ಟಾಲಿವುಡ್ ಬಹುನಿರೀಕ್ಷಿತ ಸಿನಿಮಾಗಳ ಪೈಕಿ `ಕಣ್ಣಪ್ಪ’ ಚಿತ್ರ ಕೂಡ ಒಂದು. ವಿಷ್ಣು ಮಂಚು ಪಾಲಿನ ಡ್ರೀಮ್ ಸಿನಿಮಾ. ಕೋಟಿ ಕೋಟಿ ವೆಚ್ಚದಲ್ಲಿ ತಯ್ಯಾರಾಗುತ್ತಿದೆ ಎನ್ನುವುದಕ್ಕಿಂತ ಇದು ಪೌರಾಣಿಕ ಸಿನಿಮಾ ಎನ್ನುವ ಕಾರಣಕ್ಕೆ. ಶಿವನ ಪರಮಭಕ್ತ ಕಣ್ಣಪ್ಪನ ಕಥೆ ಎನ್ನುವ ಕಾರಣಕ್ಕೆ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಸೆಟ್ಟೇರಿದ ದಿನದಿಂದಲೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ `ಕಣ್ಣಪ್ಪ’ ಸಿನಿಮಾ ದಕ್ಷಿಣದ ಸೂಪರ್ ಸ್ಟಾರ್ ಗಳನ್ನ ಆನ್‍ಬೋರ್ಡ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿದೆ. ರೆಬೆಲ್‍ಸ್ಟಾರ್ ಪ್ರಭಾಸ್, ಲೇಡಿ ಸೂಪರ್ ಸ್ಟಾರ್ ನಯನತಾರಾ ನಂತರ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೆಸರು ಕೇಳಿಬರುತ್ತಿದೆ. ಅಮರೇಂದ್ರ ಬಾಹುಬಲಿಯ ಆಗಮನದ ಸುದ್ದಿಯನ್ನು `ಹರ ಹರ ಮಹಾದೇವ್’ ಎನ್ನುವ ಮೂಲಕ ಒಪ್ಪಿಕೊಂಡಿದ್ದ ನಟ ವಿಷ್ಣುಮಂಚು, ಈಗ ಲಾಲೆಟ್ಟನ್ ಎಂಟ್ರಿ ಸಮಾಚಾರವನ್ನ ಸ್ವಾಗತಿಸಿದ್ದಾರೆ. `ಹರ ಹರ ಮಹಾದೇವ್’ ಅಂತ ರೀಟ್ವೀಟ್ ಮಾಡುವ ಮೂಲಕ ಮಲೆಯಾಳಂ ಚಿತ್ರರಂಗದ ಎವರ್ ಗ್ರೀನ್ ಹೀರೋ `ಕಣ್ಣಪ್ಪ’ ಚಿತ್ರ ಸೇರ್ಪಡೆಗೊಂಡಿರುವುದನ್ನು ಕನ್ಫರ್ಮ್ ಮಾಡಿದ್ದಾರೆ.

