ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರೋ ಕುಂಭ ಮೇಳದತ್ತ ಇದೀಗ ಇಡೀ ಜಗತ್ತಿನ ಚಿತ್ತ ಹೊರಳಿಕೊಂಡಿದೆ. ಇದು ಭಾರತದ ಆಧ್ಯಾತ್ಮಿಕ ಜಗತ್ತಿನ ಮಹಾನ್ ಸೋಜುಗದಂತೆ ಜಗತ್ತಿನ ನಾನಾ ದೇಶಗಳ ಜನರನ್ನು ಸೆಳೆಯಲಾರಂಭಿಸಿದೆ. ಈವತ್ತಿಗೆ ವಿಶ್ವವೆಲ್ಲ ಆಧುನೀಕತೆಗೆ ಒಗ್ಗಿಕೊಂಡಿದೆ. ವಿಜ್ಞಾನ ಅನ್ನೋದು ಒಂದು ಅಸೀಮ ಅರಿವನ್ನು ಜನರಿಗೆ ತಲುಪಿಸುವಲ್ಲಿಯೂ ತಕ್ಕ ಮಟ್ಟಿಗೆ ಯಶ ಕಂಡಿದೆ. ಆದರೆ, ಭಾರತದ ಆಧ್ಯಾತ್ಮಿ ಲೀಕದ ನಿಗೂಢಗಳನ್ನು ಭೇದಿಸುವಲ್ಲಿ ಮಾತ್ರ ವೈಜ್ನಾನಿಕ ಕ್ಷೇತ್ರವೂ ಹಿನ್ನಡೆ ಅನುಭವಿಸಿದಂತಿದೆ. ಯಾಕಂದ್ರೆ, ಅದು ಯಾವ ಪರಿಧಿಗೂ ಸಲೀಸಾಗಿ ನಿಲುಕದ ಅದ್ಭುತ ಜಗತ್ತು. ಇಲ್ಲಿ ತರ್ಕಗಳಿಗೆ ಒಗ್ಗದ ಸಾವಿರ ವಿಚಾರಗಳಿವೆ. ವೈಜ್ಞಾನಿಕ ಮನೋಭಾವವನ್ನೇ ಆವರಿಸಿಕೊಳ್ಳಬಲ್ಲ ಸಮ್ಮೋಹಕ ಅಂಶಗಳಿವೆ. ಯಾವುದು ಮೌಢ್ಯ? ಮತ್ಯಾವುದು ನಂಬಿಕೆ? ಹೀಗೆ ಸಾವಿರ ಪ್ರಶ್ನೆಗಳಿವೆ. ಆದರೆ ಈವತ್ತಿಗೆ ಮಹಾ ಕುಂಭ ಮೇಳ ನಡೆಯುತ್ತಿರೋ ರೀತಿ, ಅಲ್ಲಿ ನೆರೆಯುತ್ತಿರುವ ಕೋಟ್ಯಂತರ ಭಕ್ತಗಣದ ಮುಂದೆ ಮಿಕ್ಕೆಲ್ಲ ಪ್ರಶ್ನೆಗಳೂ ಮಂಡಿಯೂರಿ, ಈ ನೆಲದಲ್ಲಿ ಬೆರೆತು ಹೋಗಿರುವ ನಂಬಿಕೆಗಳು ಮಾತ್ರವೇ ಝೇಂಕರಿಸುತ್ತಿರುವಂತೆ ಭಾಸವಾಗುತ್ತದೆ.
144ವರ್ಷಗಳ ಅಚ್ಚರಿ
ಕುಂಭ ಮೇಳಕ್ಕೊಂದು ಐತಿಹಾಸಿಕ ಹಿನ್ನೆಲೆ ಇದೆ. ಅದರ ಸುತ್ತಾ ನಾನಾ ನಂಬಿಕೆಗಳು ಹಬ್ಬಿಕೊಂಡಿವೆ. ಈ ಬಾರಿ ನಡೆಯುತ್ತಿರೋದು ನೂರಾ ನಲವತ್ನಾಲಕ್ಕು ವರ್ಷಗಳಿಗೊಮ್ಮೆ ನಡೆಯೋ ಮಹಾ ಕುಂಭ ಮೇಳ. ಈವತ್ತಿಗೆ ಈ ಕುಂಭ ಮೇಳದಲ್ಲಿ ಭಾಗಿಯಾದವರು ಮಾತ್ರವಲ್ಲ; ಅದನ್ನು ದೂರದಲ್ಲಿ ನಿಂತು ಬೆರಗಿನಿಂದ ನೋಡುತ್ತಿರೋ ಈವತ್ತುನ ಹೊಸ ತಲೆಮಾರೂ ಕೂಡಾ ಮುಂದಿನ ಕುಂಭ ಮೇಳವನ್ನ ನೋಡಲು ಸಾಧ್ಯವಾಗೋದಿಲ್ಲ. ಈ ಕಾರಣದಿಂದಲೇ ಫೆಬ್ರವರಿ ಇಪ್ಪತ್ತಾರರವರೆಗೆ ನಡೆಯಲಿರೋ ಕುಂಭ ಮೇಳವನ್ನು ಕಣ್ತುಂಬಿಕೊಳ್ಳಲೇ ಬೇಕೆಂಬ ತೀವ್ರ ಆಕಾಂಕ್ಷೆ ಆಸ್ತಿಕ ವಲಯವನ್ನು ಆವರಿಸಿಕೊಂಡಿದೆ. ಅದರ ಹಿಂದೆ ವಿಧಿವತ್ತಾದ ಅನೇಕ ನಡಾವಳಿಗಳು ನಿಖರ ದಿನಾಂಕ, ಮುಹೂರ್ತಗಳಂದು ನಡೆಯುತ್ತಾ ಬಂದಿದೆ.
ಆರು ವರ್ಷಕ್ಕೊಂದು ಸಲ ಕುಂಭ ಮೇಳ ನಡೆದರೆ, ಹನ್ನೆರಡು ವರ್ಷಗಳಿಗೊಂದು ಸಲ ಕುಂಭ ಮೇಳ ನಡೆಯುತ್ತದೆ. ಪ್ರತೀ ಹನ್ನೆರಡು ವರ್ಷಕ್ಕೊಂದು ಬಾರಿ ಪೂರ್ಣ ಕುಂಭ ಮೇಳ ನಡೆಯುತ್ತದೆ. ಹೀಗೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಹನ್ನೆರಡು ಪೂರ್ಣ ಕುಂಭ ಮೇಳದ ನಂತರ, ನೂರಾ ನಲವತ್ತನಾಲಕ್ಕು ವರ್ಷಗಳ ಬಳಿಕ ಮಹಾಕುಂಭ ಮೇಳ ನಡೆಯುತ್ತೆ. ಈಗ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರೋದು ಅಂಥಾದ್ದೇ ಒಂದು ಅತ್ಯಂತ ಅಪರೂಪದ, ಶತಮಾನದ ಬಳಿಕ ಒಂದು ತಲೆಮಾರನ್ನು ಮಾತ್ರ ಒಳಗೊಳ್ಳುವಂಥಾ ಮಹಾ ಕುಂಭ ಮೇಳ. ಇಂಥಾದ್ದೊಂದು ಹಿನ್ನೆಲೆ ಇರೋದರಿಂದಲೇ ಪ್ರತೀ ನಿತ್ಯ ಕೋಟಿ ಕೋಟಿ ಮಂದಿ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿ ಧನ್ಯರಾಗುತ್ತಿದ್ದಾರೆ.
