿಬದುಕಿನ ಮಹತ್ವದ ತಿರುವು ಸಿಕ್ಕಿತ್ತು. ಹೀಗಾಗಿ, ಕೃಷ್ಣಂರಾಜು ಅವರು ಮತ್ತೆ ಈ ಸಿನಿಮಾ ರಿಮೇಕ್ ಆಗ್ಬೇಕು, ಅದರಲ್ಲಿ ಪ್ರಭಾಸ್ ಕಣ್ಣಪ್ಪನಾಗಿ ಕಣಕ್ಕಿಳಿಬೇಕು ಅಂತ ಕನಸು ಕಂಡಿದ್ದರು. ಆದರೆ, ಆ ಕನಸು ಈಡೇರುವ ಮೊದಲೇ ಇಹಲೋಕ ತ್ಯಜಿಸಿದರು.
ಇದೀಗ `ಕಣ್ಣಪ್ಪ’ ಚಿತ್ರವನ್ನ ಡ್ರೀಮ್ ಪ್ರಾಜೆಕ್ಟ್ ಎಂದೇ ಭಾವಿಸಿರುವ ನಟ ವಿಷ್ಣುಮಂಚು ಅವರು `ಶಿವಪ್ಪ’ನ ರೋಲ್‍ಗೆ ಪ್ರಭಾಸ್ ಅವ್ರನ್ನ ಸಂಪರ್ಕ ಮಾಡಿದ್ದಾರಂತೆ. ಮಹಾದೇವನ ಪಾತ್ರಕ್ಕೆ ಬಣ್ಣ ಹಚ್ಚಲು ಪ್ರಭಾಸ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆನ್ನುವ ಸುದ್ದಿಯಿದೆ. ಇದಕ್ಕೆ ಸಂಬಂಧಪಟ್ಟಂತೆ ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಅವ್ರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿರುವ ವಿಷ್ಣು ಮಂಚು `ಹರ ಹರ ಮಹಾದೇವ್’ ಅಂತ ರಿಯಾಕ್ಟ್ ಮಾಡಿದ್ದಾರೆ. ಅಲ್ಲಿಗೆ, `ಕಣ್ಣಪ್ಪ’ ಸಿನಿಮಾದಲ್ಲಿ ಡಾರ್ಲಿಂಗ್ ಸ್ಪೆಷಲ್ ಅಪಿಯರೆನ್ಸ್ ಮಾಡೋದು ಖರ್ರೆ ಅಂದ್ಹಾಂಗಾಯ್ತು. ಆದ್ರೂ, ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಕುತೂಹಲದಿಂದ ಕಾದು ನೋಡಬೇಕು.

ಇನ್ನೂ `ಭಕ್ತ ಕಣ್ಣಪ್ಪ’ ಸಿನಿಮಾಗೆ ಮಹಾಭಾರತ ಸರಣಿ ಖ್ಯಾತಿಯ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಪರಚೂರಿ ಗೋಪಾಲಕೃಷ್ಣ ಮತ್ತು ಸಾಯಿ ಮಾಧವ್ ಬುರ್ರಾ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸಿ ಅವರ ಪ್ರತಿಭಾವಂತ ಜೋಡಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದೆ. ವಿಷ್ಣು ಮಂಚುಗೆ ನಾಯಕಿಯಾಗಿ ನೂಪುರ್ ಸನೋನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಬಾಲಿವುಡ್ನ ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಇದೆ. ಹವಾಮಾನದ ಕಾರಣದಿಂದ ಈ ಸಿನಿಮಾವನ್ನು ನ್ಯೂಜಿಲೆಂಡ್ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದಾಜು 150 ಕೋಟಿ ರೂ. ಬಜೆಟ್ನಲ್ಲಿ ಈ ಚಿತ್ರ ತಯಾರಾಗಲಿದೆ ಎಂದು ಸ್ವತಃ ಮಂಚು ವಿಷ್ಣು ತಂದೆ, ಹಿರಿಯ ನಟ ಮೋಹನ್ ಬಾಬು ಹೇಳಿಕೊಂಡಿದ್ದಾರೆ. ಅವಾ ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಜಂಟಿಯಾಗಿ ನಿರ್ಮಿಸಿರುವ ಈ ಪ್ರಾಜೆಕ್ಟ್ ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಕಾಳಹಸ್ತಿಯಲ್ಲಿ ಸಿನಿಮಾದ ಮುಹೂರ್ತ ಮಾಡಲಾಗಿತ್ತು. ‘ಕಣ್ಣಪ್ಪ’ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.





