ಭಾಸ್ಕರ್ ನಾಯ್ಕ್ ಬರೆದು ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ ‘ಕುದ್ರು’ ಸಿನಿಮಾ ಇದೇ ಅಕ್ಟೊಬರ್ 13 ರಂದು ಬಿಡುಗಡೆಯಾಗುತ್ತಿದೆ.‘ಕುದ್ರು’ ಎಂದರೆ ನೀರಿನಿಂದ ಸುತ್ತುವರೆದ ದ್ವೀಪ ಎಂಬ ಅರ್ಥವಿದೆ. ಕರಾವಳಿ ಭಾಗದಲ್ಲಿ ಅನೇಕ ‘ಕುದ್ರು’ಗಳಿವೆ. ಇಂಥದ್ದೇ ಒಂದು ‘ಕುದ್ರು’ವಿನಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಅದು ಮುಂದೇನಾಗುತ್ತದೆ ಎಂಬುದೇ ‘ಕುದ್ರು’ ಸಿನಿಮಾದ ಕಥಾಹಂದರ ಎನ್ನುತ್ತದೆ ಚಿತ್ರತಂಡ.
ಸಿನಿಮಾದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕಥೆ ತಿರುವುಗಳನ್ನು ಪಡೆದುಕೊಂಡು ದುಬೈವರೆಗೂ ಸಾಗುತ್ತದೆ. ಪ್ರತಿಯೊಬ್ಬರಿಗೂ ಕುತೂಹಲ ಮೂಡಿಸುವ ಕಥಾಹಂದರವಿದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಎಂಬುದು ‘ಕುದ್ರು’ ಸಿನಿಮಾದ ನಿರ್ಮಾಪಕ ಕಂ ನಿರ್ದೇಶಕ ಭಾಸ್ಕರ್ ನಾಯ್ಕ್ ಮಾತು. ‘ಕುದ್ರು’ ಸಿನಿಮಾವನ್ನು ಕುಂದಾಪುರ, ಉಡುಪಿ, ಗೋವಾ ಹಾಗೂ ಸೌದಿ ಅರೇಬಿಯಾ (ರಿಗ್)ದಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ಕುದ್ರು’ಚಿತ್ರದಲ್ಲಿ ಹರ್ಷಿತ್ ಶೆಟ್ಟಿ, ಗಾಡ್ವಿನ್, ಪ್ರಿಯಾ ಹೆಗ್ಡೆ, ಡೈನ ಡಿಸೋಜ, ಫರ್ಹಾನ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟೀಸರ್ ಜನಪ್ರಿಯವಾಗಿದೆ ಹಾಗೆಯೇ ಸಿನಿಮಾ ಕೂಡ ನೋಡುಗರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.