ಈ ಮಹಾ ಕುಂಭ ಮೇಳದಲ್ಲಿ ಭಾಗಿಯಾಗೋ ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಾರೆ. ಈ ಬಾರಿಯಂತೂ ದಾಖಲೆ ಮಟ್ಟದಲ್ಲಿ ಅಲ್ಲಿ ಭಕ್ತ ಗಣ ಜಮಾಯಿಸುತ್ತಿದೆ. ಕೇವಲ ಭಾರತೀಯರು ಮಾತ್ರವಲ್ಲದೇ; ವಿದೇಶಗಳಿಂದಲೂ ಜನ ಆಕರ್ಷಿತರಾಗಿ ಕುಂಭ ಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಅದು ಭಾರತೀಯ ಅಧ್ಯಾತ್ಮ ಪರಂಪರೆಗಿರುವ ನಿಜವಾದ ಶಕ್ತಿ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ವಿಶ್ವದ ಎಲ್ಲಾ ದೇಶಗಳಲ್ಲಿಯೂ ಆಯಾ ಭಾಗಕ್ಕನುಗುಣವಾದ ಧಾರ್ಮಿಕ ನಂಬಿಕೆಗಳಿದ್ದಾವೆ. ಆದರೆ ಭಾರತದಲ್ಲಿರುವಂಥ ವೈವಿಧ್ಯಮಯ ಆಚಾರ ವಿಚಾರಗಳು, ನಂಬಿಕೆಗಳು, ಆಚರಣೆಗಳು ಜಗತ್ತಿನ ಬೇರ್‍ಯಾವ ಭೂಭಾಗಗಳಲ್ಲಿಯೂ ಖಂಡಿತಾ ಕಾಣ ಸಿಗಲು ಸಾಧ್ಯವಲ್ಲ. ಈಗ ನಡೆಯುತ್ತಿರೋ ಮಹಾ ಕುಂಭ ಮೇಳದ ನೆಪದಲ್ಲಿ ಆಧುನಿಕ ಜಗತ್ತಿನ ಮುಂದೆ ಭಾರತದ ಆಧ್ಯಾತ್ಮಿಕ ಶ್ರೀಮಂತಿಕೆ ಅಕ್ಷರಶಃ ಪ್ರಜ್ವಲಿಸುತ್ತಿದೆ.
ಗಮನೀಯ ಅಂಶವೆಂದರೆ, ಒಟ್ಟಾರೆ ಈ ಕುಂಭ ಮೇಳದಲ್ಲಿ ನಾನಾ ಸ್ವರೂಪಗಳ ಆಕರ್ಷಣೆಗಳಿದ್ದರೂ ಕೂಡಾ ಪ್ರಧಾನ ಆಕರ್ಷಣೆಯಾಗಿ ಕಾಣಿಸೋದು ನಾಗಾ ಸಾಧುಗಳ ನಿಗೂಢ ಅಘೋರಿ ಜಗತ್ತು. ಬಹುಶಃ ಕುಂಭ ಮೇಳವೊಂದನ್ನು ಹೊರತು ಪಡಿಸಿದರೆ ಬೇರೆಲ್ಲೂ ಕೂಡಾ ಇಷ್ಟು ದೊಡ್ಡ ಸಂಖ್ಯೆಯ ನಾಗಾ ಸಾಧುಗಳನ್ನು ಕಾಣಲು ಸುತಾರಾಂ ಸಾಧ್ಯವಿಲ್ಲ. ಸಾಮಾನ್ಯವಾಗಿ ನಾಗಾ ಸಾಧುಗಳು, ಅಘೋರಿಗಳು ಭಾರತದ ಬೇರ್‍ಯಾವ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುವವರಲ್ಲ. ಸದಾ ಕಾಲವೂ ಕಠೋರ ಸಿದ್ಧಿಯಲ್ಲಿ ತೊಡಗಿಸಿಕೊಳ್ಳುವ ಅಘೋರಿಗಳ ಬದುಕೇ ರಣ ರೋಚಕ. ಈವತ್ತಿಗೆ ಮಹಾ ಕುಂಭ ಮೇಳದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚುತ್ತಿರುವವರು ಈ ನಾಗಾ ಸಾಧುಗಳೇ. ಇವರ ನಿಗೂಢ ಜಗತ್ತಿನತ್ತ ಹಣಕಿ ಹಾಕುವ ಮುನ್ನ ಕುಂಭ ಮೇಳದ ಪೌರಾಣಿಕ ಹಿನ್ನೆಯತ್ತ ಒಂದಷ್ಟು ಬೆಳಕು ಚೆಲ್ಲುವುದೊಳಿತು…
ಸಮುದ್ರ ಮಥನದ ನಂಟು
ಭಾರತದಲ್ಲಿ ಲೆಕ್ಕವಿಲ್ಲದಷ್ಟು ನಂಬಿಕೆಗಳಿವೆ. ಹಾಗೆ ಹಾಸುಹೊಕ್ಕಾದ ಪ್ರತೀ ನಂಬಿಕೆಗಳಿಗೂ ಕೂಡಾ ಬೆರಗಾಗಿಸುವಂಥಾ ಅಧ್ಯಾತ್ಮದ ನಂಟಿದೆ. ಹಾಗಿದ್ದ ಮೇಲೆ ಈ ಕುಂಭ ಮೇಳವೆಂಬ ಪರಿಕಲ್ಪನೆಗೆ ಘನವಾದೊಂದು ಇತಿಹಾಸ ಇರದಿರಲು ಸಾಧ್ಯವೇ? ಈ ಬಗ್ಗೆ ಕೆದಕುತ್ತಾ ಹೋದರೆ, ಅದರ ಮೂಲವೆಂಬುದು ಸಮುದ್ರ ಮಂಥನದತ್ತ ಕರೆದೊಯ್ಯುತ್ತೆ. ಅಮೃತ ಸೇವನೆಗೋಸ್ಕರ ದೇವಾನುದೇವತೆಗಳು ಮತ್ತು ರಾಕ್ಷಸ ಸಮೂಹದ ನಡುವೆ ನಡೆದ ಭೀಕರ ಯುದ್ಧವನ್ನು ಸಮುದ್ರ ಮಂಥನ ಅಂತ ಕರೆಯಲಾಗುತ್ತೆ. ಅಮೃತ ಸೇವನೆಗಾಗಿ ಮಂದರಾಚಲ ಪರ್ವತವನ್ನು ಕಡೆಗೋಲಾಗಿಯೂ, ವಾಸುಕಿಯನ್ನು ಹಗ್ಗವಾಗಿಯೂ ಬಳಸಿಕೊಳ್ಳಲಾಗಿತ್ತು. ಈ ಜಿದ್ದಾಜಿದ್ದಿ ಸೆಣಸಾಟದಂಥಾ ಕಡೆಯುವಿಕೆಯಲ್ಲಿ ಕಡೆಗೂ ಅಮೃತ ತುಂಬಿದ ಕಳಶ ಸಾಗರದಿಂದ ಹೊರ ಬರುತ್ತೆ. ಆ ಸಮಯದಲ್ಲಿ ನಾಲಕ್ಕು ಅಮೃತದ ಹನಿಗಳು ನಾಲಕ್ಕು ಜಾಗಗಳಿಗೆ ಚಿಮ್ಮಿ ಬಿದ್ದಿದ್ದವು. ಆ ಮೂರು ಸ್ಥಳಗಳು ಈವತ್ತಿನ ಪ್ರಯಾಗ್ ರಾಜ್, ಹರಿದ್ವಾರ, ಉಜ್ಜೈನ್, ನಾಸಿಕ್ ಅಂತ ಹೇಳಲಾಗುತ್ತೆ. ಈ ಸ್ಥಳಗಳಲ್ಲಿಯೇ ಕುಂಭ ಮೇಳ ಜರುಗುತ್ತಾ ಬಂದಿದೆ.
ಅದು ನಿಗೂಢ ಲೋಕ
ಮನುಷ್ಯ ಸಂಘಜೀವಿ. ಅದೇನೇ ತಕರಾರುಗಳಿದ್ದರೂ ಕೂಡಾ ಸದಾ ಒಂದಷ್ಟು ಮಂದಿಯೊಂದಿಗೆ ಸಂಪರ್ಕದಲ್ಲಿದ್ದುಕೊಂಡು, ಜನರ ನಡುವೆಯೇ ಬದುಕಲು ಬಯಸೋದು ಮನುಷ್ಯರ ಸಹಜ ನಡವಳಿಕೆ. ಇದೆಲ್ಲದರ ನಡುವೆ ನಾನಾ ಆಘಾತಗಳಿಂದ ಮನುಷ್ಯರಿಂದ ತುಸು ಅಂತರ ಕಾಯ್ದುಕೊಂಡು, ದ್ವೀಪದಂತಿರುವವರೆಲ್ಲ ಜನಸಾಮಾನ್ಯರ ಪಾಲಿಗೆ ನಿಗೂಢವಾಗಿಯೇ ಕಾಣಿಸುತ್ತಾರೆ. ಆ ದ್ವೀಪದತ್ತ ಸಹಜವಾಗಿಯೇ ಆಸುಪಾಸಿನ ಮಂದಿಯ ದೃಷ್ಟಿ ನೆಟ್ಟುಕೊಳ್ಳೋದಿದೆ. ಹಾಗಿರುವಾಗ ಕುಂಭ ಮೇಳವನ್ನು ಹೊರತಾಗಿಸಿ ಬೇರೆಲ್ಲೂ ಕಾಣಸಿಗದ ನಾಗಾಸಾಧುಗಳ ಬಗ್ಗೆ ಕೌತುಕ ಮೂಡಿಕೊಳ್ಳದಿರಲು ಸಾಧ್ಯವೇ?
