ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

psychological effects of covid 19: ಕೊರೋನಾ ಕಾಲದ ಭೀಕರ ಪರಿಣಾಮ!

Majja Webdeskby Majja Webdesk
21/03/2025
in Lifestyle, Majja Special
Reading Time: 1 min read
psychological effects of covid 19: ಕೊರೋನಾ ಕಾಲದ ಭೀಕರ ಪರಿಣಾಮ!

-ಕನಸಿಗೂ ಹೆದರಿದ್ದರು ವಿಶ್ವದ ಜನತೆ!

-ಗೃಹಬಂಧನ ಎಂತೆಂಥಾ ಕಾಯುಲೆಗೆ ದೂಡಿತ್ತು ಗೊತ್ತಾ? 

 

ಏಕಾಏಕಿ ಬಂದೆರಗಿದ್ದ ಕೊರೋನಾ ವೈರಸ್ಸಿನ ಆಘಾತದಿಂದ ಈ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ಇಡೀ ವಿಶ್ವದ ಯಾವ ಭೂಭಾಗಗಳತ್ತ ಕಣ್ಣು ಹಾಯಿಸಿದರೂ ಕೂಡಾ ಅಲ್ಲೆಲ್ಲ ಕೊರೋನಾ ಮಾಡಿ ಹೋದ ಚಿತ್ರ ವಿಚಿತ್ರವಾದ ಗಾಯದ ಗುರುತುಗಳು ಸ್ಪಷ್ಟವಾಗಿಯೇ ಕಾಣಿಸುತ್ತವೆ. ಅದೇನೂ ಸಾಮಾನ್ಯದ ಸಂಕಟದ ಪರ್ವವಲ್ಲ. ಒಂದೇ ಒಂದು ದಿನ ಮುಷ್ಕರ, ಬಂದ್ ನಂಥಾದ್ದು ನಡೆದರೆ ನಾಲಕೈದು ಗಂಟೆ ಮನೆಯೊಳಗಿರೋದೇ ಕಷ್ಟವಾಗೋದಿದೆ. ಅಂಥಾದ್ದರಲ್ಲಿ ತಿಂಗಳುಗಟ್ಟಲೆ ನಿರಂತರವಾಗಿ ಮನೆಯೊಳಗೆ ಇಡೀ ಜಗತ್ತು ಬಂಧಿಯಾಗುತ್ತದೆಂಬುದನ್ನು ಯಾರೆಂದರೆ ಯಾರೂ ಯೋಚಿಸಿರಲು ಸಾಧ್ಯವಿಲ್ಲ. ಇಂಥಾ ಲಾಕ್ ಡೌನಿನಿಂದಾಗಿ ಅನೇಕಾನೇಕ ಸಮಸ್ಯೆಗಳಾಗಿದ್ದಾವೆ. ಆದರೆ, ಇದರಿಂದ ಆರ್ಥಿಕವಾಗಿ ಬಿದ್ದ ಹೊಡೆತಗಳ ಸುತ್ತ ಮಾತ್ರವೇ ಚರ್ಚೆಗಳು ನಡೆಯುತ್ತವೆ. ಆದರೆ ಈ ಮನುಕುಲಕ್ಕೆ ಕೊರೋನಾ ವೈರಸ್ಸು ಮತ್ತು ಅದರಿಂದ ಸೃಷ್ಟಿಯಾದ ಲಾಕ್ ಡೌನ್ ಕೊಟ್ಟ ಮಾನಸಿಕ ಆಘಾತವಿದೆಯಲ್ಲಾ? ಅದನ್ನು ಒಂದೇ ಸಲಕ್ಕೆ ಹರವಿಡೋದು ಕಡುಗಷ್ಟದ ವಿಚಾರ!