`ಮಲೈಕೊಟೈ ವಾಲಿಬನ್’, ಬರೋಜ್, ರಾಮ್ ಪಾರ್ಟ್-1, ರಾಮ್ ಪಾರ್ಟ್-2, ಎಂಪೂರನ್ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಲಾಲೆಟ್ಟನ್, ಜೈಲರ್ ಸಿನಿಮಾ ನಂತರ `ಕಣ್ಣಪ್ಪ’ ಚಿತ್ರದಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಲು ಒಪ್ಪಿಕೊಂಡಿದ್ದಾರೆ. ಪಾತ್ರದ ಬಗ್ಗೆ ಸದ್ಯಕ್ಕೆ ಹೆಚ್ಚೇನು ಮಾಹಿತಿ ಇಲ್ಲವಾದರೂ `ಕಣ್ಣಪ್ಪ’ ಚಿತ್ರದಲ್ಲಿ ಮೋಹನ್ ಲಾಲ್ ಕ್ಯಾಮಿಯೋ ಪ್ಲೇ ಮಾಡೋದು ಖಚಿತವಾಗಿದೆ. ಅದರಂತೇ, ರೆಬೆಲ್‍ಸ್ಟಾರ್ ಪ್ರಭಾಸ್ ಕೂಡ ಗೆಳೆಯನ ಡ್ರೀಮ್ ಪ್ರಾಜೆಕ್ಟ್ ಗೆ ಕಾಲ್‍ಶೀಟ್ ಕೊಟ್ಟಾಗಿದೆ. ಲಾರ್ಡ್ ಶಿವನಾಗಿ ಮಿಂಚಲು ಪ್ರಭಾಸ್ ಕಡೆಯಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಾಗಿದೆಯಂತೆ. ಇನ್ನೂ, ಪಾರ್ವತಿ ಪಾತ್ರಕ್ಕಾಗಿ ಲೇಡಿ ಸೂಪರ್‍ಸ್ಟಾರ್ ನಯನತಾರಾ ಅವ್ರನ್ನ ಅಪ್ರೋಚ್ ಮಾಡಲಾಗಿದ್ದು, ಮಹಾನಟಿಯ ಕಾಲ್‍ಶೀಟ್ ಗಾಗಿ ವಿಷ್ಣುಮಂಚು ಅಂಡ್ ಟೀಮ್ ಎದುರುನೋಡ್ತಿರುವುದಾಗಿ ಸುದ್ದಿಯಾಗ್ತಿದೆ.

ಕಣ್ಣಪ್ಪ ಚಿತ್ರ `ಭಕ್ತ ಕಣ್ಣಪ್ಪ’ ಸಿನಿಮಾದ ರಿಮೇಕ್. ಆ ಭಕ್ತ ಕಣ್ಣಪ್ಪ ನಮ್ಮ ಅಣ್ಣಾವ್ರ ಬೇಡರ ಕಣ್ಣಪ್ಪ ಚಿತ್ರದ ರಿಮೇಕ್ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಈ ಸಿನಿಮಾದಿಂದ ವರನಟ ಡಾ. ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕನಟರಾಗಿ ಪದಾರ್ಪಣೆ ಮಾಡಿದ್ದರು. ಆ ಸಿನಿಮಾ ಬೆಳ್ಳಿತೆರೆ ಮೇಲೆ ವಿಜೃಂಭಿಸಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಅವತ್ತಿಗೆ ಆ ಚಿತ್ರದ ರಿಮೇಕ್ ರೈಟ್ಸ್ ತೆಗೆದುಕೊಂಡು ಹೋಗಿದ್ದ ಪ್ರಭಾಸ್ ಅವರ ತಂದೆ ಉಪ್ಪಲಪಟ್ಟಿ ಸೂರ್ಯನಾರಾಯಣ ರಾಜು ಅವರು, ಸಹೋದರ ಕೃಷ್ಣಂ ರಾಜು ಅವರನ್ನ ನಾಯಕರನ್ನಾಗಿ ಮಾಡಿ `ಭಕ್ತ ಕಣ್ಣಪ್ಪ’ ಸಿನಿಮಾ ಮಾಡಿದ್ದರು. ಈ ಚಿತ್ರ ಅವರಿಗೂ ದೊಡ್ಡ ಹೆಸರು ತಂದುಕೊಟ್ಟಿತ್ತು, ವೃತ್ತಿಬದುಕಿನ ಮಹತ್ವದ ತಿರುವು ಸಿಕ್ಕಿತ್ತು. ಹೀಗಾಗಿ, ಕೃಷ್ಣಂರಾಜು ಅವರು ಮತ್ತೆ ಈ ಸಿನಿಮಾ ರಿಮೇಕ್ ಆಗ್ಬೇಕು, ಅದರಲ್ಲಿ ಪ್ರಭಾಸ್ ಕಣ್ಣಪ್ಪನಾಗಿ ಕಣಕ್ಕಿಳಿಬೇಕು ಅಂತ ಕನಸು ಕಂಡಿದ್ದರು. ಆದರೆ, ಆ ಕನಸು ಈಡೇರುವ ಮೊದಲೇ ಇಹಲೋಕ ತ್ಯಜಿಸಿದರು. ಆದ್ರೀಗ, ಪ್ರಭಾಸ್ `ಕಣ್ಣಪ್ಪ’ ಚಿತ್ರದ ಭಾಗವಾಗುತ್ತಿದ್ದಾರೆ. ಕಣ್ಣಪ್ಪನ ಅವತಾರೆವೆತ್ತಲಿರುವ ಸ್ನೇಹಿತ ವಿಷ್ಣುಮಂಚುಗೆ ಸಾಥ್ ನೀಡಲು `ಶಿವಪ್ಪ’ನಾಗಿ ಮಿಂಚಲು ಒಪ್ಪಿಕೊಂಡಿದ್ದಾರೆ.