ಈವತ್ತಿಗೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಅಘೋರಿಗಳ ಜಾತ್ರೆಯೇ ನೆರೆದಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ನಾಗಾ ಸಾಧುಗಳು ಬೇರೆ ಅವಧಿಯಲ್ಲಿ ಎಲ್ಲಿರುತ್ತಾರೆ? ಅವರ ಜೀವನ ಕ್ರಮ ಹೇಗಿರುತ್ತದೆ? ಯಾವ ಉದ್ದೇಶವಿಟ್ಟುಕೊಂಡು ಅವರೆಲ್ಲ ಇಂಥಾದ್ದೊಂದು ಅತಿಭಯಂಕರ ಹಾದಿಯಲ್ಲಿ ಆಧ್ಯಾತ್ಮಿಕ ಸಾಧನೆಗಳಿಗುತ್ತಾರೆ? ನರಮನುಷ್ಯರಾದ ನಾವೆಲ್ಲ ಸಾಮಾನ್ಯವಾದೊಂದು ಕೆಲಸ ಮಾಡೋ ಸಂಕಲ್ಪ ಮಾಡಿ, ಅದರಿಂದ ಅರ್ಧದಲ್ಲಿಯೇ ನುಣುಚಿಕೊಳ್ಳೋದಿದೆ. ಒಂದು ಕೆಲಸ ಹಿಡಿದರೆ ಅಸು ಬಹುಬೇಗನೆ ಬೋರು ಹೊಡೆಸುತ್ತೆ. ಅಂಥಾದ್ದರಲ್ಲಿ ಒಂದ್ಯಾವುದೋ ಉದ್ದೇಶಕ್ಕೆ ಬದುಕನ್ನೇ ಮುಡಿಪಾಗಿಡುವ, ಎಲ್ಲ ಐಹಿಕ ಸಂಕೋಲೆಗಳನ್ನು ಧಿಕ್ಕರಿಸಿ ಬದುಕೋ ಶಕ್ತಿ ಈ ನಾಗಾ ಸಾಧುಗಳಿಗೆ ಸಿದ್ಧಿಸೋದು ಹೇಗೆ? ನಾಗಾ ಸಾಧುಗಳ ಬಗ್ಗೆ ಇಂಥಾ ಹತ್ತಾರು ಪ್ರಶ್ನೆಗಳಿವೆ. ಜನಸಾಮಾನ್ಯರಲ್ಲಿಯೂ ಕುತೂಹಲಗಳಿದ್ದಾವೆ!
ಸನ್ಯಾಸ ದೀಕ್ಷೆಯಂಥಾ ನಡಾವಳಿಗಳೇ ಜನಸಾಮಾನ್ಯರ ಪಾಲಿಗೆ ಅಚ್ಚರಿಯಾಗಿ ಕಾಣಿಸುತ್ತೆ. ಇದ್ದಬದ್ದ ಬಂಧಗಳನ್ನೆಲ್ಲ ಕಳಚಿಕೊಂಡು ಏಕಾಂಗಿಯಾಗಿ ಧ್ಯಾನಸ್ಥರಾಗೋ ಸನ್ಯಾಸ ಪರೆಂಪರೆಯೇ ಅಚ್ಚರಿ ಮೂಡಿಸುತ್ತೆ. ಗಮನೀಯ ಅಂಶವೆಂದರೆ, ನಮ್ಮ ಸುತ್ತಲಿರೋ ಸನ್ಯಾಸ ಪರಂಪರೆ ಅತ್ಯಂತ ಸಾತ್ವಿಕ ಚೌಕಟ್ಟಿನಲ್ಲಿದೆ. ಆದರೆ ಅಘೋರಿಗಳ ಲೋಕ ಮತ್ರಾ ಅದೆಲ್ಲದಕ್ಕೂ ತದ್ವಿರುದ್ಧ. ಅದರೊಳಗಿನ ಪ್ರತೀ ಕದಲಿಕೆಗಳೂ ನಿಗೂಢ. ಈ ಅಘೋರಿಗಳ ಆಧ್ಯಾತ್ಮಿಕ ಸಿದ್ಧಿಯ ಹಾದಿಯಿದೆಯಲ್ಲಾ? ಅದು ನಿಜಕ್ಕೂ ರಣ ರೋಚಕ. ಅದರೊಳಗೆ ಅಡ್ಡಾಡೋದಿರಲಿ, ತುಸು ಇಣುಕಿ ನೋಡಲೂ ಕೂಡಾ ಸಾವಿರ ಗುಂಡಿಗೆ ಬೇಕಾಗುತ್ತದೆ. ಸಾಮಾನ್ಯ ಜನರು ಅದರ ಸಣ್ಣ ಸಣ್ಣ ಕಥನಗಳನ್ನು ಕೇಳಿದರೂ ಕೂಡಾ ಬೆಚ್ಚಿ ಬೀಳೋದು ಗ್ಯಾರೆಂಟಿ.
ಅಘೋರಿ ಅಂದ್ರೆ ಏನು?
ಈ ಅಘೋರಿ ಎಂಬುದರ ಪದಮೂಲ ಸಂಸ್ಕೃತದಲ್ಲಿದೆ. ಅಂಧಕಾಲ ಮೀರಿದ, ಭಯವಿಲ್ಲದ ಎಂಬಂಥಾ ಅರ್ಥ ಅದಕ್ಕಿದೆ. ಬಹುಶಃ ಭಯ ಮತ್ತು ಮಾನಸಿಕ ಚಂಚಲತೆಯನ್ನು ಮೀರಿಕೊಳ್ಳದ ಯಾರೊಬ್ಬರೂ ಕೂಡಾ ಅಘೋರಿಯಾಗುವ ಬಗ್ಗೆ ಆಲೋಚಿಸಲೂ ಸಾಧ್ಯವಿಲ್ಲ. ಇದೀಗ ಅಘೋರಿಗಳ ಬಗ್ಗೆ ಚರ್ಚೆಗಳಾಗುತ್ತಿವೆ. ಅನೇಕರು ಅಘೋರಿಯಾಗೋದರ ಬಗ್ಗೆ ತಮಗೆ ತೋಚಿದಂತೆ, ಹಗುರವಾದ ವಿಶ್ಲೇಷಣೆಯನ್ನೂ ಮಾಡುತ್ತಿದ್ದಾರೆ. ಆದರೆ, ಅಘೋರಿಯಾಗುವ ಹಾದಿ ಸಲೀಸಾದುದಲ್ಲ. ಅಲ್ಲಿ ಹೆಜ್ಜೆ ಹೆಜ್ಜೆಗೂ ಕಠೋರ ಹಾದಿಯನ್ನು ಕ್ರಮಿಸಬೇಕಾಗುತ್ತದೆ. ಹಾಗಂತ ಈ ನಾಗಾ ಸಾಧುಗಳೆಲ್ಲ ಒಂದೇ ಪಂಥಕ್ಕೆ ಸೇರಿದವರು ಅಂದುಕೊಳ್ಳುವಂತಿಲ್ಲ. ನಾಗಾ ಸಾಧುವಾಗಿ ರೂಪಾಂತರ ಹೊಂದಿ, ಅಘೋರಿಯಾಗುವ ಹಾದಿಯೊಂದು ಸುದೀರ್ಘ ಪಯಣ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ.
