ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ‘ಸೋಮು ಸೌಂಡ್ ಇಂಜಿನಿಯರ್…’ ಸಿನಿಮಾದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಭಿನ್ನ ಶೀರ್ಷಿಕೆ ಜೊತೆಗೆ ವಿಭಿನ್ನ ಕಥಾಹಂದರ ಹೊಂದಿರುವ ‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾದ ಮೂಲಕ ಸುಕ್ಕ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಚೊಚ್ಚಲ ಹೆಜ್ಜೆ ಇಡುತ್ತಿದ್ದಾರೆ.

‘ಸಲಗ’ ಸಿನಿಮಾದ ಕೆಂಡ ಪಾತ್ರದ ಮೂಲಕ ಜನಪ್ರಿಯವಾಗಿದ್ದ ಶ್ರೇಷ್ಠ ನಾಯಕನಾಗಿ, ಶೃತಿ ಪಾಟೀಲ್ ನಾಯಕಿಯಾಗಿ ‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಜಹಾಂಗೀರ್, ಅಪೂರ್ವಾ, ಯಶ್ ಶೆಟ್ಟಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ‘ಎ2 ಮ್ಯೂಸಿಕ್’ ಯೂ-ಟ್ಯೂಬ್ ನಲ್ಲಿ ‘ಸೋಮು ಸೌಂಡ್ ಇಂಜಿನಿಯರ್’ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಧನಂಜಯ್ ರಂಜನ್ ಕ್ಯಾಚಿ ಮ್ಯಾಚಿ ಸಾಹಿತ್ಯದ ಹಾಡಿಗೆ ಸ್ವರೂಪ್ ಖಾನ್ ಧ್ವನಿಯಾಗಿದ್ದು, ಚರಣ್ ರಾಜ್ ಟ್ಯೂನ್ ಹಾಕಿದ್ದಾರೆ. ಸಿನಿಮಾದ ನಾಯಕ ಸೋಮು ಹಾವ-ಭಾವ, ವರ್ತನೆಯನ್ನು ಈ ಹಾಡಿನಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಈ ಹಾಡು ಮೂಡಿಬಂದಿದೆ. ನಾಯಕ ನಟ ಶ್ರೇಷ್ಠ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ವೈದ್ಯರಾಗಿರುವ ಕ್ರಿಸ್ಟೊಫರ್ ಕಿಣಿ ‘ಸೋಮ ಸೌಂಡ್ ಇಂಜಿನಿಯರ್’ ಗೆ ಹಣ ಹಾಕಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ಕಡ್ಡಿಪುಡಿ’, ‘ಕೆಂಡಸಂಪಿಗೆ’, ‘ದೊಡ್ಡಮನೆ ಹುಡುಗ’, ‘ಟಗರು’ ಚಿತ್ರಗಳಿಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಭಿ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ‘ಸೋಮು ಸೌಂಡ್ ಇಂಜಿನಿಯರ್’ ಬಳಗ ರೀ ರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ.





