ಕನ್ನಡಿಗರು ಮಾತ್ರವಲ್ಲ ಪರಭಾಷಿಗರು ಹಾಗೂ ಪ್ಯಾನ್ ಇಂಡಿಯಾ ಪ್ರೇಕ್ಷಕರೆಲ್ಲರೂ ಎದುರುನೋಡ್ತಿರುವ ಸಿನಿಮಾಗಳ ಪೈಕಿ `ಕಾಂತಾರ-2′ ಕೂಡ ಒಂದು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಲಿರುವ ಈ ಚಿತ್ರಕ್ಕಾಗಿ ಆಲ್ ಓವರ್ ಇಂಡಿಯಾದ ಸಿನಿಮಾ ಪ್ರೇಮಿಗಳು ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಕಾಂತಾರ ಪ್ರೀಕ್ವೆಲ್ ಕಥೆಗಾಗಿ ಕಣ್ಣರಳಿಸಿದ್ದಾರೆ. ಕಾಡುಬೆಟ್ಟು ಶಿವಪ್ಪನ ನಯಾ ಲುಕ್ಕು ಮತ್ತು ಗೆಟಪ್ ಹೇಗಿರಬಹುದು ಅಂತ ಕುತೂಹಲಭರಿತರಾಗಿ ಕಾಯ್ತಿದ್ದಾರೆ. ಆ ಕಾತುರಕ್ಕೆ ಇನ್ನೆರಡು ದಿನದಲ್ಲಿ ಬಿಗ್ ಬ್ರೇಕ್ ಬೀಳುವ ಬಡಾ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಕಾಂತಾರ ಪ್ರೀಕ್ವೆಲ್ಗೆ ಮುಹೂರ್ತ ಫಿಕ್ಸಾಗಿದ್ದು, ಸಿನಿಮಾಗೆ ಚಾಲನೆ ಕೊಡೋದ್ರ ಜೊತೆಗೆ ಫಸ್ಟ್ ಲುಕ್ ರಿವೀಲ್ ಮಾಡುವುದಾಗಿ ಹೊಂಬಾಳೆ ಮಾಲೀಕರು ಘೋಷಣೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಕಾಂತಾರ ಪ್ರೀಕ್ವೆಲ್ಗೆ ಮುಹೂರ್ತ ಫಿಕ್ಸಾಗಿರೋ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಹೊಂಬಾಳೆ ಓನರ್ ಈ ಭಾರಿ ಸಿಂಪಲ್ ಆಗಿ ಮುಹೂರ್ತ ಮಾಡಿ ಮುಗಿಸೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಇದೇ ನವೆಂಬರ್ 27ರಂದು `ಕಾಂತಾರ’ ಪ್ರೀಕ್ವೆಲ್ ಸೆಟ್ಟೇರಲಿದ್ದು, ಚಿತ್ರೀಕರಣಕ್ಕೆ ಚಾಲನೆ ಸಿಗುವ ಬಗ್ಗೆ ಸುದ್ದಿ ಸ್ಪೋಟಗೊಂಡಿತ್ತು. ಇದೀಗ ಸ್ವತಃ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಅಪ್ಡೇಟ್ ಕೊಟ್ಟಿದೆ. ನವೆಂಬರ್ 27ರಂದು 12:25ಕ್ಕೆ ಸರಿಯಾಗಿ ಕಾಂತಾರ ಪ್ರೀಕ್ವೆಲ್ ಗೆ ಮುಹೂರ್ತ ನೆರವೇರಲಿದ್ದು, ಮೊದಲ ನೋಟ ಅನಾವರಣಗೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಪ್ರತಿಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ, ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಯಾಕಂದ್ರೆ, ಇದು ಬರಿ ಬೆಳಕಲ್ಲ ದರ್ಶನ ಎಂದಿದೆ. ಈ ಸಾಲು ಸಮಸ್ತ ಸಿನಿಮಾ ಪ್ರೇಮಿಗಳನ್ನ ಈಗಿಂದಲೇ ಒಂಟಿಕಾಲಲ್ಲಿ ನಿಲ್ಲಿಸಿದೆ.

