-ಕಸ, ಕಾಮ ಮಾಲಿನ್ಯದ ಹಂಗಾಮಾ!
-ಫ್ಯಾಶನ್ ಲೋಕದಿಂದ ಪ್ರಕೃತಿಯ ಮೇಲೆ ನಿತ್ಯ ಪ್ರಹಾರ!

ಇದು ಥಳುಕು ಬಳುಕಿನ (fashion field) ಫ್ಯಾಶನ್ ಜಗತ್ತು. ಆಧುನೀಕರಣದ ಅಲೆ ಒಂದಿಡೀ ವೀಶ್ವವನ್ನೇ ಅಪಾದಮಸ್ತಕ ಆವರಿಸಿಕೊಂಡು ಬಿಟ್ಟಿದೆ. ಸಣ್ಣಪುಟ್ಟ ಪೇಟೆಗಳಿಂದ ಫರ್ಲಾಂಗು ದೂರದಲ್ಲಿರೋ ಹಳ್ಳಿಗಳಿಗೂ ಕೂಡಾ ಫ್ಯಾಶನ್ ಮಾಯೆ ಲಗ್ಗೆಯಿಟ್ಟಿದೆ. ಅದ್ಯಾರೋ ಸೆಲೆಬ್ರಿಟಿ, ಮಾಡೆಲ್ಲುಗಳು ಒಂದ್ಯಾವುದೋ ವಿನ್ಯಾಸದ ಬಟ್ಟೆ ಧರಿಸಿ ಓಡಾಡಿದರೆ, ದಿನ ಕಳೆಯೋದರೊಳಗೆ ಅದು ಹಳ್ಳಿಗಾಡುಜಗಳಲ್ಲಿಯೂ (fashion trends) ಟ್ರೆಂಡ್ ಸೆಟ್ ಮಾಡುತ್ತೆ. ಹಾಗೊಂದು ಫ್ಯಾಶನ್ ಊರು ತುಂಬಾ ಅಡ್ಡಾಡುತ್ತದಲ್ಲಾ? ಅದು ವರ್ಷಗಟ್ಟಲೆ ಚಾಲ್ತಿಯಲ್ಲಿರುತ್ತೆ ಅಂದುಕೊಳ್ಳುವಂತಿಲ್ಲ. ಯಾಕಂದ್ರೆ, ಹೀಗೆ ಟ್ರೆಂಡ್ ಸೆಟ್ (trend setter fashion) ಮಾಡೋ ವಿನ್ಯಾಸಗಳ ಆಯಸ್ಸು ದಿನಗಳ ಲೆಕ್ಕದಲ್ಲಿರುತ್ತೆ. ಒಂದು ಟ್ರೆಂಡಿನ ತಲೆಗೆ ಬಾರಿಸಿದಂತೆ ಮತ್ತೊಂದು ಫ್ಯಾಶನ್ ಜುಟ್ಟು ಕೆದರಿಕೊಂಡು ಊರುತುಂಬಾ ಮೆರೆಯಲು ಶುರುವಿಟ್ಟುಕೊಳ್ಳುತ್ತೆ. ಹಾಗಾದ್ರೆ, ಒಂದು ವಿನ್ಯಾಸ ಟ್ರೆಂಡಾದಾಗ ಟನ್ನುಗಟ್ಟಲೆ ಬಟ್ಟೆ ರೆಡಿಯಾಗುತ್ತಲ್ಲಾ? ಅದೆಲ್ಲ ಸೇಲ್ ಆಗುತ್ತಾ? ಒಂದು ವೇಳೆ ಆಗದೇ ಹೋದ್ರೆ ಔಟ್ ಡೇಟೆಡ್ ಅನ್ನಿಸಿಕೊಳ್ಳೋ ಅಂಥಾ ಬಟ್ಟೆಗಳ ಕಥೆ ಏನಾಗುತ್ತೆ? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು ತಲಾಶಿಗಿಳಿದರೆ ಬೆಚ್ಚಿಬೀಳಿಸಬಲ್ಲ ಜಾಗತಿಕ ಮಟ್ಟದ (dark secrets) ಫ್ಯಾಶನ್ ಜಗತ್ತಿನ ಡಾರ್ಕ್ ಸೀಕ್ರೆಟ್ ಒಂದು ಜಾಹೀರಾಗುತ್ತೆ!

