ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ ದಸರಾ ಸಡಗರ. ಇದೇ ಸಂದರ್ಭದಲ್ಲಿ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ ‘F0R REGN’ (ಫಾರ್ ರಿಜಿಸ್ಟರೇಷನ್) ಚಿತ್ರದ ‘ಲವ್ ಗಳ್ ಸುಮಧುರ ಹಾರ್ಟ್ ಗಳ್ ಗಿರಗಿರ…’ ಎಂಬ ಟ್ರಾವೆಲ್ ವಿಡಿಯೋ ಸಾಂಗ್ ಹಾಗೂ ನೂತನ ಪೋಸ್ಟರ್ ಬಿಡುಗಡೆಯಾಯಿತು.
‘ಮಾಲ್ ಆಫ್ ಮೈಸೂರು’ ಮಲ್ಟಿಪ್ಲೆಕ್ಸ್ ನಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಯಿಂಟ್ ಕಮೀಷನರ್ ಕೆ. ಎಂ. ಸವಿತಾ ಈ ಹಾಡು ಹಾಗು ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ನಾಯಕಿ ಮಿಲನ ನಾಗರಾಜ್, ನಿರ್ದೇಶಕ ನವೀನ್ ದ್ವಾರಕನಾಥ್ ಹಾಗೂ ನಿರ್ಮಾಪಕ ನವೀನ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಲ್ ನಲ್ಲಿ ಮೊಳಗಿದ ಈ ಸುಮಧುರ ಗೀತೆಗೆ ಅಭಿಮಾನಿಗಳು ಫಿದಾ ಆದರು. ನಾಗಾರ್ಜುನ ಶರ್ಮ ಈ ಹಾಡನ್ನು ಬರೆದಿದ್ದು, ಆರ್. ಕೆ ಹರೀಶ್ ಸಂಗೀತ ನೀಡಿದ್ದಾರೆ. ಐರಾ ಉಡುಪಿ ಹಾಗೂ ದೀಪಕ್ ದೊಡ್ಡೇರ ಈ ಹಾಡನ್ನು ಹಾಡಿದ್ದಾರೆ. ‘ನಿಶ್ಚಲ್ ಫಿಲಂಸ್’ ಮೂಲಕ ಎನ್ .ನವೀನ್ ರಾವ್ ನಿರ್ಮಿಸಿರುವ ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ.
ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ. ಪೃಥ್ವಿ ಅಂಬರ್, ಮಿಲನ ನಾಗರಾಜ್, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ.





