-ಕನಸಿಗೂ ಹೆದರಿದ್ದರು ವಿಶ್ವದ ಜನತೆ!
-ಗೃಹಬಂಧನ ಎಂತೆಂಥಾ ಕಾಯುಲೆಗೆ ದೂಡಿತ್ತು ಗೊತ್ತಾ?
ಏಕಾಏಕಿ ಬಂದೆರಗಿದ್ದ ಕೊರೋನಾ ವೈರಸ್ಸಿನ ಆಘಾತದಿಂದ ಈ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ಇಡೀ ವಿಶ್ವದ ಯಾವ ಭೂಭಾಗಗಳತ್ತ ಕಣ್ಣು ಹಾಯಿಸಿದರೂ ಕೂಡಾ ಅಲ್ಲೆಲ್ಲ ಕೊರೋನಾ ಮಾಡಿ ಹೋದ ಚಿತ್ರ ವಿಚಿತ್ರವಾದ ಗಾಯದ ಗುರುತುಗಳು ಸ್ಪಷ್ಟವಾಗಿಯೇ ಕಾಣಿಸುತ್ತವೆ. ಅದೇನೂ ಸಾಮಾನ್ಯದ ಸಂಕಟದ ಪರ್ವವಲ್ಲ. ಒಂದೇ ಒಂದು ದಿನ ಮುಷ್ಕರ, ಬಂದ್ ನಂಥಾದ್ದು ನಡೆದರೆ ನಾಲಕೈದು ಗಂಟೆ ಮನೆಯೊಳಗಿರೋದೇ ಕಷ್ಟವಾಗೋದಿದೆ. ಅಂಥಾದ್ದರಲ್ಲಿ ತಿಂಗಳುಗಟ್ಟಲೆ ನಿರಂತರವಾಗಿ ಮನೆಯೊಳಗೆ ಇಡೀ ಜಗತ್ತು ಬಂಧಿಯಾಗುತ್ತದೆಂಬುದನ್ನು ಯಾರೆಂದರೆ ಯಾರೂ ಯೋಚಿಸಿರಲು ಸಾಧ್ಯವಿಲ್ಲ. ಇಂಥಾ ಲಾಕ್ ಡೌನಿನಿಂದಾಗಿ ಅನೇಕಾನೇಕ ಸಮಸ್ಯೆಗಳಾಗಿದ್ದಾವೆ. ಆದರೆ, ಇದರಿಂದ ಆರ್ಥಿಕವಾಗಿ ಬಿದ್ದ ಹೊಡೆತಗಳ ಸುತ್ತ ಮಾತ್ರವೇ ಚರ್ಚೆಗಳು ನಡೆಯುತ್ತವೆ. ಆದರೆ ಈ ಮನುಕುಲಕ್ಕೆ ಕೊರೋನಾ ವೈರಸ್ಸು ಮತ್ತು ಅದರಿಂದ ಸೃಷ್ಟಿಯಾದ ಲಾಕ್ ಡೌನ್ ಕೊಟ್ಟ ಮಾನಸಿಕ ಆಘಾತವಿದೆಯಲ್ಲಾ? ಅದನ್ನು ಒಂದೇ ಸಲಕ್ಕೆ ಹರವಿಡೋದು ಕಡುಗಷ್ಟದ ವಿಚಾರ!