ತೀರಾ ಹತ್ತಿರದ ಜೀವಗಳನ್ನೇ ಅದೆಷ್ಟೋ ಲಕ್ಷ ಮಂದಿ ಕಳೆದುಕೊಂಡಿದ್ದಾರೆ. ಎಂಥಾ ಸಂದರ್ಭದಲ್ಲೂ ಜೊತೆಗಿರುವ ಜೀವಗಳೇ ಮರೆಯಾದಾಗ, ಒಂದು ಮನೆಯಲ್ಲಿ ಬಂಧಿಯಾಗಿ ತಬ್ಬಲಿತನ ಅನುಭವಿಸುವ ಶಿಕ್ಷೆ ಯಾರಿಗೂ ಬೇಡ. ಅಂಥಾ ಯಾತನೆಯ ನಡುವಲ್ಲಿಯೇ ನಾನಾ ಚಟಗಳೂ ಸೇರಿದಂತೆ ಹಲವಾರು ಬಗೆಯಲ್ಲಿ ಮಾನಸಿಕ ವ್ಯಾಧಿಗಳು ಮನುಕುಲವನ್ನು ಅಕ್ಷರಶಃ ಸುಟ್ಟಿವೆ. ಇಡೀ ಜಗತ್ತು ಕೊರೋನಾ ವೈರಸ್ಸು ತೊಲಗಿದರೆ ಸಾಕೆಂದು ಬಯಸುವಾಗಲೇ ಲಾಕ್ ಡೌನ್ ಭೂಮಿಕೆಯಲ್ಲಿ ಚಿತ್ರ ವಿಚಿತ್ರವಾದ ಒಂದಷ್ಟು ಘಟನಾವಳಿಗಳು ನಡೆದು ಬಿಟ್ಟಿವೆ. ಒಂಟಿತನ, ಬದುಕು ಹಳಿ ತಪ್ಪಿದ ಆಘಾತ ಸಾಮಾನ್ಯವಾಗಿ ಮನುಷ್ಯರನ್ನು ವಿಚಿತ್ರ ಮಾನಸಿಕ ಸ್ಥಿತಿಗೆ ಇಳಿಸಿ ಬಿಡೋದಿದೆ. ಇಂಥಾ ಮಾನಸಿಕ ಪಲ್ಲಟಗಳಿಂದಾಗಿಯೇ ಭಾರತವೂ ಸೇರಿದಂತೆ ಇಡೀ ಜಗತ್ತನ್ನ ನಾನಾ ಸಂಕಷ್ಟಗಳು ಕಾಡಿವೆ. ಬೇರೆಲ್ಲ ಹಾಗಿರಲಿ; ಕನಸೂ ಕೂಡಾ ಕೊರೋನಾ ಕಾಲದಲ್ಲಿ ಅನೇಕರನ್ನು ಬೆಚ್ಚಿ ಬೀಳಿಸಿದೆ ಎಂದರೆ ನಿಮಗೆಲ್ಲ ಅಚ್ಚರಿಯಾದೀತೇನೋ…

ಕಂಗಾಲಾಗಿಸಿತ್ತು ಕನಸು!


ಸದಾ ಒಂದು ಹರಿವಿನಂಥಾ ಸ್ಥಿತಿ ಜಾರಿಯಲ್ಲಿಲ್ಲದೇ ಹೋದರೆ ಮನಷ್ಯರ ಮನಸು ನಾನಾ ಕಾಯಿಲೆ, ಮಾನಸಿಕ ತಲ್ಲಣಗಳ ಕೊಂಪೆಯಂತಾಗಿ ಬಿಡುತ್ತದೆ. ಸದಾ ಒಂದಷ್ಟು ಜನರೊಂದಿಗೆ ಬೆರೆಯುತ್ತಾ, ಅಡ್ಡಾಡುತ್ತಿರುವವರಿಗೆ ಗೃಹಬಂಧನ ವಿಧಿಸಿದರಂತೂ ಮಾನಸಿಕ ಸ್ಥಿತಿ ಸ್ಥಿಮಿತ ಕಳೆದುಕೊಂಡು ಬಿಡುತ್ತದೆ. ಹಾಗಾದರೆ ಕೊರೋನಾ ವೈರಸ್ ಬಾಧೆಯಿಂದ ಲಾಕ್ಡೌನ್ ಘೋಷಣೆಯಾದ ಬಳಿಕ ಜನ ತಿಂಗಳಿಂದೀಚೆಗೆ ಮನೆಯೊಳಗೇ ಬಂಧಿಯಾಗಿದ್ದಾರಲ್ಲಾ? ಈ ಸಂದರ್ಭದಲ್ಲಿ ಕೊರೋನಾಗಿಂತಲೂ ಭೀಕರವಾಗಿ ಜನರನ್ನು ಮಾನಸಿಕ ತೊಳಲಾಟಗಳು ಕಾಡೋದಿಲ್ಲವೇ. ಮಾನಸಿಕವಾಗಿ ಜನ ಅದ್ಯಾವ್ಯಾವ ರೀತಿಯಲ್ಲಿ ಬೇಯುತ್ತಿದ್ದಾರೆಂಬುದೆಲ್ಲ ಕೊರೋನಾ ಕಾಲದ ಅಧ್ಯಯನ ಯೋಗ್ಯ ಅಂಶಗಳೇ!
ಕೊರೋನಾ ಅಂದರೊಂದು ವೈರಸ್. ಆದರದು ದೈಹಿಕವಾಗಿ ತಮ್ಮೊಳಗೆ ಸೇರಿ ಬಲಿ ಪಡೆಯುವ ಭಯವೇ ಅನೇಕರನ್ನು ನಾನಾ ಥರದಲ್ಲಿ ಮಾನಸಿಕವಾಗಿಯೂ ಹೈರಾಣು ಮಾಡಿ ಹಾಕುತ್ತಿದೆ. ಅದರಲ್ಲಿಯೂ ಇಂಥಾ ಭಯವೆಂಬುದು ಕನಸಿನ ರೂಪದಲ್ಲಿ ಹಲವರನ್ನು ಕಾಡುತ್ತಿದೆ ಅನ್ನೋದು ನಿಜಕ್ಕೂ ಇಂಟರೆಸ್ಟಿಂಗ್ ಸಂಗತಿ. ಕೆಲ ಮಂದಿಗಂತೂ ಕೊರೋನಾ ಭಯ ಗಾಢ ನಿದ್ದೆಯಿಂದೆದ್ದು ಬೆವರಾಡುವ ರೀತಿಯಲ್ಲಿ ಕಾಡುತ್ತಿದೆ. ಬಹುಶಃ ಒಂದಷ್ಟು ಮಂದಿ ಇಂಥಾ ಚಿತ್ರವಿಚಿತ್ರ ಅನುಭವಗಳನ್ನು ಮನಸಲ್ಲೇ ಇಟ್ಟುಕೊಂಡು ಮತ್ತಷ್ಟು ಕಳವಳಕ್ಕೀಡಾಗಿರಲೂ ಬಹುದು. ತುಂಬಾನೇ ಕಷ್ಟವಾದರೂ ಅವುಡುಗಚ್ಚಿಕೊಂಡು ಮೆನೆಯೊಳಗೇ ಬಂಧಿಯಾಗಿರೋ ಅನೇಕರು ಕನಸಲ್ಲೇ ಲಾಕ್ಡೌನ್ ಮುರಿದು ಮುದುರಿ ಮಲಗಿದ್ದಲ್ಲೇ ಬೆಚ್ಚಿ ಬೀಳುತ್ತಿದ್ದಾರೆ!

