ಈ ಜಗತ್ತಿನಲ್ಲಿ ಪ್ರತೀ ಕ್ಷಣವೂ ಮನುಷ್ಯರ ಜೀವನವನ್ನು ಚೆಂದಗಾಣಿಸುವ, ಎಲ್ಲವೂ ಸಲೀಸಾಗಿ ನಡೆಯುವ, ನಾನಾ ಕಾಯಿಲೆ ಕಸಾಲೆಗಳಿಂದ ಪಾರುಗಾಣಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತೆ. ನಾವು ಮಾತ್ರ ಎಲ್ಲವನ್ನೂ ನೀಗಿಕೊಂಡು ಸೇಫ್ ಆಗಿ ಜೀವಿಸಬೇಕೆಂಬ ಇರಾದೆಯೊಂದು ಸದ್ಯದ ಮಟ್ಟಿಗೆ ಮನುಷ್ಯತ್ವದ ಗಡಿ ಮೀರಿ ಮೆರೆಯಲಾರಂಭಿಸಿದೆ. ಅದೇನೇ ಮಾಡಿದರೂ ಈ ಜಗತ್ತು ಕೇವಲ ಮನುಷ್ಯರಿಗೆ ಮಾತ್ರವಲ್ಲ; ಸಕಲ ಚರಾಚರ, ಕ್ರಿಮಿಕೀಟಗಳೂ ಕೂಡಾ ನಮ್ಮ ಬದುಕಿಗೆ ಪೂರಕ ಅನ್ನೋ ಕಾಮನ್ ಸೆನ್ಸ್ ಆಧುನಿಕ ಸಮಾಜದ ಬಳಿಗೂ ಸುಳಿಯುತ್ತಿಲ್ಲ. ಕೃಷಿಯೂ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಲಾಭದ ದೃಷ್ಟಿಯಿಂದ ರಾಸಾಯನಿಕಗಳ ಪ್ರಯೋಗ ಎಗ್ಗಿಲ್ಲದೆ ನಡೆಯುತ್ತಿದೆ. ಒಂದ್ಯಾವುದೋ ಬೆಳೆಗೆ ಅದೆಂಥಾದ್ದೋ ರೋಗ ಬಂದರೆ ಬೇರ್ಯಾವ ಆಲೋಚನೆಗಳೂ ಇಲ್ಲದ ಕೀಟನಾಶಕ ಸಿಂಪಡಿಸಲಾಗುತ್ತಿದೆ. ಆ ಕ್ಷಣಕ್ಕೆ ಸವಾಲು ಮೀರಿಕೊಂಡು ಗೆದ್ದೇ ಅಂತ ಬೀಗುವ ನಮಗೆ, ಅದು ನಮ್ಮ ಬದುಕಿಗೆ ನಾವೇ ಸ್ಪ್ರೇ ಮಾಡಿಕೊಂಡ ವಿನಾಶದ ಔಷಧಿ ಅನ್ನೋ ಸತ್ಯ ದರ್ಶನ ವಾಗೋದೇ ಇಲ್ಲ!
ಈ ಭೂಮಮಂಡಲದಲ್ಲಿರುವ ಜೀವ ರಚನೆ ಸದಾ ಕಾಲವು ಒಂದಕ್ಕೊಂದು ಪೂರಕವಾಗಿರುತ್ತದೆ. ಇಲ್ಲಿ ಒಂದು ಜೀವಿ ಮತ್ತೊಂದರ ಆಹಾರವಾದರೂ ಕೂಡಾ, ಅದರ ಹಿಂದೊಂದು ಸಮತೋಲನದ ಸೂತ್ರವಿರುತ್ತೆ. ಈ ಆಹಾರ ಸೂತ್ರವನ್ನೇ ಆಧುನಿಕ ಜಗತ್ತು ಕೊಂದು ತಿನ್ನುವ ಸ್ಫೂರ್ತಿಯಂತೆ, ನಮ್ಮೊಳಗಿನ ರಾಕ್ಷಸತ್ವದ ಸಮರ್ಥನೆಯಂತೆ ಬಳಸಿಕೊಳ್ಳುತ್ತಿರೋದು ನಿಜಕ್ಕೂ ಶೋಚನೀಯ. ಇಲ್ಲಿ ಆಹಾರ ಸರಪಳಿ ಅಂತೊಂದಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಆ ಸರಪಳಿ ತನ್ನ ಪಾಡಿಗೆ ತಾನು ಚಲುಸುತ್ತಿದ್ದಾಗ ಪ್ರಾಕೃತಿಕ ಸಮತೋಲನ ಕೂಡಾ ಸಲೀಸಾಗಿತ್ತು. ಸಹನೀಯವಾಗಿತ್ತು. ಯಾವಾಗ ಮನುಷ್ಯ ತನ್ನ ಸ್ವಾರ್ಥಕ್ಕೆಂದು ಕೊಲ್ಲುವ ಅಸ್ತ್ರ ಹಿಡಿದು ಹೊರಟನೇ ಆ ಕ್ಷಣದಿಂದಲೇ ಪ್ರಾಕೃತಿಕ ಅಸಮತೋಲನ ಶುರುವಾಗಿ ಬಿಟ್ಟಿದೆ. ಇಂಥಾದ್ದರಿಂದಾಗಿ ನಮ್ಮ ಅರಿವೆಗೇ ಬಾರದಂಥಾ ಕೆಲ ರೂಪಾಂತರಗಳ ಪ್ರಕೃತತಿಯ ಒಡಲಿನಲ್ಲಿ ನಡೆಯಲಾರಂಭಿಸಿದೆ. ಈ ಕ್ಷಣಕ್ಕದು ಅಚ್ಚರಿಯಂತೆ ಕಂಡರೂ, ಸಂಭಾವ್ಯ ಅನಾಹುತಗಳ ಅಶರೀರವಾಣಿಯೊಂದು ಅದರ ಆಳದಲ್ಲಿ ಮಾರ್ಧನಿಸಿದಂತೆ ಭಾಸವಾಗುತ್ತಿದೆ.