ಇದು ಡಾರ್ಕ್ ಸೀಕ್ರೆಟ್
ಸಾಮಾನ್ಯವಾಗಿ ಫ್ಯಾಶನ್ ಜಗತ್ತಿನ ಬಗ್ಗೆ ಆಸಕ್ತಿ ಇರುವವರು, ಅದರ ಬಗೆಗೊಂದು ಬೆರಗಿಟ್ಟುಕೊಂಡವರು ಅದರೊಳಗಿನ ವಿಚಾರಗಳನ್ನ ಕೆದಕುತ್ತಾರೆ. ಈವತ್ತಿಗೆ ಫ್ಯಾಶನ್, ಮಾಡೆಲಿಂಗ್ ಅನ್ನೋದು ಕೋಟಿಗಟ್ಟಲೆ ವ್ಯವಹಾರ ನಡೆಸೋ ಜಾಗತಿಕ ಮಟ್ಟದ ಉದ್ಯಮ. ಸುಮ್ಮನೊಮ್ಮೆ ಕ್ಯಾಟ್ ವಾಕ್ ಮಾಡಿ ಕೋಟಿ ಕೋಟಿ ಬಾಚಿಕೊಳ್ಳುವವರು ಆ ಜಗತ್ತಿನಲ್ಲಿದ್ದಾರೆ. ಆಯಕಟ್ಟಿನ ಜಾಗೆಗಳಲ್ಲಿ ಇವೆಂಟುಗಳನ್ನು ಆಯೋಜಿಸುವ ಮೂಲಕ ರಾತ್ರಿ ಬೆಳಗಾಗೋದರೊಳಗಾಗಿ ತಿಜೋರಿ ತುಂಬಿಸಿಕೊಳ್ಳುವ ಹೈಫೈ ಕುಳಗಳಿಗೂ ಅಲ್ಲಿ ಕೊರತೆಯೇನಿಲ್ಲ. ನಿಖರವಾಗಿ ಹೇಳಬೇಕೆಂದರೆ, ಅದೊಂದು ಮಾಯಾ ಜಗತ್ತು. ಸಿನಿಮಾ ಉದ್ಯಮವನ್ನೇ ಮೀರಿ ಬೆಳೆದು ನಿಂತಿರುವ ವ್ಯವಹಾರವೂ ಹೌದು.
ಇಂಥಾ ರಂಗೀನ್ ದುನಿಯಾದ ಡಾರ್ಕ್ ಸೀಕ್ರೆಟ್ ಗಳ ಬಗ್ಗೆ ಆಗಾಗ ಸುದ್ದಿಯಾಗೋದಿದೆ. ಅದರ ಗರ್ಭದಿಂದ ಹೊರ ಬರುವ ಒಂದಷ್ಟು ವಿವಾದಗಳು ಸಣ್ಣ ಸಣ್ಣ ಸುದ್ದಿಯ ತುಣುಕುಗಳಾಗಿ ಕಳೆದು ಹೋಗೋದೇ ಹೆಚ್ಚು. ಒಂದು ವೇಳೆ ಯಾರಾದರೂ ಫ್ಯಾಶನ್ ಲೋಕದತ್ತ ವಾಸ್ತವದ ಕನ್ನಡಿ ಹಿಡಿದರೆ, ಹೊರ ಜಗತ್ತಿಗೆ ಗೊತ್ತೇ ಆಗದಂತೆ ಅದನ್ನು ಪುಡಿಗಟ್ಟಬಲ್ಲಷ್ಟು ಈ ಉದ್ಯಮ ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ಅದರ ಆಳದಲ್ಲಿ ಹೆಣ್ಣುಮಕ್ಕಳ ಶೋಷಣೆ, ಅದಕ್ಕೆ ತಳುಕು ಹಾಕಿಕೊಂಡಿರುವ ದಂಧೆಗಳಿವೆ ಅನ್ನೋದು ಈಗಾಗಲೇ ಜಗಜ್ಜಾಹೀರಾಗಿದೆ. ಹೀಗೆ ಫ್ಯಾಶನ್ ಜಗತ್ತನ್ನ ಆವರಿಸಿಕೊಂಡಿರುವ ನಾನಾ ವ್ಯವಹಾರಗಳ ಜೊತೆಗೆ ಕಸವೂ ಸೇರಿಕೊಂಡಿದೆ ಅನ್ನೋ ಕಟು ವಾಸ್ತವ ಬಹುಶಃ ಬಹತೇಕರನ್ನ ಬೆರಗುಗೊಳಿಸಬಹುದು. ಅದು ಜಗತ್ತಿನ ನಾನಾ ಭಾಗಗಳಲ್ಲಿ ನಡೆಸುತ್ತಿರೋ ಪ್ರಕೃತಿಯ ಮೇಲಿನ ಪ್ರಹಾರ, ಇನ್ನೊಂದಷ್ಟು ವರ್ಷಗಳ ಕಾಲ ಈ ವಿಶ್ವವನ್ನು ನಾನಾ ದಿಕ್ಕಿನಲ್ಲಿ ನರಳಿಸಬಲ್ಲಂಥಾ ಮಾಲೀನ್ಯದ ಕಥೆ ನಿಜಕ್ಕೂ ಭೀಕರವಾಗಿದೆ!