ಭಯದ ಕೂಸು!


ಲಾಕ್ಡೌನ್ ಆರಂಭವಾದ ಶುರುವಾತಿನಲ್ಲಿ ದೇಶದ ಜನರೆಲ್ಲ ಅದನ್ನು ತೀರಾ ಲೈಟಾಗಿ ತೆಗೆದುಕೊಂಡಿದ್ದರು. ಆದ್ದರಿಂದಲೇ ಪದೇ ಪದೆ ಜನರ ಕಡೆಯಿಂದ ರೂಲ್ಸ್ ಬ್ರೇಕಾಗುತ್ತಾ ಸಾಗಿತ್ತು. ಹೀಗೇ ಬಿಟ್ಟರೆ ಕೊರೋನಾ ಪ್ರತೀ ಮನೆಗಳಲ್ಲಿಯೂ ಕುಕ್ಕರು ಬಡಿಯೋದು ಗ್ಯಾರೆಂಟಿ ಎಂದರಿತ ಪೊಲೀಸರು ಬಿಗು ಕ್ರಮಗಳನ್ನು ಕೈಗೊಂಡು ರುಬ್ಬಲಾರಂಭಿಸಿದರು ನೋಡಿ? ಜನಸಾಮಾನ್ಯರಿಗೆ ಕೊರೋನಾ ಜೊತೆಗೆ ಕಾನೂನು ಕ್ರಮಗಳ ಭಯವೂ ಕಾಡಲಾರಂಭಿಸಿತ್ತು. ಆದ್ದರಿಂದಲೇ ಅನೇಕರಿಗೆ ತಾವು ಬಾರು ಪಬ್ಬುಗಳಿಗೆ ನುಗ್ಗಿ ಕಂಠಮಟ್ಟ ಎಣ್ಣೆ ಹೊಡೆದು ಕುಣಿದಾಡೋ ಕನಸು ಬೀಳಲಾರಂಭಿಸಿದೆಯಂತೆ. ಇನ್ನೇನು ಮದೋನ್ಮತ್ತ ಡ್ಯಾನ್ಸಿಗೆ ಪೊಲೀಸರ ಲಾಠಿಯೇಟಿನ ರಿಧಂ ಮೊಳಗಬೇಕೆಂಬಷ್ಟರಲ್ಲಿ ಹಠಾತ್ತನೆ ಎಚ್ಚರ… ಅಂಗಾಂಗಳನ್ನೂ ತೋಯಿಸಿದ ಬೆವರು!
ಇನ್ನೂ ಕೆಲ ಮಂದಿಯನ್ನು ಕೊರೋನಾ ವೈರಸ್ ಮತ್ತು ಗೃಹ ಬಂಧನದ ನೀರವ ಮತ್ತೊಂದಷ್ಟು ವೆರೈಟಿಯ ಭೀಕರ ಕನಸುಗಳಿಂದ ಬೆಚ್ಚಿ ಬೀಳಿಸುತ್ತಿದೆ. ಇದರಿಂದಾಗಿ ರಾತ್ರಿಗೂ ಹಗಲಿಗೂ ವ್ಯತ್ಯಾಸ ಮಾಸಲಾಗಿದೆ. ದಿನ, ಕ್ಷಣ, ವಾರ ಒಪ್ಪತ್ತುಗಳೆಲ್ಲ ಸಪಾಟಾಗಿ ಏಕೀಭವಿಸಿದಂಥಾ ಅಯೋಮಯ ಮನೋ ವ್ಯಾಧಿ ಬಹುತೇಕರನ್ನು ಕಾಡುತ್ತಿದೆ. ಇದೆಲ್ಲವೂ ಕೊರೋನಾ ಬಗೆಗಿನ ಜೀವ ಭಯವಾಗಿಯೂ ಕಾಡಲು ಶುರುವಿಟ್ಟಿದೆ. ಸಾಮಾನ್ಯವಾಗಿ ಕನಸೆಂಬುದು ಸುಪ್ತಮನಸಿನಿಂದಲೇ ಸುರುಳಿ ಬಿಚ್ಚಿಕೊಳ್ಳುವಂಥಾದ್ದು. ಕನಸು ನಿಜಕ್ಕೂ ಯಾಕೆ ಬೀಳುತ್ತದೆಂಬುದಕ್ಕೆ ವೈಜ್ಞಾನಿಕ ಕಾರಣಗಳಿರುವಂತೆಯೇ ಒಂದಷ್ಟು ಮೂಢ ನಂಬಿಕೆಗಳೂ ಇವೆ. ಆದರೆ ಸುಪ್ತ ಮನಸಿನ ಇಷಾರೆಯಂತೆಯೇ ಕನಸಿನ ರೀಲು ಬಿಚ್ಚಿಕೊಳ್ಳುತ್ತದೆಯೆಂಬುದು ವಾಸ್ತವಕ್ಕೆ ಹತ್ತಿರಾದ ವಿಚಾರ.
ಕೆಲವೊಮ್ಮೆ ಮನಸಿನಾಳದಲ್ಲಿ ಹತ್ತಿಕ್ಕಿಕೊಂಡ ಬಯಕೆಗಳು ಕನಸಿನ ಕ್ಯಾನ್ವಾಸಿನ ಮೇಲೆ ಮೂಡಿಕೊಳ್ಳುತ್ತವೆ. ಭಯವೆಂಬುದು ಅಸ್ಪಷ್ಟ ಭೀಕರ ಸ್ವರೂಪದ ಚಿತ್ರಗಳಾಗಿ ಕದಲುತ್ತಾ ಬೆಚ್ಚಿ ಬೀಳಿಸುತ್ತವೆ. ಕೊರೋನಾ ವಿಚಾರದಲ್ಲಿ ಕನಸುಗಳ ಹಂಗಾಮ ಶುರುವಾಗಿರೋದರ ಹಿಂದೆಯೂ ಅಂಥಾದ್ದೇ ಕಿಸುರಿರಬಹುದು. ಬಹುಶಃ ಬಹು ಕಾಲದಿಂದ ಎಣ್ಣೆಯಿಲ್ಲದೆ ಬೇಸತ್ತ ಕುಡುಕರಿಗೆ ಬಾರಿನ ಮುಂದೆ ನಿಂತು ಬ್ಯಾಕಿನಲ್ಲಿ ಬಾಸುಂಡೆಯೆದ್ದ ಕನಸಾಗಿರಬಹುದು. ಸಿಗರೇಟು ಚಟದವರಿಗೆ ಬೇಕರಿಯ ಮುಂದೆ ಹೊಗೆಯಾಡಿಸುತ್ತಿರುವಾಗ ಪೊಲೀಸರ ಲಾಠಿ ನಾಟ್ಯವಾಡಿದ ದೃಷ್ಯಗಳು ಕದಲಿರಬಹುದು. ದುರಂತವೆಂದರೆ ಅದೆಷ್ಟೋ ಕೋಟಿ ಜೀವಗಳಿಗೆ ತುತ್ತು ಅನ್ನದ ಕನಸು ಬಿದ್ದು ಸಣ್ಣ ಕರುಳಿನಾಳದಿಂದ ಹಸಿವೆಂಬುದು ಚುಚ್ಚಿ ಕೊಂದಂತಾಗಿರಬಹುದು…