ಕೆಡುಕಿನ ಮುನ್ಸೂಚನೆ
ನಾವು ಈ ಪ್ರಕೃತಿಯ ಮೇಲೆ ಅದೆಂಥಾದ್ದೇ ಪ್ರಹಾರ ನಡೆಸಿದರೂ ಕೂಡ ಅದಕ್ಕೆ ಆ ದಿಕ್ಕಿನಿಂದ ಹಠಾತ್ ಪ್ರತಿಕ್ರಿಯೆಗಳು ಬರುವುದಿಲ್ಲ. ಪದೇ ಪದೆ ಮನುಷ್ಯ ಸಂಕುಲದ ಕಡೆಯಿಂದ ಅಂಥಾ ಪ್ರಹಾರಗಳು ನಡೆದಾಗಲೂ ಕೂಡಾ ಪ್ರಕೃತಿ ಅಸೀಮ ತಾಳ್ಮೆಯಿಂದಲೇ ವರ್ತಿಸುತ್ತೆ. ಅಂಥಾ ಸೈರಣೆ ಖಾಲಿಯಾದ ಘಳಿಗೆಯಲ್ಲಿ ಪ್ರಕೃತಿ ಭೀಕರವಾಗಿಯೇ ತಿರುಗೇಟು ನೀಡುತ್ತೆ. ಅದರ ಬಿರುಸು ಎಂಥಾದ್ದಿರುತ್ತದೆ ಅಂದರೆ, ಅದರ ಮುಂದೆ ತಾನೆಂಥಾ ತರಗೆಲೆ ಎಂಬಂಥಾ ವಾಸ್ತವ ಮನುಷ್ಯ ಮಾತ್ರರಿಗೆ ಅರಿವಾಗಿ ಬಿಡುತ್ತೆ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಕಂಡು ಕೇಳರಿಯದ ಪ್ರವಾಹ ನುಗ್ಗಿ ನಾನಾ ಅನಾಹುತಗಳಾಗುತ್ತಿರೋದು ಕೂಡಾ ಈ ಭೂಮಿ, ಒಟ್ಟಾರೆ ಪ್ರಕೃತಿ ಸಂಯಮ ಕಳೆದುಕೊಂಡ ಪ್ರತಿಫಲವೇ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.
ಹಾಗಾದರೆ, ಪ್ರಕೃತಿ ತನ್ನ ಮೇಲಿನ ಪ್ರಹಾರವನ್ನೆಲ್ಲ ಸಹಿಸಿ ಸಾಕಾದಾಗ ಇಂಥಾ ಭೀಕರ ರೂಪ ತೋರಿಸಿ ಸುಮ್ಮನಾಗುತ್ತಾ? ಮನುಷ್ಯನ ಹಸ್ತಕ್ಷೇಪ, ಜೀವಿಗಳ ಮೇಲಿನ ದಾಳಿಗಳನ್ನೆಲ್ಲ ಪ್ರಕೃತಿ ತನ್ನೊಡಲಲ್ಲಿ ದಾಖಲಿಸೋದಿಲ್ಲಾ? ಇಂಥಾದ್ದರ ಪರಿಣಾಮವಾಗಿ ಪ್ರಕೃತಿಯ ಒಡಲಲ್ಲಿ ಎಂತೆಂಥಾ ರೂಪಾಂತರಗಳು ಸಂಭವಿಸುತ್ತಿರಬುದು? ಇಂಥಾ ಪ್ರಶ್ನೆಗಳು ಪರಿಸರಾಸಕ್ತರನ್ನು ಖಂಡಿತವಾಗಿಯೂ ಕಾಡಿರುತ್ತೆ. ಇಂಥಾ ಕುತೂಹಲದಿಂದ ಪರಿಸರ ವಿಜ್ಞಾನಿಗಳು ಈಗೊಂದಷ್ಟು ವರ್ಷಗಳಿಂದ ನಾನಾ ದಿಕ್ಕಿನಲ್ಲಿ ಸಂಶೋಧನೆ, ಅದ್ಯಯನಗಳನ್ನು ನಡೆಸುತ್ತಾ ಬಂದಿದ್ದಾರೆ. ಇದೆಲ್ಲದರಿಂದ ಸಿಕ್ಕ ಫಲಿತಾಂಶ ಮಾತ್ರ ಅಚ್ಚರಿಯೂ ಹೌದು. ಮುಂಬರುವ ರಣಭೀಕರ ಅನಾಹುತಗಳ ಮುನ್ಸೂಚನೆಯೂ ಹೌದು!
