ನ್ಯಾಷನಲ್ ಸ್ಟಾರ್ ಯಶ್ ಕಾಲ್‍ಶೀಟ್ ಗಿಟ್ಟಿಸಿಕೊಳ್ಳುವಲ್ಲಿ ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಯಶಸ್ವಿಯಾಗಿದ್ದಾರೆನ್ನುವ ಸುದ್ದಿ ಸಂಚಲನದ ನಡುವೆ ರಾಕಿಂಗ್ ಸ್ಟಾರ್ ಯಶ್ `ದಂಗಲ್’ ಡೈರೆಕ್ಟರ್‍ಗೆ 15 ದಿನ ಕಾಲ್‍ಶೀಟ್ ಕೊಟ್ಟಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಬಿಟೌನ್ ರಾಮಾಯಣದಲ್ಲಿ ರಾಕಿಭಾಯ್ ರಾವಣನಾಗಿ ಧಗಧಗಿಸುತ್ತಾರೆನ್ನುವ ಬೆಂಕಿ ಸಮಾಚಾರ ಸದ್ಯ ಬಿಗ್ ಬ್ರೇಕಿಂಗ್ ನ್ಯೂಸ್ ಆಗ್ತಿದೆ. ಅಷ್ಟಕ್ಕೂ, ಯಶ್ ರಾವಣನಾಗೋ ವಿಚಾರವೇನು ಹೊಸದಲ್ಲ. ಕೆಜಿಎಫ್ ಚಾಪ್ಟರ್-2 ರಿಲೀಸ್ ಆದಾಗಿನಿಂದಲೂ ಈ ಕುರಿತಾದ ಸುದ್ದಿ-ಸಮಾಚಾರಗಳು ಬಾಲಿವುಡ್ ಅಂಗಳದಲ್ಲಿ ಭರ್ಜರಿಯಾಗಿ ಓಡಾಡುತ್ತಿವೆ. ಈ ಓಟಕ್ಕೆ ಕೆಜಿಎಫ್ ಕಿಂಗ್ ಬ್ರೇಕ್ ಹಾಕದೇ ಇದ್ದರೂ ನಿರ್ಮಾಪಕರಾದ ಮಧು ಮಾಂಟೇನ್ ಅವರು ಯಶ್ ತಮ್ಮ ಸಿನಿಮಾದ ಭಾಗವಾಗ್ತಿರುವುದನ್ನ ಒಪ್ಪಿಕೊಂಡಿದ್ದರು. ಇದೀಗ, ಹೊಸ ಅಪ್‍ಡೇಟ್ ಎನ್ನುವಂತೆ ಮಾನ್‍ಸ್ಟರ್ ಲುಕ್ ಟೆಸ್ಟ್ ಪ್ಲಸ್ 15 ಡೇಸ್ ಕಾಲ್‍ಶೀಟ್ ಮ್ಯಾಟರ್ ಲೀಕ್‍ಔಟ್ ಆಗಿದೆ. ದಂಗಲ್ ಚಿತ್ರದ ಮೂಲಕ 2000 ಸಾವಿರ ಕೋಟಿ ಮೂಟೆ ಕಟ್ಟಿಸಿ ಇಂಟರ್ ನ್ಯಾಷನಲ್ ಸಿನಿಮಾ ಲೋಕವನ್ನ ದಂಗು ಬಡಿಸಿದ್ದ ನಿರ್ದೇಶಕನ ಜೊತೆ ಇಂಡಿಯನ್ ಬಾಕ್ಸ್ ಆಫೀಸ್ ಸಿಇಓ ಯಶ್ ಕೈ ಜೋಡಿಸಿದ್ರಾ ಎನ್ನುವ ಪ್ರಶ್ನೆ ಮಿಲಿಯನ್ ಡಾಲರ್ ಸ್ವರೂಪ ಪಡೆದಿದೆ.