ಕಂಕಾಲರು, ಕಾಪಾಲಿಕರು, ಹಠಯೋಗಿ, ಚಾಂಡಾಲರು ಹೀಗೆ ಅಘೋರಿಗಳಲ್ಲಿಯೇ ನಾನಾ ಪಂಥಗಳಿದ್ದಾವೆ. ಈಗಾಗಲೇ ಭಾರತದ ಅನೇಕರು ನಾಗಾ ಸಾಧುಗಳ ಲೋಕದೊಳಗೆ ತೆರಳಿ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಆದರೆ, ಈ ಸಿಕ್ಕಿರೋದೇ ಅಚಿತಿಮವಲ್ಲ. ಯಾಕೆಂದರೆ, ನಾಗಾ ಸಾಧುಗಳು ಯಾವ ಕಾರಣಕ್ಕೂ ಕೂಡಾ ತಮ್ಮ ರಹಸ್ಯಗಳನ್ನು ಖುಲ್ಲಂಖುಲ್ಲಾ ಹೊರಜಗತ್ತಿಗೆ ಬಿಟ್ಟು ಕೊಡುವವರಲ್ಲ. ಒಂದು ವೇಳೆ ನಾಗಾ ಸಾಧುಗಳ ಜೀವನ ಕ್ರಮ, ತಂತ್ರ ವಿದ್ಯೆಗಳ ಒಂದಷ್ಟು ವಿಚಾರಗಳನ್ನಾದರೂ ತಿಳಿದುಕೊಳ್ಳಬೇಕೆಂದರೆ, ಅದೇ ಹಾದಿಯಲ್ಲಿ ನಡೆದು ನಾಗಾಸಾಧುಗಳಾಗಿ ಧೀಕ್ಷೆ ಪಡೆಯಬೇಕಾಗುತ್ತದೆ. ಒಂದು ವೇಳೆ ಆ ಸಾಹಸ ಮಾಡಿದರೂ ಸಹ ಎಲ್ಲ ವಿಚಾರಗಳೂ ದಕ್ಕಲು ಸಾಧ್ಯವಿಲ್ಲ. ಹೀಗೆ ನಾಗಾ ಸಾಧುವಾಗಿ ದೀಕ್ಷೆ ಪಡೆದುಕೊಂಡರೂ ಒಂದು ಪಂಥಕ್ಕೆ ಸೇರಿಕೊಳ್ಳಬೇಕಾಗುತ್ತೆ. ಆ ಪಂಥದ ಆಚಾರ ವಿಚಾರಗಳು ತಿಳಿಯಬಹುದಾದರೂ, ಬೇರೆ ಪಂಥಗಳು ನಿಗೂಢವಾಗಿಯೇ ಉಳಿದು ಬಿಡುತ್ತವೆ.
ಅಘೋರಿಗಳ ನಿಗೂಢ ಲೋಕ
ಇಲ್ಲಿ ಯಾವ ಪಂಥದ ಸಾಧುಗಳಾದರೂ ಕೂಡಾ ಮೂರು ಮಹತ್ವದ ಘಟ್ಟಗಳನ್ನು ದಾಟಿಕೊಳ್ಳಬೇಕಾಗುತ್ತದೆ. ಸ್ಮಶಾನ ಸಾಧನಾ, ಶಿವ ಸಾಧನಾ ಮತ್ತು ಶವ ಸಾಧನಾ ಎಂಬುದು ನಾಗಾ ಸಾಧುಗಳನ್ನು ಭಯಾನಕ ಪರೀಕ್ಷೆಗೊಳಪಪಡಿಸುವಂಥಾ ಮಹತ್ವದ ಘಟ್ಟಗಳು. ವೈರಾಗ್ಯ ಮತ್ತು ಆಧ್ಯಾತ್ಮಿಕ ಸೆಳೆತ ತೀವ್ರವಾದ ಮನಸುಗಳು ಆರಂಭಿಕವಾಗಿ ಆಕರ್ಷಿತರಾಗೋದೇ ಹಿಮಾಲಯದತ್ತ. ಹಿಮಾಲಯ ಅನ್ನೋದು ಅನೇಕಾನೇಕ ಧಾರ್ಮಿಕ ನಿಗೂಢಗಳ ಕಟಾಂಜನ. ಹಾಗೆ ಎಲ್ಲವನ್ನೂ ತೊರೆದು ಹೊರಟ ಮಂದಿ ನಾಗಾ ಸಾಧುಗಳಾಗಬೇಕು, ಅಘೋರಿಗಳಾಗಬೇಕೆಂದು ಹೊರಡೋದಿದೆ. ನಮಗೆಲ್ಲ ಅರಿವಿಗೆ ಬಾರದಂತೆ ವರ್ಷಾವರ್ಷ ಭಾರತದ ಮೂಲೆ ಮೂಲೆಗಳಿಂದ ಅನೇಕರು ಅಘೋರಿಯಾಗ ಹೊರಡುತ್ತಾರೆ. ಅಂಥವರೆಲ್ಲ ಗುರುಗಳನ್ನು ಹುಡುಕಿ ಆ ಹಾದಿಯಲ್ಲಿ ಹೊರಡುತ್ತಾರಾದರೂ, ಅಲ್ಲಿ ನೆಲೆ ಕಂಡುಕೊಳ್ಳಲಾರದೆ ಮತ್ತೆ ಹಿಂತಿರುಗೋದೂ ಇದೆ. ಎಲ್ಲವನ್ನೂ ಸಹಿಸಿಕೊಂಡು ನೆಲೆ ನಿಲ್ಲುವವರು ಮಾತ್ರವೇ ನಾಗಾ ಸಾಧುಗಳಾಗುತ್ತಾರೆ. ಅದರಲ್ಲಿ ಕೆಲವೇ ಕೆವರು ಮಾತ್ರವೇ ನಿಜವಾದ ಅಘೋರಿಗಳಾಗಿ ಬದಲಾಗುತ್ತಾರೆ.
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರೋ ಕುಂಭ ಮೇಳಕ್ಕೆ ಲಕ್ಷಾಂತರ ನಾಗಾ ಸಾಧುಗಳು ಆಗಮಿಸುತ್ತಿದ್ದಾರೆ. ಅವರೂ ಕೂಡಾ ಪವಿತ್ರ ಸ್ನಾನ ಮಾಡಿ, ತಮ್ಮ ಸಿದ್ದಿ ಕಾರ್ಯದಲ್ಲಿ ಮುಂದುವರೆದಿದ್ದಾರೆ. ಸೋಶಿಯಲ್ ಮೀಡಿಯಾ ಮಂದಿ ನಾಗಾ ಸಾಧುಗಳನ್ನು ಹಿಂಬಾಲಿಸುತ್ತಾ, ಹೋದಲ್ಲಿ ಬಂದಲ್ಲಿ ಕ್ಯಾಮೆರಾ ಹಿಡಿಯುತ್ತಾ ಮೈಲೇಜು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕೆಲ ಮಂದಿ ಅಧಿಕ ಪ್ರಸಂಗ ಮಾಡಲು ಹೋಗಿ ನಾಗಾ ಸಾಧುಗಳಿಂದ ಒದೆ ತಿಂದಿದ್ದೂ ಆಗಿದೆ. ಹೇಳಿಕೇಳಿ ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿರುವ ಸ್ಪರ್ಧೆಗಳಿಂದ ಇದೀಗ ಯಾವ ರಹಸ್ಯಗಳೂ ಕೂಡಾ ರಹಸ್ಯವಾಗುಳಿದಿಲ್ಲ. ಹೀಗೆ ಸರ್ವಾಂತರ್ಯಾಮಿ ಆಗಿರುವ ಸೋಶಿಯಲ್ ಮೀಡಿಯಾ ಕೂಡಾ ನಾಗಾ ಸಾಧುಗಳು, ಅಘೋರಿಗಳ ನಿಗೂಢ ಬೇಧಿಸಲು ಸಾಧ್ಯವಾಗಿಲ್ಲ. ಯಾಕೆಂದರೆ, ಅದು ಅಷ್ಟು ಸಲೀಸಿನ ಸಂಗತಿ ಖಂಡಿತವಾಗಿಯೂ ಅಲ್ಲ.
ಅಘೋರಿಗಳೆಲ್ಲ ಅದೆಲ್ಲಿರ್‍ತಾರೆ?
ಸೋಶಿಯಲ್ ಮೀಡಿಯಾ ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿ ಹೊರಜಗತ್ತಿಗೆ ಗೊತ್ತಿಲ್ಲದ ನಾನಾ ವಿಚಾರಗಳು ಬಟಾ ಬಯಲಾಗಿದೆ. ಆದರೆ, ಇದುವರೆಗೂ ಕೂಡಾ ಅಘೋರಿಗಳ ಜಾಡು ಹುಡುಕಲು ಯಾರೆಂದರೆ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರತೀ ಕುಂಭ ಮೇಳ ಹಾಗೂ ಈಗ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಮಲಕ್ಷಾಂತರ ಸಂಖ್ಯೆಯಲ್ಲಿ ನಾಗಾ ಸಾಧುಗಳು ಕಿಕ್ಕಿರಿದು ಸೇರುತ್ತಾರೆ. ಬರಿಗಣ್ಣಿಗೆ ನಿಲುಕದಷ್ಟು ಪ್ರಮಾಣದಲ್ಲಿ ನಾಗಾ ಸಾಧುಗಳ ದಂಡು ಜಾತ್ರೆಯೋಪಾದಿಯಲ್ಲಿ ಹಬ್ಬಿಕೊಳ್ಳುತ್ತೆ. ಆದರೆ, ಇಂಥಾ ಕುಂಭ ಮೇಳ ನಡೆದ ಬಳಿಕ ಏಕಾಏಕಿ ಅಘೊರಿಗಳು ಮಾಯವಾಗಿ ಬಿಡುತ್ತಾರೆ. ಹಾಗಾದರೆ, ಅಷ್ಟು ದೊಡ್ಡ ಸಂಖ್ಯೆಯಲ್ಲಿರುವ ನಾಗಾ ಸಾಧುಗಳು ಎಲ್ಲಿ ನೆಲೆಸುತ್ತಾರೆ? ಅವರೆಲ್ಲರೂ ಒಂದೇ ಭೂಭಾಗದಲ್ಲಿರುತ್ತಾರಾ? ಅವರ ಬದುಕಿನ ಕ್ರಮ, ಆಧ್ಯಾತ್ಮ ಸಿದ್ಧಿಯ ಪದ್ಧತಿಗಳು ಹೇಗಿರುತ್ತವೆ? ಇಂಥಾ ನಾನಾ ಪ್ರಶ್ನೆಗಳು ಸಹಜವಾಗಿಯೇ ಮೂಡಿಕೊಳ್ಳುತ್ತವೆ.
