ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ‘ಶಿವಾಜಿ ಸುರತ್ಕಲ್’ ಮತ್ತು ‘ಶಿವಾಜಿ ಸುರತ್ಕಲ್-2’ ಸಿನಿಮಾಗಳ ಯಶಸ್ಸಿನ ನಂತರ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಜೋಡಿ ಮೂರನೇ ಬಾರಿ ‘ದೈಜಿ’ ಎಂಬ ಸಿನಿಮಾಕ್ಕೆ ಒಂದಾಗುತ್ತಿದೆ.

ಈ ಹಿಂದೆ ‘ಸುಳ್ಳೇ ಸತ್ಯ’ ಎಂಬ ಕಿರುಚಿತ್ರ, ಅದಾದ ನಂತರ ಪವನ್ ಕುಮಾರ್ ನಿರ್ದೇಶನದ ‘ಲೂಸಿಯಾ’, ಡಾಲಿ ಧನಂಜಯ್ ನಟಿಸಿದ ‘ಬದ್ಮಾಶ್’ ಸಿನಿಮಾಗಳನ್ನು ನಿರ್ಮಿಸಿದ್ದ, ‘ವಿಭಾ ಕಶ್ಯಪ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಇನ್ನು ಈ ಸಿನಿಮಾದ ಶೀರ್ಷಿಕೆಯಾದ ‘ದೈಜಿ’ ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ‘ದೈಜಿ’ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ‘ದೈಜಿ’ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳಿವೆಯಂತೆ. ಮಿಸ್ಟರಿ ಕಂ ಹಾರರ್ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ.

ರಮೇಶ್ ಅರವಿಂದ್ ಅಭಿನಯದ ‘ಅಮೆರಿಕ ಅಮೆರಿಕ’ ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆಯಾಗಿದ್ದು, ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡುತ್ತಿದ್ದೇವೆ. ಎಂಬುದು ಚಿತ್ರತಂಡ ನೀಡಿರುವ ಮಾಹಿತಿ.





