ಇಂಡಿಯನ್ ಸಿನಿಮಾದ ಗೇಮ್ ಚೇಂಜರ್ ಎನಿಸಿಕೊಂಡಿರುವ ರಾಕಿಭಾಯ್ ಒಂದಿಲ್ಲೊಂದು ವಿಚಾರಕ್ಕೆ ಬಿಗ್ ಬ್ರೇಕಿಂಗ್ ನ್ಯೂಸ್ ಆಗುತ್ತಲೇ ಇರುತ್ತಾರೆ. ಅವರ ಬಗ್ಗೆ ಧಮಾಕೇದಾರ್ ಸಮಾಚಾರಗಳು ಹೊರಬೀಳುತ್ತಲೇ ಇರುತ್ತವೆ. ಅಚ್ಚರಿ ಅಂದರೆ `ಯಶ್-19′ ಯಾವಾಗ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗುವ ಮೊದಲೇ ಮಾಸ್ಟರ್ ಪೀಸ್ ಮನೆ ಬಗ್ಗೆ ಬ್ಲಾಕ್ಬಸ್ಟರ್ ನ್ಯೂಸ್ ಹೊರಬಿದ್ದಿದೆ. ದುಬೈನಲ್ಲಿ ರಾಕಿಭಾಯ್ 100 ಕೋಟಿ ಬೆಲೆಬಾಳುವ ಮನೆ ಕೊಂಡುಕೊಂಡಿದ್ದಾರೆನ್ನುವ ಸುದ್ದಿ ಎಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಾನ್ಸ್ಟರ್ ಖರೀದಿ ಮಾಡಿದ್ದಾರೆನ್ನಲಾದ ಮನೆಯ ವಿಡಿಯೋ ವೈರಲ್ ಆಗಿದೆ.

ಅಷ್ಟಕ್ಕೂ, ದುಬೈನಲ್ಲಿ ರಾಕಿಭಾಯ್ ಮನೆ ಖರೀದಿ ಮಾಡಿದ್ದು ನಿಜಾನಾ? ಅರಬ್ ಕಂಟ್ರಿ ಅಂಗಳದಲ್ಲಿ ಅಣ್ತಮ್ಮ ಮನೆಗಾಗಿ 100 ಕೋಟಿ ಇನ್ವೆಸ್ಟ್ ಮಾಡಿದ್ರಾ? ಈ ಕುತೂಹಲದ ಪ್ರಶ್ನೆಗೆ ಸದ್ಯಕ್ಕೆ ನಮ್ಮ ಬಳಿಯೂ ಉತ್ತರವಿಲ್ಲ. ಯಾಕಂದ್ರೆ, ದುಬೈನ ರಿಯಲ್ ಎಸ್ಟೇಟ್ ಬ್ಯುಸಿನೆಸ್ಮ್ಯಾನ್ವೊಬ್ಬರು ಮಾನ್ಸ್ಟರ್ ಮನೆಯ ವಿಡಿಯೋನಾ ಹಂಚಿಕೊಂಡಿದ್ದಾರೆ. ಈ ಮನೆಗೆ ಹದಿನೈದು ನಿಮಿಷದಲ್ಲಿ ರಾಕಿಂಗ್ ಸ್ಟಾರ್ ಎಂಟ್ರಿಕೊಡ್ತಾರೆನ್ನುತ್ತಲೇ ವಿಡಿಯೋ ಆರಂಭಿಸಿರೋ ಆತ, ಇದು ಯಶ್ ಅವರು ಕೊಂಡುಕೊಂಡಿರುವ 100 ಕೋಟಿ ಬೆಲೆಬಾಳುವ ಮನೆ ಎಂದಿದ್ದಾರೆ. ಮುಂದುವರೆದು ವಿಡಿಯೋದಲ್ಲಿ ಗೆಸ್ಟ್ ರೂಮ್, ಫ್ಯಾಮಿಲಿ ಲಿವಿಂಗ್ ರೂಮ್, ಓಪನ್ ಕಿಚನ್, ಮಾಸ್ಟರ್ ಬೆಡ್ ರೂಮ್, ಲಿಫ್ಟ್ ಹೀಗೆ ಎಲ್ಲವನ್ನೂ ತೋರಿಸುತ್ತಾ ಇದು ರಾಧಿಕಾ ಮೇಡಂಗೆ ತುಂಬಾ ಇಷ್ಟವಾಗುತ್ತೆ ಎಂದಿದ್ದಾರೆ. ಜೊತೆಗೆ ಈ ಮನೆ ಎಲ್ಲರಿಂದನೂ ಕೊಂಡುಕೊಳ್ಳುವುದಕ್ಕೆ ಆಗಲ್ಲ. ಆದರೆ ಖರೀದಿ ಮಾಡಿದವರಿಗೆ `ಗುಡ್ ವೈಬ್ಸ್, ಗುಡ್ ಲೈಫ್’ ಸಿಗೋದು ಗ್ಯಾರಂಟಿ ಎನ್ನುವ ಆಶ್ವಾಸನೆ ಕೊಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಪ್ರಮೋಷನ್ ಚೆನ್ನಾಗಿ ಮಾಡ್ತೀಯಾ ಗುರು ಅಂತ ಕಮೆಂಟ್ ಮಾಡುವುದರ ಜೊತೆಗೆ ಕೆಜಿಎಫ್ ಕಿಂಗ್ ಹೊಸ ಮನೆ ನೋಡೋದಕ್ಕೆ ಎರಡು ಕಣ್ಣು ಸಾಲುತ್ತಿಲ್ಲ ಅಂತ ಕಾಂಪ್ಲಿಮೆಂಟ್ ಕೊಡ್ತಿದ್ದಾರೆ.