ಸತತ ಏಳು ವರ್ಷಗಳ ನಟ ವಿಷ್ಣುಮಂಚು ಕನಸು ಈಡೇರುವ ಕಾಲ ಸನ್ನಿಹಿತವಾಗಿದೆ. ಕಳೆದೊಂದು ವರ್ಷದಿಂದ `ಕಣ್ಣಪ್ಪ’ ಸಿನಿಮಾದ ಮೇಲೆ ವರ್ಕ್ ಮಾಡಿರುವ ವಿಷ್ಣುಮಂಚು ತಮ್ಮದೊಂದು ಟೀಮ್ ಕಟ್ಟಿಕೊಂಡು ಕಣಕ್ಕಿಳಿದ್ದಾರೆ. ಕಾಳಹಸ್ತಿಯಲ್ಲಿ ಸಿನಿಮಾ ಮುಹೂರ್ತ ಮಾಡಿ `ಕಣ್ಣಪ್ಪ’ ಚಿತ್ರಕ್ಕೆ ಚಾಲನೆ ಕೊಡಿಸಿದ್ದರು. ಈಗ ನ್ಯೂಜಿಲ್ಯಾಂಡ್‍ನಿಂದ ಶೂಟಿಂಗ್ ಶುರು ಮಾಡಿದ್ದಾರೆ. 90 ದಿನ ಫಸ್ಟ್ ಷೆಡ್ಯೂಲ್ಡ್ ಶೂಟಿಂಗ್ ಪ್ಲ್ಯಾನ್ ಆಗಿದ್ದು ಸುಮಾರು 600 ಜನರ ತಂಡ `ಕಣ್ಣಪ್ಪ’ನಿಗಾಗಿ ಶ್ರಮವಹಿಸಿ ದುಡಿಯಲಿದೆ.

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿರುವ ನಟ ವಿಷ್ಣುಮಂಚು, `ಕಣ್ಣಪ್ಪ’ ಕೇವಲ ಒಂದು ಸಿನಿಮಾ ಅಲ್ಲ ಇದು ಪ್ರೀತಿ ಮತ್ತು ಭಕ್ತಿಗೆ ಸಮರ್ಪಣೆಗೊಳ್ಳುತ್ತಿರುವ ಚಿತ್ರ. ಇದಕ್ಕಾಗಿ ಶ್ರಮವಹಿಸಲು ಸಿದ್ದರಿದ್ದೇವೆ. ನ್ಯೂಜಿಲ್ಯಾಂಡ್‍ನಲ್ಲಿ ಶೂಟಿಂಗ್ ಪ್ರಾರಂಭಗೊಂಡಿದೆ, ನಿಮ್ಮೆಲ್ಲರ ಪ್ರೀತಿ ಮತ್ತು ಸಹಕಾರವಿರಲಿ. ಬೆಳ್ಳಿತೆರೆ ಮೇಲೆ ಕಣ್ಣಪ್ಪ ನಿಮ್ಮೆಲ್ಲರನ್ನೂ ಮೋಡಿ ಮಾಡುವಂತೆ ಮಾಡುತೇವೆ ಎಂದಿದ್ದಾರೆ. ಖ್ಯಾತ ಬರಹಗಾರರಾದ ಶ್ರೀ ವಿಜಯೇಂದ್ರ ಪ್ರಸಾದ್, ಪರಚೂರಿ ಗೋಪಾಲಕೃಷ್ಣ, ನಾಗೇಶ್ವರ್ ರೆಡ್ಡಿ, ಈಶ್ವರ್ ರೆಡ್ಡಿ,ತೋಟಾ ಪ್ರಸಾದ್, ಸಾಯಿನಾಥ್ ತೋಟಪಲ್ಲಿ ಸೇರಿದಂತೆ ಹಲವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಎಲ್ಲಾ ದಿಗ್ಗಜರು `ಕಣ್ಣಪ್ಪ’ ಸಿನಿಮಾದ ಕಥೆ ಸಿದ್ದಪಡಿಸುವುದಕ್ಕೆ ಸಾಥ್ ನೀಡಿದ್ದಾರೆ
