ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ತಿಂಗಳಿದು. ಮತ್ತೊಂದು ಸುತ್ತಿಗೆ ಅಪ್ಪು ಸ್ಮರಣೆಯೀಗ ಎಲ್ಲೆಡೆ ನಡೆಯುತ್ತಿದೆ. ಅಷ್ಟಕ್ಕೂ ಅಪ್ಪು ನೆನಪಿಗೆ ಯಾವ ನೆಪಗಳೂ ಬೇಕಿಲ್ಲ. ಅವರ ನಿರ್ಗಮನ ಮೂಡಿಸಿರುವ ಆಘಾತವೊಂದು ಅಷ್ಟೇ ಹಸಿಯಾಗಿ ಅಭಿಮಾನಿ ಬಳಗದ ಎದೆಯಲ್ಲಿದೆ. ಅದೆಲ್ಲವನ್ನೂ ಸಹಿಸಿಕೊಂಡು, ಅವರಿಲ್ಲದ ಘಳಿಗೆಯಲ್ಲಿಯೂ ಕೂಡಾ ಪುನೀತ್ ಹುಟ್ಟುಹಬ್ಬವನ್ನು ಅತ್ಯಂತ ಅರ್ಥವತ್ತಾಗಿ ನಡೆಸಿಕೊಂಡು ಬರುತ್ತಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಪ್ಪು ದೈಹಿಕವಾಗಿ ಇಲ್ಲದ ಈ ಘಳಿಗೆಯಲ್ಲಿ ಅವರನ್ನು ಮೆಚ್ಚಿಕೊಳ್ಳುವವರು, ಅಭಿಮಾನಿಗಳು ಮತ್ತೆ ಮತ್ತೆ ಅವರ ಹಳೇಯ ಸಿನಿಮಾಗಳನ್ನು ನೋಡುತ್ತಾ ಮುದಗೊಳ್ಳುತ್ತಿದ್ದಾರೆ. ಆದರೆ, ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಪ್ಪು ನಮ್ಮ ನಡುವಲ್ಲಿಯೇ ಇದ್ದಾರೆಂಬ ಭಾವವನ್ನು ತೀವ್ರವಾಗಿಸಿರೋದು ಗಂಧದ ಗುಡಿ ಎಂಬ ಮಾಂತ್ರಿಕ ಡಾಕ್ಯುಮೆಂಟರಿ!
ಈ ಗಂಧದ ಗುಡಿ ಅಪ್ಪು ಬದುಕಿದ್ದ ಘಳಿಗೆಯಲ್ಲಿ ಅತ್ಯಂತ ಆಪ್ತವಾಗಿ ಹಚ್ಚಿಕೊಂಡಿದ್ದ ಸಿನಿಮಾ. ಯಾವುದೇ ಬಿಲ್ಡಪ್ಪುಗಳಿಲ್ಲದಂತೆ, ಅಪ್ಪುವಿನ ನೈಜ ವ್ಯಕ್ತಿತ್ವ ಗಂಧದ ಗುಡಿಯ ಮೂಲಕ ಸೆರೆಯಾಗಿತ್ತು. ವಿಷಾಧವೆಂದರೆ, ಆ ಸಿನಿಮಾವೇ ಪುನೀತ್ ರಾಜ್ ಕುಮಾರ್ ಬದುಕಿನ ಕಟ್ಟ ಕಡೆಯ ಚಿತ್ರವಾಗುತ್ತದೆಂದು ಯಾರೆಂದರೆ ಯಾರೂ ಎಣಿಸಿರಲಿಲ್ಲ. ಅದು ಅವರ ಕಡೇಯ ಚಿತ್ರವಾಗಿ ತೆರೆಗಂಡಿತ್ತು. ನಿರೀಕ್ಷೆಗೂ ಮೀರಿ ಯಶ ಕಂಡಿತ್ತು. ಅವರಿಲ್ಲದ ಹುಟ್ಟುಹಬ್ಬದ ಈ ಘಳಿಗೆಯಲ್ಲಿ ಮತ್ತೆ ಆ ಸಿನಿಮಾದ ದೃಷ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದನ್ನು ಕಂಡು ಅಭಿಮಾನಿಗಳ ಮನಸು ಅಪ್ಪು ಇಲ್ಲದ ಸಂಕಟದಿಂದ ತೇವಗೊಳ್ಳುತ್ತಿದೆ. ಈ ಸಿನಿಮಾ ಯಾಕೆ ಅಭಿಮಾನಿಗಳನ್ನು ಈ ಪರಿಯಾಗಿ ಕಾಡುತ್ತಿದೆ? ಅದರಲ್ಲಿ ಅಂಥಾ ವಿಶೇಷತೆ ಏನಿದೆ? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು ನೋಡಿದರೆ ಗಂಧದ ಗುಡಿಯ ಮಾಯಕದ ಜಗತ್ತೊಂದು ಧುತ್ತನೆ ಕಣ್ಣೆದುರು ನಿಲ್ಲುತ್ತೆ!