ನೀವು ಆಲೋಚಿಸಿರಲಿಕ್ಕಿಲ್ಲ… ಪ್ರತೀ ವರ್ಷ ಈ ಜಗತ್ತಿನಲ್ಲಿ ಎಷ್ಟು ಪ್ರಮಾಣದಲ್ಲಿ ಜೀನ್ಸ್ ಪ್ಯಾಂಟ್, ಶರ್ಟ್ ಸೇರಿದಂತೆ ನಾನಾ ಉಡುಪುಗಳು ತಯಾರಾಗುತ್ತವೆ? ಅದರಲ್ಲಿ ಎಷ್ಟು ಮಾರಾಟವಾಗುತ್ತವೆ? ಈ ವೇಗದ ದುನಿಯಾದಲ್ಲಿ ಔಟ್ ಡೇಟೆಡ್ ಆದ ವೆರೈಟಿಯ ಬಟ್ಟೆಬರೆಗಳನ್ನ ಏನು ಮಾಡಲಾಗುತ್ತೆ? ಈ ದಿಕ್ಕಿನಲ್ಲಿ ಆಲೋಚಿಸಿದರೆ, ನಿಜಕ್ಕೂ ಅಚ್ಚರಿಯಾಗುತ್ತೆ. ಅದಕ್ಕೆ ಸಿಕ್ಕಬಹುದಾದ ವಾಸ್ತವಿಕ ಉತ್ತರ ಮಾತ್ರ ಅಕ್ಷರಶಃ ಬೆಚ್ಚಿಬೀಳಿಸುತ್ತೆ. ಮೊದಲಿಗೇ ಹೇಳಬೇಕಾದ ಒಂದು ಅಂಶವಿದೆ. ಯಾವುದೇ ಥರದ ಬಟ್ಟೆಗಳು ಮತ್ತು ಅದರ ತ್ಯಾಜ್ಯಗಳು ಭೂಮಿಗೆ ಸೇರಿದರೆ, ಅದು ಒಟ್ಟಾರೆ ಭೂಮಿಯ ಸ್ಥಿತಿಗತಿಗಳನ್ನೇ ಬದಲಾಯಿಸುತ್ತೆ. ಈ ವಾತಾವರಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಂಗಾಲದ ಅಂಶ ಏರಿಕೆಯಾಗುತ್ತೆ. ಇದೂ ಸೇರಿದಂತೆ ಅನೇಕಾನೇಕ ವ್ಯತಿರಿಕ್ತ ಪರಿಣಾಮವನ್ನು ಪ್ರಕೃತಿ ಸಹಿಸಿಕೊಳ್ಳಬೇಕಾಗುತ್ತೆ. ಅಂಥಾ ಸಹಿಸುವಿಕೆ ಮೀರಿದರೆ ಭೂಕುಸಿತವೂ ಸೇರಿದಂತೆ ನಾನಾ ವಿಕೋಪಗಳು ಸಂಭವಿಸಿದರೂ ಅಚ್ಚರಿಯೇನಿಲ್ಲ.