ವಿಶೇಷ ಅಂದರೆ ಕಾಂತಾರ ಪ್ರೀಕ್ವೆಲ್ಗೆ ಉಡುಪಿಯ ವಿಜ್ಞೇಶ್ವರ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿಸಲಾಗ್ತಿದೆ. ಇದೇ ದಿವ್ಯಜಾಗದಲ್ಲಿ ಕೆಜಿಎಫ್ ಹಾಗೂ ಕಾಂತಾರ ಮೊದಲ ಭಾಗಕ್ಕೆ ಚಾಲನೆ ನೀಡಲಾಗಿತ್ತು. ಆ ದೇವರ ಮಹಿಮೆಯೋ ಅಥವಾ ಆ ದಿವ್ಯ ಜಾಗದ ಶಕ್ತಿಯೋ ಗೊತ್ತಿಲ್ಲ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆದ್ವು. ಕೋಟಿ ಕೋಟಿ ದುಡ್ಡನ್ನ ಮೂಟೆಕಟ್ಟಿಕೊಟ್ಟವು ಎನ್ನುವುದಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಹಾಗೂ ಗರಿಮೆಯನ್ನು ಹೆಚ್ಚಿಸಿದ್ವು. ಆಲ್ ಓವರ್ ಇಂಡಿಯಾ ಮಾತ್ರವಲ್ಲ ಇಡೀ ಜಗತ್ತಿಗೆ ಜಗತ್ತೇ ಕಣ್ಣರಳಿಸಿಕೊಂಡು ಗಂಧದಗುಡಿಯತ್ತ ತಿರುಗಿ ನೋಡುವಂತೆ ಮಾಡಿದ್ವು. ಇದೀಗ ಆ ಜಗತ್ತು ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯ್ತಿರೋದು ಕೆಜಿಎಫ್-3 ಗಾಗಿ ಮತ್ತು ಕಾಂತಾರ-2 ಗಾಗಿ

ಇನ್ನೇನು ಎರಡು ದಿನದಲ್ಲಿ ಕಾಂತಾರ ಪ್ರೀಕ್ವೆಲ್ ಸೆಟ್ಟೇರಲಿದೆ, ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಸಿನಿಮಾಗೆ ಚಾಲನೆ ಕೊಡುವ ಮೊದಲೇ, ಶೂಟಿಂಗ್ ಶುರು ಮಾಡುವ ಮೊದಲೇ ಫಸ್ಟ್ ಲುಕ್ ರಿಲೀಸ್ ಮಾಡ್ತಿರೋದ್ರಿಂದ ಕುತೂಹಲ ಗರಿಗೆದರಿದೆ. ಸದ್ದಿಲ್ಲದೇ ಫಸ್ಟ್ ಲುಕ್ಗೋಸ್ಕರ ಶೆಟ್ರು ಶೂಟಿಂಗ್ ಮಾಡಿದ್ರಾ ಅಥವಾ ಎವಿಎಫೆಕ್ಟ್ ಮೂಲಕ ನಯಾ ಅವತಾರ ಅನಾವರಣಗೊಳಿಸ್ತಾರಾ? ಹೀಗೊಂದಿಷ್ಟು ಪ್ರಶ್ನೆ ಇದ್ದೆ ಇದೆ. ಇದೆಲ್ಲದಕ್ಕೂ ಸೋಮವಾರ ಮಧ್ಯಾಹ್ನದೊತ್ತಿಗೆ ಉತ್ತರ ಸಿಗಲಿದೆ. ಇನ್ನೊಂದು ಇಂಟ್ರೆಸ್ಟಿಂಗ್ ಪಾಯಿಂಟ್ ಅಂದರೆ ಶೆಟ್ರು ಕಾಂತಾರ ಪ್ರೀಕ್ವೆಲ್ ಮೂಲಕ ಹಾಲಿವುಡ್ ಪ್ರವೇಶ ಮಾಡಲು ರೆಡಿಯಾಗಿದ್ದಾರೆ. ಅಕ್ಕ-ಪಕ್ಕದ ರಾಜ್ಯದ ಮಂದಿಗೆ ತಮ್ಮ ಕಾಲ್ಶೀಟ್ ಕೊಡದೇ, ಪರಭಾಷಾ ಸಿನಿಮಾಗಳ ಮೂಲಕ ಹಾಲಿವುಡ್ಗೆ ಹೋಗದೇ ತಮ್ಮದೇ ನಿರ್ದೇಶನದ, ನಟನೆಯ ಕಾಂತಾರ-2 ಮೂಲಕ ಇಂಗ್ಲೀಷ್ ಮಂದಿನಾ ಬೆಚ್ಚಿಬೀಳಿಸೋದಕ್ಕೆ ತಯಾರಾಗಿದ್ದಾರೆ.