ಗಾಂಜಾ ಮ್ಯಾಜಿಕ್ಕು


ಲಾಕ್ಡೌನಿಂದಾಗಿ ತಿಂಗಳುಗಟ್ಟಲೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯಿಂದ ಎಲ್ಲರೂ ಮಾನಸಿಕ ವಿಹ್ವಲತೆಗೀಡಾಗಿದ್ದಾರೆ. ಅನನಾಹಾರವೂ ಸೇರಿದಂತೆ ಈ ಕಾಲಾವಧಿಯಲ್ಲಿ ದೇಶಾದ್ಯಂತ ಸಾವಿರ ಸಮಸ್ಯೆಗಳು ಹೆಡೆಯೆತ್ತಿ ಬುಸುಗುಟ್ಟಿವೆ. ಮನೆಯೊಳಗಿರೋದೇ ಇಷ್ಟೊಂದು ಕಷ್ಟವಾದರೆ ಮನೆ ಮಠವಿಲ್ಲದ, ಒಪ್ಪತ್ತಿನ ಊಟಕ್ಕೂ ಕಷ್ಟವಾದವರ ಕಥೆ ಕರುಣಾಜನಕ. ಆದರೂ ಒಂದಷ್ಟು ತಾಯ್ತನದ ಮನಸುಗಳ ದೆಸೆಯಿಂದ ದಿಕ್ಕಿಲ್ಲದವರೂ ತುಸು ನಿರಾಳವಾದಂತಾಗಿದೆ. ಇದು ಲಾಕ್ಡೌನ್ನ ಒಂದು ಮಗ್ಗುಲಿನ ಕಥೆ. ಅದರ ಇನ್ನೊಂದು ಚಹರೆ ಮಾತ್ರ ಎಂಥವರೂ ಬೆಚ್ಚಿ ಬೀಳುವಂತಿದೆ!
ಅದು ಒಂಥರ ವಿಕ್ಷಿಪ್ತ ಮಗ್ಗುಲು. ಅದರ ಭಾಗವಾಗಿರೋ ಜನರ ಮುಂದೆ ಹೊತ್ತು ಹೊತ್ತಿಗೆ ಮೃಷ್ಟಾನ್ನ ಭೋಜನವಿಟ್ಟರೂ, ಟೈಂ ಪಾಸಿಗೆ ಏನೇನು ಬೇಕೋ ಅದೆಲ್ಲವನ್ನೂ ಪೂರೈಸಿದರೂ ತಣಿಯುವುದಿಲ್ಲ. ಹೊಟ್ಟೆ ತುಂಬಿಯಾದ ನಂತರವೂ ಒಂದು ಥರದ ಸಿಟ್ಟು, ಚಡಪಡಿಕೆಯಿಂದ ಕೊತಗುಡಲಾರಂಭಿಸುತ್ತಾರೆ. ಅದು ನಶೆಯ ರೂಟುಗಳು ಈ ಲಾಕ್ಡೌನಿಂದಾಗಿ ಮುಚ್ಚಿ ಹೋಗಿದ್ದರ ಪರಿಣಾಮ. ಲಾಕ್ಡೌನ್ ಆರಂಭವಾದ ಆರಂಭದಲ್ಲಿ ಎಣ್ಣೆ ಸಿಗದೆ ಒಂದಷ್ಟು ಮಂದಿ ನೇಣು ಹಾಕಿಕೊಂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಈ ಕ್ಷಣಕ್ಕೂ ಅಂಥಾ ಸಾವುಗಳು ಸಂಭವಿಸುತ್ತಲೇ ಇದ್ದಾವೆ. ಹೇಗಾದರೂ ಮಾಡಿ ಎಣ್ಣೆ ದಕ್ಕಿಸಿಕೊಳ್ಳುವ ಸಲುವಾಗಿ ನಾನಾ ಸಾಹಸಗಳೂ ನಡೆದಿವೆ. ಆದರೆ ಹೈದ್ರಾಬಾದಿನ ಇಬ್ಬರು ಹುಡುಗರ ಗಾಂಜಾಕ್ಕಾಗಿ ಮಾಡಿದ ಸಾಹಸವನ್ನು ಯಾರೆಂದರೆ ಯಾರೂ ಅಷ್ಟು ಸಲೀಸಾಗಿ ಮುರಿಯಲು ಸಾಧ್ಯವಿಲ್ಲ.

ಅದೆಂಥಾ ಸಾಹಸ?