ಗಂಧದ ಗುಡಿಯೆಂಬ ಆರ್ಧ್ರತೆ!
ಗಂಧದಗುಡಿಯ ಸುಗಂಧ ಕರ್ನಾಟಕದ ತುಂಬೆಲ್ಲ ಗಾಢವಾಗಿ ಹಬ್ಬಿಕೊಂಡಿದೆ. ಹತ್ತತ್ತಿರ ಒಂದು ವರ್ಷದ ಬಳಿಕ ಪುನೀತ್ ರಾಜ್ಕುಮಾರ್ರನ್ನು ತೆರೆ ಮೇಲೆ ನೋಡಿದ ಪುಳಕ, ಅವರಿರಬೇಕಿತ್ತೆಂಬ ಆರ್ದ್ರ ಭಾವ ಮತ್ತು ಇದು ಅವರ ಕಡೇಯ ಚಿತ್ರ ಎಂಬಂಥಾ ವಿಷಾಧದ ಭಾವ… ಇಂಥಾದ್ದೊಂದು ವಿಚಿತ್ರ ಮನಃಸ್ಥಿತಿಯಲ್ಲಿಯೇ ಕರುನಾಡ ಮಂದಿ ಗಂಧದಗುಡಿಯ ದರ್ಶನ ಮಾಡುತ್ತಿದ್ದಾರೆ. ವರ್ಷಗಳ ಹಿಂದೆ ಅಪ್ಪು ಯಾವ ಘಳಿಗೆಯಲ್ಲಿ ಮರೆಯಾಗಿದ್ದರೋ, ಅದೇ ಹೊತ್ತಿನಲ್ಲಿ ಗಂಧದಗುಡಿ ಬಿಡುಗಡೆಗೊಂಡಿತ್ತು. ನಗುಮೊಗದ ದೊರೆಯನ್ನು ವರ್ಷದ ನಂತರ ಮತ್ತೆ ನೋಡುವ ಆವೇಗ ಮತ್ತು ಇಂಥಾದ್ದೊಂದು ಯಾನ ಹೀಗೆ ಅಚಾನಕ್ಕಾಗಿ ಕೊನೆಯಾಯಿತಲ್ಲಾ ಎಂಬಂಥಾ ಸಂಕಟದ ನಡುವೆ ಗಂಧದಗುಡಿಯ ವಿಹಾರ ಸಂಪನ್ನಗೊಂಡಿತ್ತು. ಆದರದು ಈವತ್ತಿಗೂ ಅನುರಣಿಸುತ್ತಲೇ ಇದೆ.