ಈ ಬಗ್ಗೆ ಇದುವರೆಗೂ ಪರಿಸರಾಸ್ತಕ ಮಂದಿ ನಾನಾ ದಿಕ್ಕಿನಲ್ಲಿ ತಲಾಶು ನಡೆಸಿದ್ದಾರೆ. ವಿಶ್ವದ ನಾನಾ ಭಾಗಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ ಸತ್ಯಕ್ಕೆ ಹತ್ತಿರಾದ ಒಂದಷ್ಟು ಅಂಕಿ ಅಂಶಗಳನ್ನು ಕಲೆ ಹಾಕಿದ್ದಾರೆ. ಆ ಅಂಕಿ ಅಂಶದ ಪ್ರಕಾರವಾಗಿ ಹೇಳೋದಾದರೆ ಎಂಬತ್ತರಿಂದ ನೂರೈವತ್ತು ಬಿಲಿಯನ್ ಟನ್ನಿಗೂ ಅಧಿಕೆ ಬಟ್ಟೆ ಬರೆಗಳು ಉತ್ಪಾದನೆಯಾಗುತ್ತವೆ. ಹಾಗಾದರೆ ಅದರಲ್ಲಿ ಎಷ್ಟು ಪ್ರಮಾಣದ ಬಟ್ಟೆಗಳು ಬಿಕರಿಯಾಗುತ್ತವೆ? ಇದು ಮುಖ್ಯ ಪ್ರಶ್ನೆ. ಇದಕ್ಕೂ ಕೂಡಾ ಈ ಈ ಸಮೀಕ್ಷೆಯಲ್ಲಿ ಉತ್ತರ ಕಂಡುಕೊಳ್ಳಲಾಗಿದೆ. ಈ ಒಟ್ಟಾರೆ ಉತ್ಪಾದನೆಯಲ್ಲಿ ಶೇಖಡಾ ನಲವತ್ತರಷ್ಟು ಬಟ್ಟೆಗಳು ಮಾತ್ರವೇ ಪ್ರತೀ ವರ್ಷ ಸೇಲಾಗುತ್ತವೆ. ಮಿಕ್ಕುಳಿದವುಗಳು ನಾನಾ ಭಾಗಗಳ ಗೋದಾಮುಗಳಲ್ಲಿ ಬೂಸ್ಟು ಹಿಡಿಯುತ್ತವೆ. ಕಡಿಮೆ ಬೆಲೆಗೆ ಸೇಲ್ ಮಾಡೋ ಸರ್ಕಸ್ಸುಗಳಾಚೆಗೂ ಪ್ರತೀ ವರ್ಷ ಶೇಖಡಾ ಐವತ್ತರಷ್ಟು ಪ್ರಮಾಣದ ಬಟ್ಟೆಗಳು ಉಳಿದು ಬಿಡುತ್ತವೆ.
ಬಟ್ಟೆಗಳ ಕಸದ ಲೋಕ

ಇತ್ತೀಚಿನ ವರ್ಷಗಳಲ್ಲಂತೂ ಆ ಪ್ರಮಾಣ ಮತ್ತಷ್ಟು ಏರಿಕೊಂಡಿದೆ. ಯಾಕಂದ್ರೆ, ಈಗ ಒಂದು ಬಟ್ಟೆ ತೆಗೆದುಕೊಂಡರೆ ಅದನ್ನು ವರ್ಷಗಟ್ಟಲೆ ಹಾಕಿ ಸವೆಸುವ ಟ್ರೆಂಡೇ ಬದಲಾಗಿದೆ. ಈವತ್ತು ಕೊಂಡ ಬಟ್ಟೆ ವಾರ ಕಳೆಯೋವಷ್ಟರಲ್ಲಿ ಹಳತಾಗುತ್ತೆ. ಆನಸಾಮಾನ್ಯರೂ ಕೂಡಾ ಅಂಥಾ ಹೊಸಾ ಟ್ರೆಂಡಿನ ಶೋಕಿಗೆ ಒಲಗ್ಗಿಕೊಂಡಿದ್ದಾರೆ. ಈ ಕಾರಣದಿಂದಲೇ ಮತ್ತೊಂದಷ್ಟು ಹೊಸಾ ಡಿಸೈನಿನ ಬಟ್ಟೆಗಳ ಟನ್ನುಜಗಟ್ಟಲೆ ಉತ್ಪಾದನೆಯಾಗುತ್ತವೆ. ಇಲ್ಲೀಗ ಬೇಗನೆ ಟ್ರೆಂಡ್ ಬದಲಾಗೋದರಿಂದಾಗಿ ಅವೆಲ್ಲವೂ ಹಳೆಯದಾಗುತ್ತವೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಬಟ್ಟೆಗಳ ಒಟ್ಟಾರೆ ಉತ್ಪಾದನೆ ಹೆಚ್ಚಾಗಿದೆ. ಆ ಕಾರಣದಿಂದಲೇ ಗೋದಾಮಿನಲ್ಲಿ ಬಿಕರಿಯಾಗದೆ ಕೊಳೆಯುವ ಬಟ್ಟೆಗಳ ಪ್ರಮಾಣವೂ ಹೆಚ್ಚಿಕೊಂಡಿದೆ.
