ಕಿರುತೆರೆಯ ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ರವಿಕೆ ಪ್ರಸಂಗ’ ಸಿನಿಮಾ ಥಿಯೇಟರಿಗೆ ಬರಲು ರೆಡಿಯಾಗುತ್ತಿದೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ‘ರವಿಕೆ ಪ್ರಸಂಗ’ ಸಿನಿಮಾದ ಟೈಟಲ್ ಟ್ರಾಕ್ ಬಿಡುಗಡೆ ಮಾಡಿದೆ.

ರವಿಕೆ ಮೇಲೆ ಸಿನಿಮಾನಾ? ಅದರ ಮೇಲೊಂದು ಹಾಡಾ? ಎಂದು ಕೇಳಬಹುದು. ಅದಕ್ಕೆ ಚಿತ್ರತಂಡದ ಉತ್ತರ ಹೀಗಿದೆ. ‘ಸಿನಿಮಾದ ಹೆಸರೇ ಹೇಳುವಂತೆ ಈ ಸಿನಿಮಾದ ಕಥೆ ರವಿಕೆ ವಿಷಯದ ಮೇಲೆ ಸಾಗುತ್ತದೆ. ಹೆಣ್ಣು ಮಕ್ಕಳು ನಿತ್ಯ ಧರಿಸುವ ಸೀರೆ, ಓಲೆ, ಬಳೆ, ಗೆಜ್ಜೆ ಮುಂತಾದವುಗಳ ಬಗ್ಗೆ ಹಾಡು ಬಂದಿದೆ. ಆದರೆ ರವಿಕೆ ಬಗ್ಗೆ ಈವರೆಗೂ ಯಾವುದೇ ಹಾಡು ಬಂದಿಲ್ಲ. ರವಿಕೆಯ ಬಗೆಗಿನ ಹಾಡು ರವಿಕೆ ಕುರಿತಾಗಿಯೇ ನಿರ್ಮಾಣವಾಗಿರುವ ‘ರವಿಕೆ ಪ್ರಸಂಗ’ ಚಿತ್ರದಲ್ಲಿದೆ.’ ಎನ್ನುತ್ತದೆ.

‘ರವಿಕೆ ಪ್ರಸಂಗ’ ಈ ಚಿತ್ರಕ್ಕಾಗಿ ಕಿರಣ್ ಕಾವೇರಪ್ಪ ಬರೆದಿರುವ ‘ರವಿ, ರವಿ, ರವಿಕೆ ಪ್ರಸಂಗ…’ ಎಂಬ ಟೈಟಲ್ ಸಾಂಗ್ ‘ಝೇಂಕಾರ್ ಮ್ಯೂಸಿಕ್’ ಯು-ಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಈ ಹಾಡಿಗೆ ವಿನಯ್ ಶರ್ಮ ಸಂಗೀತ ನೀಡಿದ್ದು, ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

‘ದೃಷ್ಟಿ ಮೀಡಿಯಾ ಆ್ಯಂಡ್ ಪ್ರೊಡಕ್ಷನ್’ ವತಿಯಿಂದ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಕೊಡಂಕೇರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಗೀತಾ ಭಾರತಿ ಭಟ್ ಅವರೊಂದಿಗೆ ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್, ಪದ್ಮಜಾರಾವ್, ರಘು ಪಾಂಡೇಶ್ವರ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ಮೀನಾ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.