ಅಷ್ಟಕ್ಕೂ ಇದೊಂದು ಸಿನಿಮಾವಲ್ಲ; ಅದನ್ನು ನಿರ್ದೇಶಕ ಅಮೋಘವರ್ಷ ಡಾಕ್ಯೂಡ್ರಾಮಾ ಅಂತ ಕರೆದಿದ್ದಾರೆ. ಆದರೆ ಜನ ಮಾತ್ರ ಇದು ಅಪ್ಪುವಿನ ಕಟ್ಟ ಕಡೆಯ ಸಿನಿಮಾ ಎಂಬ ಸೆಂಟಿಮೆಂಟಿನೊಂದಿಗೆ ಮತ್ತೆ ಕುಟುಂಬ ಸಮೇತರಾಗಿ ಚಿತ್ರಮಂದಿರಗಳತ್ತ ಮುಖ ಮಾಎಇದ್ದರು. ಹಾಗೆ ಬಂದವರನ್ನೆಲ್ಲ ಕ್ಷಣ ಕ್ಷಣವೂ ತೃಪ್ತಗೊಳಿಸುವ ಜಾದೂವಿನೊಂದಿಗೆ ಅಮೋಘವರ್ಷ ಗಂಧದಗುಡಿಯನ್ನು ಅಮೋಘವಾಗಿಯೇ ಚಿತ್ರಿಸಿದ್ದಾರೆ. ಇಲ್ಲಿ ರಂಗು ರಂಗಿನ ಮೇಕಪ್ಪುಗಳಿಲ್ಲ, ಅಪ್ಪು ಮುಖಕ್ಕೂ ಬೇರೊಂದು ಛಾಯೆ ಸೋಕಿಕೊಂಡಿಲ್ಲ, ಪಂಚಿಂಗ್ ಡೈಲಾಗುಗಳಿಲ್ಲ. ಆದರೆ, ಅದನ್ನು ಮೀರಿದ ಮಹತ್ತರವಾದುದೇನೋ ಗಂಧದಗುಡಿಯೊಳಗಿದೆ. ನೋಡಿದ ಪ್ರತಿಯೊಬ್ಬರೊಳಗೂ ಕೂಡಾ ಅಪ್ಪು ಕಿರುಬೆರಳು ಹಿಡಿದು ಗಂಧದಗುಡಿಯ ತುಂಬೆಲ್ಲ ಸುತ್ತಾಡಿದ ಅನುಭೂತಿಯೊಂದು ಮೆತ್ತಿಕೊಳ್ಳುತ್ತೆ. ಅದು ಅಪ್ಪುವಿನ ನೆನಪುಗಳೊಂದಿಗೇ ಕರುನಾಡಿನ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯುವಂತಿದೆ. ಆ ಗುಣವೇ ಒಂದಿಡೀ ಗಂಧದಗುಡಿಯ ನಿಜವಾದ ಸಾರ್ಥಕ್ಯ!
ಅಬ್ಬರವಿಲ್ಲದ ಅಚ್ಚರಿ
ಅದೇನು ಅಚ್ಚರಿಯೋ ಗೊತ್ತಿಲ್ಲ; ಯಾವ ಅಬ್ಬರವೂ ಇಲ್ಲದೆಯೇ ಗಂಧದಗುಡಿ ಕಾಡುತ್ತದೆ. ಎಲ್ಲ ಮಸಾಲೆಗಳನ್ನೂ ಅರೆದು ತಯಾರಿಸಿದ ಸಿನಿಮಾಗನ್ನೇ ಮೀರಿಸುವಂತೆ ಇಷ್ಟವಾಗುತ್ತದೆ. ಸ್ಟಾರ್ ನಟರೆಂದರೆ, ಅವರಿಗೊಂದು ಸಿನಿಮಾ ಮಾಡಬೇಕೆಂದರೆ ಅದರದ್ದೇ ಆದ ಸೂತ್ರಗಳಿರುತ್ತವೆ. ಆದರೆ, ಪುನೀತ್ ಅವರದ್ದು ಯಾವುದೇ ತಟವಟಗಳಿಲ್ಲದ ಸಹಜ ವ್ಯಕ್ತಿತ್ವ. ಸರಳತೆ ಎಂಬುದು ಅದರ ಟ್ರೇಡ್ ಮಾರ್ಕ್. ಎಲ್ಲ ಇಮೇಜುಗಳೂ ಮೂಲೆಗುಂಪಾಗುವಂತೆ, ಯಾವುದೇ ಹೀರೋಯಿಸಂ ಇಲ್ಲದೆಯೇ ಪುನೀತ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮ ವನ್ಯ ಸಂಪತ್ತು, ಜೀವ ವೈವಿಧ್ಯಗಳ ಪರಿಚಯ ಮಾಡಿಸಿದ್ದಾರೆ. ಅಮೋಘವರ್ಷ ಮತ್ತು ಪುನೀತ್ ನಡುವಿನ ಸಹಜ ಸಂಭಾಷಣೆ, ಅದಕ್ಕೆ ಪೂರಕವಾಗಿ ಎದುರುಗೊಳ್ಳುವ ಪ್ರಾಕೃತಿಕ ವೈಚಿತ್ರ್ಯಗಳೊಂದಿಗೆ ಗಂಧದಗುಡಿ ಕಳೆಗಟ್ಟಿಕೊಂಡಿದೆ.
