‘ಬಿಗ್ ಬಾಸ್’ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ರಾಜೀವ್ ಹನು ನಾಯಕನಾಗಿ ನಟಿಸಿರುವ ‘ಉಸಿರೇ ಉಸಿರೇ’ ಚಿತ್ರದ ಮೊದಲ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಬೆಂಗಳೂರಿನ ಓರಾಯನ್ ಮಾನ್ ನ ಹೊರಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಟ ಕಿಚ್ಚ ಸುದೀಪ್ ‘ಉಸಿರೇ ಉಸಿರೇ’ ಸಿನಿಮಾದ ಟ್ರೇಲರ್ ಬಿಡುಗಡೆಗಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಕಲಾವಿದರು ಈ ಸಂದರ್ಭದಲ್ಲಿ ಹಾಜರಿದ್ದರು.
‘ಎನ್ ಗೊಂಬೆ’ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಉಸಿರೇ ಉಸಿರೇ’ ಸಿನಿಮಾಕ್ಕೆ ಸಿ. ಎಂ. ವಿಜಯ್ ನಿರ್ದೇಶನವಿದೆ. ಸಿನಿಮಾದಲ್ಲಿ ರಾಜೀವ್ ಹನು ಅವರಿಗೆ ಶ್ರೀಜಿತ ಘೋಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಕನ್ನಡದಲ್ಲಿ ತೆಲುಗಿನ ಖ್ಯಾತ ನಟರಾದ ಬ್ರಹ್ಮಾನಂದಂ ಹಾಗೂ ಅಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟ ದೇವರಾಜ್, ಸಾಧುಕೋಕಿಲ, ತಾರಾ, ಮಂಜು ಪಾವಗಡ ಮೊದಲಾದವರು ‘ಉಸಿರೇ ಉಸಿರೇ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟ ಕಿಚ್ಚ ಸುದೀಪ್, ‘’ಉಸಿರೇ ಉಸಿರೇ’ ನನ್ನ ಗೆಳೆಯ ರಾಜೀವ್ ನಾಯಕನಾಗಿ ನಟಿಸಿರುವ ಸಿನಿಮಾ. ಟ್ರೇಲರ್ ತುಂಬ ಚೆನ್ನಾಗಿದೆ. ನಾನು ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇಡೀ ಚಿತ್ರತಂಡ ಸಾಕಷ್ಟು ಶ್ರಮಪಟ್ಟು ಉತ್ತಮವಾದ ಸಿನಿಮಾ ಮಾಡಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ಎಲ್ಲರೂ ನೋಡಿ ಬೆಂಬಲಿಸಿ’ ಎಂದರು.ಸದ್ಯ ಟ್ರೇಲರ್ ಬಿಡುಗಡೆ ಮಾಡಿರುವ ‘ಉಸಿರೇ ಉಸಿರೇ’ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ಸಿನಿಮಾವನ್ನು ಥಿಯೇಟರಿಗೆ ತರುವ ಯೋಚನೆಯಲ್ಲಿದೆ.





