ಭಾನುವಾರ, ಜುಲೈ 19, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

soil pollution: ಮಣ್ಣಿನ ಸಾವಿಗೆ ಮನುಷ್ಯನೇ ಕಾರಣ!

Majja Webdeskby Majja Webdesk
18/02/2025
in Majja Special
Reading Time: 1 min read
soil pollution: ಮಣ್ಣಿನ ಸಾವಿಗೆ ಮನುಷ್ಯನೇ ಕಾರಣ!

-ಮಣ್ಣು ಸತ್ತರೆ ಮನುಷ್ಯನಿಗಿಲ್ಲ ಉಳಿಗಾಲ!

-ಎಲ್ಲವೂ ಮಣ್ಣಲ್ಲ; ಮಣ್ಣೇ ಎಲ್ಲ!

 

ಕಂಡಲ್ಲಿ ಕೆರೆದಲ್ಲಿ ಸಿಕ್ಕುವ ಮಣ್ಣನ್ನು ಕೆಲಸಕ್ಕೆ ಬಾರದ ವಸ್ತು ಎಂಬಂತೆ ಲಾಗಾಯ್ತಿನಿಂದಲೂ ಬಿಂಬಿಸಲಾಗುತ್ತಿದೆ. ಮುಟ್ಟಿದ್ದೆಲ್ಲ ಮಣ್ಣಾಯ್ತು, ಮಾಡಿದ್ದೆಲ್ಲ ಮಣ್ಣು ಪಾಲಾಯ್ತು ಎಂಬಂಥಾ ನಾಣ್ನುಡಿಗಳು ವಿಷಾಧಕರವಾಗಿ ನಮ್ಮ ಜೀವನದ ಭಾಗಗಳಾಗಿವೆ. ಹಾಗೆ ನೋಡಿದರೆ, ನಮ್ಮ ಹಿರೀಕರಿಗೆಲ್ಲ ಮಣ್ಣಿನ ಬಗ್ಗೆ, ಅದನ್ನು ಕಾಪಾಡಿಕೊಳ್ಳುವ ಬಗ್ಗೆ ನಮಗಿಂತಲೂ ಹೆಚ್ಚು ಕಾಳಜಿಯಿತ್ತು. ಅಗಾಧ ಪ್ರಮಾಣದಲ್ಲಿ ತಿಳುವಳಿಕೆಯೂ ಇತ್ತು. ಆದರೆ ಅದೇ ಹಿರೀಕರ ಜಮಾನದಲ್ಲಿಯೇ ಅದೇಕೋ ಮಣ್ಣಿನ ಬಗ್ಗೆ ಹೀನಾಯ ಎನ್ನಿಸುವಂಥಾ ಒಂದಷ್ಟು ನುಡಿಗಟ್ಟುಗಳು ಚಾಲ್ತಿಗೆ ಬಂದಿರೋಳಳದು ವಿಶೇಷ. ಆಧುನಿಕ ಮನುಷ್ಯರೂ ಕೂಡಾ ಮಣ್ಣನ್ನು ತೀರಾ ನಿಕೃಷ್ಟವಾಗಿ ಕಾಣುತ್ತಾ ಸಾಗಿದ್ದಾರೆ. ಈ ಕಾರಣದಿಂದ ಮಣ್ಣು ನಿಧಾನಕ್ಕೆ ಸಾವಿನತ್ತ ಹೊರಳಿಕೊಳ್ಳುತ್ತಿದೆ. ಒಂದು ವೇಳೆ ಹಾಗಾದರೆ ನಿರ್ಜೀವ ಮಣ್ಣು ಮನುಷ್ಯರೆಲ್ಲರ ಬಾಯಿಗೆ ಬೀಳೋ ದಿನಗಳೇನು ದೂರವಿದ್ದಂತಿಲ್ಲ!


ಒಂದು ವೇಳೆ ಮಣ್ಣು ಸತ್ತರೆ ಒಟ್ಟಾರೆ ಆಹಾರ ಉತ್ಪಾದನೆದ, ಬೆಳೆಗಳು ಸೇರಿದಂತೆ ಒಂದಿಡೀ ಕೃಷಿ ಕಾರ್ಯವೇ ಸರ್ವ ನಾಶವಾಗುತ್ತೆ. ನಿಮಗೆ ಅಚ್ಚರಿಯಾಗಬಹುದು. ಮಣ್ಣಿನ ಒಂದಷ್ಟು ಇಂಚುಗಳ ಮೇಲ್ಪದರ ಫಲವತ್ತಾಗಿ ಸೃಷ್ಟಿಯಾಗಲು ಎರಡು ಸಾವಿರ ವರ್ಷಗಳು ಬೇಕಾಗುತ್ತವೆ. ಆದರೆ ನಾವು ಆ ಫಲವತ್ತಾದ ಮಣ್ಣನ್ನು ರಾಸಾಯನಿಕ, ಕೀಟನಾಶಕಗಳನ್ನು ಸುರಿದು ಬರಡಾಗಿಸುತ್ತಲೇ ಸಾಗುತ್ತಿದ್ದೇವೆ. ಇಂಥಾ ಪ್ರಹಾರಗಳಿಗೆ ಸಿಕ್ಕಿ ಮಣ್ಣು ಜೀವಂತಿಕೆ ಕಳೆದುಕೊಳ್ಳುತ್ತಿದೆ ಅಂತ ವಿಜ್ಞಾನಿಗಳು ಸಾರಿ ಸಾರಿ ಹೇಳುತ್ತಿದ್ದಾರೆ. ಪದೇ ಪದೆ ಎಚ್ಚರಿಸುತ್ತಿದ್ದಾರೆ. ಮಣ್ಣಿನ ಸವಕಳಿ ತಡೆಗಟ್ಟಿ, ಅರಣ್ಯ ನಾಶವನ್ನು ನಿಲ್ಲಿಸಿ, ಕೃಷಿಯಲ್ಲಿ ಕಳೆನಾಶಕ ಕೀಟನಾಶಕಗಳ ಬಳಕೆಯನ್ನ ನಿಲ್ಲಿಸದೇ ಹೋದರೆ ಈ ಜಗತ್ತಿನ ನಿಜವಾದ ಹೊನ್ನು ಅಂತಲೇ ಗುರ್ತಿಸಿಕೊಂಡಿರುವ ಮಣ್ಣು ಅಕ್ಷರಶಃ ಜೀವ ಕಳೆದುಕೊಳ್ಳುತ್ತೆ!

