ಮಲೆನಾಡ ಸುಂದರ ಪರಿಸರದ ಹಾಗೂ ಅಲ್ಲಿನ ಸಮಸ್ಯೆಗಳನ್ನು ಪರಿಚಯಿಸುವ ‘ಜಲಪಾತ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಖ್ಯಾತ ಲೇಖಕ ಹಾಗೂ ಹಿರಿಯ ಪತ್ರಕರ್ತ ಜೋಗಿ, ನಟ ಪೃಥ್ವಿ ಶಾಮನೂರು ‘ಜಲಪಾತ’ ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಜೋಗಿ, ‘ನಾನು ಬಹುಕೋಟಿ ಸಿನಿಮಾಗಳ ಕುರಿತು ಮಾತಾಡಲಾರೆ. ನನಗೆ ಸಣ್ಣ ಸಿನಿಮಾ ಮಾಡುವವರೆಂದರೆ ಅಕ್ಕರೆ. ಯಾಕೋ ನಿಜವಾದ ಸಿನಿಮಾ ಪ್ರೀತಿ ಕಂಟೆಂಟ್ ಸಿನಿಮಾ ಮಾಡುವವರಲ್ಲಿ ಹೆಚ್ಚು ಆಪ್ತವಾಗಿರುತ್ತದೆ. ಅಂತಹ ಪರಿಸರದ ಕುರಿತು ಜಾಗೃತಿ ಮೂಡಿಸುವ ‘ಜಲಪಾತ’ ಚಿತ್ರವನ್ನು ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ. ರವೀಂದ್ರ ತುಂಬರಮನೆ ನಿರ್ಮಿಸಿದ್ದಾರೆ. ಇಂತಹ ಒಳ್ಳೆಯ ಕಂಟೆಂಟ್ ಇರುವ ಸಾಕಷ್ಟು ಚಿತ್ರಗಳು ಇವರಿಂದ ಇನ್ನಷ್ಟು ಬರಲಿ’ ಎಂದರು.
ಮಲೆನಾಡನ್ನು ಕೇವಲ ಪ್ರವಾಸಿತಾಣನಾಗಷ್ಟೇ ನೋಡುತ್ತಿದ್ದೇವೆ. ಆದರೆ ಅಲ್ಲಿನ ಸಂಸ್ಕೃತಿಯ ಪರಿಚಯದ ಜೊತೆಗೆ ಸಮಸ್ಯೆಗಳನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ ಎಂಬುದು ಚಿತ್ರತಂಡದ ಮಾತು. ಈ ಹಿಂದೆ ‘ಪದವಿ ಪೂರ್ವ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಜನೀಶ್ ‘ಜಲಪಾತ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಗಶ್ರೀ ಬೇಗಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಎಂ. ಆರ್ ಸುರೇಶ್ ಮೊಗಲಾದವರು ಸಿನಿಮಾದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.