ಹಾಗಾದ್ರೆ, ರಾಕಿಭಾಯ್ ದುಬೈನಲ್ಲಿ ಇಷ್ಟು ದೊಡ್ಡ ಮನೆ ಖರೀದಿ ಮಾಡಿದ್ದು ಸತ್ಯಾನಾ? ಇದಕ್ಕೆ ಸೆಲ್ಫ್ ಮೇಡ್ ಷೆಹಜಾದನೇ ಹೂ ಎನ್ನಬೇಕು. ಅಲ್ಲಿವರೆಗೂ ಇದು ಅಂತೆಕಂತೆ ಸುದ್ದಿನೇ. ಹಾಗಂತ, ಕೊಂಡುಕೊಳ್ಳದೇ ಇರೋದಕ್ಕೆ ಸಾಧ್ಯನೇ ಇಲ್ಲವೆಂದು ಕಡೆಗಣಿಸುವಂತಿಲ್ಲ. ಯಾಕಂದ್ರೆ, ಯಶ್ಭಾಯ್ ಈಗ ಗಾಂಧಿನಗರದ ಗಲ್ಲಾಪೆಟ್ಟಿಗೆಗೆ ಮಾತ್ರವಲ್ಲ ಇಂಡಿಯನ್ ಬಾಕ್ಸ್ ಆಫೀಸ್ಗೆ ಸಿಇಓ. ಒಂದು ಸಿನಿಮಾಗೆ 100 ರಿಂದ 150 ಕೋಟಿ ಸಂಭಾವನೆ ಪಡೆಯುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಬಾಲಿವುಡ್ ರಾಮಾಯಣದಲ್ಲಿ `ರಾವಣ’ನ ಅವತಾರ ಎತ್ತೋಕೆ 100 ಕೋಟಿಗೂ ಅಧಿಕ ಮೊತ್ತದ ರೆಮ್ಯೂನರೇಷನ್ ಡಿಮ್ಯಾಂಡ್ ಮಾಡಿದ್ದಾರೆನ್ನುವ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಅದೇನಾದರೂ ನಿಜವಾಗಿದ್ದರೆ ಅದೊಂದು ಸಿನಿಮಾದ ದುಡ್ಡಲ್ಲೇ ದುಬೈನಲ್ಲಿ ಮಾನ್ಸ್ಟರ್ ಮನೆ ಖರೀದಿ ಮಾಡಿರುತ್ತಾರೆ.
ಅಂದ್ಹಾಗೇ ಅರಬ್ ಕಂಟ್ರಿ ದುಬೈಗೂ, ಅಣ್ತಮ್ಮನಿಗೂ ಒಂದು ನಂಟಿದೆ. ಗೋವಾ ಹೇಗೇ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಗೆ ಫೇವರಿಟ್ ಪ್ಲೇಸೋ ಹಾಗೆಯೇ ದುಬೈ ಕೂಡ ಇವರಿಬ್ಬರ ನೆಚ್ಚಿನ ತಾಣಗಳಲ್ಲೊಂದು. ಹೀಗಾಗಿಯೇ, ಯಶ್ಭಾಯ್ ಕಳೆದ ವರ್ಷದ ಬರ್ತ್ಡೇನಾ ದುಬೈನಲ್ಲಿ ಆಚರಿಸಿಕೊಂಡಿದ್ದರು. ಫ್ಯಾಮಿಲಿ, ಫ್ರೆಂಡ್ಸ್ ಸಮೇತ ಅರಬ್ ಎಮಿರೇಟ್ಸ್ ಗೆ ಹಾರಿ ಸಂಭ್ರಮಿಸಿದ್ದರು. ಅಂದು `ಯಶ್-19′ ಸಿನಿಮಾದ ಬಗ್ಗೆ ಅಪ್ಡೇಟ್ ಹೊರಬೀಳುತ್ತೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ, ದುಬೈನಿಂದ ಅವತ್ತು ದೊಡ್ಡ ಸಿಗ್ನಲ್ ಸಿಕ್ಕಿರಲಿಲ್ಲ. ಇದೀಗ, ಅದೇ ದುಬೈನಿಂದ ಮಾನ್ಸ್ಟರ್ ಅರಮನೆಯ ಸುದ್ದಿ ಫ್ಲೈಟ್ ಏರಿ ಬಂದು ಗಾಂಧಿನಗರದಲ್ಲಿ ಲ್ಯಾಂಡ್ ಆಗಿದೆ. ಆಸ್ಟ್ರೇಲಿಯಾ, ಮಲೇಷಿಯಾ, ಸಿಂಗಾಪೂರ್, ಲಂಡನ್, ದುಬೈ, ಗೋವಾ ಅಂತ ಫಾರಿನ್ ಟ್ರಿಪ್ ಮಾಡುವ ಕೆಜಿಎಫ್ ಕಿಂಗ್, ಇನ್ನೂ ಎಲ್ಲೆಲ್ಲಿ ಮನೆ ಖರೀದಿ ಮಾಡಿದ್ದಾರೋ ಏನೋ ಎನ್ನುವ ಸಂಶಯ ಮೂಡಿಸಿದೆ.
