ಕಿರಿಕ್ ಪಾರ್ಟಿ ನಂತರ ಚಲೋ ಅಂತ ಟಾಲಿವುಡ್ಗೆ ಹೊರಟ ಸಾನ್ವಿ ಉರುಫ್ ರಶ್ಮಿಕಾ, ಸ್ಟಾರ್ ನಾಯಕಿ ಪಟ್ಟಕ್ಕೇರಿದ್ದು, ಕಾಲಿವುಡ್, ಬಾಲಿವುಡ್ ಅಂತ ಅಲ್ಲಲ್ಲೇ ಬ್ಯುಸಿಯಾಗಿದ್ದು ನಿಮಗೆಲ್ಲ ಗೊತ್ತೆಯಿದೆ. ಈಗಲೂ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿರುವ ಚಮಕ್ ಚೆಲುವೆ ಮತ್ತೆ ಚಂದನವನಕ್ಕೆ ಮರಳಲು ರೆಡಿಯಾಗಿದ್ದಾರೆ. ಈ ಬಗ್ಗೆ ಅನಿಮಲ್ ಸಿನಿಮಾದ ಸುದ್ದಿಗೋಷ್ಠಿ ವೇಳೆ ಮಾತನಾಡಿದ್ದಾರೆ.

`ಅನಿಮಲ್’ ರಣಬೀರ್ ಹಾಗೂ ರಶ್ಮಿಕಾ ಕಾಂಬಿನೇಷನ್ನಲ್ಲಿ ಬರುತ್ತಿರೋ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಾಂಗ ನಿರ್ದೇಶನ ಸಿನಿಮಾಗಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೇ ಡಿಸೆಂಬರ್ 01ರಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗ್ತಿದ್ದು, ದೆಹಲಿ, ಮುಂಬೈ, ಚೆನ್ನೈ, ಹೈದ್ರಬಾದ್, ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸಿನಿಮಾ ತಂಡ ಅದ್ದೂರಿ ಪ್ರಚಾರ ಕೈಗೊಂಡಿದೆ. ನಿನ್ನೆಯಷ್ಟೇ ಬೆಂಗಳೂರಲ್ಲಿ `ಅನಿಮಲ್’ ಸಿನಿಮಾ ಪ್ರಚಾರ ಮಾಡುವ ವೇಳೆ ನಟಿ ರಶ್ಮಿಕಾಗೆ ಕನ್ನಡಕ್ಕೆ ಕಂಬ್ಯಾಕ್ ಆಗುವ ಪ್ರಶ್ನೆ ಎದುರಾಗಿದ್ದು ಆಗಲೇ ಗುಡ್ ನ್ಯೂಸ್ ನೀಡಿದ್ದಾರೆ.

ಇತ್ತೀಚೆಗೆ ಕನ್ನಡದಲ್ಲಿ ಸಿನಿಮಾ ಮಾಡದೇ ಇರಬಹುದು. ಆದರೆ, ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ದೂರ ಇದ್ದೀನಿ ಅಂತ ನನಗೆ ಯಾವತ್ತು ಅನಿಸಿಲ್ಲ. ಯಾಕಂದ್ರೆ, ಪ್ಯಾನ್ ಇಂಡಿಯಾ ಸಿನಿಮಾಗಳ ಭಾಗವಾದ ನಾನು ನನ್ನ ಪಾತ್ರಕ್ಕೆ ಕನ್ನಡದಲ್ಲಿ ನಾನೇ ವಾಯ್ಸ್ ಡಬ್ ಮಾಡಿದ್ದೇನೆ. ಈಗ `ಅನಿಮಲ್’ಗೂ ಕೂಡ ಧ್ವನಿಯಾಗಿದ್ದೇನೆ. ಇನ್ನೊಂದು ವಿಶೇಷ ಅಂದರೆ ಕನ್ನಡ ಸಿನಿಮಾವೊಂದರ ಕಥೆ ಕೇಳಿದ್ದು ಅದು ಮಾತುಕತೆ ಹಂತದಲ್ಲಿದೆ ಆದಷ್ಟು ಬೇಗ ತಿಳಿಸ್ತೀನಿ ಎಂದಿದ್ದಾರೆ. ಅಲ್ಲಿಗೆ ತವರೂರಿಗೆ ಬರಲು ತಯಾರಾದ್ರು ನ್ಯಾಷನಲ್ ಕ್ರಷ್ ಎನ್ನಬಹುದು.
ಅಷ್ಟಕ್ಕೂ, ಯಾವ ಸಿನಿಮಾ? ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು? ಇದ್ಯಾವುದನ್ನು ಹಂಚಿಕೊಂಡಿಲ್ಲ ರಶ್ಮಿಕಾ. ಆದರೆ, ನ್ಯಾಷನಲ್ ಕ್ರಷ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೆರೆಯುತ್ತಿರುವ ಚಮಕ್ ಚೆಲ್ವಿನಾ ಮತ್ತೆ ಕನ್ನಡಕ್ಕೆ ಕರೆತರಲು ಹೊರಟಿರೋ ಆ ಅನ್ನದಾತ ನಿಜಕ್ಕೂ ಎಂಟೆದೆ ಬಂಟ ಎನ್ನಬಹುದೇನೋ. ಯಾಕಂದ್ರೆ, ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಸಂಭಾವನೆ ಲಕ್ಷ ಲೆಕ್ಕದಲ್ಲಿ ಇಲ್ಲ. ಒಂದು ಕೋಟಿಯೂ ಅಲ್ಲ. ಅದಕ್ಕಿಂತ ಡಬ್ಬಲ್, ತ್ರಿಬಲ್ ಇದೆ. ಹೀಗಾಗಿ, ಅಷ್ಟೊಂದು ದುಬಾರಿ ರೆಮ್ಯೂನರೇಷನ್ ಕೊಟ್ಟು ರೆಡ್ಕಾರ್ಪೆಟ್ ಹಾಕಲು ರೆಡಿಯಾದ್ರಾ ಕನ್ನಡದ ಪ್ರೊಡ್ಯೂಸರ್? ಯಾರವರು? ಇದು ಸದ್ಯಕ್ಕಿರೋ ಪ್ರಶ್ನೆ.ಅದೇನೇ ಇರಲಿ ಸಾನ್ವಿ ಸ್ಯಾಂಡಲ್ವುಡ್ ಗೆ ಮರಳಲಿ. ಆಕೆಯ ಸಿನಿಮಾವನ್ನ ಪ್ಯಾನ್ ಇಂಡಿಯಾ ಪ್ರೇಕ್ಷಕರು ಕಣ್ಣರಳಿಸಿ ನೋಡುವಂತಾಗಲಿ ಅನ್ನೋದೇ ನಮ್ಮ ಆಶಯ