ಹಾಗಂತ, ಅಪ್ಪು ಕರುನಾಡಿನ ಪ್ರಾಕೃತಿಕ ವೈಭೋಗವನ್ನು ಜನರಿಗೆ ಪರಿಚಯ ಮಾಡುವಂಥಾ ಮನಃಸ್ಥಿತಿಯೊಂದಿಗೂ ಇಲ್ಲಿ ಕಾಣಿಸಿಕೊಂಡಿಲ್ಲ. ಹಾಗೊಂದು ವೇಳೆ ಆ ಛಾಯೆಯಲ್ಲಿ ಕಾಣಿಸಿದ್ದರೆ, ಬಹುಶಃ ಇದೊಂದು ಡಾಕ್ಯುಮೆಂಟರಿಯಾಗಿಯಷ್ಟೇ ದಾಖಲಾಗುತ್ತಿತ್ತೇನೋ… ಆದರಿಲ್ಲಿ ಪ್ರಕೃತಿಯ ಅಚ್ಚರಿಗಳ ಮುಂದೆ ಅಪ್ಪು ಅಕ್ಷರಶಃ ಮಗುವಾಗಿದ್ದಾರೆ. ಪ್ರಕೃತಿಯ ಕದಲಿಕೆಗಳ ಮುಂದೆ ಅಚ್ಚರಿ ತುಂಬಿಕೊಂಡು ಪುಟ್ಟ ಹುಡುಗನಂತೆ ನಿಲ್ಲುತ್ತಾರೆ. ತಮ್ಮ ಮನಃಸ್ಥಿತಿ, ಭಯಗಳನ್ನೆಲ್ಲ ಬಿಡುಬೀಸಾಗಿ ಪ್ರಚುರಪಡಿಸುತ್ತಾರೆ. ಹಾಗೆ ಅಪ್ಪುವಿನ ಮಗುತನದ ಹಿಮ್ಮೇಳದೊಂದಿಗೆ ಕರ್ನಾಟಕದ ಪ್ರಾಕೃತಿಕ ಸಿರಿವಂತಿಕೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಅದನ್ನು ಹಾಗೆ ರೂಪಿಸಿದ್ದರಲ್ಲಿ ನಿರ್ದೇಶಕ ಅಮೋಘವರ್ಷ ಅವರ ಕಸುಬುದಾರಿಕೆಯೂ ಪ್ರಧಾನವಾಗಿ ಕೆಲಸ ಮಾಡಿದೆ.
ಕಾಡ ಗರ್ಭದೊಳಗೆ…
ಮಲೆನಾಡು, ಪಶ್ಚಿಮಘಟ್ಟ, ಚಾಮರಾಜನಗರ ಸೇರಿದಂತೆ ಒಂದಿಡೀ ಕರ್ನಾಟಕದ ಅರಣ್ಯ ಸಂಪತ್ತು ಮತ್ತು ಜೀವವೈವಿಧ್ಯಗಳ ದರ್ಶನ ಗಂಧದಗುಡಿಯ ಮೂಲಕ ಆಗುತ್ತದೆ. ಈ ಡಾಕ್ಯೂಡ್ರಾಮಾದ ಉದ್ದಕ್ಕೂ ಪುನೀತ್ ತಾವಿರುವಂತೆಯೇ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಾರೆ. ಅರಣ್ಯದುದ್ದಕ್ಕೂ ಕಿಲೋಮೀಟರುಗಟ್ಟಲೆ ದಣಿವರಿಯದೆ ಅಲೆದಿದ್ದಾರೆ, ಆ ಹಾದಿಯಲ್ಲಿ ಯಾರೋ ಕೊಟ್ಟ ಆಹಾರವನ್ನು ಎಂದಿನ ದೈವೀಕ ಅನುಭೂತಿಯೊಂದಿಗೆ ತಿಂದಿದ್ದಾರೆ, ಸಿಕ್ಕವರ ಜೊತೆ ಯಾವ ಹಮ್ಮುಬಿಮ್ಮೂ ಇಲ್ಲದೆ ಸಂಭ್ರಮಿಸಿದ್ದಾರೆ, ಅರಣ್ಯ ಇಲಾಖೆಯ ಅಧಿಕಾರಿಗಳನ್ನೂ ಅತ್ಯಂತ ಗೌರವದಿಂದ ಕಾಣುತ್ತಾ, ಈ ಮೂಲಕ ಜನಸಾಮಾನ್ಯರಿಗೂ ಮಹತ್ವದ ಸಂದೇಶ ದಾಟಿಸಿದ್ದಾರೆ. ಒಟ್ಟಾರೆಯಾಗಿ ಅಮೋಘವರ್ಷ ಈ ಡಾಕ್ಯುಡ್ರಾಮಾವನ್ನು ರೂಪಿಸಿರುವ ಧಾಟಿಯೇ ಭಿನ್ನವಾಗಿದೆ.
