ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಹೇಗೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಎಂಬ ಅಸ್ತ್ರವನ್ನು ಉಪಯೋಗಿಸಿಕೊಂಡು ಅದರಿಂದ ಹೇಗೆ ಪಾರಾಗಬಹುದು ಎಂಬುದನ್ನು ನಾಗರಾಜ್ ಎಂ. ಜಿ. ಗೌಡ ಅವರು ‘ಕಾನೂನು ಅಸ್ತ್ರ’ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ‘ಪುಟ್ಟೇಗೌಡ. ಎನ್. ಪ್ರೊಡಕ್ಷನ್’ ಅಡಿಯಲ್ಲಿ ಪುಟ್ಟೇಗೌಡ ಎನ್. ಅವರೇ ಕಥೆ, ಸಂಭಾಷಣೆ ಬರೆದು ಚಿತ್ರನಿರ್ಮಾಣ ಮಾಡುವ ಜೊತೆಗೆ ಚಿತ್ರದ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಯಿತು. ನಟಿ ಅಪೂರ್ವಾ ಮುಖ್ಯ ಅತಿಥಿಯಾಗಿ ಆಗಮಿಸಿ ಆಡಿಯೋ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಜನರು ವಾಹನ ಸಾಲ ಪಡೆದು, ಕಂತು ಕಟ್ಟಲು ಸ್ವಲ್ಪ ತಡವಾದರೂ ಅವರ ಮೇಲೆ ಸೀಜಿಂಗ್ ನವರು ನಡೆಸುವ ದೌರ್ಜನ್ಯ, ಗೃಹ ಸಾಲ ಪಡೆದವರ ಮೇಲೆ ಬ್ಯಾಂಕ್ ಗಳು ಬೇಕಾಬಿಟ್ಟಿ ಬಡ್ಡಿ ವಿಧಿಸುವಿಕೆ, ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳು, ಗಂಡ ಹೆಂಡತಿ ಡೈವೊರ್ಸ್ ಗೆ ಕಾರಣಗಳು, ನಿರಪರಾಧಿಯ ಮೇಲೆ ಕೊಲೆ ಅಪರಾಧ ಬಂದಾಗ ಕಾನೂನು ಅಂತಹವರನ್ನು ಹೇಗೆ ಸಂರಕ್ಷಿಸುತ್ತದೆ ಎಂಬುದನ್ನು ಈ ಸಿನಿಮಾ ಹೇಳಲಿದೆ. ಕಾನೂನಿನಲ್ಲಿ ಶ್ರೀಮಂತ, ಬಡವ ಎನ್ನುವ ಬೇಧಭಾವ ಇರುವುದಿಲ್ಲ. ಸಮಾಜದಲ್ಲಿ ನಡೆಯುವ ಅನ್ಯಾಯಗಳಿಂದ ಪಾರಾಗುವುದಕ್ಕೆ ಇರೋದು ಒಂದೇ ಆಯುಧ ಎಂದರೆ ಅದು ’ಕಾನೂನು ಅಸ್ತ್ರ’ ಎಂಬುದು ಚಿತ್ರತಂಡದ ಮಾತು.
ಸಕಲೇಶಪುರ, ಚಿಕ್ಕಮಗಳೂರು, ಬೆಂಗಳೂರು, ಕುಶಾಲನಗರ, ಮಡಕೇರಿ ಹಾಗೂ ಹೊರದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಪುಟ್ಟೇಗೌಡ. ಎನ್, ಜಗದೀಶ್. ಹೆಚ್. ಜಿ. ದೊಡ್ಡಿ,
ಬಂಡೆಬಾಬು, ಲಕ್ಷ್ಮಿನಾರಾಯಣ್, ಸೌಮ್ಯರಾಜ್, ಯೋಗೇಶ್ ಶೆಟ್ಟಿ, ಬೇಬಿ ಸಾನ್ವಿ ಗೌಡ, ಯೋಗೇಶ್, ಅಂಜನ್, ಚಂದನ, ಸೌಂದರ್ಯ, ಗಿರೀಶ್, ಮಂಜುನಾಥ್ ಹಿರಿಯೂರು, ಸೌಮ್ಯ ರಾಜ್, ಆನಂದ್, ಮಾನ್ಯ ಗೌಡ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ನವೆಂಬರ್ ವೇಳೆಗೆ ‘ಕಾನೂನು ಅಸ್ತ್ರ’ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.