ಹೈದ್ರಾಬಾದಿನ ಯಶ್ವಂತ್ ಕುಮಾರ್ ಮತ್ತು ಗಣೇಶ್ ಎಂಬ ಗಾಂಜ ಗಿರಾಕಿಗಳು ಇಂಥಾದ್ದೊಂದು ಸಾಹಸದ ರೂವಾರಿಗಳು. ಹಠಾತ್ತನೆ ಲಾಕ್ಡೌನ್ ಆಗಿದ್ದರಿಂದ ಇವರಿಬ್ಬರೂ ಕೂಡಾ ಗಾಂಜಾ ಸಿಗದೆ ಕಂಗಾಲಾಗಿದ್ದರು. ನಶೆಯ ಮೋಹವನ್ನು ಹತ್ತಿಕೊಳ್ಳಲಾರದೆ ಗಾಂಜಾ ಮೂಲಕ್ಕೇ ಕೈ ಹಾಕುವ ಉದ್ದೇಶದಿಂದ ಅವರಿಬ್ಬರೂ ಮಾಡಿದ್ದು ಅನಾಹುತಕಾರಿ ಸಾಹಸ. ಸೀದಾ ಬೈಕಲ್ಲಿಯೇ ಹೈದ್ರಾಬಾದಿನಿಂದ ಚತ್ತೀಸ್ಘಡದವರೆಗೂ ತೆರಳಿ ಭರ್ತಿ ಎರಡು ಕೆಜಿ ಗಾಂಜಾ ಪಡೆದು ಮತ್ತೆ ವಾಪಾಸಾಗಿದ್ದರು.
ತೀರಾ ಒಂದು ಜಿಲ್ಲೆಯಿಂದ ಮತ್ತೊಂದಕ್ಕೆ ತೆರಳೋದೇ ಈವತ್ತಿನ ಸ್ಥಿತಿಯಲ್ಲಿ ಹರಸಾಹಸ. ಅಂಥಾದ್ದರಲ್ಲಿ ಆರುನೂರು ಕಿಲೋಮೀಟರ್ಗೂ ಹೆಚ್ಚು ದೂರವನ್ನು ಈ ಯುವಕರು ಲೀಲಾಜಾಲವಾಗಿಯೇ ಕ್ರಮಿಸಿದ್ದರು. ಈ ಹಾದಿಯಲ್ಲಿ ನೂರಕ್ಕೂ ಹೆಚ್ಚು ಚೆಕ್ಪೋಸ್ಟ್ಗಳನ್ನು ಅಡ್ಡಹಾದಿಯ ಮೂಲಕ ತಪ್ಪಿಸಿಕೊಂಡು ಓಡಾಡಿದ್ದ ಈ ಯುವಕರು ರಾಚಕೊಂಡ ಸರಹದ್ದಿನ ಟೋಲ್ ಒಂದರಲ್ಲಿ ತಗುಲಿಕೊಂಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಲೇ ಈ ಯುವಕರಿಗೂ ಗಾಂಜಾ ಗ್ಯಾಂಗಿಗೂ ಇರುವ ನೇರಾನೇರ ಸಂಪರ್ಕವೂ ಜಾಹೀರಾಗಿದೆ. ಇನ್ನುಳಿದಂತೆ ಈ ಗಾಂಜಾ ಸಾಹಸಿ ಯಶ್ವಂತ್ ಕುಮಾರ್ ಪಳಗಿದ ಬೈಕ್ ಕಳ್ಳ ಎಂಬುದೂ ಗೊತ್ತಾಗಿದೆ. ಯಶ್ವಂತ್ ಗಣೇಶ್ ಜೊತೆ ಗಾಂಜಾಕ್ಕಾಗಿ ಓಡಾಡಿದ್ದೂ ಕೂಡಾ ಕದ್ದ ಬೈಕಿನ್ನಲ್ಲಿಯೇ ಎಂಬ ವಿಚಾರವನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.ಮುದ್ದಾದ