ಇದು ಸಹಜವಾಗಿ ಮೂಡಿ ಬಂದಿದೆ ಎಂದಾಕ್ಷಣ ಥ್ರಿಲ್ಲಿಂಗ್ ವಿಚಾರಗಳೇ ಇಲ್ಲ ಅಂದುಕೊಳ್ಳುವಂತಿಲ್ಲ. ಆ ಹಾದಿಯಲ್ಲೆದುರಾಗೋ ಅಂಶಗಳೇ ಥ್ರಿಲ್ಲಿಂಗ್ ಅನುಭವ ಕಟ್ಟಿಕೊಡುತ್ತವೆ. ಹುಲಿ ನೋಡಿದಾಗ, ದೈತ್ಯ ಹಾವು ಎದುರಾದಾಗ ಅಪ್ಪುವಿನ ಪ್ರತಿಕ್ರಿಯೆ, ಅವರು ತೋಡಿಕೊಳ್ಳುವ ಒಂದಷ್ಟು ವಿಚಾರಗಳೆಲ್ಲ ಹೆಚ್ಚು ಆಪ್ತವೆನಿಸುತ್ತವೆ. ಇದೆಲ್ಲವನ್ನೂ ಕಳೆಗಟ್ಟಿಸುವಂಥಾ ಎರಡು ಹಾಡುಗಳಿವೆ. ಅವೆಲ್ಲವೂ ಈ ಯಾನಕ್ಕೆ ಪೂರಕವಾಗಿ ಬಿಚ್ಚಿಕೊಳ್ಳುತ್ತವೆ. ಅಪ್ಪು ಹೆಜ್ಜೆಗಳಿಗೆ ತಕ್ಕುದಾದ ಹಿನ್ನೆಲೆ ಸಂಗೀತದೊಂದಿಗೆ ಗಂಧದಗುಡಿ ಕಳೆಗಟ್ಟಿಕೊಂಡಿದೆ. ಇಲ್ಲಿನ ದೃಷ್ಯಗಳಂತೂ ಯಾವ ಹೈ ಬಜೆಟ್ ಸಿನಿಮಾಗಳಿಗೂ ಕಡಿಮೆಯೇನಿಲ್ಲ. ಆ ತಾಜಾತನವಿದೆಯಲ್ಲಾ? ಅದು ಅಪ್ಪು ನಡವಳಿಕೆಯೊಂದಿಗೆ ಮಿಳಿತವಾದಂತೆ ನೋಡುಗರನ್ನೆಲ್ಲ ಆವರಿಸಿಕೊಳ್ಳುತ್ತದೆ.
ಪರಿಧಿ ಮೀರಿದ ಸೋಜುಗ!
ಒಟ್ಟಾರೆಯಾಗಿ ಗಂಧದಗುಡಿ ಡಾಕ್ಯುಮೆಂಟರಿಯ ಪರಿಧಿ ಮೀರಿಕೊಂಡು, ಸಿನಿಮಾ ಒಂದು ಕಟ್ಟಿಕೊಡಬಹುದಾದ ಅನುಭೂತಿಯನ್ನೂ ದಾಟಿಕೊಂಡು ಭಿನ್ನವಾಗಿ ನಿಲ್ಲುತ್ತದೆ. ಇದು ಅಪ್ಪು ಒಳಗಿದ್ದ ಹೊಸತನಕ್ಕೆ ಮಿಡಿಯೋ ಮರ್ನಸ್ಥಿತಿಗೆ ಸೂಕ್ತ ಉದಾಹರಣೆಯಂಥಾ ದೃಷ್ಯವೈಭವ. ಈ ಮೂಲಕ ಅಪ್ಪು ವರ್ಷದ ಬಳಿಕ ಮತ್ತೆ ಸಿಕ್ಕಿದ್ದಾರೆ. ತನ್ನನ್ನು ಪ್ರೀತಿಸುವ ಜೀವಗಳನ್ನೆಲ್ಲ ಎದೆಗವುಸಿಕೊಂಡಂತೆ ಪ್ರಕೃತಿಯ ಮಡಿಲಲ್ಲಿ ಯಾನ ಮಾಡಿಸಿದ್ದಾರೆ. ನೋಡೋ ಮನಸುಗಳು ಅದ್ಯಾವ ಪರಿಯಲ್ಲಿ ಕಳೆದು