ಹೂವುಗಳಲ್ಲಿ ಬದಲಾವಣೆ
ಇತ್ತೀಚೆಗಷ್ಟೇ ಪ್ರಾಕೃತಿಕ ಅಸಮತೋಲನ, ಮಾಲಿನ್ಯ ಮುಂತಾದವಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳ ಬಗೆಗೊಂದು ಅಧ್ಯಯನ ನಡೆದಿತ್ತು. ಮತ್ತೊಂದಷ್ಟು ಪರಿಸರ ವಿಜ್ಞಾನಿಗಳು, ಜೀವವಿಜ್ಞಾನಿಗಳು ದಶಕದಿಂದೇಚೆಗೆ ಸಂಶೋಧನೆ ಒಂದರ ಧ್ಯಾನದಲ್ಲಿದ್ದರು. ಈ ಜಗತ್ತಿನಲ್ಲಿ ಇದೀಗ ಕೀಟಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಅನ್ನೋದನ್ನು ಮನಗಂಡಿದ್ದ ತಂಡ, ಅದರಿಂದಾಗಿ ಹೂವಿನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ನಡೆದಿರಬಹುದು ಎಂಬ ದಿಕ್ಕಿನಲ್ಲಿ ಸಂಶೋಧನೆ ನಡೆಸಿದ್ದರು. ಸುದೀರ್ಘ ಕಾಲದ ತಪಸ್ಸಿನಂಥಾ ಆ ಅಧ್ಯಯನದ ಫಲಿತಾಂಶ ಕಂಡು ಖುದ್ದು ತಜ್ಞರೇ ಬೆವೆತು ಹೋಗಿದ್ದಾರೆ. ಯಾಕಂದ್ರೆ, ಅದು ಮಾಲೀನ್ಯ ಎಂಬುದು ಪ್ರಕೃತಿಯ ಮೇಲೆ ಅದೆಂಥಾ ಪರಿಣಾಮ ಬೀರಿದೆ, ಅದರ ಒಟ್ಟಾರೆ ಪರಿಣಾಮ ವಿಶ್ವದ ಮೇಲೆ ಯಾವ ಮಟ್ಟದಲ್ಲಿರುತ್ತೆ ಅನ್ನೋದನ್ನು ಜಾಹೀರು ಮಾಡಿದೆ.
ಕ್ಷೀಣಿಸುತ್ತಿರುವ ಕೀಟಗಳ ಸಂಖ್ಯೆಯಿಂದಾಗಿ ಹೂವುಗಳ ಆಕಾರವೂ ಸೇರಿದಂತೆ ಒಂದಷ್ಟು ಗಮನೀಯ ಪ್ರಮಾಣದ ರೂಪಾಂತರಗಳಾಗಿವೆ. ಪ್ಯಾರಿಸ್ ಬಳಿಯ ಪ್ರದೇಶವೊಂದರಲ್ಲಿ ಹೂವುಗಳನ್ನು ಸಂಶೋಧನೆಗೀಡು ಮಾಲಲಾಗಿತ್ತು. ಈ ಸಂದರ್ಭದಲ್ಲಿ ಹೂವಿನ ಮಾಮೂಲಿ ಆಕಾರಕ್ಕಿಂತಲೂ ಬರ ಬರುತ್ತಾ ಆಕಾರ ಮತ್ತೊಂದಷ್ಟು ಕಡಿಮೆ ಆಗಿರುವ ವಿಚಾರ ಜಾಹೀರಾಗಿತ್ತು. ಮತ್ತೂ ಮುಂದುವರೆದು ಅಧ್ಯಯನ ನಡೆಸಿದಾಗ ಮತ್ತೊಂದು ಆಘಾತಕರ ವಿಚಾರ ಜಾಹೀರಾಗಿತ್ತು. ಇಂಥಾ ಹೂವುಗಳ ಆಕಾರದಲ್ಲಿ ಮಾತ್ರವಲ್ಲದೇ ಮಕರಂದದ ಪ್ರಮಾಣದಲ್ಲಿಯೂ ಶೇಖಡಾ ಇಪ್ಪತ್ತರಷ್ಟು ಕಡಿಮೆಯಾಗಿತ್ತು.