ಕಾಂತಾರ ಮೊದಲ ಭಾಗ ನೋಡಿದವರೆಲ್ಲರೂ ಕೂಡ ಶೆಟ್ರಿಗೆ ಕೈ ಎತ್ತಿ ಮುಗಿದಿದ್ದಾರೆ. ಪ್ರೇಕ್ಷಕರ ಜೊತೆಗೆ ಕಮಲ್ ಹಾಸನ್, ರಜನಿಕಾಂತ್, ಬಿಗ್ ಬಿ, ಮೋಹನ್ ಲಾಲ್ ಹೀಗೆ ಘಟಾನುಘಟಿ ತಾರೆಯರೆಲ್ಲಾ ಡಿವೈನ್ ಸ್ಟಾರ್ ನಟನೆ ಕಂಡು ಮಂತ್ರಮುಗ್ದರಾಗಿದ್ದಾರೆ. ಇನ್ನೀಗ ಹಾಲಿವುಡ್ ಪ್ರೇಕ್ಷಕರು ಹಾಗೂ ಅಲ್ಲಿನ ಸಿನಿಮಾ ಮಂದಿ ಕಣ್ಣರಳಿಸಿ ನೋಡೋ ಸಮಯ. ಅದಕ್ಕೆ ಹೊಂಬಾಳೆ ಸಂಸ್ಥೆ ಅಸ್ತು ಎಂದಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಬೆಂಗಾಲಿ ಸೇರಿದಂತೆ ಇಂಗ್ಲೀಷ್ ಭಾಷೆಯಲ್ಲೂ ಕಾಂತಾರ ತೆರೆಗೆ ತರುವ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ. ನವೆಂಬರ್ 27ರಂದು ಮುಹೂರ್ತ ನೆರವೇರಿಸಿ, ಜನವರಿಯಿಂದ ಶೂಟಿಂಗ್ ಹೋಗೋ ಬಗ್ಗೆ ಪ್ಲ್ಯಾನ್ ಆಗಿದೆ. ಉಡುಪಿ ಹಾಗೂ ಶ್ರೀಲಂಕಾದಲ್ಲಿ ಮುಖ್ಯವಾಗಿ ಚಿತ್ರೀಕರಣ ನಡೆಯಲಿದೆಯಂತೆ. ಅಣ್ಣಪ್ಪ ಪಂಜುರ್ಲಿ ಹಾಗೂ ಗುಳಿಗ ದೈವದ ಅಪ್ಪಣೆ ಸಿಕ್ಕಿದ್ದು ಅಖಾಡಕ್ಕಿಳಿಯೋದಕ್ಕೆ ಕಾಂತಾರ ಟೀಮ್ ಹೊಸ ಹುಮ್ಮಸ್ಸು, ಹುರುಪಿನಲ್ಲಿ ರೆಡಿಯಾಗಿದೆ. 14ನೇ ಶತಮಾನದ ಕಾಲಘಟ್ಟದಲ್ಲಿ ನಡೆಯೋ ಕಥೆ ಎಂದು ಹೇಳಲಾಗ್ತಿದ್ದು, ಡಿವೈನ್ ಸ್ಟಾರ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ.