ಅದು ಅಮೋಘ ಸಂಪತ್ತು


ಭೂಮಿಯ ಎಲ್ಲ ಭಾಗಗಳನ್ನೂ ಆವರಿಸಿಕೊಂಡಿರುವ ಮಣ್ಣು ಜೀವಸಂಕುಲಕ್ಕೆ ಕೊಡುಗೆಯಾಗಿ ಬಂದಿರುವ ಬೆಲೆಕಟ್ಟಲಾಗದ ಸಂಪತ್ತು. ಮಾನವ ಸೇರಿದಂತೆ ಪ್ರತಿಯೊಂದು ಜೀವ ಸಂಕುಲಕ್ಕೂ ಮಣ್ಣೇ ಆಧಾರ. ಪುರಂದರದಾಸರು ಹೇಳಿರುವ ಹಾಗೆ ಮಣ್ಣಿಂದ ಕಾಯ, ಮಣ್ಣಿನಿಂದ ಜೀವ, ಮಣ್ಣು ಬಿಟ್ಟವರಿಗೆ ಆಧಾರವಿಲ್ಲ. ಮನುಷ್ಯನ ಬದುಕು ನಿಂತಿರುವುದೇ ಮಣ್ಣಿನ ಮೇಲೆ. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಣ್ಣೇ ಮೂಲ ಆಧಾರ. ಮಣ್ಣಿನ ಜೊತೆ ನಮಗೆಲ್ಲರಿಗೂ ಕೂಡಾ ಭಾವನಾತ್ಮಕ ಸಂಬಂಧವಿದೆ. ನಾವು ಬಿಟ್ಟರೂ ಮಣ್ಣು ನಮ್ಮನ್ನು ಬಿಡುವುದಿಲ್ಲ. ಕೊನೆಗೆ ಸೇರಬೇಕಾಗಿರುವುದು ಕೂಡ ಮಣ್ಣಿನಲ್ಲೇ ಎಂಬ ಅರಿವು ಎಲ್ಲರಿಗೂ ಇದೆ. ಆದರೆ ಇಂಥಾ ಅಮೋಘವಾದ ಸಂಪತ್ತಿನ ರಕ್ಷಣೆಗೆ ಮಾತ್ರ ಮಹತ್ವ ಕೊಡುತ್ತಿಲ್ಲವಷ್ಟೆ.
ಇಂಥಾ ಮಣ್ಣನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಒಂದಷ್ಟು ಪ್ರಯತ್ನಗಳಾಗುತ್ತತಿವೆ. ಈ ಮಣ್ಣು ಮನುಷ್ಯನ ಬದುಕಿನಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ಮನಗಂಡು ಅದರ ರಕ್ಷಣೆಗೆ ಪಣತೊಡುವ ಉದ್ದೇಶದಿಂದ ಪ್ರತಿ ವರ್ಷ ಥೈಲಾಂಡ್‌ನ ರಾಜರಾದ ಭೂಮಿ ಬೊಲ್ ಅದೂಲ್ಯದೇಜ್ ಹುಟ್ಟಿದ ದಿನವಾದ ಡಿಸೆಂಬರ್ ೫ನ್ನು ವಿಶ್ವ ಮಣ್ಣಿನ ದಿನ ಎಂದು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸುವಂತೆ ಅಂತರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ ಶಿಫಾರಸ್ಸು ಮಾಡಿತ್ತು. ನಂತರ ಡಿಸೆಂಬರ್ ೫ರಂದು ಮೊದಲ ಬಾರಿಗೆ ಅಧೀಕೃತವಾಗಿ ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯಿತು. ನಮ್ಮ ಎಲ್ಲಾ ಆಧುನಿಕ ಅಭಿವೃದ್ಧಿಯ ಹೊರತಾಗಿಯೂ ಭೂಮಿಯ ಮೇಲೆ ವಾಸಿಸುವ ಜೀವಿಗಳು ಮಣ್ಣಿನ ಮೇಲೆ ಅವಲಂಬಿತವಾಗಿವೆ. ಈ ಕಾರಣದಿಂದಲೇ ಜಗತ್ತಿನೆಲ್ಲೆಡೆ ಈಗ ವ್ಯಾಪ;ಕವಾಗಿ ಮಣ್ಣು ಉಳಿಸುವ ಕಾರ್ಯ ನಡೆಯುತ್ತಿದೆ. ಅಷ್ಟೇ ವೇಗವಾಗಿ ಮಣ್ಣನ್ನು ಮುಗಿಸಿ ಹಾಕುವ ಪ್ರಯತ್ನಗಳೂ ಕೂಡಾ ನಡೆಯುತ್ತಿವೆ.
