ನಟ ಧರ್ಮ ಕೀರ್ತಿರಾಜ್ ಈಗ ’ಅಮರಾವತಿ ಪೊಲೀಸ್ ಸ್ಟೇಷನ್’ ಮೆಟ್ಟಿಲೇರಲು ತಯಾರಾಗಿದ್ದಾರೆ. ಪೊಲೀಸ್ ಸ್ಟೇಷನ್ ಮೆಟ್ಟಿಲು ಎಂದ ಕೂಡಲೇ ಧರ್ಮ ಕೀರ್ತಿರಾಜ್ ಯಾವುದಾದರೂ ಕೇಸ್ ನಲ್ಲಿ ತಗಲಾಕಿಕೊಂಡಿದ್ದಾರಾ? ಅಂಥ ಭಾವಿಸಬೇಡಿ. ಇಲ್ಲಿ ಹೇಳುತ್ತಿರುವುದು ಅವರ ಅಭಿನಯದ ಹೊಸ ಸಿನಿಮಾದ ಬಗ್ಗೆ. ಹೌದು ನಟ ಧರ್ಮ ಕೀರ್ತಿರಾಜ್, ಈಗ ’ಅಮರಾವತಿ ಪೊಲೀಸ್ ಸ್ಟೇಷನ್’ ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಈ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ. ‘ಅಮರಾವತಿ ಪೊಲೀಸ್ ಸ್ಟೇಷನ್’ ಚಲನಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಶ್ರೀ ಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರದ ಮುಹೂರ್ತ ದೃಶ್ಯಕ್ಕೆ ಡಾ ವಿ. ನಾಗೇಂದ್ರ ಪ್ರಸಾದ್ ಕ್ಲಾಪ್ ಮಾಡಿದರೆ, ನಿರ್ಮಾಪಕರಾದ ಅಂಜನ ರೆಡ್ಡಿ ಹಾಗೂ ಗೀತಾ ಅಂಜನ ರೆಡ್ಡಿ ಕ್ಯಾಮೆರಾ ಚಾಲನೆ ಮಾಡಿದರು. ‘ಎಸ್.ಎ.ಆರ್. ಪ್ರೊಡಕ್ಷನ್ಸ್’ ಲಾಛನದಲ್ಲಿ ಅಂಜನರೆಡ್ಡಿ ಹಾಗೂ ಶ್ರೀಮತಿ ಗೀತಾ ಅಂಜನರೆಡ್ಡಿ ನಿರ್ಮಿಸುತ್ತಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾಕ್ಕೆ ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡುವಾಗ ದಲ್ಲಾಳಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಊರಗೌಡ ಪರಿಹಾರ ಹುಡುಕುತ್ತಾನೆ. ಆತ ಇದ್ದಕ್ಕಿದ್ದ ಹಾಗೆ ಕಾಣೆಯಾದಾಗ ಆತನನ್ನು ಪತ್ತೆಹಚ್ಚಲು ಬಂದ ಪೋಲೀಸ್ ಅಧಿಕಾರಿ ಕೂಡ ಕಣ್ಮರೆಯಾಗುತ್ತಾನೆ. ಇದಕ್ಕೆಲ್ಲ ಪರಿಹಾರ ಕಂಡುಹಿಡಿಯುವುದೇ ಸ್ನೇಹಿತನನ್ನು ಹುಡುಕಿಕೊಂಡು ಹಳ್ಳಿಗೆ ಬರುವ ನಾಯಕ ಹೇಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾನೆ ಎಂಬುದನ್ನು ಸಸ್ಪೆನ್ಸ್, ಥ್ರಿಲ್ಲರ್ ಕಥೆಯೊಂದಿಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಇದೇ ಅ. 9 ರಿಂದ ಅರಸೀಕೆರೆಯ ಪೊಲೀಸ್ ಸ್ಟೇಷನ್, ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲಹಂತದ ಶೂಟಿಂಗ್ ಮುಗಿಸಿ, ನಂತರ ಬೆಂಗಳೂರಿನಲ್ಲಿ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಚಿತ್ರೀಕರಣ ನಡೆಸಲಾಗುವುದು ಎಂದಿದೆ ಚಿತ್ರತಂಡ. ‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾದಲ್ಲಿ ನಾಯಕ ಧರ್ಮ ಕೀರ್ತಿರಾಜ್ ಅವರಿಗೆ ವೇದ್ವಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟಿ ಭವ್ಯಾ, ಉಮಾಶ್ರೀ, ಸಾಧುಕೋಕಿಲ, ಚಿಕ್ಕಣ್ಣ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಪ್ರಮುಖ ತಾರಾಗಣದಲ್ಲಿದ್ದಾರೆ.