ಇದುವರೆಗೂ ಕೂಡಾ ಈ ಅಘೋರ ಜಗತ್ತಿನ ರಹಸ್ಯ ಬೇಧಿಸುವ ಸಲುವಾಗಿ ನಾನಾ ಮಂದಿ ಪ್ರಯತ್ನ ನಡೆಸಿದ್ದಾರೆ. ಕೆಲ ಮಂದಿ ಪತ್ರಿಕಾ ಲೇಖನಗಳ ಮೂಲಕ ಅಘೋರ ಜಗತ್ತಿನ ಅಚ್ಚರಿಗಳನ್ನು ತೆರೆದಿಟ್ಟಿದ್ದಾರೆ. ಮತ್ತೆ ಕೆಲ ಮಂದಿ ಅಘೋರಿಗಳ ಜಾಡು ಹಿಡಿಒದು ಹೊರಟು, ಆ ಹಾದಿಯಲ್ಲಿ ಸಿಕ್ಕ ಸಣ್ಣ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ನಿಖರವಾಗಿ ಹೇಳೋದಾದರೆ ಈ ಎಲ್ಲ ಪ್ರಯತ್ನಗಳಿಗೆ ದಕ್ಕಿರೋದು ಸಾಸಿವೆಯಷ್ಟು ವಿಚಾರಗಳು ಮಾತ್ರ. ಇಷ್ಟು ದೊಡ್ಡ ಮಟ್ಟದಲ್ಲಿರುವ ನಾಗಾ ಸಾಧುಗಳ ಸಂಖ್ಯೆ ಅದೆಲ್ಲಿ ನಿಗೂಢವಾಗಿತ್ತದೆಂಬಂಥಾ ಮುಖ್ಯ ಪೊರಶ್ನೆಯೊಂದು ಜನಸಾಮಾನ್ಯರನ್ನೂ ಕಾಡುತ್ತಿದೆ. ಅದಕ್ಕುತ್ತರವಾಗಿ ನಿಲ್ಲೋದು ಹಿಮಾಲಯ ಪರ್ವತ!
ಕೊರೆಯೋ ಹಿಮದೊಳಗೆ ಅಘೋರ ಸತ್ಯ
ಲಕ್ಷಾಂತರ ಅಘೋರ ಸಾಧಕರು ಆರಂಭದಿಂದ ತನ್ನ ಸಿದ್ಧಿಯ ಹಾದಿಯ ಕೊನೇಯ ಘಟ್ಟದವರೆಗೂ ಅವಲಂಬಿಸೋದು ಹಿಮಾಲಯ ಪರ್ವತವನ್ನು. ಅಘೋರಿಗಳಾಗಲು ಹೊರಟವರ ಮೊದಲ ಪರೀಕ್ಷಾ ಭೂಮಿಯೂ ಆ ಹಿಮಚ್ಚಾದಿತ ಪ್ರದೇಶವೇ. ಅಷ್ಟಕ್ಕೂ ಈ ಹಿಮಾಲಯ ನಾಗಾ ಸಾಧು ಆಗ ಬಯಸುವವರು ಮಾತ್ರವಲ್ಲದೇ, ಆಧ್ಯಾತ್ಮಿಕ ಸೆಳೆತ ಹೊಂದಿರುವವರೆಲ್ಲರನ್ನೂ ಸೆಳೆಯುವ ಪವಿತ್ರ ಭೂಮಿ. ಒಂದು ಮೂಲದ ಪ್ರಕಾರ ಕಣ್ಣಳತೆ ಮೀರಿದಷ್ಟು ದೂರ, ಎತ್ತರದಲ್ಲಿ ಮೈಚಾಚಿಕೊಂಡಿರುವ ಹಿಮಾಲಯದ ತುಂಬೆಲ್ಲ ಇಂಥಾ ಅಘೋರಿಗಳ ದಂಡಿದೆ. ಆದರೆ ಅವರ್‍ಯಾರೂ ಕೂಡಾ ಸಂಘ ಜೀವನವನ್ನು ಇಷ್ಟಪಡುವುದಿಲ್ಲ. ಆದ್ದರಿಂದಲೇ, ಆರಂಭಿಕವಾಗಿ ಗುರುವೊಬ್ಬನ ಸಂಘದಲ್ಲಿರುವ ಇಂಥಾ ನಾಗಾ ಸಾಧುಗಳು, ಆ ನಂತರ ವಿದ್ಯೆ ಸಿದ್ಧಿಸುತ್ತಲೇ ಸ್ವತಂತ್ರ ಠಾವು ಹುಡುಕಿಕೊಳ್ಳುತ್ತಾರೆ.
ಇಂಥಾ ಗುರುಗಳೂ ಕೂಡಾ ಸಂಘ ಜೀವನವನ್ನು ಇಷ್ಟ ಪಡುವುದಿಲ್ಲ. ದೀಕ್ಷೆಗಾಗಿ ಯಾರೇ ಬಂದರೂ ಕೂಡಾ ಅಂಥವರನ್ನು ಏಕಾಏಕಿ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಕಠೋರಾತಿ ಕಠೋರ ಪರೀಕ್ಷೆಗಳ ಮೂಲಕ ಶಿಷ್ಯರಾಗ ಬಂದವರನ್ನು ವಿಚಲಿತರನ್ನಾಗಿಸೋ ಪ್ರಯತ್ನಗಳು ನಡೆಯುತ್ತವೆ. ಬಹುಪಾಲು ಶಿಷ್ಯ ಪಡೆ ಇಂಥಾ ಪರೀಕ್ಷೆಗಳನ್ನು ತಡೆದುಕೊಳ್ಳಲಾರದ ಥಂಡಿ ಹವೆಯಲ್ಲಿಯೂ ಬೆವರಾಡಿ ವಾಪಾಸು ಬಂದದ್ದಿದೆ. ಇದೆಲ್ಲವನ್ನೂ ಜಯಿಸಿ ನಿಂತವರನ್ನು ಪಳಗಿದ ಅಘೋರಿಗಳು ಶಿಷ್ಯರಾಗಿ ಸೇರಿಸಿಕೊಳ್ಳುತ್ತರಾದರೂ ತೀರಾ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಒಂದು ಅಂತರ ಕಾಯ್ದುಕೊಂಡೇ ಶಿಷ್ಯರನ್ನು ಮೂರು ಹಂತ ದಾಟಿಸಿ ಅಘೋರ ದೀಕ್ಷೆ ಕೊಟ್ಟಾದ ಬಳಿಕ ಮತ್ತೆ ಒಂಟಿಯಾಗಿ ಸಾಧನೆಯಲ್ಲಿ ನಿರತರಾಗ್ತಾರೆ.
ಅದು ಎದೆ ಅದುರಿಸೋ ಲೋಕ!