ಈ ಜಗತ್ತಿನ ತೊಂಭತ್ತೈದು ಪರ್ಸೆಂಟಿನಷ್ಟು ಆಹಾರ ಪದಾರ್ಥ ಮಣ್ಣಿನಿಂದ ಉತ್ಪಾದಿಸಲಾಗುತ್ತಿದೆ. ಈಗಾಗಲೇ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ ಎಂದು ವರದಿಗಳು ಹೇಳುತ್ತದೆ. ಮಣ್ಣಿನ ಫಲವತ್ತತೆ ಮಣ್ಣಿನ ಜೀವಿಗಳು ಮತ್ತು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು ಮತ್ತು ಅನುಕೂಲಕರ ರಾಸಾಯನಿಕ, ಭೌತಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಳೆ ಕೊಯ್ಲು ಮಾಡಿದ ನಂತರ ಮಣ್ಣು ಕ್ಷೀಣಿಸಿದಾಗ ಮತ್ತು ಪೋಷಕಾಂಶಗಳನ್ನು ಮರುಪೂರಣಗೊಳಿಸದಿದ್ದರೆ, ಮಣ್ಣಿನ ಆರೋಗ್ಯವನ್ನು ಪೋಷಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಆಹಾರದಲ್ಲಿನ ಜೀವಸತ್ವಗಳು ಮತ್ತು ಪೋಷಕಾಂಶಗಳ ಮಟ್ಟ ತೀರ ಕಡಿಮೆಯಾಗಿದೆ. ಈ ಕಾರಣದಿಂದಲೇ ಮಣ್ಣಿನಲ್ಲಿರಲೇ ಬೇಕಾದ ಸೂಕ್ಷ್ಮ ಜೀವಿಗಳು ನಾಶಗೊಂಡಿವೆ.
ಮಣ್ಣಿನ ಮಾರಣಹೋಮವೇ ಜಗತ್ತಿನಲ್ಲೀಗ ರಾಸಾಯನಿಕ ಕೃಷಿ ಮತ್ತು ಅರಣ್ಯ ನಾಶದಿಂದಾಗಿ ಅಕ್ಷರಶಃ ಮಣ್ಣಿನ ಮಾರಣ ಹೋಮವೇ ನಡೆಯುತ್ತಿದೆ. ಇಂಥಾ ರಾಸಾಯನಿಕಗಳು ಮಣ್ಣಿನೊಂದಿಗೇ ಕೊಚ್ಚಿ ಹೋಗಿ ಪರಿಸರದಲ್ಲಿ ಹರಡಿ ನೀರನ್ನು ಕಲುಷಿತಗೊಳಿಸುತ್ತವೆ. ಹಸಿರು ಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗುತ್ತದೆ. ಈ ಮಣ್ಣಿನ ಪೋಷಕಾಂಶದ ನಷ್ಟ ಮಣ್ಣಿನ ಅವನತಿಗೆ ಕಾರಣವಾಗಿದೆ. ಇದರಿಂದ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ ಮತ್ತು ಸುಸ್ಥಿರv ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಮಣ್ಣನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಅತ್ಯಂತ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮಣ್ಣು ಕೂಡಾ ಪ್ರಧಾನ ಅಂಶ. ಮಣ್ಣು ಹೆಚ್ಚಿನ ಕೃಷಿ ಭೂಮಿಯನ್ನು ಆವರಿಸುವ ಸಡಿಲವಾದ ಮೇಲ್ಮೈಯಾಗಿದೆ. ಈ ವಸ್ತು ಅಜೈವಿಕ ಕಣಗಳು ಮತ್ತು ಸಾವಯವ ಪದಾರ್ಥಗಳ ಮಿಶ್ರಣ. ಕೃಷಿಯಲ್ಲಿ ಬಳಸುವ ಸಸ್ಯಗಳಿಗೆ ಮಣ್ಣು ಚಲನಾತ್ಮಕ ಬೆಂಬಲವನ್ನು ಒದಗಿಸುತ್ತದೆ. ಮಣ್ಣು ಸಾವಯವ ಪದಾರ್ಥಗಳು ಖನಿಜಗಳು, ಅನಿಲಗಳು, ದ್ರವಗಳು ಮತ್ತು ಜೀವಿಗಳ ಮಿಶ್ರಣವಾಗಿ ಒಟ್ಟಿಗೆ ಜೀವನವನ್ನು ಬೆಂಬಲಿಸುತ್ತದೆ. ಆದರೆ ಇದೇ ಮಣ್ಣಿನ ಸರ್ವ ನಾಶ ನಮ್ಮಿಂದಲೇ ನಡೆಯುತ್ತಿರೋದು ದುರಂತ.

