ಇದೇ ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ʼಜವಾನ್ʼ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಬಾಲಿವುಡ್ ನಲ್ಲಿ 200 ಕೋಟಿ ಕ್ಲಬ್ ಸೇರಿದೆ.ಹೌದು, ‘ಜವಾನ್’ ಸಿನಿಮಾ ಬಿಡುಗಡೆಯಾದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನವ ʼಜವಾನ್ʼ 129.06 ಕೋಟಿ ರೂಪಾಯಿಯನ್ನು ಗಳಿಸಿತ್ತು. ಆ ಮೂಲಕ ಭಾರತ ಸಿನಿರಂಗದಲ್ಲಿ ಬಿಗ್ ಓಪನಿಂಗ್ ಪಡೆದುಕೊಂಡ ಹಿಂದಿ ಸಿನಿಮಾವಾಗಿ ʼಜವಾನ್ʼ ಹೊರಹೊಮ್ಮಿದೆ. ಇದೀಗ ಎರಡನೇ ದಿನವೂ ಅದೇ ರೀತಿಯ ಆರಂಭವನ್ನು ಪಡೆದುಕೊಂಡಿದೆ. ಎರಡೇ ದಿನದಲ್ಲಿ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 200 ಕೋಟಿ ಗಳಿಕೆ ಕಾಣುವಲ್ಲಿ ‘ಜವಾನ್’ ಯಶಸ್ವಿಯಾಗಿದೆ.
ಹಿಂದಿ, ತೆಲುಗು, ತಮಿಳು ಸೇರಿದಂತೆ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಸೇರಿ ಮೊದಲ ದಿನ ‘ಜವಾನ್’ ಸಿನಿಮಾ 74.50 ಕೋಟಿ ರೂ.ಗಳಿಸಿದೆ. ಇದೀಗ ಎರಡನೇ ದಿನ ಕೂಡ ಭಾರತದಲ್ಲಿ 53 ಕೋಟಿ ರೂಪಾಯಿಯ ಕಮಾಯಿಯನ್ನು ಮಾಡಿದೆ. ಎರಡು ದಿನದಲ್ಲಿ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ʼಜವಾನ್ʼ ಒಟ್ಟು 127 ಕೋಟಿ ರೂ.ಗಳಿಸಿದೆ. ಜಗತ್ತಿನಾದ್ಯಂತ ಒಟ್ಟಾರೆ ‘ಜವಾನ್’ 200 ಕೋಟಿ ರೂಪಾಯಿಯ ಗಳಿಕೆಯನ್ನು ಕಂಡಿದೆ ಎಂದು ಸಿನಿಮಾ ಟ್ರೇಡ್ ಅನಾಲಿಸ್ಟ್ ರಮೇಶ್ ಬಾಲಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸದ್ಯ ಇದು ‘ಜವಾನ್’ ಸಿನಿಮಾದ ಗಳಿಕೆಯ ಆರಂಭಿಕ ಲೆಕ್ಕಚಾರವಾಗಿದ್ದು, ಅಧಿಕೃತ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.