ಬಹುಭಾಷಾ ನಟ ಕಿಶೋರ್ ಈಗ ಮತ್ತೊಮ್ಮೆ ಖಡಕ್ ಖಾಕಿ ತೊಟ್ಟು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೌದು, ಕಿಶೋರ್, ಸದ್ಯ ‘ಗನ್ಸ್ ಆ್ಯಂಡ್ ರೋಸಸ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ, ‘ಗನ್ಸ್ ಆ್ಯಂಡ್ ರೋಸಸ್’ ಸಿನಿಮಾತಂಡ ಸೇರಿಕೊಂಡಿರುವ ಕಿಶೋರ್ ಅವರ ಪಾತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಭರದಿಂದ ನಡೆಯುತ್ತಿದೆ.
ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕರಾಗಿ ನಟಿಸುತ್ತಿರುವ ‘ಗನ್ಸ್ ಅಂಡ್ ರೋಸಸ್’ ಸಿನಿಮಾ ಭೂಗತ ಲೋಕದ ಕಥಾಹಂದರ ಹೊಂದಿರುವ ಸಿನಿಮಾವಾಗಿದೆ. ಹೆಚ್. ಆರ್ ನಟರಾಜ್ ನಿರ್ಮಾಣದ, ಈ ಸಿನಿಮಾ ಹೆಚ್. ಎಸ್ ಶ್ರೀನಿವಾಸಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.
ಶರತ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ‘ಗನ್ಸ್ ಅಂಡ್ ರೋಸಸ್’ ಸಿನಿಮಾ ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮಲ್ಲೇನಹಳ್ಳಿ ರಾಜು ನಿರ್ಮಾಣ ನಿರ್ವಹಣೆ ಮತ್ತು ಮುನಿರಾಜ್ (ಕಬ್ಜ) ಅವರ ಸಹ ನಿರ್ದೇಶನವಿದೆ.
ನಾಯಕ ನಟ ಅರ್ಜುನ್ ಅವರಿಗೆ ಯಶ್ಚಿಕ ನಿಷ್ಕಲಾ ನಾಯಕಿಯಾಗಿದ್ದು, ಉಳಿದಂತೆ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್, ಡೈಮಂಡ್ ರಾಜಣ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.