ಮಣ್ಣು ಹುಟ್ಟುವ ಬಗೆ


ಹಾಗಾದರೆ ಈ ಮಣ್ಣು ಹೇಗೆ ಹುಟ್ಟುತ್ತೆ? ಅದು ಮಣ್ಣಾಗಿ ರೂಪಾಂತರ ಹೊಂದುವ ಬಗೆ ಹೇಗೆ? ಈ ನಿಟ್ಟಿನಲ್ಲಿ ಹುಡುಕ ಹೋದರೆ ಮಣ್ಣಿನ ವಿಶ್ವರೂಪ ದರ್ಶನವಾಗುತ್ತೆ. ಗಾಳಿ, ನೀರು ಮತ್ತು ಹವಾಮಾನದ ಪರಿಣಾಮದಿಂದ ಬಂಡೆಗಳು ಒಡೆದು ಮಣ್ಣು ಉತ್ಪತ್ತಿಯಾಗುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಯಾವುದೇ ಮಣ್ಣಿನ ಸ್ವರೂಪ ಅದು ಉತ್ಪತ್ತಿಯಾದ ಬಂಡೆ ಮತ್ತು ಅದರಲ್ಲಿ ಬೆಳೆಯುವ ಸಸ್ಯವರ್ಗಗಳನ್ನು ಅವಲಂಬಿಸಿದೆ. ಸಸ್ಯಗಳು ಬೆಳೆಯಲು ಮಣ್ಣು ಮಣ್ಣಿನಂಥಾ ಮತ್ತೊಂದು ಮೂಲ ಇಲ್ಲವೇ ಇಲ್ಲ. ಮಣ್ಣಿನಲ್ಲಿ ಅಡಗಿರುವ ಖನಿಜಾಂಶ, ತೇವಾಂಶ, ಜೀವಾಂಶ, ಸಾವಯವ ಅಂಶ ಮತ್ತು ಹೊದಿಕೆ ಅಂಶಗಳು ಮಣ್ಣಿನ ಫಲವತ್ತತೆಯನ್ನು ಸೂಚಿಸುತ್ತವೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಆರೋಗ್ಯಗಳ ಸಂಯೋಗವೇ ಮಣ್ಣಿನ ಆರೋಗ್ಯ. ಮಣ್ಣುಗಳು ಅವುಗಳ ಮೂಲಕ ಚಲಿಸುವ ನೀರಿನ ವೇಗ ಮತ್ತು ಶುದ್ಧತೆಯನ್ನು ನಿಯಂತ್ರಿಸುತ್ತವೆ. ನೀರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಆವಿ ಮಾಡುವುದರಲ್ಲಿ ಮಣ್ಣಿನ ಪಾತ್ರ ದೊಡ್ಡದು. ಆದರೀಗ ಜಾಗತಿಕ ಮಟ್ಟದಲ್ಲಿ ಮಣ್ಣು ಅಂಥಾ ಶಕ್ತಿಯನ್ನು ಕಳೆದುಕೊಂಡಿದೆ.
ಈ ಮಣ್ಣಿಗಿರುವ ಅದ್ಭುತ ಶಕ್ತಿಯನ್ನು ವಿವರಿಸೋದು ಸಲೀಸಿನ ವಿಚಾರವಲ್ಲ. ಮಣ್ಣು, ಸತ್ತ ಪ್ರಾಣಿಗಳಿಂದ ಮತ್ತು ಸಸ್ಯಗಳಿಂದ ಪೋಷಕಾಂಶಗಳನ್ನು ಮರುಬಳಕೆ ಮಾಡುತ್ತವೆ. ಮಣ್ಣು ಕೋಟ್ಯಾಂತರ ಜೀವಜಂತುಗಳಿಗೆ ಆಶ್ರಯ ನೀಡಿದೆ. ಗೊಬ್ಬರವನ್ನು ಪೋಷಕಾಂಶಗಳನ್ನಾಗಿ ಬದಲಿಸುವ ಸಾಮರ್ಥ್ಯ ಮಣ್ಣಿಗಿದೆ. ಯಾವುದೇ ಜೀವಿಯ ಅಂತ್ಯವಾದರೂ ಅದು ಮಣ್ಣಿನಲ್ಲಿ ಕೊಳೆಯುವ ಹಿಂದಿನ ಕಾರಣ ಇದೇ ಮಣ್ಣು. ಮಣ್ಣುಗಳು ಭೂಮಿಯನ್ನು ಸುತ್ತುವರೆದಿರುವ ಗಾಳಿಯನ್ನು ಬದಲಾಯಿಸುತ್ತವೆ ಇದನ್ನು ವಾತಾವರಣ ಎಂದು ಕರೆಯಲಾಗುತ್ತದೆ. ಹವಾಮಾನದ ಏರುಪೇರುಗಳನ್ನು ನಿಯಂತ್ರಿಸುತ್ತದೆ. ಮಣ್ಣು ಪ್ರಾಣಿಗಳು, ಕೀಟಗಳು ಮತ್ತು ಸೂಕ್ಷ್ಮಜೀವಿಗಳೆಂದು ಕರೆಯಲ್ಪಡುವ ಅತ್ಯಂತ ಚಿಕ್ಕ ಜೀವಿಗಳಿಗೆ ವಾಸಿಸುವ ಸ್ಥಳವಾಗಿದೆ. ಜಗತ್ತಿನಾದ್ಯಂತ ಮೂರು ಲಕ್ಷಕ್ಕೂ ಅಧಿಕ ಮಣ್ಣಿನ ಬಗೆಗಳಿವೆ. ಸಾವಿರಾರು ಜಾತಿಯ ಸೂಕ್ಷಜೀವಿಗಳಿವೆ. ಸಹಸ್ರಾರು ಸಂಖ್ಯೆಯ ಕ್ರಿಮಿಕೀಟಗಳಿವೆ. ಮಣ್ಣಿನ ಜಗತ್ತು ಎಷ್ಟು ವಿಸ್ಮಯಕಾರಿ ಎಂದರೆ ತನ್ನ ಒಡಲಾಳದಲ್ಲಿ ಇರಿಸಿಕೊಂಡಿರುವ ಕೋಟ್ಯಾಂತರ ಜೀವರಾಶಿಯಲ್ಲಿ ಕೇವಲ ಶೇಕಡಾ ಒಂದರಷ್ಟನ್ನು ಮಾತ್ರ ನಮ್ಮ ಕೈಯಿಂದ ಗುರುತಿಸಲು ಸಾಧ್ಯವಾಗಿದೆ!

