ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಡೆದ ನೈಜಘಟನೆ ಆಧಾರಿತ ಚಿತ್ರ ‘ಸೇನಾಪುರ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತರಾದ ರಂಗನಾಥ್ ಭಾರದ್ವಾಜ್, ನಟಿ ಪ್ರಿಯಾ ಹಾಸನ್ ‘ಸೇನಾಪುರ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ. ಗುರು ಸಾವನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಸೇನಾಪುರ’ ಸಿನಿಮಾದಲ್ಲಿ ದಿನೇಶ್ ಮಂಗಳೂರು, ಅನನ್ಯಾ ಭಟ್, ಬಿ. ಎಂ. ಗಿರಿರಾಜ್, ಸಿಂಧೂ, ಶೇಖರ್ರಾಜ್, ರೀನಾ, ಅಮೂಲ್ಯ, ಪರಮೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕುಂದಾಪುರ ಹಾಗೂ ಕರಾವಳಿ ಭಾಗದಲ್ಲಿ ನಡೆದ ಕೆಲ ನೈಜ ಘಟನೆಯನ್ನು ಇಟ್ಟುಕೊಂಡು ‘ಸೇನಾಪುರ’ ಸಿನಿಮಾ ಮಾಡಲಾಗಿದೆ. ಮೊದಲು ‘ಸೇನಾಪುರ’ ಸಿನಿಮಾ ಮಾಡಲು ಹೊರಟಿರಲಿಲ್ಲ. ವೆಬ್ ಸೀರಿಸ್ ಮಾಡಬೇಕು ಎಂದುಕೊಂಡಿದ್ದೆವು. ಕೊನೆಗೆ ಈ ಕಥೆ ಸಿನಿಮಾ ಮಾಡುವುದೇ ಸೂಕ್ತ ಎಂಬ ಕಾರಣಕ್ಕೆ ಸಿನಿಮಾ ಮಾಡಿದೆವು. ವಿಭಿನ್ನವಾಗಿ ಕಥೆಯನ್ನು ಸಿನಿಮಾದಲ್ಲಿ ಹೆಣೆಯಲಾಗಿದೆ. ಚಿತ್ರ ನೈಜತೆಗೆ ಹತ್ತಿರವಾಗಿದೆ. ನವೆಂಬರ್ 2ನೇ ವಾರ ‘ಸೇನಾಪುರ’ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದೆ ಚಿತ್ರತಂಡ.ಗುರುಸಾವನ್ ಕಥೆ, ಚಿತ್ರಕಥೆ ಬರೆದು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿರುವ ‘ಸೇನಾಪುರ’ ಸಿನಿಮಾವನ್ನು ಅಮಿತ್ ಕುಮಾರ್ ಮತ್ತು ರಾಹುಲ್ ದೇವ್ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.