ಘಾನಾ ದೇಶದ ಪರಿಸರಾಸಕ್ತ ಸಂಘಟನೆಯೊಂದು ಬಹು ವರ್ಷಗಳಿಂದ ಫ್ಯಾಷನ್ ಜಗತ್ತಿನ ತ್ಯಾಜ್ಯ ಮತ್ತು ಅದರಿಂದಾಗೋ ಪರಿಣಾಮಗಳ ಬಗ್ಗೆ ಅವ್ಯಾಹತವಾದ ಶೋಧನೆಗಳನ್ನು ನಡೆಸುತ್ತಾ ಬಂದಿದೆ. ಅದರ ಮುಖ್ಯಸ್ಥರು ಈ ಬಗೆಗಿನ ಒಂದಷ್ಟು ಆತಂಕಕಾರಿ ಅಂಶಗಳನ್ನು ಕಲೆ ಹಾಕಿದ್ದಾರೆ. ಈ ಸಂಸ್ಥೆ ಬಟ್ಟೆ ಉತ್ಪಾದಕಾ ಘಟಕಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕೆಂಬುದ್ರ ಬಗ್ಗೆ ಅಭಿಯಾನ ನಡೆಸುತ್ತಾ ಬಂದಿದೆ. ಆದರೆ ತೀರಾ ಸಣ್ಣ ಪ್ರಮಾಣದಲ್ಲಿ ಉದ್ಯಮಿಗಳು ಅದಕ್ಕೆ ಸ್ಪಂಣದಿಸಿದ್ದಾರೆ. ಯಾಕಂದ್ರೆ, ತೀರಾ ಪಾರದರ್ಶಕವಾದರೆ ವಹಿವಾಟಿಗೆ ಕುಂದುಂಟಾಗಿ ಬೇಡದ ಸವಾಲುಗಳಿಗೆ ತೆರೆದುಕೊಳ್ಳಬೇಕಾದೀತೆಂಬ ಭಯ ಉದ್ಯಮಿಗಳಲ್ಲಿದೆ.