ಕೃಷಿಗೆ ಮಣ್ಣೇ ಉಸಿರು


ನಮ್ಮ ದೇಶದ ಒಟ್ಟಾರೆ ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಪಾಲು ದೊಡ್ಡದಿದೆ. ನಮ್ಮು ದೇಶದ ಆರ್ಥಿಕತೆ ಮತ್ತು ಸಮಾಜಕ್ಕೆ ಕೃಷಿ ಬಹಳ ಮುಖ್ಯವಾದ ಕ್ಷೇತ್ರ. ನಮ್ಮ ಜೀವನಕ್ಕೆ ಬಹಳ ಮುಖ್ಯವಾದ ಕೃಷಿಯ ಅಡಿಪಾಯ ಮಣ್ಣು ನ್ನೋದನ್ನು ಈಗಿನ ಸಮುದಾಯಕ್ಕೆ ಬಿಡಿಸಿ ಹೇಳುವ ಅನಿವಾರ್ಯತೆ ಇದೆ. ಕೃಷಿ ಇಲ್ಲದೆ ಮನುಷ್ಯರಿಗೆ ಆಹಾರ ಸಿಗುವುದಿಲ್ಲ. ಆಹಾರ ಪಡೆಯಲು ಕೃಷಿ ಮಾಡುವುದು ಕಡ್ಡಾಯ. ಕೃಷಿಯು ಎಲ್ಲರಿಗೂ ಆಹಾರ, ಬಟ್ಟೆ, ಇಂಧನ ಮತ್ತು ವಸತಿಯನ್ನು ಒದಗಿಸುತ್ತದೆ. ಹೀಗೆ ಮಣ್ಣು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅದೇ ರೀತಿ, ಕೃಷಿಯ ಸುಧಾರಣೆಗೆ ಅನೇಕ ಅಂಶಗಳಲ್ಲಿ ಮಣ್ಣು ಒಂದಾಗಿದೆ. ಮಣ್ಣು ಯಶಸ್ವಿ ಬೇಸಾಯದ ಅತ್ಯಗತ್ಯ ಭಾಗವಾಗಿದೆ ಮತ್ತು ಬೆಳೆ ಬೆಳೆಯಲು ಪೋಷಕಾಂಶಗಳನ್ನು ಒದಗಿಸುವ ಮೂಲವಾಗಿದೆ. ಪ್ರಮುಖ ಪೋಷಕಾಂಶಗಳು ಮಣ್ಣಿನಿಂದ ಸಸ್ಯಗಳಿಗೆ ವರ್ಗಾವಣೆಯಾಗುತ್ತವೆ. ಇದು ಆಹಾರವನ್ನು ಆರೋಗ್ಯಕರವಾಗಿಸುತ್ತದೆ. ಆರೋಗ್ಯಕರ ಮಣ್ಣು ಸಸ್ಯಗಳ ಬೆಳೆವಣಿಗೆಗೆ ಅಗತ್ಯವಾದ ಸಸ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಮೂರು ಸಸ್ಯ ಪೋಷಕಾಂಶಗಳನ್ನು ದ್ಯುತಿಸಂಶ್ಲೇಷಣೆಯಿಂದ ವಾತಾವರಣದಿಂದ ಪಡೆದರೆ, ಇನ್ನುಳಿದ ಸಸ್ಯ ಪೋಷಕಾಂಶಗಳನ್ನು ಮಣ್ಣಿನಿಂದ ಪಡೆಯುತ್ತದೆ. ಆದರೆ ಆ ಚೈತನ್ಯ ಈಗ ಬಹುಪ;ಆಲು ಮಣ್ಣಿಗೆ ಇಲ್ಲವಾಗಿದೆ!
ಮಣ್ಣಿಗೆ ಅನಾರೋಗ್ಯ ಕಾಡಿದರೆ ನಮಗೆಲ್ಲ ಖಂಡಿತಾ ಉಳಿಗಾಲವಿಲ್ಲ. ಆರೋಗ್ಯಕರ ಮಣ್ಣು ಅತ್ಯಂತ ಪೌಷ್ಟಿಕ ಮತ್ತು ಹೇರಳವಾದ ಆಹಾರ ಪೂರೈಕೆಯನ್ನು ಉತ್ಪಾದಿಸುತ್ತದೆ. ಆರೋಗ್ಯಕರ ಮಣ್ಣು ಹೆಚ್ಚಿನ ಆಹಾರವನ್ನು ಉತ್ಪಾದಿಸುವುದರಿಂದ ಮಾನವ ಹಸಿವನ್ನು ನೀಗಿಸುವಲ್ಲಿ ಮಣ್ಣು ಪ್ರಮುಖ ಪಾತ್ರವಹಿಸುತ್ತದೆ. ಕೃಷಿಯನ್ನು ಲಾಭದಾಯಕವಾಗಿ ಮಾಡುವಲ್ಲಿ ಮಣ್ಣಿನ ಉತ್ಪಾದಕತೆಯು ಪ್ರಮುಖ ಪಾತ್ರ ವಹಿಸುತ್ತದೆ. ಮಣ್ಣಿನ ಉತ್ಪಾದಕತೆ ಮಣ್ಣಿನ ಗುಣಲಕ್ಷಣ, ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಭಾರತೀಯ ಕೃಷಿ ಪದ್ಧತಿಯಲ್ಲಿ ಮಣ್ಣಿನ ಉತ್ಪಾದಕತೆ, ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಇದನ್ನು ವೈಜ್ಞಾನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದರಿಂದ ಮಾತ್ರ ಸಾಧ್ಯ. ಮಣ್ಣು ಪರೀಕ್ಷೆಯಿಂದ ರೈತರು ತಮ್ಮ ಹೊಲದ ಮಣ್ಣಿನ ಭೌತಿಕ, ರಾಸಾಯನಿಕ, ಜೈವಿಕ ಗುಣ ಹಾಗೂ ಮಣ್ಣಿನಲ್ಲಿರುವ ಸಸ್ಯ ಪೋಷಕಾಂಶಗಳ ಪ್ರಮಾಣ ತಿಳಿದು ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಂಡು ಉತ್ತಮ ಬೆಳೆ ಬೆಳೆಯಬಹುದು. ಆದರೆ ಈ ಬಗ್ಗೆ ಕೃಷಿಕರು ಅಗತ್ಯ ಪ್ರಮಾಣದಲ್ಲಿ ಗಮನ ಹರಿಸುತ್ತಿಲ್ಲ.