ಇತ್ತೀಚೆಗಷ್ಟೇ ಯಶ್ ಲುಕ್ ಟೆಸ್ಟ್ ಗಾಗಿ ಲಂಡನ್‍ಗೆ ತೆರಳಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಬಿಟೌನ್ ಅಂಗಳದಲ್ಲಿ ರಾವಣನ ಪಾತ್ರಕ್ಕೆ ರಾಕಿಭಾಯ್ ಲುಕ್ ಟೆಸ್ಟ್ ಮುಗಿದಿದೆ ಎನ್ನುವ ಸಮಾಚಾರ ಇದೀಗ ಹೊರಬಿದ್ದಿದೆ. ದಂಗಲ್ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳುತ್ತಿರುವ `ರಾಮಾಯಣ’ ಸಿನಿಮಾದಲ್ಲಿ ಮಾನ್‍ಸ್ಟರ್ ರಾವಣಾಸುರನಾಗಿ ಆರ್ಭಟಿಸೋದು ಪಕ್ಕಾ ಎನ್ನಲಾಗ್ತಿದೆ. ಶ್ರೀರಾಮನಾಗಿ ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ಕಾಣಿಸಿಕೊಂಡರೆ, ಸೀತಾಮಾತೆಯಾಗಿ ಸೌತ್ ಸುಂದರಿ ಸಾಯಿಪಲ್ಲವಿ ಮಿಂಚಲಿದ್ದಾರಂತೆ. ಈ ಮೊದಲು ಸೀತೆಯ ಪಾತ್ರಕ್ಕೆ ದೀಪಿಕಾ, ಅಲಿಯಾ ಹೆಸರು ಕೇಳಿಬಂದಿತ್ತು. ರಾವಣನಾಗಿ ಗ್ರೀಕ್ ಗಾಡ್ ಹೃತಿಕ್ ರೋಷನ್ ಅಭಿನಯಿಸ್ತಾರೆನ್ನುವ ನ್ಯೂಸ್ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಆದ್ರೀಗ, ಮಾನ್‍ಸ್ಟರ್ ಹೆಸರು ಮುಂಚೂಣಿಯಲ್ಲಿದೆ. 15 ಡೇಸ್ ಕಾಲ್‍ಶೀಟ್ ಮ್ಯಾಟರ್ ಹಿಂದಿ ಬೆಲ್ಟ್ ನಲ್ಲಿ ಬೇಜಾನ್ ಚರ್ಚೆಯಾಗ್ತಿದೆ.
ಇಂಟ್ರೆಸ್ಟಿಂಗ್ ಅಂದರೆ ದಂಗಲ್ ಸಾರಥಿ ನಿತೇಶ್ ತಿವಾರಿಯವರು `ರಾಮಾಯಣ’ ಸಿನಿಮಾವನ್ನು ಮೂರು ಭಾಗಗಳಲ್ಲಿ ತೆರೆಮೇಲೆ ತರುವುದಕ್ಕೆ ಹೊರಟಿದ್ದಾರಂತೆ. ಕಳೆದ ಎರಡು ವರ್ಷಗಳಿಂದ `ರಾಮಾಯಣ’ ಸಿನಿಮಾದ ಮೇಲೆ ವರ್ಕ್ ಮಾಡಿರುವ ಅವರು, 2024 ಫೆಬ್ರವರಿಯಿಂದ ಶೂಟಿಂಗ್ ಶುರು ಮಾಡಲಿದ್ದಾರಂತೆ. ರಾಮಾಯಣದ ಮೊದಲ ಚಾಪ್ಟರ್ `ರಾಮ-ಸೀತೆ’ಯ ಮೇಲೆ ಸಾಗಲಿದ್ದು, ಕ್ಲೈಮ್ಯಾಕ್ಸ್ ಹಂತದಲ್ಲಿ ರಾವಣ ಕ್ಯಾರೆಕ್ಟರ್‍ನ ಇಂಟ್ರುಡ್ಯೂಸ್ ಮಾಡಿಸುತ್ತಾರಂತೆ. ಹೀಗಾಗಿ, ಕೇವಲ 15 ದಿನ ಯಶ್ ಕಾಲ್‍ಶೀಟ್ ಕೊಟ್ಟಿದ್ದಾರೆನ್ನಲಾಗ್ತಿದೆ. ರಾಮಾಯಣ ಸೆಕೆಂಡ್ ಪಾರ್ಟ್‍ನಲ್ಲಿ ರಾವಣನ ಸೀಕ್ವೆನ್ಸ್ ಹೆಚ್ಚಿರುವುದಾಗಿಯೂ ಸುದ್ದಿಯಾಗ್ತಿದೆ. ಆಸ್ಕರ್ ಅವಾರ್ಡ್ ವಿನ್ನಿಂಗ್ ಕಂಪೆನಿಯ ಡಿಎನ್‍ಇಜಿ ಜೊತೆ ದಂಗಲ್ ಡೈರೆಕ್ಟರ್ ಕೈ ಜೋಡಿಸಿದ್ದು, `ರಾಮಾಯಣ’ ಸಿನಿಮಾದ ಎಫೆಕ್ಟ್ಸ್ ಅಂಡ್ ಆನಿಮೇಷನ್ ಜವಾಬ್ದಾರಿಯನ್ನ ಡಿಎನ್‍ಇಜಿ ಸಂಸ್ಥೆ ನಿರ್ವಹಿಸಲಿದೆ. ಕಳಪೆಗುಣಮಟ್ಟದ ಗ್ರಾಫಿಕ್ಸ್‍ನಿಂದ ಆದಿಪುರುಷ್ ಸೋಲು ಕಂಡಿದ್ದರಿಂದ ವಿಶ್ವದ ಪ್ರಖ್ಯಾತ ತಂತ್ರಜ್ಞರ ಜೊತೆ ಸಿನಿಮಾ ಮಂದಿ ಜೊತೆ ನಿತೇಶ್ ತಿವಾರಿ ಟಯಪ್ ಆಗುತ್ತಿದ್ದಾರಂತೆ. ಇಡೀ ಜಗತ್ತು ಕಣ್ಣರಳಿಸುವಂತಹ ಸಿನಿಮಾ ಕೊಡಬೇಕೆಂದು ಪಣ ತೊಟ್ಟಿದ್ದಾರಂತೆ. ಮಧು ಮಾಂಟೇನ್ ಅವರು ಬಂಡವಾಳ ಹೂಡಲಿದ್ದಾರೆ.
