ನಟ ಪ್ರಜ್ವಲ್ ದೇವರಾಜ್ ಅಭಿನಯದ ಒಂದಷ್ಟು ಸಿನಿಮಾಗಳು ಈಗ ಬಿಡುಗಡೆಗೆ ತಯಾರಾಗುತ್ತಿವೆ. ಇದರ ಬೆನ್ನಲ್ಲೇ ಪ್ರಜ್ವಲ್ ದೇವರಾಜ್ ಕೂಡ ಸದ್ದಿಲ್ಲದೆ ಒಂದಷ್ಟು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಸದ್ಯ ಪ್ರಜ್ವಲ್ ದೇವರಾಜ್ ಒಪ್ಪಿಕೊಂಡಿರುವ ಅಂಥದ್ದೇ ಒಂದು ಸಿನಿಮಾ ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಕಂಬಳದ ಕುರಿತಾಗಿದ್ದು.
ಹೌದು, ಕರ್ನಾಟಕದ ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಕಂಬಳ ಕುರಿತಾದ ಕಥಾಹಂದರ ಹೊಂದಿರುವ ಹೊಸ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಡೀ ಸಿನಿಮಾದ ಮೂಲ ಕಥೆ ಕಂಬಳದ ಸುತ್ತವೇ ಸಾಗಲಿದ್ದು, ಕಂಬಳದ ಹಿಂದಿನ ತಯಾರಿ, ಕೋಣಗಳ ಆರೈಕೆ ಜೊತೆಗೆ ಮತ್ತೊಂದು ಸಸ್ಪೆೆನ್ಸ್ ಕಥೆ ಕೂಡಾ ಸಿನಿಮಾದಲ್ಲಿ ತೆರೆದುಕೊಳ್ಳುತ್ತದೆಯಂತೆ.

ಈ ಹಿಂದೆ ರೆಬಲ್‌ಸ್ಟಾರ್ ಅಂಬರೀಶ್ ಅಭಿನಯದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾವನ್ನು ನಿರ್ದೇಶನ ಮಾಡಿರುವ ಗುರುದತ್ ಗಾಣಿಗ ಈಗ ಪ್ರಜ್ವಲ್ ಅಭಿನಯದ ಈ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿದ್ದು, ‘ವಿಕೆ ಫಿಲಂಸ್’ ಹಾಗೂ ‘ಗುರುದತ್ ಗಾಣಿಗ ಪ್ರೊಡಕ್ಷನ್ಸ್’ ಬ್ಯಾನರಿನಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಮುಂಬರುವ ಹೊಸವರ್ಷದ ಜನವರಿ ತಿಂಗಳಿನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂಬುದು ಚಿತ್ರತಂಡದ ಮಾಹಿತಿ.