ಅಘೋರಿಗಳ ಬಗ್ಗೆ ನಾನಾ ರೀತಿಯ ಕಥನಗಳಿದ್ದಾವೆ. ಮೈ ತುಂಬಾ ಮಸಣದ ಬೂದಿ ಬಳಿದುಕೊಂಡು ಬೆತ್ತಲಾಗಿ ಓಡಾಡುವ ಈ ನಾಗಾ ಸಾಧುಗಳ ಬಾಹ್ಯ ರೂಪವೇ ಬೆಚ್ಚಿ ಬೀಳಿಸುವಂತಿದೆ. ಕೆಲ ಮಂದಿ ಕತ್ತಿಗೆ ನಿಜವಾದ ತಲೆ ಬುರುಡೆ ನೇತಾಡಿಸಿಕೊಂಡಿರುತ್ತಾರೆ. ಕೆಲವರು ಅಸ್ತಿ ಪಂಜರಗಳನ್ನು ಟೆಡ್ಡಿ ಬೇರಿಗಿಂತಲೂ ಕಡೆಯಾಗಿ ಅಪ್ಪಿಕೊಂಡಿರುತ್ತಾರೆ. ಈ ಎಲ್ಲ ಕಾರಣದಿಂದಲೇ ನಾಗಾ ಸಾಧುಗಳೆಂದರೆ ನಾಗರಿಕ ಜಗತ್ತಿನ ಅಳ್ಳೆ ಅದುರುತ್ತೆ. ಸ್ಮಶಾನ ಸಾಧನೆಯಂಥಾ ವಿಕ್ಷಿಪ್ತವಾದ ಆಚರಣೆಗಳನ್ನು ಹೊಂದಿರುವ ನಾಗಾ ಸಾಧುಗಳಿಗೆ ಅಸೀಮ ಶಕ್ತಿ ಇದೆ ಅನ್ನಲಾಗುತ್ತದೆ. ಎಲ್ಲವನ್ನೂ ದಾಟಿಕೊಂಡು ಅಘೋರಿಯಾದವರ ಹತ್ತಿರ ಸುಳಿಯಲೂ ಕೂಡಾ ನಾಗರಿಕ ಸಮುದಾಯದ ಅಳ್ಳೆ ಅದುರುತ್ತೆ.
ಜನ ಸಾಮಾನ್ಯರು ಸ್ಮಶಾನದಲ್ಲಿ ಒಂದು ತಲೆ ಬುರುಡೆ ಕಾಣಿಸಿದರೂ ವಾರವಿಡೀ ಜ್ವರ ಬಂದು ಮಲಗಿದರೆ ಅಚ್ಚರಿಯೇನಿಲ್ಲ. ಅದನ್ನು ಎಂಥಾ ಅನಿವಾರ್ಯ ಸಂದರ್ಭದಲ್ಲಿಯೂ ಕೈಯಲ್ಲಿ ಮುಟ್ಟಲು ಬಹುತೇಕರು ಮನಸು ಮಾಡೋದಿಲ್ಲ. ಆದರೆ, ಈ ನಾಗಾ ಸಾಧುಗಳ ಪಾಲಿಗೆ ಅದೇ ಊಟದ ಬಟ್ಟಲಾಗಿರುತ್ತೆ. ಆಹಾರವನ್ನವರು ಮಾನವನ ತಲೆ ಬುರುಡೆಯ ಮೂಲಕವೇ ಮಾಡುತ್ತಾರೆ. ಮಧುರಸವನ್ನೂ ಕೂಡಾ ಕಪಾಲದ ಮೂಲಕವೇ ಸೇವಿಸುತ್ತಾರೆ. ಕೆಲ ಶಿಷ್ಯರು ತಮಗೆ ದೀಕ್ಷೆ ಕೊಟ್ಟ ಗುರು ಸತ್ತಾಗ ಆತನ ತಲೆ ಬುರುಡೆಯನ್ನು ಆರಾಧನೆಗೆ ಬಳಸಿಕೊಳ್ಳುತ್ತಾರೆ. ಅದರಲ್ಲಿಯೇ ಊಟ, ಮಧುರಸ ಸೇವನೆಯನ್ನು ಮಾಡುತ್ತಾರೆ. ಅಘೋರ ಪರಂಪರೆಯಲ್ಲಿ ಕಪಾಲ ಅನ್ನೋದೂ ಕೂಡಾ ಅಧ್ಯಾತ್ಮ ಸಿದ್ಧಿಯ ಅಸ್ತ್ರವಿದ್ದಂತೆ!
ಶವ ತಿನ್ನೋದು ನಿಜವೇ?
ಇಂಥಾ ನಾಗಾ ಸಾಧುಗಖಳಖಲ್ಲಿ ಮೊದಲೇ ಹೇಳಿದಂತೆ ನಾನಾ ಪಂಗಡಗಳಿದ್ದಾವೆ. ಸಾಧನೆಯ ಹಾದಿ, ಅದರ ಪ್ರಮಾಣದ ಆಧಾರದಲ್ಲಿ ಇಂಥಾ ಗುಂಪುಗಳು ಸೃಷ್ಟಿಯಾಗಿವೆ. ಉದ್ದೇಶ ಒಂದೇ ಆದರೂ ಕೂಡಾ ಈ ಪಂಗಡಗಳಲ್ಲಿ ಸಿದ್ಧಿಗಾಗಿ ಆಯ್ದುಕೊಳ್ಳುವ ದಾರಿಗಳಲ್ಲಿ ವ್ಯತ್ಯಾಸಗಳಿದ್ದಾವೆ. ಅದರಲ್ಲಿ ಒಂದು ಭಯಾನಕ ಪಂಥದ ಅಘೋರಿಗಳದ್ದು ನಿಜಕ್ಕೂ ಬೆಚ್ಚಿ ಬೀಳಿಸುವಂಥಾ ನಡವಳಿಕೆಗಳಿದ್ದಾವೆ. ಅವರು ಮನುಷ್ಯರೊಂದಿಗೆ ಯಾವ ಕಾರಣಕ್ಕೂ ಬೆರೆಯೋದಿಲ್ಲ. ಮನುಷ್ಯರ ನೆರಳು ಬೀಳುವಲ್ಲಿಯೂ ಅವರು ಸುಳಿಯುವುದಿಲ್ಲ. ಅಂಥಾ ಪಂಥದ ಅಘೋರಿಗಳ ಪಪಾಲಿಗೆ ಸ್ಮಶಾಣಕ್ಕಿಂತ ಪವಿತ್ರವಾದ ಪುಣ್ಯಭೂಮಿ ಬೇರ್‍ಯಾವುದೂ ಇಲ್ಲ.
ಈ ಪಂಥದ ಅಘೋರಿಗಳಿಂದಾಗಿಯೇ ನಾಗಾ ಸಾಧುಗಳ ಸುತ್ತಾ ಒಂದಷ್ಟು ಭಯಾನಕ ಕಥೆಗಳು ಹುಟ್ಟಿಕೊಂಡಿವೆ. ನಾಗಾ ಸಾಧುಗಳ ಆಹಾರ ಕ್ರಮದ ಸುತ್ತಲೂ ಬೆಚ್ಚಿಬೀಳಿಸುವಂಥಾ ಅಂಶಗಳಿದ್ದಾವೆ. ಇಂಥಾ ನಾಗಾ ಸಾಧುಗಳು ಶವ ತಿನ್ನುತ್ತಾರೆಂಬುದು ಜನಜನಿತ ವಿಚಾರ. ನಾಗರಿಕ ಜಗತ್ತು ಯಾವ ಕಾರಣಕ್ಕೂ ಅರಗಿಸಿಕೊಳ್ಳಲಾರದ ವಿಚಾರವಿದು. ಆದರೆ, ಇವರೆಲ್ಲ ಸತ್ತ ಮನುಷ್ಯ ದೇಹದ ಭಾಗಗಳನ್ನೇ ಕಿತ್ತು ತಿನ್ನುತ್ತಾರೆಂಬ ವಿಚಾರವನ್ನು ಕೆಲ ನಾಗಾ ಸಾಧುಗಳೇ ಒಪ್ಪಿಕೊಂಡಿದ್ದಾರೆ. ಶವವನ್ನು ಸುಡುವ ಸಂದರ್ಭದಲ್ಲಿ ಅರೆಬರೆ ಸುಟ್ಟ ಭಾಗಗಳನ್ನು ಕೆಲ ಪಂಥದ ನಾಗಾ ಸಾಧುಗಳು ಕಿತ್ತು ತಿನ್ನುತ್ತಾರೆ. ನಮಗೆಲ್ಲ ಅದು ಅಸಹ್ಯವಾಗಿ ಕಂಡರೂ, ಅವರ ಪಾಲಿಗದು ಆಧ್ಯಾತ್ಮಿಕ ಸಿದ್ಧಿಯ ಸಹಜ ವಿಚಾರವಂತೆ.