ನರಳಿ ಸತ್ತಿದ್ದ


ಬಹುಶಃ ಆಧುನಿಕ ಜಗತ್ತನ್ನು ಕಾಡಿದ ಮಹಾಮಾರಿಗಳಲ್ಲಿ ಕೊರೋನಾವನ್ನು ಮೀರಿಸುವಂಥಾದ್ದು ಯಾವುದೂ ಇರಲಿಕ್ಕಿಲ್ಲ. ತಂತಮ್ಮ ಜಗತ್ತಿನಲ್ಲಿ ಯಾವುದೇ ಗುರಿ, ಆಕಾಂಕ್ಷೆಗಳಿಗೆ ಕಟ್ಟುಬಿದ್ದು ಕಾಲದ ಜೊತೆ ರೇಸಿಗೆ ಬಿದ್ದಿದ್ದ ಅದೆಷ್ಟೋ ಮಂದಿ ಅನಾಥ ಹೆಣವಾಗಿದ್ದಾರೆ. ತೀರಾ ನಮ್ಮದೇ ರಾಜ್ಯದಲ್ಲಿ ಯಾರ?ಯಾರೋ ಎಲ್ಲೆಲ್ಲೋ ಸಿಲುಕಿಕೊಂಡು ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಹಾಗಿರುವಾಗ ಕೊರೋನಾ ರುದ್ರನರ್ತನ ವ್ಯಾಪಕವಾಗಿರುವ ಲಂಡನ್‌ನಂಥಾ ದೇಶಗಳಲ್ಲಿ ಸಿಲುಕಿದ ಪರದೇಶದವರ ಕಥೆ ಹ್ಯಾಗಿದ್ದೀತೆಂಬುದು ಯಾರಿಗಾದರೂ ಅರ್ಥವಾಗುವಂಥ ವಿಚಾರ. ಇದೀಗ ಹೇಳಹೊರಟಿರೋದೂ ಸಹ ಅಂಥಾದ್ದೇ ಕರುಣಾಜನಕ ಕಥೆಯೊಂದನ್ನು!
ಬೆಂಗಳೂರಿನ ಹೊರಮಾವು ನಿವಾಸಿಯಾದ ರಾಜೇಶ್ ಜಯಶೀಲನ್ ಎಂಬಾತ ಲಂಡನ್ನಿನಲ್ಲಿ ಕೊರೋನಾಗೆ ಬಲಿಯಾಗಿದ್ದಾರೆ ಅಂತೊಂದು ಸುದ್ದಿ ವಾರದ ಹಿಂದೆ ಕೇಳಿ ಬಂದಿತ್ತು. ಹೇಳಿಕೇಳಿ ಲಂಡನ್ ಕೊರೋನಾದ ಹಾಟ್‌ಸ್ಪಾಟಿನಂತಾಗಿದೆ. ಆ ದೇಶದ ಜನರಲ್ಲಿ ಬಹುಪಾಲು ಕೊರೋನಾ ವೈರಸ್ಸಿನ ರಣಕೇಕೆಯ ಮುಂದೆ ತರಗೆಲೆಗಳಂತೆ ಉದುರಿ ಬೀಳುತ್ತಿದ್ದಾರೆ. ಅಂಥಾ ದೇಶದಲ್ಲಿ ಜೀವನದ ಬಗ್ಗೆ ಅತೀವ ಕನಸು ಹೊತ್ತು ಊಬರ್ ಕ್ಯಾಬ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದವರು ರಾಜೇಶ್ ಜಯಶೀಲನ್.ವರ್ಷಾಂತರಗಳಿಂದಲೂ ಅಲ್ಲಿಯೇ ಅವುಡುಗಚ್ಚಿ ದುಡಿಯುತ್ತಾ ಇನ್ನೇನು ಬಯಸಿದ ಕ್ಷಣಗಳು ಹತ್ತಿರದಲ್ಲಿವೆ ಅನ್ನುವಾಗಲೇ ಅಲ್ಲಿ ನಡೆದದ್ದು ರೌರವ ದುರಂತ.