ಈ ಸಂಸ್ಥೆ ಬಟ್ಟೆ ಉತ್ಪಾದಕ ಸಂಸ್ಥೆಗಳನ್ನು ಸಂಪರ್ಕಿಸಿ ಪ್ರತೀ ವರ್ಷ ಎಷ್ಟು ಉತ್ಪಾದನೆ ಮಾಡುತ್ತೀರೆಂಬ ಬಗ್ಗೆ ನಿಖರವಾದ ಉತ್ತರ ಬಯಸಿದೆ. ಆದರೆ ಬಹುತೇಕ ಉದ್ಯಮಿಗಳು ಅದಕ್ಕೆ ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ. ಒಂದು ವೇಳೆ ಉತ್ತರಿಸಿದರೆ ಅದರಲ್ಲಿಯೇ ಫ್ಯಾಶನ್ ಉದ್ಯಮದ ಕೊಳಕು ವೃತ್ತಾಂತ ಕೂಡಾ ಜಾಹೀರಾಗಿ ಬಿಡುತ್ತದೆಂಬ ಅಳುಕು ಅವರಲ್ಲಿದ್ದಂತಿದೆ. ಸಾಮಾನ್ಯವಾಗಿ ಇಂಥಾ ಬಟ್ಟೆ ಕಂಪೆನಿಗಳು ತಮ್ಮ ಉತ್ಪನ್ನಗಳು ಹೆಚ್ಚೆಚ್ಚು ಸೇಲಾಗಿದೆ ಎಂಬಂರ್ಥದಲ್ಲಿಯೇ ತೋರಿಸಿಕೊಳ್ಳುತ್ತವೆ. ಅದು ಬ್ಯುಸಿನೆಸ್ ಟ್ರಿಕ್ಸ್. ಒಂದು ವೇಳೆ ತಾವು ಸೃಷ್ಟಿಸಿದ ಬಟ್ಟೆಗಳಲ್ಲಿ ಬಹುಪಾಲು ಹಾಗೇ ಉಳಿದಿಉವೆ ಅನ್ನೋ ಸತ್ಯ ಜನರಿಗೆ ಗೊತ್ತಾದರೆ ಒಟ್ಟಾರೆ ವಹಿವಾಟಿಗೆ ಬಲವಾದ ಪೆಟ್ಟು ಬೀಳೋದು ಗ್ಯಾರೆಂಟಿ. ಈ ಕಾರಣದಿಂದಲೇ ಗೋಡಾನಿನಲ್ಲಿ ಮಕೊಳೆಯವ ಬಟ್ಟೆಗಳನ್ನ ಗೌಪ;ಯವಾಗಿಟ್ಟು, ಅದನ್ನು ಸೀಕ್ರೆಟ್ ಪ್ಲೇಸುಗಳಲ್ಲಿ ಸುರಿದು ಗಬ್ಬೆಬ್ಬಿಸುವ ಕೆಲಸ ಬಹು ಕಾಲದಿಂದಲೂ ನಡೆದುಕೊಂಡು ಬಂದಿದೆ.
ಬ್ರಾಂಡೆಡ್ ಕೊಳಕು

ಇಂಥಾದ್ದೊಂದು ಕೊಳಕು ವೃತ್ತಾಂತ ಬ್ರಾಂಡೆಡ್ ಬಟ್ಟೆ ಉತ್ಪಾದಕ ವಲಯವನ್ನು ಆವರಿಸಿಕೊಂಡಿದೆ. ಇಂಥಾ ಬಟ್ಟೆ ಕಂಪೆನಿಗಳು ನೇರವಾಗಿ ಮಾಡೆಲಿಂಗ್, ಫ್ಯಾಶನ್ ಜಗತ್ತನ್ನು ನೆಚ್ಚಿಕೊಂಡಿವೆ. ಅಷ್ಟಕ್ಕೂ ಮಾಡೆಲಿಂಗ್ ಎಂಬ ಬಹುಕೋಟಿ ಉದ್ಯಮ ನಡೆಯುತ್ತಿರೋದೇ ಇಂಥಾ ಬ್ರಾಂಡ್ ಕಂಪೆನಿಗಳಿಂದ. ಮಾಡೆಲಿಂಗ್ ಮೂಲಕ ಇಂಥಾ ಕಂಪೆನಿಗಳು ಹೊಸಾ ಡಿಸೈನುಗಳನ್ನು ಪರಿಚಯಿಸುತ್ತೆ. ಆದರೆ, ಅದರಿಂದಾಗಿ ಕೊಳ್ಳುವವರ ಸಂಖ್ಯೆ ಎಷ್ಟು ಮಟ್ಟದಲ್ಲಿ ವೃದ್ಧಿಯಾಗುತ್ತದೆ ಅನ್ನೋದನ್ನು ಅಂದಾಜಿಸುವಲ್ಲಿ ಬಹುತೇಕ ಉದ್ಯಮಿಗಳು ಎಡವುತ್ತಿದ್ದಾರೆ. ಈ ಕಾರಣದಿಂದಲೇ ಬೇಡಿಕೆಗಿಂದ ದುಪ್ಪಟ್ಟು ಉತ್ಪನ್ನಗಳನ್ನು ಸಿದ್ಧಪಡಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಬಾಕಿ ಉಳಿದ ಬಟ್ಟೆಗಳು ಸಹಜವಾಗಿಯೇ ಕಸವಾಗಿ ಮಾರ್ಪಾಟಾಗುತ್ತೆ. ಆ ಕಸವೆಲ್ಲವೂ ಭೂಮಿಯ ಮೇಲೆ ಹರಡಿಕೊಂಡು ಸರ್ವನಾಶಕ್ಕೆ ಸನ್ನದ್ಧವಾಗಿದೆ.