ಇಂಥಾದ್ದೊಂದು ಆಘಾತವನ್ನು ಎದುರುಗೊಂಡ ವಿಜ್ಞಾನಿಗಳು ಈ ಬಗ್ಗೆ ವಿಸ್ತಾರವಾಗಿ ಅಧ್ಯಯನ ನಡೆಸಿದ್ದರು. ಸಾಮಾನ್ಯವಾಗಿ ಪೋಶಕಾಂಶಗಳ ಕೊರತೆಯಾದಾಗ ಯಾವುದೇ ಸಸ್ಯಗಳ ದೈಹಿಕ ಕ್ಷಮತೆ, ಉತ್ಪಾದಕತೆಗಳಲ್ಲಿ ಹಿನ್ನಡೆ ಆಗೋದಿದೆ. ಇಂಥಾ ಕಾರಣಗಳಿಂದ ಹೂಗಳ ಆಕಾರ ಮತ್ತು ಮಕರಂದದ ಉತ್ಪಾದನಾ ಪ್ರಮಾಣದಲ್ಲಿ ಇಳಿಮುಖವಾಗಿದೆಯಾ? ಇನ್ನೂ ಏನಾದರೂ ಸತ್ಯಗಳಿರಬಹುದಾ ಎಂಬರ್ಥದಲ್ಲಿ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ, ಇದು ಯಾವುದೇ ಪೋಶಕಾಂಶಗಳ ಕೊರತೆಯಿಂದ ಸಂಭವಿಸಿದ್ದಲ್ಲ ಬದಲಾಗಿ ಪ್ರಾಕೃತಿಕವಾಗಿಯೇ ಸಂಭವಿಸಿರುವ ಪಲ್ಲಟ ಎಂಬ ವಿಚಾರ ಪಕ್ಕಾ ಆಗಿತ್ತು. ಹಾಗಾದರೆ ಇದಕ್ಕೆ ಕಾರಣವೇನು ಅಂತ ನೋಡ ಹೋದಾಗ ಜಾಹೀರಾಗಿದ್ದ ಅಕ್ಷರಶಃ ಅಚ್ಚರಿ!
ಕೀಟಗಳ ಮಾರಣಹೋಮ!
ಜಗತ್ತಿನಲ್ಲಿ ಆಧುನಿಕತೆ ಪಸರಿಸಿದಂತೆಲ್ಲ ಗಣನೀಯ ಪ್ರಮಾಣದಲ್ಲಿ ಕೀಟಗಳ ಸಂಖ್ಯೆ ಕುಸಿಯುತ್ತಿದೆ. ಕೀಟಗಳೆಲ್ಲ ಕೃಷಿಗೆ, ಜನ ಜೀವನಕ್ಕೆ ಮಾರಕ ಎಂಬಂಥಾ ಮೂಢ ನಂಬಿಕೆಯೊಂದು ಎಲ್ಲರನ್ನೂ ಆವರಿಸಿಕೊಂಡಿದೆ. ಉಪಯೋಗಿ ಕೀಟಗಳ್ಯಾವುದು, ಉಪದ್ರವ ನೀಡುವ ಕೀಟಗಳ್ಯಾವುವೆಂಬಂಥಾ ತಿಳುವಳಿಕೆ ಹೆಚ್ಚಿನವರಿಗಿಲ್ಲ. ಅಂಥಾ ತಿಳುವಳಿಕೆ ಇದ್ದವರೂ ಕೂಡಾ ಈ ಬಗ್ಗೆ ಆಲೋಚಿಸೋದಿಲ್ಲ. ಒಂದ್ಯಾವುದೋ ಕೀಟ ಬಾಧೆ ಶುರುವಾದರೆ, ಅದಕ್ಕೆ ಕಾರಣವಾದ ಕೀಟ ಯಾವುಉದು, ಅದನ್ನುಉ ಮಾತ್ರ ಹತೋಟಿಗೆ ತರುವಂಥಾ ಕ್ರಮ ಯಾವುದೆಂಬ ಬಗ್ಗೆ ಯಾರೂ ಆಲೋಚಿಸೋದಿಲ್ಲ. ಕೀಟ ಬಾಧೆ ಬಂದಾಕ್ಷಣ ಕೀಟ ನಾಶಕ ಖರೀದಿಸಿ ತಂದು ಒಂದಿಡೀ ತೋಟಕ್ಕೆ ಸ್ಪ್ರೇ ಮಾಡಲಾಗುತ್ತೆ. ಈವತ್ತಿನ ಅನಾಹುತಗಳಿಗೆಲ್ಲ ಆ ಮನಃಸ್ಥಿತಿಯೇ ಮೂಲ ಕಾರಣ.