ಹೌದು, ಕಾಂತಾರ ಮೊದಲ ಭಾಗದಲ್ಲಿ ಶೆಟ್ರು ಡಬಲ್ ರೋಲ್ ಪ್ಲೇ ಮಾಡಿದ್ದರು. ಕಾಡುಬೆಟ್ಟು ಶಿವಪ್ಪನಾಗಿ ಹಾಗೂ ಶಿವಪ್ಪನ ತಂದೆಯಾಗಿ ಕಮಾಲ್ ಮಾಡಿದ್ದರು. ಈಗ `ಕಾಂತಾರ’ ಪಾರ್ಟ್2 ಪ್ರೀಕ್ವೆಲ್ ಕಥೆಯಾಗಿರುವುದರಿಂದ ಕುತೂಹಲ ಹೆಚ್ಚಿದೆ. ಕೋಲ ಕಟ್ಟಿಕೊಂಡು ಕಾಡೊಳಗೆ ಕಾಣೆಯಾದ ತಂದೆಯ ಪಾತ್ರಕ್ಕೆ ಸ್ವತಃ ರಿಷಬ್ ಅವರೇ ಜೀವ ತುಂಬುತ್ತಾರಾ ಅಥವಾ ಬೇರೆ ಕಲಾವಿದರನ್ನ ಕರೆತರುತ್ತಾರಾ? ಹೀಗೊಂದು ಪ್ರಶ್ನೆ ಎದ್ದಿದೆ. ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ನವೀನ್ ಡಿ ಪಡೀಲ್, ದೀಪಕ್ ರೈ ಪಾಣಾಜೆ, ಮಾನಸಿ ಸುಧೀರ್, ಪ್ರಕಾಶ್ ತುಮ್ಮಿನಾಡು ಮುಂತಾದವರು ನಟಿಸಿದ್ದರು. ಇದೀಗ ಪಾರ್ಟ್ 2ರಲ್ಲಿ ಇವರಲ್ಲಿ ಯಾರೆಲ್ಲ ಇರಲಿದ್ದಾರೆ? ಯಾರೆಲ್ಲ ಹೊಸದಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಇದೆ. ಸುಮಾರು 125ಕೋಟಿ ಬಜೆಟ್ನಲ್ಲಿ ಪಾರ್ಟ್-2 ತಯ್ಯಾರಾಗಲಿದೆಯಂತೆ. ನನ್ನ ಮೊದಲ ಆದ್ಯತೆ ಕನ್ನಡ ಸಿನಿಮಾ ಮತ್ತು ಕನ್ನಡಿಗರೆಂದು `ಕಾಂತಾರ-2′ ಗೆ ಕೈ ಹಾಕಿರುವ ರಿಷಬ್, ದೈವ ಹಾಗೂ ದೈವರಾಧಕರ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸರಿಯಾದ ಉತ್ತರ ನೀಡಲಿಕ್ಕೆ ಸಜ್ಜಾಗಿದ್ದಾರಂತೆ. ಪಂಜುರ್ಲಿ ಹಾಗೂ ಗುಳಿಗ ದೈವದ ಮೂಲ ಮತ್ತು ದೈವಾರಾಧಕರ ಮಹತ್ವವನ್ನು `ಕಾಂತಾರ’ ಪ್ರೀಕ್ವೆಲ್ ಮೂಲಕ ಬೆಳ್ಳಿತೆರೆ ಮೇಲೆ ಕಟ್ಟಿಕೊಡಲು ಹೊರಟಿದ್ದಾರಂತೆ.