ಮಣ್ಣು ಪರೀಕ್ಷೆ


ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೃಷಿಯಲ್ಲಿ ಕೆಲ ಶಿಸ್ತಿನ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಇದಕ್ಕೆ ವರವಾಗಿ ಕಾಣಿಸೋದು ಮಣ್ಣು ಪರೀಕ್ಷೆ. ಇದರಿಂದಾಗಿ ಮಣ್ಣಿನ ಗುಣ ಮತ್ತು ಫಲವತ್ತತೆ ಪ್ರಮಾಣ ತಿಳಿಯುತ್ತದೆ. ಪರೀಕ್ಷಾ ವರದಿಯ ಆಧಾರದ ಮೇಲೆ ಸೂಕ್ತವಾದ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ಉಪಯುಕ್ತ ಪೋಷಕಾಂಶಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಲು ಸಹಾಯ ಮಾಡುತ್ತದೆ. ಮಣ್ಣಿನ ಗುಣವರ್ಧಕಗಳ ಸ್ಥಿತಿ, ಅವಶ್ಯಕತೆ ತಿಳಿಯುತ್ತದೆ. ಬೆಳೆಗೆ ಅವಶ್ಯಕವಿರುವ ಪೋಷಕಾಂಶಗಳ ಪ್ರಮಾಣ ತಿಳಿಯುತ್ತದೆ. ಅವಶ್ಯಕವಿರುವ ಪೋಷಕಾಂಶಗಳನ್ನು ಒದಗಿಸುವುದರಿಂದ ಅನವಶ್ಯಕ ಪೋಷಕಾಂಶ ಬಳಕೆಯನ್ನು ತಡೆಯಬಹುದು. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು. ರೈತರು ತಮ್ಮ ಜಮೀನಿನಲ್ಲಿರುವ ಮಣ್ಣಿನ ಫಲವತ್ತತೆ, ಪೋಷಕಾಂಶಗಳ ಪ್ರಮಾಣ, ರಸಸಾರ ಮತ್ತು ಸಾವಯವ ಅಂಶಗಳ ಪ್ರಮಾಣ. ತಿಳಿದು ಕೊರತೆ ವ್ಯತ್ಯಾಸ ಕಂಡುಬಂದಲ್ಲಿ ಅದಕ್ಕೆ ಸೂಕ್ತ ಕ್ರಮಗಳ್ನ್ನು ಅನುಸರಿಸುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ವೈಜ್ಞಾನಿಕ ಪದ್ಧತಿಯಂತೆ ಬೇಸಾಯ ಕ್ರಮಗಳನ್ನು ಕೈಗೊಂಡು ಮತ್ತು ಪೋಷಕಾಂಶ ನಿರ್ವಹಣೆಯಿಂದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಫಲವತ್ತತೆಯನ್ನು ಹೆಚ್ಚಿಸಿ ಅಧಿಕ ಇಳುವರಿಯನ್ನು ಪಡೆದು ನಿರಂತರ ಲಾಭಗಳಿಸಬಹುದು. ಈ ರೀತಿಯ ಕ್ರಮಗಳ ಪಾಲನೆಯಿಂದ ಕೃಷಿಯಲ್ಲಾಗುತ್ತಿರುವ ವೈಪರಿತ್ಯಗಳನ್ನು ಆಗದಂತೆ ಮಣ್ಣಿನ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಬಹುದಲ್ಲದೆ ಹೆಚ್ಚಿನ ಇಳುವರಿಯನ್ನೂ ಮತ್ತು ಉತ್ತಮ ಗುಣಮಟ್ಟದ ಬೆಳೆಯನ್ನು ತೆಗೆಯಲು ಸಾಧ್ಯ. ರಾಸಾಯನಿಕಗಳು, ಲವಣಗಳು, ವಿಷಕಾರಿ ಸಂಯುಕ್ತಗಳು , ವಿಕಿರಣಶೀಲ ವಸ್ತುಗಳ ನಿರಂತರ ಬಳಕೆಯಿಂದ ಮಣ್ಣು ಮಾಲಿನ್ಯಗೊಳ್ಳುತ್ತಿದೆ. ಇದು ಪ್ರಾಣಿಗಳ ಆರೋಗ್ಯ ಮತ್ತು ಸಸ್ಯ ಬೆಳೆವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಣ್ಣು ಕಲುಷಿತಗೊಳ್ಳಲು ಹಲವು ಮಾರ್ಗಗಳಿವೆ. ಪಟ್ಟಣ ಮತ್ತು ಕೈಗಾರಿಕಾ ತ್ಯಾಜ್ಯ ಪ್ರತಿದಿನ ವಿಷಯುಕ್ತ ಪದಾರ್ಥವು ಅಂತರ್ಜಲದೊಂದಿಗೆ ಮಣ್ಣಿನಲ್ಲಿ ಬೆರೆತು ನೀರು ಮತ್ತು ಮಣ್ಣಿನ ಮಾಲಿನ್ಯ ಭಾರಿ ಲೋಹಗಳು, ಪೆಟ್ರೋಲಿಯಂ ಹೈಡ್ರೋಕಾರ್ಬನ್‌ಗಳು, ದ್ರಾವಕಗಳು ಮತ್ತು ಕೀಟನಾಶಕಗಳಂತಹ ವಿಷಯುಕ್ತ ರಾಸಾಯನಿಕಗಳ ಬಳಕೆ ಮಣ್ಣಿನ ಸಂರಕ್ಷಣೆ ಮತ್ತು ಕೃಷಿಯಲ್ಲಿ ಮಣ್ಣಿನ ನಿರ್ವಹಣೆ ಬಹು ಮುಖ್ಯವಾಗಿ ಕಾಣಿಸುತ್ತದೆ.