ಯಾವುದೋ ಒಂದು ಬಗೆಯ ಕೀಟದಿಂದ ತೊಂದರೆ ಉಂಟಾದರೆ, ರೋಗಗಳು ಹರಡಿಕೊಂಡರೆ ಅದನ್ನು ಮಾತ್ರವೇ ನಿಯಂತ್ರಣಕ್ಕೆ ತರಬೇಕಿದೆ. ಅಂಥಾ ಒಂದಷ್ಟು ಕೀಟ ನಾಶಕಗಳೂ ಇವೆ. ಇದೆಲ್ಲಕ್ಕಿಂತಲೂ ಜೈವಿಕ ವಿಧಾನವೇ ಪರಿಣಾಕಕಾರಿ. ಅದರಿಂದ ಮಾತ್ರವೇ ಪರಿಸರದ ಉಳಿವು ಸಾಧ್ಯ ಅಂತ ಪರಿಸರ ವಿಜ್ಞಾನಿಗಳು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ, ಎಲ್ಲ ಕೀಟಗಳನ್ನೂ ಸರ್ವನಾಶ ಮಾಡುವಂಥಾ ಕಾರ್ಕೋಟಕ ವಿಷಗಳನ್ನೇ ತಂದು ಸುರಿಯಲಾಗುತ್ತಿದೆ. ಇದರೊಂದಿಗೆ ಮತ್ತೊಂದಷ್ಟು ಪರತಿಒಸರ ಮಾಲೀನ್ಯದಂಥಾ ವಿಚಾರಗಳು ಸೇರಿಕೊಂಡು ಕೀಟಗಳ ಸಂತಾನ ಬಹಳಷ್ಟು ನಶಿಸಿದೆ. ಹೀಗೆ ತನ್ನತ್ತ ಆಕರ್ಷಿತವಾಗುವಂಥಾ ಕೀಟಗಳು ಇಲ್ಲದಿರೋದರಿಂದಾಗಿಯೇ ಹೂವುಗಳ ಸಹಜ ಆಕಾರ ಕಡಿಮೆಯಾಗಿ, ಮಕರಂದವೂ ಗಣನೀಯ ಪ್ರಮಾಣದಲ್ಲಿ ಮಾಯವಾಗುತ್ತಿದೆ ಎಂಬ ಸತ್ಯವನ್ನು ಈ ಅಧ್ಯಯನದ ಮೂಲಕ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಅಪಾಯದ ಎಚ್ಚರಿಕೆ
ಇದು ಮೇಲು ನೋಟಕ್ಕೆ ಪ್ರಾಕೃತಿಕ ಪಲ್ಲಟದಂತೆ ಕಾಣಿಸಿದರೂ ಕೂಡಾ ಇದರ ಪರಿಣಾಮ ಮಾತ್ರ ಊಹೆಯನ್ನೂ ಮೀರಿದಂತಿದೆ. ಇದು ಆಹಾರ ಸರಪಣಿಯ ಮೇಲೆ ಬಲವಾದ ಪೆಟ್ಟು ಕೊಟ್ಟಿರುವಂಥಾ ಸೂಚನೆ. ಇದನ್ನು ಸರಿಪಡಿಸಿ ಕೆಲ ಕೀಟಗಳ ಸಂತತಿಯನ್ನು ಕಾಪಾಡಿಕೊಳ್ಳದೇ ಹೋದರೆ, ಮುಂದೊಂದು ದಿನ ಅದೆಂಥಾ ರಾಸಾಯನಿಕ ಗೊಬ್ಬರಗಳನ್ನು ತಂದು ಸುರಿದರೂ ಬೆಳೆಗಳು ಬಾರದಂಥಾ ಬಂದರೂ ಯಾವ ದಿಕ್ಕಿನಲ್ಲು ಇಳುವರಿ ಸಾಲದಂಥಾ ಗಂಭೀರ ಸ್ಥಿತಿ ನಿರ್ಮಾಣಗೊಳ್ಳಲಿದೆ. ಹಾಗಂತ ಇದು ಹಠಾತ್ತನೆ ಸಂಭವಿಸಿದಂಥಾ ವಿಕೋಪವಲ್ಲ. ಕಳೆದ ೧೫೦ ವರ್ಷಗಳಿಂದೀಚೆಗಿನ ಸಂಪೂರ್ಣವಾದ ವಿವರಗಳನ್ನು, ಹೇಗೆಲ್ಲ ಕೀಟಗಳ ಸಂತತಿ ಕಡಿಮೆಯಾಗುತ್ತಾ ಬಂತೆಂಬ ಸತ್ಯವನ್ನು ಈ ಅಧ್ಯಯನ ಸಾಕ್ಷಿ ಸಮೇತ ತೆರೆದಿಟ್ಟಿದೆ.