ಹೋಗುತ್ತಾರೆಂದರೆ, ಆ ದೃಷ್ಯದೊಳಗೆ, ಅಪ್ಪವಿನ ಮಗ್ಗುಲಲ್ಲಿ ತಾವೇ ನಡೆದು ಸಾಗುತ್ತಿದ್ದಾರೇನೋ ಎಂಬಂಥಾ ಭಾವ ಮೂಡಿಕೊಳ್ಳುತ್ತೆ. ದೃಷ್ಯ ಮುಗಿದ ನಂತರವೂ ಅಪ್ಪುವಿನ ನೆನಪು ಮನಸಲ್ಲಿ ಭೋರ್ಗರೆಯುತ್ತೆ. ಈ ಯಾನ ಇಷ್ಟು ಬೇಗನೆ ಕೊನೆಯಾಗಬಾರದಿತ್ತೆಂಬ ಕೊರಗೊಂದು ಶಾಶ್ವತವೆಂಬಂತೆ ಎದೆಗೆ ನಾಟಿಕೊಳ್ಳುತ್ತೆ. ಪುನೀತ್ಗೆ ಪುನೀತ್ ಮಾತ್ರವೇ ಸಾಟಿ ಎಂಬಂಥಾ ನಂಬಿಕೆ ಮತ್ತಷ್ಟು ಗಟ್ಟಿಯಾಗುತ್ತೆ…
ಎಂಥಾ ಕನಸಿತ್ತೋ…
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಭೌತಿಕವಾಗಿ ಮರೆಯಾಗಿ ವರ್ಷಗಳು ಉರುಳಿವೆ. ಕಳೆದ ವರ್ಷ ಸರಿಯಾಗಿ ಈ ಸಮಯಕ್ಕೆ ಹಬ್ಬಿಕೊಂಡಿದ್ದ ಸೂತಕ, ದಿಕ್ಕುದೆಸೆಗಳಿಲ್ಲದೆ ಹರಿದಿದ್ದ ಕಣ್ಣೀರ ಕೋಡಿ ಮತ್ತು ಪ್ರೀತಿಯ ಅಪ್ಪುವನ್ನು ಮರಳಿ ಪಡೆಯುವ ಕೋರಿಕೆಗಳೆಲ್ಲವೂ ಇನ್ನೂ ಹಸಿಯಾಗಿವೆ. ಈ ಕ್ಷಣಕ್ಕೂ ಇಲ್ಲೇ ಎಲ್ಲೋ ಹೋಗಿರೋ ಅಪ್ಪು ಮರಳಿ ಬರಬಹುದೆಂಬಂಥಾ ಭಾವುಕತೆಯ ಪಸೆ ಕೋಟಿ ಮನಸುಗಳಲ್ಲಿ ಹಾಗೆಯೇ ಉಳಿದುಕೊಂಡಿದೆ. ಈ ಹಂತದಲ್ಲಿ ಪುನೀತ್ರನ್ನು ನಾನಾ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಾ, ಅವರ ಪ್ರಾಂಜಲ ನಗುವನ್ನು ಧ್ಯಾನಿಸುತ್ತಾ ಅಭಿಮಾನಿ ಬಳಗವೂ ಸಮಾಧಾನಿಸಿಕೊಳ್ಳುತ್ತಿದೆ. ಇದೆಲ್ಲದರ ನಡುವಲ್ಲಿಯೇ ಮಗು ಮನಸಿನ ಅಪ್ಪ್ಪುವನ್ನು ಅಷ್ಟು ಬೇಗನೆ ಕಸಿದುಕೊಂಡ ವಿಧಿಯೆಡೆಗಿನ ಕೋಪವೂ ಕೂಡಾ ಕೆಂಡಗಟ್ಟಿಕೊಂಡು ಸುಡಲಾರಂಭಿಸಿದೆ.