ಹೆಣಗಳೊಂದಿಗೆ ಜೀವನ
ಇಂಥಾ ಅಘೋರಿಗಳು ತಮ್ಮ ಜೀವಿತದ ಬಹುಪಾಲು ಕಾಲವನ್ನು ಸ್ಮಶಾನ ಮತ್ತು ಹೆಣದೊಂದಿಗೇ ಕಳೆಯುತ್ತಾರೆಂಬು ಕಷ್ಟವಾದರೂ ಅರಗಿಸಿಕೊಳ್ಳಲೇ ಬೇಕಾದ ಸಂಗತಿ. ಈ ನಾಗಾ ಸಾಧುಗಳು ಶಿವನ ಆರಾಧಕರು. ಶಿವನಲ್ಲದೇ ಬೇರ್‍ಯಾವ ದೇವರನ್ನೂ ಕೂಡಾ ಇವರ್‍ಯಾರೂ ಆರಾಧಿಸೋದಿಲ್ಲ. ಇದು ಹಿಂದೂ ಸಂಪ್ರದಾಯದ ಭಾಗವೆಂಬುದು ನಿಜ. ಆದರೆ, ಹಿಂದೂ ಸಂಪ್ರದಾಯದ ಸಾತ್ವಿಕ ಆಚರಣೆಗಳನ್ನು ನಾಗಾ ಸಾಧುಗಳು ಅನುಸರಿಸೋದಿಲ್ಲ. ಶಿವನ ಅವತಾರಗಳಲ್ಲಿ ಅಘೋರಾವತಾರವೂ ಒಂದು. ಅದೇ ಈ ಅಘೋರ ಸಿದ್ಧಿಯನ್ನು ಉದ್ದೇಶವಾಗಿಸಿಕೊಂಡವರ ಪ್ರಧಾನ ಆಕರ್ಷಣೆ. ಶಿವನ ಐದು ರೂಪಗಳಲ್ಲಿ ಅಘೋರಾವತಾರವನ್ನು ನೆಚ್ಚಿಕೊಂಡಿರೋ ಅಘೋರಿಗಳು ನಾಗರಿಕ ಜಗತ್ತಿಗೆ ವಿಕ್ಷಿಪ್ತವಾಗಿಯೂ ಘೋರವಾಗಿಯೂ ಕಾಣಿಸೋದು ಸಹಜ ಸಂಗತಿ.
ಹೊರಜಗತ್ತಿನ ಪಾಲಿಗೆ ವಿಚಿತ್ರವಾಗಿ ಕಾಣಿಸುವ ವರ್ತನೆ, ವಿಧಿ ವಿಧಾನಗಳೆಲ್ಲವೂ ನಾಗಾ ಸಾಧುಗಳ ಪಾಲಿಗೆ ಸಹಜಾತಿ ಸಹಜ ವಿದ್ಯಮಾನ. ರಣಭಯಂಕರ ಹಾದಿಯೇ ಅವರ ಪಾಲಿಗೆ ಸಿದ್ಧಿಯ ಸಾಧನ. ಶಿವನ ಶಕ್ತಿಯನ್ನು ಒಲಿಸಿಕೊಳ್ಳಲು ಶವಗಳೊಂದಿಗಿನ ಸಾಹಚರ್ಯವೇ ಸಾಧನ ಅನ್ನೋದು ನಾಗಾ ಸಾಧುಗಳ ನಂಬಿಕೆ. ಈ ಕಾರಣದಿಂದಲೇ ಶವ ಸಾಧನೆ ಎಂಬ ಕರ್ಮಠ ವಿಧಾನವೊಂದು ಈ ಲೋಕದಲ್ಲಿದೆ. ಈ ಕಾರಣದಿಂದಲೇ ಮೃತ ದೇಹಗಳೊಂದಿಗೇ ಅವರು ಸದಾ ಸಿದ್ಧಿಯಲ್ಲಿ ತೊಡಗುತ್ತಾರೆ. ಹೊತ್ತಲ್ಲದ ಹೊತ್ತಲ್ಲಿ ಮೃತ ದೇಹದ ಮೇಲೆ ಕೂತು ಧ್ಯಾನ ಮಾಡುವ ವಿಧಿ ವಿಧಾನವೂ ಒಂದು ಪಂಥದಲ್ಲಿದೆ. ಅವರ ಪಾಲಿಗೆ ಇದ್ಯಾವುದೂ ವಿಶೇಷವಲ್ಲ, ವಿಚಿತ್ರವಂತೂ ಮೊದಲೇ ಅಲ್ಲ!
ಶವ ಸಂಭೋಗ!
ಶವ ಸಂಭೋಗವೆಂಬುದು ನಾಗರಿಕ ಜಗತ್ತನ್ನು ನಿದ್ದೆಗಣ್ಣಲ್ಲೂ ಬೆಚ್ಚಿಬೀಳಿಸುವಂಥಾ ವಿಕೃತಿ. ಕೆಲ ಮಂದಿ ನಾಗರಿಕ ಸಮಾಜದಲ್ಲಿಯೇ ಇಂಥಾದ್ದನ್ನು ಮಾಡಿ ಸೈಕೋಪಾತ್‌ಗಳೆಂದು ಅನ್ನಿಸಿಕೊಂಡಿದ್ದಾರೆ. ಅಂಥಾ ಒಂದಷ್ಟು ಮಂದಿಯೀಗ ಕಂಬಿ ಎಣಿಸುತ್ತಿದ್ದಾರೆ. ಆದರೆ, ಅಘೋರಿಗಳ ಜಗತ್ತಿನಲ್ಲಿ ಅದೂ ಕೂಡಾ ಸಿದ್ಧಿಯ ಒಂದು ಮಾರ್ಗ. ಅದೊಂದು ದೈವೀಕ ಅನುಭೂತಿ. ಇಲ್ಲಿನ ತಂತ್ರ ವಿದ್ಯೆಯಲ್ಲಿ ಶವ ಸಂಭೋಗವೂ ಸೇರಿಕೊಂಡಿದೆ. ಅನೇಕ ತಂತ್ರ ವಿದ್ಯೆಗಳು ಕಾಮದೊಂದಿಗೂ ಮಿಳಿತವಾಗಿವೆ. ಈ ಕಾರಣದಿಂದಲೇ ಒಂದು ಪಂಥದ ಕಠೋರ ಅಘೋರಿಗಳು ಶವ ಭೋಜನದಂತೆಯೇ ಶವ ಸಂಭೋಗವನ್ನೂ ಕೂಡಾ ಸಹಜವಾಗಿಯೇ ಪರಿಗಣಿಸುತ್ತಾರೆ!
ಹೀಗೆ ಆಯ್ದ ಶವದೊಂದಿಗೆ ಸಂಭೋಗ ನಡೆಸೋದರಿಂದಾಗಿ ತಮ್ಮ ಶಕ್ತಿ ವೃದ್ಧಿಸುತ್ತದೆಂಬ ನಂಬಿಕೆ ಅಘೋರಿಗಳಲ್ಲಿದೆ. ಇಷ್ಟು ಮಾತ್ರವಲ್ಲದೇ ಶವ ಸಂಭೋಗ ಎಂಬುದು ತಂತ್ರ ವಿದ್ಯೆಯಲ್ಲಿನ ನೈಪುಣ್ಯವನ್ನು ಹೆಚ್ಚಿಸುತ್ತದೆಂಬಂಥಾ ಗಾಢವಾದ ನಂಬಿಕೆ ಅಘೋರಿಗಳಲ್ಲಿದೆ. ಇಂಥಾ ನಾಗಾ ಸಾಧುಗಳು ಬದುಕಮಿರುವ ಮಾನವರೊಂದಿಗೂ ದೈಹಿಕ ಸಂಬಂಧ ಹೊಂದಿರುತ್ತಾರೆಂದು ಹೇಳಲಾಗುತ್ತದೆ. ಆದರೆ, ಆ ಬಗೆಗಿನ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಇಂಥಾ ಅಘೋರಿಗಳ ಗಾಂಜಾದಂಥಾ ನಶೆಗೆ ವಶವಾಗಿರುತ್ತಾರೆಂಬ ಮಾತೂ ಇದೆ. ಸದಾ ಮದ್ಯ ಸೇವನೆಯಂತೂ ಅವರ ಸಿದ್ಧಿಯ ಒಂದು ಭಾಗ. ಮಾಂಸಾಹಾರದಲ್ಲಿ ಮಾನವನ ಮಾಂಸವೇ ಇವರಿಗೆ ಪ್ರಿಯವಾದದ್ದು. ಹಾಗಂತ ಅದು ಜೀವಂತ ಮನುಷ್ಯರನ್ನು ಆಧರಿಸಿಲ್ಲ. ಶವದ ಮಾಂಸವಷ್ಟೇ ಇವರಿಗೆ ಪ್ರಿಯವಾದ ಆಹಾರವಂತೆ!
