ದೊಡ್ಮನೆ ಹೀರೋ, ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾಗೆ ನಾಯಕಿಯ ಆಯ್ಕೆಯಾಗಿದೆ. ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕರುನಾಡಿನ ಮನೆಮನ ತಲುಪಿದ ನಟಿ ಅನು ಸಿರಿಮನೆ ಉರುಫ್ ಮೇಘಾ ಶೆಟ್ಟಿ ಹೀರೋಯಿನ್ನಾಗಿ ಸೆಲೆಕ್ಟ್ ಆಗಿದ್ದಾರೆ. ರಾಯಲ್ ಸ್ಟಾರ್ ವಿನಯ್ ಗೆ ಜೋಡಿಯಾಗಿ ಗ್ರಾಮಾಯಣದ ಥೇರು ಎಳೆಯಲಿದ್ದಾರೆ.

ಅಂದ್ಹಾಗೇ, ಗ್ರಾಮಾಯಣ ಚಿತ್ರ ಇತ್ತೀಚೆಗಷ್ಟೇ ಗ್ರ್ಯಾಂಡ್ ಆಗಿ ಸೆಟ್ಟೇರಿತ್ತು. ಬಂಡೆ ಮಹಾಂಕಾಳಿ ಸನ್ನಿಧಿಯಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಈ ವೇಳೆ ಸ್ಯಾಂಡಲ್ ವುಡ್ ನ ಹಲವು ನಟ ನಟಿಯರು ಭಾಗಿಯಾಗಿ ವಿನಯ್ ಗೆ ಶುಭಕೋರಿದ್ದರು. ಕೈವಾ ಹಾಗೂ ಆಪರೇಷನ್ ಲಂಡನ್ ಕೆಫೆ ಜೊತೆಗೆ ಗ್ರಾಮಯಣಕ್ಕೆ ಆನ್ ಬೋರ್ಡ್ ಆಗಿರುವ ದಿಲ್ ಪಸಂದ್ ಚೆಲುವೆ ದಿಲ್ ಖುಷ್ ಆಗಿದ್ದಾರೆ.
“ಗ್ರಾಮಾಯಣ” ಇದು ಗ್ರಾಮದಲ್ಲೇ ನಡೆಯುವ ಕಥೆ. ದೇವನೂರು ಚಂದ್ರು ನಿರ್ದೇಶನ ಮಾಡ್ತಿದ್ದಾರೆ. ಈವರೆಗೂ ನೋಡಿರದ ಅವತಾರದಲ್ಲಿ ವಿನಯ್ ರಾಜಕುಮಾರ್ ಅವರನ್ನು ತೋರಿಸಲು ಹೊರಟಿದ್ದಾರೆ. ಒಂದು ಸರಳ ಪ್ರೇಮಕಥೆ ಹಾಗೂ ಪೆಪೆ ಜೊತೆ ಗ್ರಾಮಾಯಣ ಚಿತ್ರದಲ್ಲೂ ವಿನಯ್ ತೊಡಗಿಸಿಕೊಳ್ತಿದ್ದಾರೆ. ಗೆದ್ದು ಬೀಗಲು, ಯಶಸ್ಸಿನ ಚುಕ್ಕಾಣಿ ಹಿಡಿಯಲು ರಾಯಲ್ ಸ್ಟಾರ್ ವಿನಯ್ ಹರಸಾಹಸ ಪಡ್ತಿದ್ದಾರೆ.

ಇನ್ನೂ ಈ ಚಿತ್ರಕ್ಕೆ ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಇಬ್ಬರು ಕೂಡಿ ಬಂಡವಾಳ ಸುರಿಯುತ್ತಿದ್ದು, ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಪ್ಲ್ಯಾನ್ ಆಗಿದೆ. ಇದೇ ಅಕ್ಟೋಬರ್ 04 ರಿಂದ ಕಡೂರ್ ನಿಂದ ಶೂಟಿಂಗ್ ಶುರುವಾಗ್ತಿದೆ. ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.