ಗುಣಮಟ್ಟ ಕುಸಿತ


ಜಾಗತಿಕ ಮಟ್ಟದಲ್ಲಿ ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಮಣ್ಣು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಆದ್ದರಿಂದ ಮಣ್ಣಿನ ಗುಣಮಟ್ಟವು ದೀರ್ಘಕಾಲದವರೆಗೆ ಉಳಿಯುವುದು ಬಹಳ ಮುಖ್ಯವಾಗುತ್ತದೆ. ಇದಕ್ಕಾಗಿ ಮಣ್ಣಿನ ನಿರ್ವಹಣೆ ರೈತರಿಗೆ ಅತ್ಯಗತ್ಯ. ರೈತರು ಮಣ್ಣಿನ ಮತ್ತು ಸುತ್ತಮುತ್ತಲಿನ ಪರಿಸರದ ಬಗ್ಗೆ ಉತ್ತಮ ಕಾಳಜಿ ವಹಿಸಬೇಕು. ಹಾಗಾಗಿ ಮಣ್ಣಿನ ನಿರ್ವಹಣೆಗೆ ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದು ಅತೀ ಮುಖ್ಯ. ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸಲು ದೀರ್ಘಾವಧಿಯ ಸುಸ್ಥಿರ ಮಣ್ಣು ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತಿ ಮುಖ್ಯ. ಬೆಳೆ ಇಳುವರಿಗಿಂತ ಗುಣಮಟ್ಟದ ಆಹಾರಕ್ಕೆ ಮತ್ತು ಆಹಾರದ ಸುರಕ್ಷತೆಗೆ ಆದ್ಯತೆ ನೀಡಬೇಕು. ಆದರೆ ಅಂಥಾ ಯಾವ ಎಚ್ಚರವೂ ಆಧುನಿಕ ಕೃಷಿ ಪದ್ಧತಿಯಲ್ಲಿ ಕಾಣಿಸುತ್ತಿಲ್ಲ!
ಈವತ್ತಿಗೆ ರಾಸಾಯನಿಕ ಗೊಬ್ಬರ ಬಳಕೆ ತುಸು ಅನಿವಾರ್ಯ. ಕೃಷಿ ರಾಸಾಯನಿಕಗಳ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವುದು ರಸಗೊಬ್ಬರ ಸಂಹಿತೆಯು ರಸಗೊಬ್ಬರಗಳ ಕಡಿಮೆ ಬಳಕೆ, ದುರುಪಯೋಗ ಮತ್ತು ಅತಿಯಾದ ಬಳಕೆಯನ್ನು ತಪ್ಪಿಸಲು ಮಾರ್ಗದರ್ಶಿ ಸಿದ್ದಪಡಿಸಬೇಕು. ಗುಣಮಟ್ಟದ ಮಾಹಿತಿ ಸಾರ್ವಜನಿಕರಿಗೂ ಲಭ್ಯವಿರಬೇಕು ಮತ್ತು ಉಲ್ಲೇಖಿತ ಪ್ರಯೋಗಾಲಯಗಳಿಂದ ಪರೀಕ್ಷೆಗೆ ಒಳಪಡಿಸಿ ಮೇಲ್ವಿಚಾರಣೆ ಮಾಡಬೇಕು. ಕೊರತೆಗಳನ್ನು ತಪ್ಪಿಸಲು, ಮಣ್ಣಿನ ಪೊಷಕಾಂಶಗಳಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ. ಬೇಳೆಕಾಳುಗಳ ಬಳಕೆ, ಬೆಳೆ ವೈವಿಧ್ಯತೆ, ಅಂತರ ಬೆಳೆ ಮತ್ತು ಬೆಳೆ ಪರಿವರ್ತನೆಯನ್ನು ಉತ್ತೇಜಿಸಬೇಕು. ಸಮಗ್ರ ಪದ್ದತಿಯನ್ನು ಅಳವಡಿಸಿ ಕೃಷಿ ಜೀವವೈವಿಧ್ಯಗಳನ್ನು ಹೆಚ್ಚಿಸುವುದು. ರಸಗೊಬ್ಬರವನ್ನು ಜೈವಿಕ ಗೊಬ್ಬರದೊಂದಿಗೆ ಬಳಕೆ, ಕೃಷಿ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಕೆ, ಪೋಷಕಾಂಶಗಳ ಮರುಬಳಕೆ, ಕೊಟ್ಟಿಗೆ ಗೊಬ್ಬರಗಳನ್ನು ಪೋಷಕಾಂಶಗಳಿಂದ ಸಮೃದ್ಧಿಗೊಳಿಸುವಿಕೆ ಮತ್ತು ಜೈವಿಕ ಉತ್ತೇಜಕಗಳೊಂದಿಗೆ ಸಮಗ್ರವಾಗಿ ಪೋಷಕಾಂಶಗಳ ನಿರ್ವಹಣೆ ಅಗತ್ಯ. ಮಣ್ಣಿಗೆ ಜೀವವನ್ನು ಮರಳಿ ತರುವಲ್ಲಿ ನಾವು ರೈತರನ್ನು ಬೆಂಬಲಿಸಿದಾಗ ನಾವು ನಮ್ಮ ಆಹಾರ ಮತ್ತು ಭೂಮಿಯನ್ನು ಸಂರಕ್ಷಿಸಬಹುದು. ಆದರೆ ಹೆಚ್ಚು ಲಾಭ ಗಳಿಸುವ ಉಮೇದೆಂಬುದು ಅಂಥಾ ಎಚ್ಚರಗಳನ್ನು ಮರೆ ಮಾಚಿಸುತ್ತಿದೆ.


