ನಟ ಅಜಯ್ ರಾಜ್, ಐಶ್ವರ್ಯಾ ರಂಗರಾಜನ್ ಪ್ರಮೋದ್ ಶೆಟ್ಟಿ, ರಜಿನಿ, ಅಮಿತ್, ಸೂರ್ಯ ಸಿದ್ದಾರ್ಥ್, ಶಮಾ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ‘ಮನ್ ರೇ’ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಕನ್ನಡ ಕಿರುತೆರೆ ಮತ್ತು ಸಂಗೀತ ಲೋಕದಲ್ಲಿ ನಟಿಯಾಗಿ, ಗಾಯಕಿಯಾಗಿ ಗುರುತಿಸಿಕೊಂಡಿದ್ದ ಐಶ್ವರ್ಯಾ ರಂಗರಾಜನ್ ಈಗ ‘ಮನ್ ರೇ’ ಎಂಬ ಸಿನಿಮಾದ ಮೂಲಕ ನಾಯಕ ನಟಿಯಾಗಿ ಹಿರಿತೆರೆಗೆ ಎಂಟ್ರಿಯಾಗುತ್ತಿದ್ದಾರೆ.
ಮನಸ್ಸಿನ ಎಕ್ಸ್ ರೇ ಎಂಬುದನ್ನು ಕ್ಯಾಚಿಯಾಗಿ ‘ಮನ್ ರೇ’ ಎಂದು ಟೈಟಲ್ ಆಗಿ ಸಿನಿಮಾಕ್ಕೆೆ ಇಡಲಾಗಿದೆ. ಭ್ರಮಲೋಕದಲ್ಲಿ ಬದುಕುವ ಹುಡುಗನೊಬ್ಬನ ಜೊತೆ ವಾಸ್ತವದಲ್ಲಿರುವವರು ಏನೇನು ಸಮಸ್ಯೆೆ ಎದುರಿಸುತ್ತಾನೆ ಎಂಬುದರ ಸುತ್ತ ‘ಮನ್ ರೇ’ ಸಿನಿಮಾದ ಕಥೆ ನಡೆಯುತ್ತದೆ. ಇದೊಂದು ಸಂಪೂರ್ಣ ಸೈನ್ಸ್ ಫಿಕ್ಷನ್ ಸಿನಿಮಾ. ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂಬುದು ಚಿತ್ರತಂಡದ ಮಾಹಿತಿ.
ಈಗಾಗಲೇ ‘ಸೇನಾಪುರ’ ಎಂಬ ಸಿನಿಮಾವನ್ನು ನಿರ್ದೇಶಿಸಿರುವ ಗುರು ಸಾವನ್ ‘ಮನ್ ರೇ’ ಸಿನಿಮಾಕ್ಕೆೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಭೂಮಿಕಾ ಕ್ರಿಯೇಶನ್ಸ್’ ಬ್ಯಾನರಿನಲ್ಲಿ ರಾಜಣ್ಣ, ತಿಲಕ್ ರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ‘ಮನ್ ರೇ’ ಸಿನಿಮಾದ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ನವೆಂಬರ್ ತಿಂಗಳಿನಿಂದ ‘ಮನ್ ರೇ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ‘ಮನ್ ರೇ’ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ಏಪ್ರಿಲ್ – ಮೇ ವೇಳೆಗೆ ‘ಮನ್ ರೇ’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಿದೆ ಎಂದಿದೆ ಚಿತ್ರತಂಡ.