ಈ ಅಧ್ಯಯನ ಒಂದು ಹಂತಕ್ಕೆ ಬಂದಿದ್ದು ೨೦೨೦ರಲ್ಲಿ. ಇದು ಕಲೆ ಹಾಕಿರುವ ಮಾಹಿತಿ ಮಾತ್ರ ನಿಜಕ್ಕೂ ಭಯಾನಕವಾಗಿದೆ. ಕಳೆದ ೧೫೦ ವರ್ಷಗಳ ಕೀಟ ಜಗತ್ತಿನ ಪಲ್ಲಟಗಳನ್ನು ತೆರೆದಿಟ್ಟಿವೆ. ಒಟ್ಟಾರೆಯಾಗಿ ಎರಡೂವರೆ ಲಕ್ಷದಿಂದ ಐದು ಲಕ್ಷಗಳಷ್ಟಿರುವ ಕೀಟಗಳಲ್ಲಿ ಈಗ ೫ ರಿಂದ ೧೦ ಪರ್ಸೆಂಟಿನಷ್ಟು ಇಳಿಮುಖವಾಗಿದೆ. ಇದೇನು ಕಡಿಮೆ ಪ್ರಮಾಣದ ಇಳಿಕೆಯಲ್ಲ. ಇದು ಕಡಿತವಾದ ಪ್ರಮಾಣವಾದರೆ, ಈಗ ನಮ್ಮ ಕಣ್ಣ ಮುಉಂದಿರುವ, ಜೇನು ನೊಣದಂಥಾ ಅದೆಷ್ಟೋ ಕೀಟಗಳ ಸಂಖ್ಯೆ ಇಳಿಮುಖ ಕಾಣುತ್ತಿವೆ. ಒಂದು ವೇಳೆ ಜೇನಿನ ಸಂತಾನ ಇದೇ ಪ್ರಮಾಣದಲ್ಲಿ ನಶಿಸಿದರೆ ಅದು ಜೀವ ಸಂಕುಲವನ್ನು ಅಕ್ಷರಶಃ ನಿರ್ನಾಮ ಮಾಡಿ ಹಾಕುತ್ತದೆ.
ಈ ಸಂಬಂಧವಾಗಿ ಒಂದು ಪ್ರದೇಶದಲ್ಲಿ ನಡೆಸಿರುವ ಅಧ್ಯಯನಗಳ ಹಿನ್ನೆಲೆಯಲ್ಲಿ ಹೇಳೋದಾದರೆ, ಹೂವುಗಳ ಗಾತ್ರ ಕಡಿಮೆ ಆಗಿರೋದು ಮಾತ್ರವಲ್ಲದೇ, ಮಕರಂದ ಕೂಡಾ ೨೦ ಪರ್ಸೆಂಟಿನಷ್ಟು ಇಳಿಕೆ ಕಂಡಿದೆ. ಈ ಎಲ್ಲ ಬಗೆಯಲ್ಲಿ ನೋಡ ಹೋದರೆ ಅತ್ಯಂತ ಗಂಭೀರವಾದ ಸ್ಥಿತಿಗೆ ಈ ಜಗತ್ತು ಇಳಿಯೋದನ್ನು ಯಾರೂ ಕೂಡಾ ಅಲ್ಲಗಳೆಯಲು ಸಾಧ್ಯವಿಲ್ಲ. ಯಾಕೆಂದರೆ, ಮಕರಂದ ಅನ್ನೋದು ಕೀಟಗಳ ಆಕರ್ಷಣೆಯ ಪ್ರಮಾಣದ ಆಧಾರದಲ್ಲಿ ತಗ್ಗಿದೆ. ಅದರರ್ಥ ಅದುಉ ಕ್ಷೀಣಿಸುತ್ತಾ ಸಾಗಿದೆ. ಈ ಪ್ರಮಾಣ ಹೀಗೆಯೇ ಮುಂದುವರೆದರೆ ಎಷ್ಟೋ ವರ್ಷಗಳಲ್ಲಿ ಹೂಗಳು ಮಕರಂದ ಸೃಷ್ಟಿಸೋದನ್ನೇ ನಿಲ್ಲಿಸಿ ಬಿಡಬಹುದು. ಹಾಗಾದರೆ ಜೇನಿನ ಸಂತಾನಸರ್ವನಾಶವಾಗುತ್ತದೆ. ಜೇನು ನಾಶ ಹೊಂದಿದರೆ ಪ;ರಾಗ ಸ್ಪರ್ಶ ನಿಂತು ಲಕ್ಷಾಂತರ ಸಸ್ಯ ಪ್ರಬೇಧ ಮರೆಯಾಗಿ ಈ ಜಗತ್ತೇ ನಾಶದತ್ತ ವಾಲಿಕೊಳ್ಳುತ್ತೆ. ಇದೇನು ನಮ್ಮ ಕಾಲದಲ್ಲಿ ಆಗೋದಲ್ಲ ಅಂತ ನಾವೇನಾದರೂ ಸುಮ್ಮನಿದ್ದರೆ, ಖಂಡಿತವಾಗಿಯೂ ಮುಂದಿನ ಪೀಳಿಗೆಯನ್ನು ಸರ್ವನಾಶ ಮಾಡಿದ ಪಾಪ ಪ್ರಜ್ಞೆಗೆ ನಾವೆಲ್ಲ ಪಾಲುದಾರರಾಗುತ್ತೇವೆ.