ಇತ್ತ ಯಶ್ ತಮ್ಮ ಮುಂದಿನ ಯಶ್-19 ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿರುವುದು ನಿಮಗೆಲ್ಲ ಗೊತ್ತೆಯಿದೆ. ಕಳೆದ ಒಂದೂವರೆ ವರ್ಷಗಳಿಂದ ಅಪ್‍ಕಮ್ಮಿಂಗ್ ಸಿನಿಮಾ ಮೇಲೆ ವರ್ಕ್ ಮಾಡುತ್ತಿರುವ ರಾಕಿಭಾಯ್, ಯಾವ ಸಿನಿಮಾ? ಏನ್ ಕಥೆ? ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು? ಇದ್ಯಾವುದರ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಸ್ಯಾಂಡಲ್‍ವುಡ್ ಮಫ್ತಿ ಡೈರೆಕ್ಟರ್ ನರ್ತನ್ ಅವರಿಂದ ಹಿಡಿದು ಕಾಶ್ಮೋರ ಡೈರೆಕ್ಟರ್ ಗೋಕುಲ್, ಇರುಂಬುತಿರೈ ನಿರ್ದೇಶಕ ಮಿತ್ರನ್, ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ವರೆಗೂ ಹತ್ತಾರು ಡೈರೆಕ್ಟರ್ ಗಳ ಹೆಸರು ಕೇಳಿಬಂದಿದ್ದಂತೂ ಸತ್ಯ. ಈಗ `ಯಶ್-19’ಗೆ ಗೀತು ಮೋಹನ್ ದಾಸ್ ಅವ್ರೇ ಫಿಕ್ಸು ಎನ್ನಲಾಗ್ತಿದೆ. ಗೋವಾ ಡ್ರಗ್ ಮಾಫಿಯಾ ಮೇಲೆ ಕಥೆ ರೆಡಿಯಾಗಿದ್ದು, ಕೆವಿಎನ್ ಸಂಸ್ಥೆ ಜೊತೆ ಸೇರಿ ನಿರ್ಮಾಣಕ್ಕೂ ಧುಮ್ಕಿದ್ದಾರೆನ್ನುವ ಊಹಾಪೋಹದ ಸುದ್ದಿ ಓಡಾಡ್ತಿದೆ. ಈ ಮಧ್ಯೆ ರಾಕಿ ಗೋವಾ, ಮುಂಬೈ, ಲಂಡನ್ ಅಂತ ರಾಜ್ಯ-ದೇಶ ರೌಂಡ್ ಹೊಡೆಯುತ್ತಿದ್ದಾರೆ. ಅದೇನು ಮಾಡುತ್ತಿದ್ದಾರೆ? ಅದೆಂತಾ ಸಿನಿಮಾ ಕೊಡಲು ಜಗತ್ತು ಸುತ್ತುತ್ತಿದ್ದಾರೋ ಗೊತ್ತಿಲ್ಲ. ಆದರೆ, ಹಾಲಿವುಡ್ ಟೆಕ್ನಿಷಿಯನ್ಸ್ ಗಳನ್ನ ಯಶ್‍ಭಾಯ್ ಮೀಟ್ ಮಾಡುತ್ತಿರುವುದನ್ನ ನೋಡ್ತಿದ್ದರೆ ಇಂಟರ್ ನ್ಯಾಷನಲ್ ಲೆವೆಲ್‍ನಲ್ಲಿ ಟಾರ್ಗೆಟ್ ಇಟ್ಟಿರುವುದು ಖಚಿತ ಅನ್ಸುತ್ತೆ. ಎನಿವೇ, ಆದಷ್ಟು ಬೇಗ ಸೆಲ್ಫ್ ಮೇಡ್ ಷೆಹಜಾದ ಸಿಹಿಸುದ್ದಿ ಕೊಡಲಿ. ಸ್ಟ್ರೇಟ್ ಫಾರ್ವಡ್ ಸಂತು ಕೊಡೋ ಸುದ್ದಿಗೆ ಸುನಾಮಿ ಏಳಲಿ ಅನ್ನೋದೇ ನಮ್ಮಾಸೆ






