ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನಾ ನಡುವಿದ್ದ ಸುಮಧುರ ಪ್ರೀತಿ, ಕಕ್ಕುಲಾತಿ, ಅಕ್ಕರೆ, ಮಮತೆ, ಬಾಂದವ್ಯ ಅದೆಷ್ಟು ಗಾಢವಾಗಿತ್ತು ಅನ್ನೋದು ಗುಟ್ಟಾಗೇನು ಉಳಿದಿಲ್ಲ. ಬಹುಷಃ ಇವರಿಬ್ಬರ ನಡುವಿದ್ದ ಆತ್ಮೀಯತೆ ಹಾಗೂ ವೈವಾಹಿಕ ದಾಂಪತ್ಯ ಜೀವನ ಆ ಭಗವಂತನಿಗೂ ಅಸೂಹೆ ಹುಟ್ಟಿಸಿತೋ ಏನೋ ಗೊತ್ತಿಲ್ಲ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಪತ್ನಿ ಜೊತೆ ಬದುಕುತ್ತಿದ್ದ ಚಿನ್ನಾರಿ ಕೊನೆಗೆ ಪತ್ನಿ ದೇಹಕ್ಕೆ ಬೆಂಕಿ ಹಚ್ಚುವಂತಾಯ್ತು. ಜೀವಕ್ಕೆ ಜೀವ ಕೊಡುತ್ತಿದ್ದ ಬಾಳ ಸಂಗಾತಿನಾ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುವಂತಾಯ್ತು
ಅಂದ್ಹಾಗೇ, ಸ್ಪಂದನಾ ಅಗಲಿ ಒಂದೂವರೆ ತಿಂಗಳು ಕಳೀತು ಬಂತು. ಆದರೆ, ಸ್ಪಂದನಾ ಇಲ್ಲದ ನೋವು, ದುಃಖ, ಕಣ್ಣೀರು ಮಾತ್ರ ಕಿಂಚಿತ್ತೂ ಕಡಿಮೆಯಾಗ್ತಿಲ್ಲ. ನನ್ನ ಜೀವಕ್ಕೆ, ನನ್ನ ಪ್ರಾಣಕ್ಕೆ, ನನ್ನ ಅಚ್ಚುಗೆ, ನನ್ನ ಚಿನ್ನುಗೆ ನಾನು ಅಳೋದು ಇಷ್ಟ ಆಗ್ತಿರಲಿಲ್ಲ. ಹೀಗಾಗಿ, ನಾನು ಅಳುನಾ ಕಂಟ್ರೋಲ್ ಮಾಡಿಕೊಳ್ತೀನಿ ಎನ್ನುತ್ತಲೇ ಅನೇಕ ವೇದಿಕೆಗಳಲ್ಲಿ ವಿಜಯ್ ಗದ್ಗದಿತರಾಗುತ್ತಿದ್ದಾರೆ. ಬಾಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಸ್ಪಂದನಾ ನೆನಪಲ್ಲೇ ಬದುಕು ಸಾಗಿಸಲು ಹೊರಟಿರೋ ಚಿನ್ನಾರಿ ಮುತ್ತ, ಸ್ಪಂದನಾ ಮೇಲಿಟ್ಟಿರುವ ಪ್ರೀತಿ ಎಂತಹದ್ದು ಅನ್ನೋದನ್ನ ಮತ್ತೆ ಜಗತ್ತಿನ ಮುಂದೆ ಹರವಿಟ್ಟಿದ್ದಾರೆ

ಪತ್ನಿ ಸ್ಪಂದನಾರನ್ನ ಎಷ್ಟು ಪ್ರೀತಿ ಮಾಡ್ತಿದ್ದರು ಅನ್ನೋದಕ್ಕೆ ವಿಜಯ್ ಸೋಷಿಯಲ್ ಮೀಡಿಯಾವೇ ಸಾಕ್ಷಿ ಕೊಡುತ್ತೆ. ಪ್ರತಿ ಫೋಟೋವೂ ಅವರಿಬ್ಬರ ಪವಿತ್ರ ಪ್ರೇಮವನ್ನ ಸಾರಿ ಹೇಳುತ್ವೆ. ಇದೀಗ, ವಿಜಯ್ ಅಪ್ ಲೋಡ್ ಮಾಡಿರುವ ಹೊಸ ಫೋಟೋ ಹಾಗೂ ಅದರ ಕೆಳಗೆ ಗೀಚಿರುವ ಸಾಲುಗಳು ವಿಜಯ್ ಪ್ರೀತಿ ಅದೆಷ್ಟು ಗಾಢವಾದದ್ದು ಅನ್ನೋದಕ್ಕೆ ಕೈಗನ್ನಡಿಯಾಗುತ್ತೆ. ಅಷ್ಟಕ್ಕೂ, ವಿಜಯ್ ಏನು ಬರೆದಿದ್ದಾರೆ ಗೊತ್ತೆ?’