ರಕ್ಷಿತ್ ಶೆಟ್ಟಿ ನಿರ್ಮಿಸಿರುವ ಮತ್ತು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಪ್ತ ಸಾಗರದಾಚೆ ಎಲ್ಲೊ’ ಚಿತ್ರ ಇದೀಗ ‘ಸಪ್ತ ಸಾಗರಲು ಧಾಟಿ’ ಎಂಬ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ ಭಾಷೆಯಲ್ಲಿ ಅದ್ಭುತ ಪ್ರಶಂಸೆ ಪಡೆದ ಚಿತ್ರದ ‘ಸಪ್ತ ಸಾಗರದಾಚೆ ಎಲ್ಲೊ’ ತೆಲುಗು ಅವತರಣಿಕೆಯು ಸೆ.22ರಂದು ತೆರೆ ಕಾಣುತ್ತಿದೆ.

ಸೆಪ್ಟೆಂಬರ್ 1ರಂದು ಕನ್ನಡದಲ್ಲಿ ತೆರೆಕಂಡ ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೊ- ಸೈಡ್ ಎ’ ರಾಜ್ಯದಲ್ಲಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಶಹಬ್ಬಾಸ್ ಗಿರಿ ಪಡೆದ ಮನು- ಪ್ರಿಯಾ ಪ್ರೇಮ ಕಥೆ ಇದೀಗ ತೆಲುಗು ಭಾಷೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದೆ.

ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ಮನು ಮತ್ತು ಪ್ರಿಯಾ ಅವರ ಪ್ರೀತಿ, ಬದುಕಿನ ಆಕಾಂಕ್ಷೆಯು ತಳ್ಳುವ ಪ್ರಪಾತ, ಅದರಿಂದ ಹೊರ ಬರಬರುವ ಪಯಣದಲ್ಲಿ ಉಂಟಾಗುವ ಅನಿರೀಕ್ಷಿತ ಏರಿಳಿತಗಳನ್ನು ಚಿತ್ರದ ಮೊದಲ ಭಾಗದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಸದ್ಯ ಕನ್ನಡದಲ್ಲಿ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಎರಡನೇ ಭಾಗದ ಬಿಡುಗಡೆಗೆ ತಯಾರಿ ನಡೆಯುತ್ತಿರುವಂತೆಯೇ ‘ಸಪ್ತ ಸಾಗರದಾಚೆ ಎಲ್ಲೊ’ ಮೊದಲ ಭಾಗ ತೆಲುಗಿಗೆ ಹೋಗುತ್ತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ನೀಡಿದೆ.





