ಟಾಲಿವುಡ್ ಹೀರೋ ನ್ಯಾಚುರಲ್ ಸ್ಟಾರ್ ನಾನಿ ದೊಡ್ಮನೆಗೆ ಭೇಟಿಕೊಟ್ಟಿದ್ದಾರೆ. ತಮ್ಮ ನಟನೆಯ ಹಾಯ್ ನಾನ್ನ ಸಿನಿಮಾದ ಪ್ರಮೋಷನ್‍ಗಾಗಿ ಬೆಂಗಳೂರಿಗೆ ಬಂದಿಳಿದಿರೋ ನಾನಿ, ಸುದ್ದಿಗೋಷ್ಟಿಗೂ ಮೊದಲು ದೊಡ್ಮನೆ ದೊರೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವ್ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶ್ರೀ ಮುತ್ತು ನಿವಾಸದಲ್ಲಿ ಮುತ್ತಣ್ಣನ ಜೊತೆ ಕೆಲಕಾಲ ಸಮಯ ಕಳೆದ ನಾನಿ ಉಭಯ ಕುಶಲೋಪರಿ ಮುಗಿಸಿ ಪತ್ರಿಕಾಗೋಷ್ಟಿಗೆ ಹಾಜರಾಗಿದ್ದಾರೆ.
ಹಾಯ್ ನಾನ್ನ ನಾನಿ ನಟನೆಯ ಬಹುನಿರೀಕ್ಷಿತ ಸಿನಿಮಾ. ಅಪ್ಪ-ಮಗಳ ಎಮೋಷನಲ್ ಜರ್ನಿಯನ್ನು ನಿರ್ದೇಶಕ ಶೌರ್ಯುವ್ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ನಾನಿ ಸಖತ್ ಕ್ಲಾಸ್ ಆಗಿ ಕಾಣಿಕೊಂಡಿದ್ದಾರೆ. ಚಿತ್ರದಲ್ಲಿ ನಾನಿ ಮಗಳ ಪಾತ್ರದಲ್ಲಿ ಹಿಂದಿ ಬಾಲನಟಿ ಬೇಬಿ ಕಿಯಾರಾ ಖನ್ನಾ ನಟಿಸಿದ್ದಾಳೆ. ನಾನಿಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಅಲ್ಲದೇ ವಿಶೇಷ ಪಾತ್ರದಲ್ಲಿ ಶ್ರುತಿ ಹಾಸನ್ ಮಿಂಚಲಿದ್ದು. ಜಯರಾಮ್ ಮತ್ತು ಪ್ರಿಯದರ್ಶಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ನಾನಿ ಅವರಿಗೆ ಕರ್ನಾಟಕದಲ್ಲೂ ಅಭಿಮಾನಿಗಳು ಇದ್ದಾರೆ. ಹೀಗಾಗಿ, ಬೆಂಗಳೂರಲ್ಲಿ `ಹಾಯ್ ನಾನ್ನ’ ಪ್ರಚಾರ ಮಾಡಲು ನಾನಿ ಸಿಲಿಕಾನ್ ಸಿಟಿಗೆ ಬಂದಿಳಿದಿದ್ದಾರೆ.
ವೈರ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಮೋಹನ್ ಚೆರುಕೂರಿ, ವಿಜಯೇಂದ್ರ ರೆಡ್ಡಿ ತೀಗಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾನು ಜಾನ್ ವರ್ಗೀಸ್ ಐಎಸ್ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಪಂಚಭಾಷೆಗಳಲ್ಲಿ ಸಿನಿಮಾ ಸಿದ್ದಗೊಂಡಿದ್ದು,ದಕ್ಷಿಣ ರಾಜ್ಯಗಳ ಜನರಿಗೆ ತಲುಪುವ ಸಲುವಾಗಿ ಒಂದೇ ಟೈಟಲ್ ಇರಲಿ ಎಂದು ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ‘ಹಾಯ್ ನಾನ್ನ’ ಎಂದೇ ಶೀರ್ಷಿಕೆ ಇಡಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಆರಂಭವಾಗಿರುವ ಈ ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆಯಾಗಲಿದೆ.ಈ ವರ್ಷ ಬಿಡುಗಡೆ ಆಗಿದ್ದ ‘ದಸರಾ’ ಸಿನಿಮಾದಲ್ಲೂ ನಾನಿ ಅಬ್ಬರಿಸಿದ್ದರು’ಹಾಯ್ ನಾನ್ನ’ ಮೂಲಕ ಈಗ ಇನ್ನೊಂದು ಕಥೆಯನ್ನು ಅವರು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.