ಹೂವುಗಳು ಮತ್ತು ಕೀಟ ಲೋಕದ ನಂಟು ಇಂದು ನಿನ್ನೆಯದ್ದಲ್ಲ. ಜೀವ ವಿಕಾಸವಾದಂದಿನಿಂದಲೂ ಕೂಡಾ ಹೂವುಗಳ ಪರಾಗಸ್ಪರ್ಶದ ಮೂಲಕ ಕೀಟಗಳ ಪಾತ್ರ ಪ್ರಧಾನವಾಗಿದೆ. ಇಲ್ಲಿ ಹೂವರಳಿ ಯಾವುದೇ ಹಣ್ಣು ಹಂಪಲು ಮತ್ತು ಬೆಳೆಗಳು ಕೈ ಸೇರೋದರ ಹಿಂದೆ ಖಂಡಿತವಾಗಿಯೂ ಕೀಟ ಜಗತ್ತಿನ ಪಾತ್ರ ಪ್ರಧಾನವಾಗಿದೆ. ನಾವು ಬೆಳಗಳಿಗೆ ನಾನಾ ರೋಗಗಳು ಬಂದಾಗ ಅದಕ್ಕೆ ಕೀಟಗಳನ್ನು ಸಾರಾಸಗಟಾಗಿ ಗುರಿ ಮಾಡಿ ಬಿಡುತ್ತೇವೆ. ಆದರೆ, ಜಗತ್ತಿನ ಬಹುತೇಕ ಬೆಳೆಗಳ ಪರಾಗಸ್ಪರ್ಶಕ್ಕೂ ಈ ಕೀಟಗಳಿಗೂ ನಂಟಿದೆ. ನಾವು ಬೆಳೆಗಳು ಹುಲುಸಾಗಿ ಬರಲೆಂಬಂತೆ ಕೀಟ ನಾಶಕಗಳನ್ನು ಬಳಸುತ್ತೇವೆ. ಆದರೆ, ಈ ಮೂಲಕ ಬೆಳೆಗೆ ಸಹಕಾರಿಯಾದ ಕೀಟಗಳನ್ನೇ ಸಂಹರಿಸುತ್ತಿದ್ದೇವೆಂದು ಯಾರಿಗೂ ಅನ್ನಿಸದಿರೋದು ದುರಂತ. ಇನ್ನು ಮುಂದಾದರೂ ಹಾಗನ್ನಿಸದೇ ಹೋದರೆ, ಖಂಡಿತವಾಗಿಯೂ ನಮ್ಮ ವಿನಾಶ ಹತ್ತಿರಾಗುತ್ತದೆಂದೇ ಅರ್ಥ.
ಕೀಟಗಳಂದ್ರೆ ಅಪಾಯಕಾರಿಯಲ್ಲ
ಅಷ್ಟಕ್ಕೂ ಕೀಟಗಳೆಂಬ ಹೆಸರು ಕೇಳಿದಾಕ್ಷಣವೇ ಬಹುತೇಕರೊಳಗೆ ಒಂದು ಬಗೆಯ ಭೀತ ಭಾವ ಮೂಡಿಕೊಳ್ಳುತ್ತೆ. ಕೀಟಗಳೆಂದರೆ ಅಪಾಯಕರ ಎಂಬಂಥಾ ಭಾವ ಮೂಡಿಕೊಳ್ಳುತ್ತೆ. ಹಾಗಾದರೆ ಇದು ನಿಜವಾ? ಕೀಟಗಳೆಂದರೆ ನಿಜಕ್ಕೂ ಅಪಾಯಕಾರಿ ಗುಣ ಹೊಂದಿರುತ್ತವಾ? ಈ ದಿಕಸೆಯಲ್ಲಿ ನೋಡ ಹೋದರೆ ಖಂಡಿತವಾಗಿಯೂಊ ಅಚ್ಚರಿದಾಯಕ ಅಂಶಗಳು ಎದುರುಗೊಳ್ಳುತ್ತವೆ. ಈ ಜಗತ್ತಿನಲ್ಲಿ ಕೊಂಚ ಉಪದ್ರವ ಕೊಡುವ ಕೀಟಗಳಿರೋದು ಸತ್ಯ. ಹಾಗಂತ ಎಲ್ಲವನ್ನೂ ಕೂಡಾ ಅದೇ ಸಾಲಿಗೆ ಸೇರಿಸೋದು ಸರಿಯಲ್ಲ. ಯಾಕೆಂದರೆ, ನೀವೇನಾದರೂ ಕೃಷಿ ಮಾಡುವವರಾಗಿದ್ದರೂ ಇಲ್ಲದೇ ಹೋದರೂ ಕೀಟಗಳ ಋಣ ನಮ್ಮೆಲ್ಲರ ಮೇಲಿದೆ ಅನ್ನೋದನ್ನು ಒಪ್ಪಿಕೊಳ್ಳಲೇ ಬೇಕಿದೆ.