ಇನ್ನೂ `ಕಣ್ಣಪ್ಪ’ ಸಿನಿಮಾಗೆ ಮಹಾಭಾರತ ಸರಣಿ ಖ್ಯಾತಿಯ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಪರಚೂರಿ ಗೋಪಾಲಕೃಷ್ಣ , ತೋಟಾ ಪ್ರಸಾದ್, ಸಾಯಿನಾಥ್ ತೋಟಪಲ್ಲಿ ಹಾಗೂ ಸಾಯಿ ಮಾಧವ್ ಬುರ್ರಾ ಒಟ್ಟಾಗಿ ಸೇರಿ ಕಥೆ ಬರೆದು ಕೊಟ್ಟಿದ್ದಾರೆ. ಮುಖ್ಯ ಪಾತ್ರದಲ್ಲಿ ವಿಷ್ಣು ಮಂಚು ನಟಿಸಲಿದ್ದು, ಪ್ರಭಾಸ್, ಮೋಹನ್ ಲಾಲ್, ಮೋಹನ್ ಬಾಬು, ಮಧು ಸೇರಿದಂತೆ ದಕ್ಷಿಣ ಭಾರತದ ಸ್ಟಾರ್ ನಟರುಗಳ ಸಮಾಗಮವಾಗಲಿದೆಯಂತೆ. ವಿಷ್ಣು ಮಂಚುಗೆ ನಾಯಕಿಯಾಗಿ ನೂಪುರ್ ಸನೋನ್ ಕಾಣಿಸಿಕೊಳ್ಳಬೇಕಿತ್ತು. ಆದರೆ, ಡೇಟ್ ಕ್ಲಾ ಶ್ ನಿಂದ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ. ಸದ್ಯ, ಫೀಮೇಲ್ ಲೀಡ್ ಪಾತ್ರಕ್ಕೆ ಬೇರೊಬ್ಬ ನಟಿಯ ಹಂಟಿಂಗ್ ಕೂಡ ನಡೆಯುತ್ತಿದೆ . ಮಣಿಶರ್ಮಾ ಮತ್ತು ಸ್ಟೀಫನ್ ದೇವಸಿ ಅವರ ಪ್ರತಿಭಾವಂತ ಜೋಡಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದೆ. ಅವಾ ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಜಂಟಿಯಾಗಿ ಸಿನಿಮಾ ನಿರ್ಮಾಣಗೊಳ್ಳುತ್ತಿದ್ದು, ಮಗನ ಕನಸಿನ ಸಿನಿಮಾಗೆ ವಿಷ್ಣು ಮಂಚು ತಂದೆ ಮೋಹನ್ ಬಾಬು ಅವರು ಬೆಂಬಲವಾಗಿ ನಿಂತಿದ್ದಾರೆ. ನೂರಾರು ಕೋಟಿ ಬಂಡವಾಳ ಹೂಡಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ `ಕಣ್ಣಪ್ಪ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.