ಯಮ ಯಾತನೆ


ರಾಜೇಶ್ ಲಂಡನ್ನಿಗೆ ತೆರಳಿದ್ದೇ ಬದುಕಿಗೊಂದು ಭದ್ರ ನೆಲೆ ಕಂಡುಕೊಳ್ಳಬೇಕೆಂಬ ಉದ್ದೇಶದಿಂದ. ಆತನ ಹೆಂಡತಿ ಪುಟ್ಟವೆರಡು ಗಂಡು ಮಕ್ಕಳೊಂದಿಗೆ ಹೊರಮಾವು ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದರೆ, ಒಂದೊಳ್ಳೆ ಸೈಟು ಕೊಂಡು ಅದರಲ್ಲಿ ಸುಂದರ ಮನೆ ಕಟ್ಟಿಸಿ ಹೆಂಡತಿ ಮಕ್ಕಳೊಂದಿಗೆ ಬೆಚ್ಚಗಿರಬೇಕೆಂಬ ಕನಸು ರಾಜೇಶ್‌ರದ್ದಾಗಿತ್ತು. ಆಗಾಗ ಬಂದು ಹೋಗುತ್ತಾ ಲಂಡನ್‌ನಲ್ಲಿಯೇ ಬೀಡು ಬಿಟ್ಟಿದ್ದ, ಆ ದೇಶವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಾಜೇಶ್ ತೀರಾ ದಯನೀಯ ಸ್ಥಿತಿಯಲ್ಲಿ ಕೊರೋನಾ ವೈರಸ್‌ನಿಂದ ಪ್ರಾಣ ಬಿಟ್ಟಿದ್ದಾರೆ. ಹಾಗೆ ಕೊರೋನಾ ಬಾಧೆಯಿಂದ ಉಸಿರು ಚೆಲ್ಲುವ ಕ್ಷಣಗಳಲ್ಲಿ ಲಂಡನ್ ಎಂಬ ದೂರದ ದೇಶದಲ್ಲಿ ರಾಜೇಶ್ ಅನುಭವಿಸಿದ್ದ ಯಾತನೆ ಎಂಥವರ ಕಣ್ಣಾಲಿಗಳಲ್ಲಿಯೂ ನೀರೂಡಿಸುವಂತಿದೆ.
ಕೊರೋನಾ ವೈರಸ್ ರಣವೇಗದಿಂದ ವಿಶ್ವಕ್ಕೆಲ್ಲ ಹಬ್ಬುತ್ತಿದ್ದ ಘಳಿಗೆಯಲ್ಲಿಯೇ ರಾಜೇಶ್ ಬೆಂಗಳೂರಲ್ಲಿರೋ ತನ್ನ ಗೂಡು ಸೇರಬೇಕೆಂದು ಹಂಬಲಿಸಿದ್ದರು. ಆದರೆ ಆ ಹೊತ್ತಿಗಾಗಲೇ ಪರಿಸ್ಥಿತಿ ಬಿಗುವಾದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಅವರದ್ದು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ. ಆದ್ದರಿಂದಲೇ ಅವರನ್ನು ಕೊರೋನಾ ಬೇಗನೆ ಆವರಿಸಿಕೊಂಡಿತ್ತು. ಅವರು ಒಂದಷ್ಟು ಅನಾರೋಗ್ಯಕ್ಕೀಡಾಗುತ್ತಲೇ ಮತ್ತೊಂದು ಆಘಾತವೂ ಎದುರಾಗಿತ್ತು. ಅವರಿದ್ದ ಮನೆ ಮಾಲೀಕ ಏಕಾಏಕಿ ಮನೆಯಿಂದ ಹೊರ ದಬ್ಬಿ ಬೀಗ ಜಡಿದುಬಿಟ್ಟಿದ್ದ. ಆ ಗುರುತಿರದ ದೇಶದಲ್ಲಿ ಅಕ್ಷರಶಃ ಅನಾಥನಂತಾದ ರಾಜೇಶ್ ಪಾಲಿಗೆ ಆ ನಂತರದಲ್ಲಿ ಅದೆಷ್ಟೋ ದಿನ ತಾನು ಓಡಿಸುತ್ತಿದ್ದ ಕ್ಯಾಬೇ ಮನೆಯಂತಾಗಿ ಬಿಟ್ಟಿತ್ತು. ಆ ಹಂತದಲ್ಲಿ ನಾನಾ ಮಾನಸಿಕ ಹಿಂಸೆಗಳಿಂದ ಆತ ಸತ್ತೂ ಸತ್ತು ಬದುಕಿದ್ದರು.