ಈ ಬಟ್ಟೆ ಉದ್ಯಮ ಬರೀ ಕಸವನ್ನಷ್ಟೇ ಸೃಷ್ಟಿಸುತ್ತಿದೆ ಅಂದರೆ ತಪ್ಪಾಗುತ್ತೆ. ಅದು ಈ ಜಗತ್ತಿನಲ್ಲಿ ಉದ್ಯೋಗಾವಕಾಶ ಸೃಷ್ಟಿಸಿದೆ. ಈ ಬಟ್ಟೆ ತಯಾರಾಗೋದರ ಹಿಂದೆ ಕೋಟ್ಯಾಂತರ ಮಾನವ ಶ್ರಮವಿದೆ. ಹತ್ತಿ ಬೆಳೆದು, ಅದರಿಂದ ನೂಲು ತೆಗೆಯೋದರ ತನಕ ಬಟ್ಟೆ ತಯಾರಿಯ ಹಿಂದೆ ಬೆವರ ವೃತ್ತಾಂತವಿದೆ. ಆದರೆ ಒಂದು ಘಟ್ಟದಲ್ಲಿ ಕೆಲ ಕಂಪೆನಿಗಳ ಅತಿಯಾಸೆಯೇ ಆ ಶ್ರಮವನ್ನೆಲ್ಲ ವಿನಾ ಕಾರಣ ಕಸವನ್ನಾಗಿಸಿ, ಅದರ ಮೂಲಕ ಈ ಪ್ರಕೃತಿಗೆ ಮಹಾ ದ್ರೋಹವೆಸಗುತ್ತಿದೆ. ಇಂಥಾ ಕಂಪೆನಿಗಳು ಅಗತ್ಯಕ್ಕಿಂತ ಹೆಚ್ಚು ಉತ್ಪಾದಿಸಿ, ನಾನಾ ಗಿಲೀಟು ಮಾಡಿ ಮಾರತಾಟವಾಗುವಂತೆ ನೋಡಿಕೊಂಡು ಬಚಾವಾಗುತ್ತವೆ. ಆದರೆ, ಜನರನ್ನು ತಲುಪೋ ಹಾದಿಯಲ್ಲಿ ಅಂಥಾ ಬಟ್ಟೆಗಳು ಎಲ್ಲೆಲ್ಲಿಯೋ ಉಳಿದು ತ್ಯಾಜ್ಯವಾಗಿ ಮಾರ್ಪಾಟಾಗುತ್ತದೆ. ಈವತ್ತಿಗೂ ರೀಸೈಕಲ್ ಆಗಬಹುದಾದ ಬಟ್ಟೆಗಳ ಸಂಖ್ಯೆ ಕಡಿಮೆ ಇದೆ. ಈ ಕಾರಣದಿಂದಲೇ ಭೂಮಿ ಸೇರೋ ಕಸದ ಪ್ರಮಾಣ ಅತಿಯಾಗಿದೆ.
ಬಟ್ಟೆ ಎಷ್ಟು ಡೇಂಜರಸ್ ಗೊತ್ತಾ?