ಅಘೋರಿಗಳ ಸೃಷ್ಟಿ ರಹಸ್ಯ
ಈ ಅಘೋರಿಗಳ ಬಗ್ಗೆ ಲೆಕ್ಕವಿರದಷ್ಟು ಕಥೆಗಳಿದ್ದಾವೆ. ಹತ್ತಿರ ಹೋಗಿ ಕಂಡದ್ದಕ್ಕಿಂತಲೂ ಹೆಚ್ಚಾಗಿ ಕಪೋಲ ಕಲ್ಪಿತ ವಿಚಾರಗಳದ್ದೇ ಮೇಲುಗೈ ಅನ್ನುವಂತಾಗಿದೆ. ಎಲ್ಲದಕ್ಕೂ ಒಂದು ಮೂಲವಿರುತ್ತದೆ ಅಂತಾದರೆ, ಈ ಆಧುನಿಕ ಅಘೋರ ಜಗತ್ತಿನ ಉಗಮದ ಹಿಂದೆಯೂ ಒಂದು ಇತಿಹಾಸ ಇರಲೇ ಬೇಕು. ಆದರೆ ಈ ಬಗೆಗಿನ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ ಒಂದು ವಿಚಾರವಂತೂ ಸತ್ಯಕ್ಕೆ ಹತ್ತಿರದ್ದೆಂಬಂತೆ ಓಡಾಡುತ್ತಿರೋದು ಸತ್ಯ. ಅದರನ್ವಯ ಹೇಳೋದಾದರೆ, ಈ ಯುಗದ ಅಘೋರಿಗಳ ಇತಿಹಾಸ ಏಳು ಮತ್ತು ಎಂಟನೇ ಶತಮಾನದಲ್ಲಿದೆ. ಒಂದು ಕಾಲದಲ್ಲಿ ಉಗ್ರ ವಿದ್ಯೆಗಳ ಮೂಲಕ ಈ ಪಂಗಡ ಹಂಚಿ ಹೋಗಿತ್ತು. ಕಾಲಾನಂತರ ಅದು ಅಘೋರಿ ಪಂಥದಲ್ಲಿ ವಿಲೀನಗೊಂಡಿತ್ತೆಂದು ಹೇಳಲಾಗುತ್ತದೆ.
ಇಂಥಾ ಅಘೋರ ಪಂಥವನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸಿದವರು ಬಾಬಾ ಕೀನಾರಾಮ್ ಎಂದು ಹೇಳಲಾಗುತ್ತದೆ. ಬಾಬಾ ಕೀನಾರಾಮ್ ೧೬೫೮ರಲ್ಲಿ ಜನಿಸಿದ್ದವರು. ಉತ್ತರ ಪ್ರದೇಶದ ರಾಮಘಡ ಅವರ ಹುಟ್ಟೂರು. ಆಧ್ಯಾತ್ಮಿಕ ಚಹರೆಗಳೊಂದಿಗೆ ಜನಿಸಿದ್ದರೆನ್ನಲಾದ ಕೀನಾರಾಮ್ ಹುಟ್ಟಿದ ನಂತರ ಮೂರು ದಿನಗಳ ಕಾಲ ಅತ್ತಿರಲಿಲ್ಲವಂತೆ. ತಾಯಿಯ ಹಾಲನ್ನೂ ಕೂಡಾ ಕುಡಿದಿರಲಿಲ್ಲ. ಇಂಥಾ ಮಗುವನ್ನು ಅದೊಂದು ದಿನ ಅಚಾನಕ್ಕಾಗಿ ಬಂದ ಮೂವರು ಸನ್ಯಾಸಿಗಳು ಎತ್ತಿಕೊಂಡು ಹೋಗಿದ್ದರಂತೆ. ಹಾಗೆ ಬಂದ ಸನ್ಯಾಸಿಗಳು ಮಗುವಿನ ಕಿವಿಯಲ್ಲೇನೋ ಹೇಳುತ್ತಲೇ ಅದು ಅಳಲಾರಂಭಿಸಿತ್ತಂತೆಂಬ ಕಥೆಯಿದೆ. ಇದೇ ಕೀನಾರಾಮ್ ನಂತರ ಅಧ್ಯಾತ್ಮಿಕ ಸಿದ್ಧಿಯಲ್ಲಿ ತೊಡಗಿಕೊಂಡು ಅಘೋರ ಪಂಥವನ್ನು ಸ್ಥಾಪಿಸಿದ್ದರೆಂದು ಹೇಳಲಾಗುತ್ತದೆ.
ಅವರದ್ದು ವಿಚಿತ್ರ ಜಗತ್ತು
ಹೀಗೆ ನಾನಾ ಕಥೆಗಳಿಗೆ ಆಹಾರವಾಗಿರೋ ಅಘೋರಿಗಳನ್ನು ವಿಚಿತ್ರ ಜಗತ್ತು. ಅವರು ಹುಣ್ಣಿಮೆಯಂದು ಶವದ ಎದೆ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಶವವನ್ನೇ ಪೂಜಿಸೋದೂ ಇದೆ. ಹೀಗೆ ಸತ್ತ ವ್ಯಕ್ತಿಗಳಿಂದಲೇ ಅಗೋಚರ ಶಕ್ತಿಯನ್ನು ಆವಾಹಿಸಿಕೊಳ್ಳುವ ತಂತ್ರ ವಿದ್ಯೆಯೊಂದು ಅಘೋರಿಗಳ ಲೋಕದಲ್ಲಿ ಚಾಲ್ತಿಯಲ್ಲಿದೆ. ಅಷ್ಟಕ್ಕೂ ಅಘೋರಿಯಾಗಲು ಹನ್ನೆರಡು ವರ್ಷಗಳ ಕಾಲ ಸ್ಮಶಾಣದಲ್ಲಿ ಘೋರ ತಪಸ್ಸು ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ಧೂಮಪಾನ, ಮದ್ಯಪಾನ ಹಾಗೂ ಗಾಂಜಾ ಸೇವನೆ ಅವಚರ ಬದುಕಿನ ಭಾಗವಾಗುತ್ತದೆ. ಅದೆಲ್ಲವೂ ಆಧ್ಯಾತ್ಮಿಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದೇ ಅವರೆಲ್ಲ ನಂಬುತ್ತಾರೆ. ಈ ಮೂಲಕ ರೋಗಗಳನ್ನು ದಾಟಿಕೊಳ್ಳುವ ಶಕ್ತಿಯೂ ಅಘೋರಿಗಳಿಗೆ ಸಿಗುತ್ತದೆಯಂತೆ.
ಇಂಥಾ ಅಘೋರಿಗಳು ವಾರಣಾಸಿ ಕಾಶಿಯಂಥಾ ಸ್ಥಳಗಳ್ಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರೆಂದೂ ಒಂದು ಸ್ಥಳದಲ್ಲಿ ಹೆಚ್ಚು ಕಾಲ ನಿಲ್ಲುವುದಿಲ್ಲ. ಜನರೊಂದಿಗೆ ನಿಕಟ ಸಂಪರ್ಕವನ್ನೂ ಬಯಸೋದಿಲ್ಲ. ಇಂಥಾ ಅಘೋರಿಗಳು ತಾವು ಮಾಡೋದೆಲ್ಲ ಸಿದ್ಧಿಗೆ ಅನ್ನೋದರ ಜೊತೆಗೆ ಜನ ಕಲ್ಯಾಣಕ್ಕೆಂದು ಪರಿಭಾವಿಸುತ್ತಾರೆ. ಸದಾ ಶವಗಳೊಂದಿಗೆ ಬದುಕುವ ಅಘೋರಿಗಳಿಗೂ ಕೂಡಾ ಸಾವು ಬರುತ್ತದೆ. ಆದರೆ ಅದು ನಾಗರಿಕ ಸಮುದಾಯಗಳಿಗೆ ಗೊತ್ತಾಗೋದಿಲ್ಲ. ಅಘೋರಿಗಳು ಸತ್ತಾಗ ಶವ ಸಂಸ್ಕಾರದಂಥಾ ವಿಧಿ ವಿಧಾನಗಳಿರೋದಿಲ್ಲ. ನಾಗಾ ಸಾಧುಗಳು, ಅಘೋರಿಗಳ ಶವವನ್ನು ಗಂಗೆಯ ಒಡಲಿಗೆ ಎಸೆಯಲಾಗುತ್ತೆ. ಆ ಮೂಲಕ ಹಳೇ ಪಾಪಗಳೆಲ್ಲ ತೊಳೆದು ಹೊಸಾ ಜನ್ಮ ದಕ್ಕುತ್ತದೆಂಬ ನಂಬಿಕೆ ಅಘೋರಿಗಳದ್ದು!