ಕಡೆಗೂ ತೀವ್ರ ಅನಾರೋಗ್ಯಕ್ಕೀಡಾದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಶಕ್ತಿ ಮೀರಿ ಪ್ರಯತ್ನಿಸಿದರೂ ಏಪ್ರಿಲ್ ಹನ್ನೊಂದರಂದು ರಾಜೇಶ್ ಮರಣ ಹೊಂದಿದ್ದರು. ಇಲ್ಲೀಗ ಬೆಂಗಳೂರಿನ ಹೊರಮಾವಿನ ಬಾಡಿಗೆ ಮನೆಯಲ್ಲಿರೋ ರಾಜೇಶ್‌ರ ಮಡದಿ ಮತ್ತು ಮಕ್ಕಳು ದಿಕ್ಕಿಲ್ಲದಂತಾಗಿದ್ದಾರೆ. ಇದುವರೆಗೂ ಮನೆಗೆ ದಿಕ್ಕಾಗಿದ್ದ ಜೀವವೇ ಪರದೇಶದಲ್ಲಿ ಸ್ತಬ್ಧಗೊಂಡಿದೆ. ಈ ಮೂಲಕ ಹೆಂಡತಿ ಮತ್ತು ಮಕ್ಕಳ ಪಾಲಿಗೆ ಬದುಕಿನ ಭರವಸೆಯೇ ಆರಿ ಹೋದಂತಾಗಿದೆ. ಕೊರೋನಾ ಕೇಕೆಯ ನಡುವೆ ಇಂಥಾ ಅದೆಷ್ಟೋ ದಾರುಣ ಸಂಗತಿಗಳು ಘಟಿಸಿವೆ. ಈತನನ್ನು ಬಲಿ ಪಡೆದುಕೊಂಡಿದ್ದು ಕೊರೋನಾ ಅಂತ ಮೇಲು ನೋಟಕ್ಕನ್ನಿಸುತ್ತೆ. ಆದರೆ, ಆತ ಕೊರೋನಾಕ್ಕೆ ಬಲಿಯಾಗುವಂತೆ ಮಾಡಿರೋದು ಒಂಟಿತನ ಮತ್ತು ಅದರಿಂದ ಉದ್ಭವಿಸಿದ್ದ ತೊಳಲಾಟ ಅಂತ ಮಾನಸಿಕ ತಜ್ಞರೇ ಅಭಿಪ್ರಾಯ ಪಡುತ್ತಾರೆ.

Tags: #corionasadstory#coronavirus#lockdowneffecs

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
World Sparrow Day: ಸಣ್ಣ ದೇಹದ ಗುಬ್ಬಚ್ಚಿ ಮರೆಯಾಗಿರೋದು ದೊಡ್ಡ ಗಂಡಾಂತರದ ಮುನ್ಸೂಚನೆ!

World Sparrow Day: ಸಣ್ಣ ದೇಹದ ಗುಬ್ಬಚ್ಚಿ ಮರೆಯಾಗಿರೋದು ದೊಡ್ಡ ಗಂಡಾಂತರದ ಮುನ್ಸೂಚನೆ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.