ಪಾದರಸದಂಥಾ ವ್ಯಕ್ತಿತ್ವ ಹೊಂದಿದ್ದ ಪುನೀತ್ ಯಾನ ಅರ್ಧ ಹಾದಿಯಲ್ಲಿಯೇ ಕೊನೆಗೊಂಡಿದೆ. ಅವೊಳಗಿದ್ದ ಅದೆಷ್ಟೋ ಕನಸುಗಳೂ ಕೂಡಾ ಅವರೊಂದಿಗೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಅಪ್ಪು ಅದೆಂಥಾ ಜೀವನಪ್ರೀತಿ ಹೊಂದಿದ್ದರು, ಆಸು ಪಾಸಿನಲ್ಲಿ ಸುಳಿಯುವ ಜೀವಗಳನ್ನು ಅದೆಷ್ಟು ತೀವ್ರವಾಗಿ ಪ್ರೀತಿಸುತ್ತಿದ್ದರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಪುನೀತ್ ತಮ್ಮ ಕನಸುಗಳನ್ನೂ ಕೂಡಾ ಅಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದರು. ಅವರು ತೀರಾ ಹತ್ತಿರದವರ ಬಳಿಯೇ ತಮ್ಮ ಕನಸುಗಳ ಬಗ್ಗೆ, ಮುಂದಿನ ಹೆಜ್ಜೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದದ್ದು ಅಪರೂಪ. ಯಾಕೆಂದರೆ, ಪುನೀತ್ ಪ್ರತೀ ಕ್ಷಣವೂ ತಮ್ಮ ಕನಸುಗಳ ಸಾಕಾರಕ್ಕಾಗಿ ಕಾರ್ಯಪ್ರವೃತ್ತರಾಗಿರುತ್ತಿದ್ದರು.
ಹಾಗಾದರೆ, ಅಪ್ಪು ಎದೆಯಲ್ಲಿಯೇ ಉಳಿದು ಹೋದ, ಅವರೊಂದಿಗೇ ಮಣ್ಣಾಗಿ ಹೋದ ಕನಸುಗಳ್ಯಾವುವು ಅಂತ ನೋಡ ಹೋದರೆ ಆರಂಭದಲ್ಲಿಯೇ ಅಂತ್ಯ ಕಂಡ ಒಂದಷ್ಟು ಸಿನಿಮಾಗಳು ನೆನಪಾಗುತ್ತವೆ. ಸಿನಿಪ್ರೇಮಿಗಳಲ್ಲೊಂದು ಬೆರಗು ಮೂಡಿಸಿದ್ದ ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಚಿತ್ರ ನೆನಪಾಗುತ್ತೆ. ಸ್ಟಾರ್ಡಮ್, ಇಮೇಜು ಅಂತೆಲ್ಲ ನೋಡದೆ, ಪ್ರಯೋಗಾತ್ಮಕ ತುಡಿತ ಹೊಂದಿದ್ದವರು ಪುನೀತ್. ಅದಿಲ್ಲದೆ ಹೋಗಿದ್ದರೆ ಅವರು ಖಂಡಿತವಾಗಿಯೂ ದ್ವಿತ್ವದಂಥಾ ಭಿನ್ನ ಕಥಾನಕವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ಪುನೀತ್ ಇಂದು ನಮ್ಮೊಂದಿಗಿದ್ದಿದ್ದರೆ, ದ್ವಿತ್ವ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಾರಂಭಿಸುತ್ತಿತ್ತು. ಅದು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಹವಾ ಸೃಷ್ಟಿಸಿದ್ದರೂ ಅಚ್ಚರಿಯೇನಿಲ್ಲ.
ಕೇವಲ ದ್ವಿತ್ವ ಮಾತ್ರವಲ್ಲ; ಮತ್ತೊಂದಷ್ಟು ಸಿನಿಮಾಗಳೂ ಆರಂಭದಲ್ಲಿಯೇ ಅಂತ್ಯ ಕಂಡಿವೆ. ಪುನೀತ್ ಬದುಕಿದ್ದಿದ್ದರೆ, ಈ ವರ್ಷ ಒಂದರ ಹಿಂದೊಂದರಂತೆ ವಿಭಿನ್ನ ಬಗೆಯ ಸಿನಿಮಾಗಳು ಸಂಚಲನ ಸೃಷ್ಟಿಸುತ್ತಿದ್ದವು. ಹಾಗಂತ, ಪುನೀತ್ ಕನಸುಗಳು ಆ ಪರಿಧಿಗೆ ಮಾತ್ರವೇ ಸೀಮಿತವಾದವುಗಳಲ್ಲ. ಪಿಆರ್ಕೆ ಸಂಸ್ಥೆಯ ಮೂಲಕ ಇನ್ನೂ ಒಂದಷ್ಟು ಹೊಸಾ ಬಗೆಯ ಸಿನಿಮಾಗಳನ್ನು ಮಾಡಿ, ಹೊಸಬರ ಬೆನ್ತಟ್ಟುವ ನಿಟ್ಟಿನಲ್ಲಿ ಅಪ್ಪು ಕಾರ್ಯೋನ್ಮುಖರಾಗಿದ್ದರು. ಹೊಸ ಪ್ರತಿಭಾವಂತರ ಪಾಲಿಗೆ ಪುನೀತ್ ಸಾರಥ್ಯದ ಪಿಆರ್ಕೆ ಮಹಾ ಭರವಸೆಯಂತಿತ್ತು. ಅದನ್ನೀಗ ಅಶ್ವಿನಿ ಮುಂದುವರೆಸುತ್ತಿದ್ದಾರಾದರೂ, ಪುನೀತ್ ಆಲೋಚನೆಗಳನ್ನು ಗ್ರಹಿಸಿಕೊಂಡು ಅದಕ್ಕೆ ತಕ್ಕುದಾಗಿ ಮುಂದುವರೆಯೋದು ತುಸು ಸವಾಲಿನ ಸಂಗತಿಯಾಗಿಯೇ ಕಾಣಿಸುತ್ತದೆ.