ಹಾಗಂತ ಇಂಥಾ ಬಟ್ಟೆಗಳನ್ನು ಹೆಚ್ಚು ಉತ್ಪಾದಿಸಿ, ಅದು ಮಾರಾಟವಾಗದೆ ಉಳಿದ ಕಾರಣದಿಂದ ಮಾತ್ರವೇ ಕಸ ಸೃಷ್ಟಿಯಾಗುತ್ತೆ ಅಂದುಕಲೊಳ್ಳುವಂತಿಲ್ಲ. ವಿನಾ ಕಾರಣ ಅತಿಯಾದ ಬಳಕೆ ಕೂಡಾ ಪ್ರಕೃತಿಯನ್ನು ರಾಡಿಯೆಬ್ಬಿಸುತ್ತಿದೆ ಅನ್ನೋ ಸತ್ಯವನ್ನು ಇದುವರೆಗಿನ ಅಂಕಿ ಅಂಶಗಳು ಸಾರಿ ಹೇಳುತ್ತಿವೆ. ಯಾವುದೋ ದೇಶದ ಯಾವುದೋ ಭಾಗದಲ್ಲಿ ಬಟ್ಟೆ ತಯಾರಕ ಕಂಪೆನಿಗಳು, ಗಾರ್ಮೆಟುಗಳಿರುತ್ತವೆ. ಅವುಗಳಿಂದ ಬರೋ ಕಸ ಆಸುಪಾಸಿನ ಭೂಮಿ ಸೇರುತ್ತೆ ಅಂದುಕೊಳ್ಳುವಂತಿಲ್ಲ. ಅವು ಕೊಳ್ಳುಬಾಕ ಸಂಸ್ಕೃತಿಯ ಫಲವಾಗಿ ವಿಶ್ವದ ಮೂಲೆ ಮೂಲೆಗೂ ಹಬ್ಬಿಕೊಂಡು ಪ್ರಕೃತಿಯನ್ನು ಹಾಳು ಮಾಡುತ್ತಿವೆ. ಇದಕ್ಕೆ ಕಾರಣವಾಗಿರೋದು ಬಟ್ಟೆ ಉದ್ಯಮಗಳ ಅತಿ ಆಸೆ.
ಯಾಕೆಂದರೆ, ಇಂಥಾ ಕಂಪೆನಿಗಳು ಅಗತ್ಯಕ್ಕಿಂತಲೂ ಹೆಚ್ಚು ಬಟ್ಟೆ ತಯಾರಿಸುತ್ತವೆ. ಅವು ಸೇಲಾಗದೇ ಉಳಿದಾಗ ಮಾಡೆರಂಗ್, ಫ್ಯಾಶನ್ ಜಗತ್ತಿನ ಮೂಲಕ ಬಿಕರಿ ಮಾಡಲು ಹವಣಿಸುತ್ತವೆ. ಅದರಲ್ಲಿಯೂ ನಿರೀಕ್ಷಿತ ಫಲಿತಾಂಶ ಬಾರದಿದ್ದಾಗ ಡಿಸ್ಕೌಂಟ್ ಸೇಲಿನಂಥಾ ತಂತ್ರಕ್ಕಿಳಿಯುತ್ತವೆ. ಯಾವಾಗ ಕಡಿಮೆ ಬೆಲೆಯಲ್ಲಿ ಸಿಗುತ್ತದೋ ಆಗ ಮಂದಿ ಅಗತ್ಯಕ್ಕಿಂತಲೂ ಹೆಚ್ಚು ಬಟ್ಟೆಗಳನ್ನು ಖರೀದಿಸುತ್ತಾರೆ. ಇದರಿಂದ ಉತ್ಪಾದಕ ಕಂಪೆನಿಗಳಿಗೆ ಯಾವ ರೀತಿಯಿಂದಲೂ ನಷ್ಟವಾಗೋದಿಲ್ಲ. ನಷ್ಟವಾಗೋದು ಈ ಪ್ರಕೃತಿಯ ತಾಜಾತನಕ್ಕೆ ಮಾತ್ರ. ಈ ಕಾರಣದಿಂದಲೇ ಉದ್ಯಮಿಗಳ ಅತಿಯಾಸೆಗೆ ಬ್ರೇಕ್ ಹಾಕೋ ಪ್ರಯತ್ನವನ್ನು ವಿಶ್ವದ ನಾನಾ ದೆಏಶಗಳ ಪರಿಸರಪ್ರಿಯ ಸಂಘಟನೆಗಳು ಮಾಡಿಕೊಂಡು ಬರುತ್ತಿದ್ದಾವೆ.
ಪ್ರಕೃತಿಯ ಮರಣ ಶಾಸನ









