ಬಹುಭಾಷಾ ನಟಿ ಮಹಾಲಕ್ಷ್ಮಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ಟಿಆರ್ಪಿ ರಾಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ‘ಟಿಆರ್ಪಿ ರಾಮ’ ಸಿನಿಮಾದ ಟ್ರೇಲರ್ ಅನಾವರಣಗೊಂಡಿದ್ದು, ಸದ್ಯ ಸಿನಿಮಾದ ಟ್ರೇಲರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವಂತೆಯೇ ಸಿನಿಮಾದ ಬಿಡುಗಡೆಗೆ ಸೆನ್ಸಾರ್ ನಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕಮರ್ಷಿಯಲ್ ಅಂಶಗಳ ಜೊತೆಗೆ ಒಳ್ಳೆಯ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ‘ಟಿಆರ್ಪಿ ರಾಮ’ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಿನಿಮಾಕ್ಕೆ ಯಾವುದೇ ಕಟ್ಸ್ – ಮ್ಯೂಟ್ಸ್ ಹೇಳದೆ ಸಿನಿಮಾಕ್ಕೆ ‘ಯು/ಎ’ ಸರ್ಟಿಫಿಕೇಟ್ ನೀಡಿದೆ.

‘ಟಿಆರ್ಪಿ ರಾಮ’ ಸಿನಿಮಾಗೆ ರವಿಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ನಟಿಸಿದಾರೆ. ‘ಅಶುತೋಶ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. ತಾಯಿ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸ್ಪರ್ಶ ಆರ್.ಕೆ, ಪಲ್ಲವಿ ಪರ್ವ, ಕರಿಸುಬ್ಬು ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರಾಜ್ ಗುರು ಹೊಸಕೋಟೆ ಸಂಗೀತ ನೀಡಿದ್ದಾರೆ. ಸುನಿಲ್ ಕಶ್ಯಪ್ ಸಂಕಲನ ಮತ್ತು ಗುರುಪ್ರಸಾದ್ ಛಾಯಾಗ್ರಹಣವಿದೆ. ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ ‘ಟಿಆರ್ಪಿ ರಾಮ’ ಚಿತ್ರಕ್ಕಿದೆ. ಒಂದಷ್ಟು ಸತ್ಯ ಘಟನೆಗಳನ್ನ ಆಧರಿಸಿ ನಿರ್ಮಿಸಿರುವ ಸಿನಿಮಾ ಎಂದೇ ಹೇಳಲಾಗುತ್ತಿರುವ ‘ಟಿಆರ್ಪಿ ರಾಮ’ ಸಿನಿಮಾವನ್ನು ಇದೇ ನವೆಂಬರ್ ನಲ್ಲಿ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ.





