ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಸುವ್ವಾಲಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ವಿನಾಯಕ ವೆಂಕಟೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಿತು. ‘ಶ್ರೀ ಶೈಲಾ ಪ್ರೆೊಡಕ್ಷನ್ಸ್’ ಅಡಿಯಲ್ಲಿ ಎಂ. ಮಹೇಶ್ ನಿರ್ಮಾಣ ಮಾಡುತ್ತಿರುವ ‘ಸುವ್ವಾಲಿ’ ಸಿನಿಮಾಕ್ಕೆ ಎಂ. ಮಹೇಶ ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

‘ಸುವ್ವಾಲಿ’ ಸಿನಿಮಾವು ಅನಾಥ ಮಕ್ಕಳ ಸುತ್ತ ಸಾಗುತ್ತದೆ. ಇಂತಹ ಮಕ್ಕಳು ಸಮಾಜದಲ್ಲಿ ಏನಾಗುತ್ತಾರೆ? ಅವರ ಭವಿಷ್ಯ ಯಾವ ರೀತಿ ತೆಗೆದುಕೊಂಡು ಹೋಗತ್ತೆೆ? ಅಪ್ಪ ಅಮ್ಮ ರೂಪಿಸಿದ್ದ ಭವಿಷ್ಯವೇ ಕೆಲವೊಮ್ಮೆ ಸರಿ ದಾರಿಗೆ ಹೋಗುವುದಿಲ್ಲ. ಏನು ಇಲ್ಲದವರ ಪರಿಸ್ಥಿತಿ ಏನಾಗುತ್ತದೆ. ಇಂತಹ ಮುಗ್ದ ಮಕ್ಕಳಿಗೆ ಹೆಣ್ಣು ಮಗುವೊಂದು ಸಿಗುತ್ತದೆ. ಇದರಿಂದ ಏನೇನು ಕಷ್ಟಗಳನ್ನು ಎದುರಿಸುತ್ತಾರೆ ಎಂಬುದರ ಸುತ್ತ ಸಿನಿಮಾದ ಕಥೆ ನಡೆಯುತ್ತದೆ.

ಅಂಜನ್, ಸಚಿನ್ ರೋಹಿತ್, ಅಂಜನಾ, ಲಯ ಕೋಕಿಲ, ರಘು ಚಿಣ್ಣರುಗಳಾದ ಅಂಕಿತಾ ಮೂರ್ತಿ, ಮಾನ್ಯ ಮುಂತಾದವರು ‘ಸುವ್ವಾಲಿ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ವಿ. ಮನೋಹರ್ ಸಾಹಿತ್ಯ ಮತ್ತು ಸಂಗೀತವಿದೆ. ಮನು ವಿಜಯ್ ಕುಮಾರ್ ಛಾಯಾಗ್ರಹಣ, ಮಲ್ಲು ಸಂಕಲನವಿದೆ. ಬೆಂಗಳೂರು ಹಾಗೂ ಮೈಸೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.