ಹುಟ್ಟೂರು ಹಾಸನದಲ್ಲಿ ಮನೆಕಟ್ಟಿ, ಅಲ್ಲೊಂದು ಫಾರ್ಮ್ಹೌಸ್ ಮಾಡಿರುವ ಮಾನ್ಸ್ಟರ್, ಬೆಂಗಳೂರಿನಲ್ಲಿ ಎರಡ್ಮೂರು ಮನೆ ಕೊಂಡುಕೊಂಡಿರುವುದಾಗಿ ಸುದ್ದಿಯಿದೆ. ಮೊದಲು ಕತ್ರಿಗುಪ್ಪೆನಲ್ಲಿದಿದ್ದು ಅದು ಲಕ್ಕಿಮನೆಯಾಗಿದ್ದು ಆ ಮೇಲೆ ಆ ಮನೆ ತೊರೆದಿದ್ದು ನಿಮಗೆಲ್ಲ ಗೊತ್ತಿರುವ ವಿಷ್ಯ. ಈಗ ರಾಕಿಂಗ್ ಸ್ಟಾರ್ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡ್ತಾರೆ. ಇವತ್ತು ಐಷರಾಮಿ ಬಂಗ್ಲೆಯಲ್ಲಿ ವಾಸ್ತವ್ಯ ಹೂಡಿರುವ ಕೆಜಿಎಫ್ ಕಿಂಗ್, ಒಂದ್ಕಾಲಕ್ಕೆ ಬೆಂಗಳೂರಲ್ಲಿ ಸಣ್ಣದೊಂದು ಸೂರಿಲ್ಲದೇ ಪರದಾಡಿದ್ದರು. ಒಂದಿಡೀ ರಾತ್ರಿ ಮೆಜೆಸ್ಟಿಕ್ನಲ್ಲೇ ಮಲಗಿ ಅವತ್ತು ದೃಡ ಸಂಕಲ್ಪ ಮಾಡಿದರು. ಇದೇ ಮೆಜೆಸ್ಟಿಕ್ನಲ್ಲಿ ನಂದೊಂದು ಕಟೌಟ್ ಬೀಳಬೇಕು, ನಾನು ಸ್ಟಾರ್ ಆಗ್ಬೇಕು ಅಂತ. ಅದರಂತೇ, ಅವರ ಕನಸು ನೆರವೇರಿದೆ. ಇವತ್ತು ಗಾಂಧಿನಗರ ಮಾತ್ರವಲ್ಲ ವಲ್ಡ್ವೈಡ್ ತುಂಬೆಲ್ಲಾ ಅವರ ಕಟೌಟ್ಗಳು ಬೀಳ್ತಿವೆ. ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿ ಮೀಸೆ ತಿರುವ ಅವಕಾಶವೂ ದಕ್ಕಿದೆ. ಕೆಜಿಎಫ್ ಸರಣಿ ಸಿನಿಮಾದಿಂದ ಯಶ್ ಭವಿಷ್ಯ ಮಾತ್ರವಲ್ಲ ಕನ್ನಡ ಚಿತ್ರರಂಗದ ಭವಿಷ್ಯ ಕೂಡ ಬದಲಾಗಿದೆ. ಮಾರುಕಟ್ಟೆ ವಿಸ್ತಾರವಾಗಿ, ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡ್ತಿವೆ. ಕೋಟಿ ಕೋಟಿ ದೋಚಿಕೊಂಡು ಕನ್ನಡ ಚಿತ್ರರಂಗವನ್ನ ಇನ್ನಷ್ಟು ಶ್ರೀಮಂತಗೊಳಿಸ್ತಿವೆ. ಈಗ ಎಲ್ಲರ ಕಣ್ಣು `ಯಶ್-19′ ಚಿತ್ರದತ್ತ ಬಿದ್ದಿದೆ. ಇದೇ ನವೆಂಬರ್ 01ರಂದು ಕನ್ನಡ ರಾಜ್ಯೋತ್ಸವಕ್ಕೆ ಸಿಹಿಸುದ್ದಿ ಕೊಡ್ತಾರೆ, ಹೊಸ ಸಿನಿಮಾ ಮಾಡ್ತಾರೆನ್ನುವ ಸುದ್ದಿ ಈಗಾಗಲೇ ಸಂಚಲನ ಮೂಡಿಸಿದೆ. ರಾಕಿಭಾಯ್ ಕಡೆಯಿಂದ ಅಧಿಕೃತ ಘೋಷಣೆಯೊಂದು ಬಾಕಿಯಿದೆ.