ಒಂದು ಸಾವಿರ ವರ್ಷ ಮಾತ್ರವಲ್ಲ ಅದಕ್ಕಿಂತ ಹೆಚ್ಚು ಕಾಲ ನಿನ್ನ ಪ್ರೀತಿಸುತ್ತೇನೆ ಚಿನ್ನಾ’ ಅಂತ. ಇದನ್ನ ನೋಡಿದರೆ ಸಾವಿರದ ಸೇವಂತಿ ಅದೆಷ್ಟು ಪುಣ್ಯವತಿ ಎಂಬ ಸಾಲು ನಿಮ್ಮ ಬಾಯಿಂದ ಬಂದೇ ಬರುತ್ತೆ

ವಿಜಯ್ ಹಾಗೂ ಸ್ಪಂದನಾ ಉಸಿರಲ್ಲಿ ಉಸಿರಾಗಿ ಬೆರೆತು ಹೋಗಿದ್ದರು. ದೇಹ ಬೇರೆ ಬೇರೆಯಾದರೂ ಒಂದೇ ಆತ್ಮದಲ್ಲಿ ಲೀನವಾಗಿ ಭರ್ತಿ ಹದಿನಾರು ವರ್ಷ ಸುಖಿ ದಾಂಪತ್ಯ ಜೀವನ ಸವೆಸಿದ್ದರು. ಒಬ್ಬರನ್ನ ಕಂಡರೆ ಒಬ್ಬರು ಅಚ್ಚೆ.. ಅಚ್ಚೆ ಮಾಡುತ್ತಿದ್ದರು. ಹಾಲು- ಜೇನಂತೆ ಬೆರೆತು ಬದುಕುತ್ತಿದ್ದರು. ಜೀವನ ಹೆಂಗಾದರೂ ಬರಲಿ, ಪ್ರತಿ ದಿನ ಪ್ರತಿ ಕ್ಷಣ ಬದುಕನ್ನು ಸಂಭ್ರಮಿಸೋಣ ಎಂತಲೇ ಅರಿತಿದ್ದವರು. ಒಬ್ಬರಿಗೋಸ್ಕರ ಒಬ್ಬರು ಜೀವ ಬಿಡಲು ತಯ್ಯಾರಿದ್ದವರು. ಕೋಪ, ಜಗಳ, ಮನಸ್ತಾಪ ಇದ್ಯಾವುದು ನಮ್ಮ ಪ್ರೀತಿಗೆ ಅಡ್ಡಿಯಾಗಬಾರದು ಅಂತ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯನ್ನ ಕಾಪಾಡಿಕೊಂಡವರು.
ಇಂತಹ ಜೋಡಿನಾ ಆ ಭಗವಂತ ನಡು ನಡುವಲ್ಲೇ ದೂರ ಮಾಡ್ಬಿಟ್ಟ. ಅರ್ಧಕ್ಕೆ ಸ್ಪಂದನಾ ಉಸಿರು ನಿಲ್ಲಿಸಿ ವಿಜಯ್ ಹೃದಯ ವಿಲವಿಲ ಒದ್ದಾಡುವಂತೆ ಮಾಡ್ಬಿಟ್ಟ. ಇದಕ್ಕೆ ಸ್ವತಃ ಭಗವಂತನೇ ಪಶ್ಚಾತ್ತಾಪ ಪಡುವುದರಲ್ಲಿ ಸಂಶಯವೇ ಇಲ್ಲ. ಯಾಕಂದ್ರೆ, ವಿಜಯ್ – ಸ್ಪಂದನಾ ರಾಮ- ಸೀತೆಯಷ್ಟೇ ಶ್ರೇಷ್ಠ ಅಂದರೆ ಅತಿಶಯೋಕ್ತಿಯಲ್ಲ. ಸದ್ಯಕ್ಕೆ ಸೀತೆಯಂತಿದ್ದ ಪತ್ನಿನಾ ಕಳೆದುಕೊಂಡು ವಿಜಯ್ ಒಬ್ಬಂಟಿಯಾಗಿದ್ದಾರೆ. ಆ ಒಂಟಿತನವನ್ನು ನೀಗಿಸೋಕೆ ಮಗ ಶೌರ್ಯ ಜೊತೆಗಿದ್ದಾನೆ. ಅಪ್ಪನಲ್ಲಿ ಅವ್ವನನ್ನು ಕಾಣುತ್ತಿದ್ದಾನೆ. ಈ ಎರಡು ಜೀವಗಳಿಗೆ ಸ್ಪಂದನಾ ಅಗಲಿಕೆಯನ್ನು ತಡೆದು ನಿಲ್ಲುವ ಶಕ್ತಿ ಆ ಭಗವಂತನೇ ಕೊಡಬೇಕು. ಅದನ್ನಾದ್ರೂ ಆ ದೇವರು ನಿಷ್ಟೆಯಿಂದ ಮಾಡಲಿ