ಹೀಗೆ ಪ್ರಪಂಚದಾದ್ಯಂತ ಕ್ಷೀಣಿಸುತ್ತಿರುವ ಮಣ್ಣನ್ನು ಮತ್ತೆ ಮೊದಲಿನಂತಾಗಿಸಲು ಕೈಗೊಳ್ಳಬೇಕಾದ ಕ್ರಮಗಳು ಸಾಕಷ್ಟಿವೆ. ಮಣ್ಣಿನಲ್ಲಿ ಪೋಷಕಾಂಶದ ಮಟ್ಟವನ್ನು ತಿಳಿದು ಪೋಷಕಾಂಶಗಳ ಸಮಗ್ರ ನಿರ್ವಹಣೆ. ನಿಖರ ಕೃಷಿ ವಿಧಾನಗಳನ್ನು ಅನುಸರಿಸುವುದು. ವ್ಯವಸ್ಥಿತ ನೀರಾವರಿ ಅಳವಡಿಕೆ. ನೀರು ಇಂಗುವಂತೆ ಕಾಲುವೆಗಳ ಬದಿಗಳಲ್ಲಿ ಹುಲ್ಲು, ಪೊದರು ಬೆಳೆಯುವುದು. ಇಳಿಜಾರಿಗೆ ಅಡ್ಡವಾಗಿ ಉಳುಮೆ, ಸಮಪಾತಳಿಯಲ್ಲಿ ಬದು ನಿರ್ಮಾಣ, ಬದುಗಳಿಗೆ ಸಮಾಂತರವಾಗಿ ಸಾಗುವಳಿ. ಮಣ್ಣಿನ ಸವಕಳಿ ತಡೆಗಟ್ಟಲು ಮಣ್ಣಿನ ಮೇಲ್ಮೈ, ಹುಲ್ಲು, ಬೆಳೆಗಳಿಂದ ಹೊದಿಕೆ, ಹವಾಮಾನ ಬದಲಾವಣೆಗೆ ಅನುಗುಣವಾಗಿ ಬೆಳೆಗಳ ಆಯ್ಕೆ. ಜಮೀನಿನ ಕೊರಕಲು, ಕಮರಿಗಳಿಗೆ ಅಡ್ಡವಾಗಿ ಕಲ್ಲಿನ ತಡೆ. ಗಾಳಿಯಿಂದುಂಟಾಗುವ ಮಣ್ಣಿನ ಸವಕಳಿ ತಡೆಯಲು ಗಾಳಿ ಬೀಸುವ ದಿಕ್ಕಿಗೆ ಅಡ್ಡವಾಗಿ ಗಿಡಗಳನ್ನು ಬೆಳೆಯುವುದು. ಮಣ್ಣು ತುಂಬಾ ತೇವವಾಗಿದ್ದಾಗ ಹೊಲಗಳಲ್ಲಿ ಭಾರವಾದ ಯಂತ್ರೋಪಕರಣಗಳನ್ನು ಬಳಕೆ ಮಾಡದಿರುವುದು. ಇತ್ತೀಚಿಗೆ ಮಣ್ಣಿಗೆ ಕೊಡಬೇಕಾದ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ ಮತ್ತು ಮಣ್ಣಿನಲ್ಲಿರುವ ಜೀವಸತ್ವ ನಾಶವಾಗುತ್ತಿದೆ. ಇದು ವಿಶ್ವಾದ್ಯಂತ ನಿರಂತರವಾಗಿ ನಡೆಯುತ್ತಿದೆ.
ಹೀಗೆ ಮಣ್ಣೆಂಬುದು ವೇಗವಾಗಿ ಸಾಯುತ್ತಿಒದೆ. ಭೂಮಿ ಎಂಬುದು ಮಸಣವಾಗಿ ಮಾರ್ಪಾಟಾಗುತ್ತಿದೆ. ಅದನ್ನು ಮತ್ತೆ ಸೃಷ್ಟಿಸಲು ಕಷ್ಟಸಾಧ್ಯ. ಮನುಷ್ಯನ ದುರಾಸೆಗೆ ಮಣ್ಣು ಹಾಳಾಗುತ್ತಿದೆ. ಆದ್ದರಿಂದ ಮಣ್ಣು ಕೇವಲ ವ್ಯಾಪಾರ ಮತ್ತು ಹಣವನ್ನು ದ್ವಿಗುಣಗೊಳಿಸುವ ವಸ್ತುವಾಗಬಾರದು. ಪ್ರಕೃತಿಗೆ ಪೂರಕವಾದ ಸಾವಯವ ಗೊಬ್ಬರ ಮಣ್ಣಿಗೆ ಒಳ್ಳೆಯದು. ಅತಿಯಾದ ರಾಸಾಯನಿಕ ಗೊಬ್ಬರ ಮಣ್ಣಿನ ಫಲವತ್ತತೆಯನ್ನು ನಾಶಮಾಡಿ ಮಣ್ಣನ್ನು ಬರಡಾಗಿಸುತ್ತದೆ. ಸದ್ಯ ಮನುಷ್ಯನಿಗೆ ಮಣ್ಣು ಬರಡಾದರೂ ಬದುಕು ಹಸನಾದರೆ ಸಾಕೆಂಬ ಸ್ವಾರ್ಥವಿದೆ. ಅದನ್ನು ಬಿಡದಿದ್ದರೆ ಘೋರ ದುರಂತವೊಂದಕ್ಕೆ ಅಣಿಯಾಗಬೇಕಾಗುತ್ತದೆ.

Tags: #agriculture#deathsoil#environment#indianagriculture#naturlove#soilhelth#soilpolution#wonderfacts

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
cancer diseases: ಡೇಂಜರ್ ಜೋನಿನಲ್ಲಿದ್ದಾರೆ ಭಾರತೀಯ ಮಹಿಳೆಯರು!

cancer diseases: ಡೇಂಜರ್ ಜೋನಿನಲ್ಲಿದ್ದಾರೆ ಭಾರತೀಯ ಮಹಿಳೆಯರು!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.