ಇದೆಲ್ಲಕ್ಕಿಂತ ಮುಖ್ಯವಾಗಿ, ಪುನೀತ್ ರಾಜ್ಕುಮಾರ್ ವಿಚಾರದಲ್ಲಿ ಗಮನ ಸೆಳೆಯೋದು ಅವರೊಳಗೆ ಅತೀವವಾಗಿದ್ದ ಅಣ್ಣಂದಿರ ಮೇಲಿನ ಪ್ರೀತಿ. ರಾಘವೇಂದ್ರ ರಾಜ್ಕುಮಾರ್ ಮತ್ತು ಶಿವಣ್ಣನ ಪಾಲಿಗೆ ಅಪ್ಪು ಸದಾ ಮಗುವಾಗಿದ್ದವರು. ಶಿವಣ್ಣನನ್ನೂ ತೀವ್ರವಾಗಿ ಹಚ್ಚಿಕೊಳ್ಳುತ್ತಾ, ಅವರ ನಟನಾ ಬದುಕನ್ನು ಸ್ಫೂರ್ತಿಯಾಗೆ ತೆಗೆದುಕೊಂಡಿದ್ದವರು ಅಪ್ಪು. ಶಿವಣ್ಣನ ಎನರ್ಜಿ ಲೆವೆಲ್ಲಿನ ಬಗ್ಗೆ ಓರ್ವ ಅಭಿಮಾನಿಯಂತೆಯೇ ಅಚ್ಚರಿ ಮತ್ತು ಆರಾಧನೆ ಹೊಂದಿದ್ದ ಅಪ್ಪು, ಶಿವಣ್ಣನಿಗಾಗಿ ಸಿನಿಮಾವೊಂದನ್ನು ನಿರ್ದೇಶನ ಮಾಡೋ ಕನಸಿಟ್ಟುಕೊಂಡಿದ್ದರು. ಅದು ಪುನೀತ್ ಪಾಲಿಗೆ ಮಹಾ ಕನಸು. ಈ ಬಗ್ಗೆ ಆಪ್ತರ ಬಳಿ ಆಗಾಗ ಹೇಳಿಕೊಳ್ಳುತ್ತಲೂ ಇದ್ದರಂತೆ. ಹಾಗೆಯೇ ಬಾಯಿಂದ ಬಾಯಿಗೆ ದಾಟಿಕೊಂಡು ಅದು ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಆದರೆ ಆ ಬಗ್ಗೆ ಹೆಚ್ಚೇನೂ ಅವರು ಹೇಳಿಕೊಂಡಿರಲಿಲ್ಲ. ಅದರ ಬಗ್ಗೆ ಅದೆಷ್ಟು ಆಕರ್ಷಿತರಾಗಿದ್ದರೆಂದರೆ, ತಮ್ಮ ಬ್ಯುಸಿ ಶೆಡ್ಯೂಲಿನ ನಡುವೆಯೇ ಪ್ರತೀ ದಿನ ಆ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದರಂತೆ. ಆದರೆ ವಿಧಿಯಾಟವೇ ಬೇರೆಯದ್ದಿತ್ತು. ಅಂಥಾ ಹತ್ತಾರು ಕನಸುಗಳ ಸಮೇತ ಅದು ಎಲ್ಲರ ಪ್ರೀತಿಯ ಅಪ್ಪುವನ್ನು ಕಿತ್ತುಕೊಂಡಿದೆ.