Gowri Movie: ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಸಮರ್ಜಿತ್ ಲಂಕೇಶ್(Samarjith Lankesh) ನಾಯಕನಾಗಿ ನಟಿಸಿರುವ ‘ಗೌರಿ’(Gowri) ಚಿತ್ರ ಇದೇ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಪೂರ್ವಭಾವಿಯಾಗಿ ‘ಗೌರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಕಿಚ್ಚ ಸುದೀಪ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ(Priyanka Upendra), ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ಹಿರಿಯ ವಕೀಲರಾದ ಶ್ಯಾಮ್ ಮುಂತಾದವರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್(Sudeep) ‘ಇಂದ್ರಜಿತ್ ಮತ್ತು ನಾನು ಹಳೆಯ ಸ್ನೇಹಿತರು. ಇಬ್ಬರೂ ಜೊತೆಗೆ ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಲಂಕೇಶ್ ಅವರ ಮಗ ಅಂತ ಗೊತ್ತಿರಲಿಲ್ಲ. ಆದರೆ, ಬಹಳ ಚೆನ್ನಾಗಿ ಶಟಲ್ ಆಡೋರು. ‘ಟ್ರೇಲರ್ ನೋಡಿ ನಮ್ಮ ವಿಮರ್ಶೆ, ಅಭಿಪ್ರಾಯ ಏನೇ ಇರಲಿ. ಇವತ್ತು ಅವರಿಬ್ಬರಿಗೆ ಆಗುವಷ್ಟು ಸಂತೋಷ, ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಆಗೋದಕ್ಕೆ ಸಾಧ್ಯವೇ ಇಲ್ಲ. ಸಮರ್ಜಿತ್ನ ಯಶಸ್ಸು ಅವನೊಬ್ಬನ ಯಶಸ್ಸು ಆಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್ ಅವರ ಯಶಸ್ಸೂ ಇದೆ’. ಇನ್ನು ಸಾನ್ಯ(Sanya Iyer) ಅವರು ಉತ್ತಮ ನಟಿ ಅಷ್ಟೇ ಅಲ್ಲ ಒಳ್ಳೆಯ ಬರಹಗಾರ್ತಿ ಕೂಡ. ಅದು ನನಗೆ “ಬಿಗ್ ಬಾಸ್” ಸಮಯದಲ್ಲಿ ತಿಳಿಯಿತು. ಈ ಸಂಜೆಗಾಗಿ ಸಮರ್ಜಿತ್(Samrjit Lankesh) ಮತ್ತು ಸಾನ್ಯಾ(Sanya Iyer) ಬಹಳ ಕಾತುರದಿಂದ ಕಾದಿರುತ್ತಾರೆ. ಬಿಡುಗಡೆಗಿಂತ ಇಂಥಹ ಸಂಜೆಗಳನ್ನು ನೀವು ಖುಷಿಪಡಿ. ಸಿನಿಮಾ ಬಿಡುಗಡೆಯಾದ ಮೇಲೆ ಜೀವನ ಇದೇ ತರಹ ಇರುವುದಿಲ್ಲ. ಅದು ನಿಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೋ ಗೊತ್ತಿಲ್ಲ. ಅದಕ್ಕೆ ಸಿದ್ದರಾಗಿರಿ’ ಎಂದರು.
ಸುದೀಪ್ ಹಾಗೂ ನನ್ನ ಗೆಳೆತನ ಎರಡು ದಶಕಗಳಿಗೂ ಮೀರಿದ್ದು. ಅವರ ಜೊತೆ ಶಟಲ್ ಆಡಿದ ದಿನಗಳು ಈಗಲೂ ಕಣ್ಣಮುಂದೆ ಇದೆ. ಹಿಂದೆ ನನ್ನ ನಿರ್ದೇಶನದ ಚಿತ್ರವೊಂದರಲ್ಲಿ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಆದರೆ ಅವರು ನನ್ನಿಂದ ಯಾವ ಸಂಭಾವನೆಯನ್ನು ಪಡೆದಿರಲಿಲ್ಲ. ಆಮೇಲೆ ನಾನು ಅವರಿಗೆ ಏನು ಕೊಡುವುದು? ಅವರ ಬಳಿ ಎಲ್ಲಾ ಇದೆ ಎಂದು ಕೊಂಡು, ಅವರ ಮಗಳಿಗೆ ವಿಶೇಷ ಉಡುಗೊರೆ ತೆಗೆದುಕೊಂಡು ಅವರ ಮನೆಗೆ ಹೋದೆ. ಆದರೆ ಸುದೀಪ್ ಅವರು ಅದನ್ನು ನನಗೆ ಕೊಡಲು ಬಿಡಲಿಲ್ಲ. ಈ ರೀತಿ ನನಗೆ ಮೊದಲಿನಿಂದಲೂ ಅವರು ನನಗೆ ಸಪೋರ್ಟ್ ಮಾಡುತ್ತಾ ಬರುತ್ತಿದ್ದಾರೆ. ಇಂದು ನನ್ನ ಮಗನ ಮೊದಲ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ಇಂದು ಕೂಡ ನನ್ನ ಬಳಿ ಅವರು ಯಾವ ಉಡುಗೊರೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಅವರಿಗಾಗಿ ಇಂಗ್ಲೆಂಡ್ ನಿಂದ ವಿಶೇಷ ಬ್ಯಾಟ್ ತರಿಸಿದ್ದೇನೆ ಇಂದ್ರಜಿತ್ ಲಂಕೇಶ್(Indrajith Lankesh) ತಿಳಿಸಿದರು.
‘ಗೌರಿ’(Gowri) ಚಿತ್ರದ ಟ್ರೇಲರ್ ಸುದೀಪ್(Sudeep) ಅವರು ಬಿಡುಗಡೆ ಮಾಡಿದಕ್ಕೆ ಸಂತಸ ವ್ಯಕ್ತಪಡಿಸಿದ ನಾಯಕ ಸಮರ್ಜಿತ್(Samarjit Lankesh) ಹಾಗೂ ನಾಯಕಿ ಸಾನ್ಯಾ ಅಯ್ಯರ್, ಆಗಸ್ಟ್ ಹದಿನೈದರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು. “ಗೌರಿ” ಚಿತ್ರದ ಮೂಲಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನೈಜ ಘಟನೆ ಆಧರಿಸಿ ನಿರ್ಮಾಣವಾಗಿರುವ ‘ಗೌರಿ’ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ (ವಿಶೇಷ ಪಾತ್ರ), ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ‘ಕಾಂತಾರ’ ಖ್ಯಾತಿಯ ಮಾನಸಿ ಸುಧೀರ್ ಸಂಪತ್ ಮೈತ್ರೇಯ, ಚಂದುಗೌಡ ಸೇರಿದಂತೆ ಬಹಳಷ್ಟು ಜನ ನಟಿಸಿದ್ದಾರೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.