ಯಾವುದೇ ಬೆಳೆಗಳು ಚೆಂದಗೆ ಹೂ ಬಿಟ್ಟು ಫಸಲು ಬರಬೇಕೆಂದರೆ ಪರಾಗಸ್ಪರ್ಶ ಆಗಲೇ ಬೇಕು. ಅದು ಸಾಧ್ಯವಾಗಬೇಕೆಂದರೆ ಕೀಟಗಳು ಇರಲೇ ಬೇಕು. ಒಂದು ವೇಳೆ ಜೇನು ಹುಳುಗಳು ನಾಶವಾದರೆ ಒಂದಿಡೀ ಆಹಾರ ಚಕ್ರವೇ ಬದಲಾಗುತ್ತೆ. ಆದರೆ ಆಹಾರ ಚಕ್ರ ಉಳಿಯಲು ಜೇನು ಹುಳಗಳು ಮಾತ್ರವೇ ಸಾಕಾಗೋಈದಿಲ್ಲ. ಅದನ್ನೂ ಒಳಗೊಂಡ ಲಕ್ಷಾಂತರ ಸಂಖ್ಯೆಯ ಕೀಟಗಳ ಇರುವಿಕೆ ಬಹುಮುಖ್ಯ. ಸದ್ಯದ ವಾತಾವರಣದಲ್ಲಿ ಕೃಷಿ ವಲಯದಿಂದಲೇ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೀಟಗಳ ಹನನ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ.
ಹೆಚ್ಚು ಬೆಳೆ ಪಡೆಯುವ ಉದ್ದೇಶದಿಂದ ರಾಸಾಯನಿಕಗಳ ಸಿಂಪರಣೆಯ ಜೊತೆಗೆ ಕೀಟನಾಶಕಗಳ ಬಳಕೆ ಕೂಡಾ ಆಹಾರ ಸರಪಳಿಯನ್ನು ಸರ್ವನಾಶ ಮಾಡುತ್ತಿದೆ. ಇದೀಗ ಎಲ್ಲರೂ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಕೀಟಗಳ ನಿಯಂತ್ರಣಕ್ಕೆ ಪಕ್ಕಾ ವೈಜ್ಞಾನಿಕ ಮತ್ತು ಪಾರಂಪರಿಕ ಹಾದಿಗಳನ್ನೇ ಕಂಡುಕೊಳ್ಳಬೇಕಿದೆ. ಅದೆಂಥಾದ್ದೇ ಸ್ಥಿತಿ ಬಂದರೂ ಕೀಟ ಜಗತ್ತನ್ನೇ ಸರ್ವನಾಶ ಮಾಡುವ ಕೀಟನಾಶಕಗಳನ್ನು ಬಳಸೋದಿಲ್ಲ ಎಂಬಂಥಾ ಸಂಕಲ್ಪವನ್ನು ಎಲ್ಲರೂ ಮಾಡಲೇ ಬೇಕಿದೆ. ಈ ಮೂಲಕ ಕೀಟಸ್ನೇಹಿ ವಾತಾವರಣ ಸೃಷ್ಟಿ ಮಾಡಿ, ಒಂದು ಬೆಳೆಗೆ ಕೀಟ ಬಾಧೆ ಬಂದರೆ, ಅದಕ್ಕೆ ಕಾರಣ ಏನೆಂಬುದನ್ನುಉ ಅಮೂಲಾಗ್ರವಾಗಿ ಪರಿಶೀಲಿಸಿ, ತಜ್ಞರ ಮಾರ್ಗದರ್ಶನದಲ್ಲಿ ಹತೋಟಿಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಹೀಗೆ ಮಾಡದಿದ್ದರೆ ಜಗತ್ತಿನ ಸರ್ವನಾಶವಾಗೋದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ!