ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಪ್ರತೀ ಕ್ಷಣವೂ ಜನರನ್ನು ಹಿಂಡಿ ಹಿಪ್ಪೆ ಮಾಡಿ ಹಾಕುತ್ತಿದೆ. ಅದ್ಯಾವ ಸರ್ಕಾರಗಳೇ ಬಂದರೂ ಕೂಡಾ ಜನರನ್ನು ಸಂಪೂರ್ಣವಾಗಿ ಈ ಸಮಸ್ಯೆಯಿಂದ ಪಾರು ಮಾಡಲು ಸಾಧ್ಯವಾಗುತ್ತಲೇ ಇಲ್ಲ. ಅಷ್ಟಕ್ಕೂ ದಿನೇ ದಿನೆ ಬೆಳೆಯುತ್ತಿರುವ, ಎದೆ ಮೇಲೆ ಲಕ್ಷಾಂತರ ಜನರನ್ನು ಹೊತ್ತು ಸಲಹುತ್ತಿರುವ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದು ಹಾಕೋದು ಸಲೀಸಿನ ಸಂಗತಿಯೇನಲ್ಲ. ಹಾಗಂತ ಅದು ಅಸಾಧ್ಯವಾದದ್ದು ಅಂದುಕೊಳ್ಳುವಂತೆಯತೂ ಇಲ್ಲ. ಯಾಕಂದ್ರೆ, ಬೆಂಗಳೂರಿನಲ್ಲಿ ದಶಕದಿಂದೀಚೆಗೆ ಲೆಕ್ಕವಿಲ್ಲದಷ್ಟು ಫೈ ಓವರುಗಳಾಗಿವೆ. ಯಥೇಚ್ಚವಾಗಿಯೇ ಅಂಡರ್ ಪಾಸ್ ಗಳು ನಿರ್ಮಾಣ ಗೊಂಡಿವೆ. ಆದರೂ ಕೂಡಾ ರಸ್ತೆ ಮೇಲಿನ ದಟ್ಟಣೆ ಮಾತ್ರ ಕಡಿಮೆಯಾದಂತಿಲ್ಲ.
ಹೀಗೆ ಒಂದು ಕಡೆಯಿಂದ ಟ್ರಾಫಿಕ್ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದು ದಿಕ್ಕಿನಲ್ಲಿನ ವಾಹನ ದಟ್ಟಣೆಯ ಕೂಸಿನಂಥಾ ಪಾರ್ಕಿಂಗ್ ಸಮಸ್ಯೆ ಬೆಂಗಳೂರು ಮಂದಿಯನ್ನು ಬಿಟ್ಟೂ ಬಿಡದಂತೆ ಅವ್ಯಾಹತವಾಗಿ ಕಾಡಲಾರಂಭಿಸಿದೆ. ಆಯಾ ಏರಿಯಾಗಳಲ್ಲಿ ಜನಸಂಖ್ಯೆಗನುಗುಣವಾಗಿ ವ್ಯವಸ್ಥಿತವಾದ ಪಾಠರ್ಕಿಂಗ್ ಸೌಲಭ್ಯ ಕಲ್ಪಿಸಬೇಕನ್ನೋದು ಹಲವಾರು ವರ್ಷಗಳಿಂದಲೂ ಬೆಂಗಳೂರಿನ ನೊಂದ ನಾಗರಿಕರ ಅಹವಾಲಾಗಿತ್ತು. ಆದರೆ, ವರ್ಷಾಂತರಗಳಿಂದಲೂ ಕೂಡಾ ಟ್ರಾಫಿಕ್ ಪೊಲೀಸರ ಟೋಯಿಂಗ್ ಭೂತ ನಾಗರಿಕರನ್ನೆಲ್ಲ ಪರಿ ಪರಿಯಾಗಿ ಬೆದರಿಸುತ್ತಾ ಬಂದಿತ್ತು. ಯಾವುದು ಪಾರ್ಕಿಂಗೋ, ಮತ್ಯಾವುದು ನೋ ಪಾರ್ಕಿಂಗೋ… ಪ್ರಯಾಸ ಪಟ್ಟು ಸಿಕ್ಕಲ್ಲಿ ಕಾರನ್ನೋ, ಬೈಕನ್ನೋ ನಿಲ್ಲಿಸಿ ಹೋದರೆ ವಾಪಾಸಾಗೋವಷ್ಟರಲ್ಲಿ ಟೋಯಿಂಗ್ ವಾಹನಗಳು ಎಳೆದು ಹೊತ್ತೊಯ್ದು ಹೋಗುತ್ತಿದ್ದ್ದರಿಂದಾಗಿ ಮಂದಿ ಕಂಗಾಲಾಗಿದ್ದರು.
ಮತ್ತೆ ಟೋಯಿಂಗ್ ಭೂತ
ಮೇಲು ನೋಟಕ್ಕೆ ಇಂತಾ ಟೋಯಿಂಗ್ ಪ್ರಕ್ರಿಯೆ ಬೆಂಗಳೂರಿನಂಥಾ ಮಹಾ ನಗರಗಳ ಪಾಲಿಗೆ ಅನಿವಾರ್ಯವೆಂಬಂತೆ ಕಾಣಿಸೋದರಲ್ಲಿ ಅಚ್ಚರಿಯೇನಿಲ್ಲ. ಆದರೆ ಟ್ರಾಫಿಕ್ ಪೊಲೀಸ್ ವಿಭಾಗ ಈ ಹಿಂದೆ ಟೋಯಿಂಗ್ ಟೆಂಡರ್ ಅನ್ನು ಖಾಸಗಿಯವರಿಗೆ ವಹಿಸಿಕೊಂಡು ಬಂಸಿತ್ತು. ಹೀಗೆ ಟೆಂಡರ್ ಪಡೆದುಕೊಂಡವರ ಹಾವಳಿ ಅನ್ನೋದು ಬೆಂಗಳೂರಿನ ನಾಗರಿಕರನ್ನು ಅಕ್ಷರಶಃ ಕಂಗಾಲಾಗಿಸಿತ್ತು. ಯಾವುದೋ ಎಮರ್ಜೆನ್ಸಿ ಸನ್ನಿವೇಶವಿರುತ್ತೆ. ಯಾರಿಗಾದರೂ ಆಸ್ಪತ್ರೆಗೆ ದಾಖಲಾದವರಿಗೆ ಕೂಡಲೇ ರಕ್ತವೋ, ಮಾತ್ರೆಗಳನ್ನೋ ತೆಗೆದುಕೊಂಡು ಹೋಗಬೇಕಾಗಿರುತ್ತೆ ಅಂತಿಟ್ಟುಕೊಳ್ಳಿ. ರಸ್ತೆ ಬದಿ ಧಾವಂತದಲ್ಲಿ ವಾಹನ ನಿಲ್ಲಿಸಿ ವಾಪಾಸುಯಯ ಬಂದು ನೋಡಿದರೆ ವಾಹನಗಳು ಇಲ್ಲ ಅನ್ನಿಸಿದಾಗ ಯಾರಿಗೇ ಆದರೂ ಎದೆ ಧಸಕ್ ಅನ್ನಿಸದೇ ಇರೋದಿಲ್ಲ.
ಹೀಗೆ ಕಂಡಲ್ಲಿಂದ ವಾಹಬನಗಳನ್ನು ಟೋಯಿಂಗ್ ಮಾಡಿ ಕೊಂಡೊಯ್ಯುವ ಮಂದಿ ಅದನ್ನು ಸೀದಾ ಆಯಾ ಭಾಗದ ಟ್ರಾಫಿಕ್ ಪೊಲೀಸ್ ಠಾಣೆಯ ಆಸು ಪಾಸಲ್ಲಿ ನಿಲ್ಲಿಸಿರುತ್ತಾರೆ. ಅದಕ್ಕಾಗಿ ಕಿಲೋಮೀಟರುಗಟ್ಟಲೆ ಹೋಗಿ, ದಂಡ ಕಟ್ಟಿ ಗೋಗರೆದು ವಾಪಾಸು ತರೋವಷ್ಟರಲ್ಲಿ ಅನೇಕರ ಜೀವ ಹೋಗಿದ್ದೂ ಇದೆ. ಇದರ ಪರಿಣಾಮ ಅಷ್ಟೊಂದು ಭೀಕರವಾಗಿರೋದರಿಂದಲೇ ಟೋಯಿಂಗ್ ರದ್ದು ಮಾಡಬೇಕೆಂದು ಬೆಂಗಳೂರಿನ ಮಂದಿ ಆಗ್ರಹಿಸುತ್ತಾ ಬಂದಿದ್ದರು. ಕಡೆಗೂ ನಎರಡು ವರ್ಷಗಳ ಹಿಂದೆ ಟೋಯಿಂಗ್ ರದ್ದಾಗಿತ್ತು. ಇದೀಗ ಮತ್ತೆ ಸಂಚಾರ ದಟ್ಟಣೆ ಆರಂಭವಾಗಿರೋದರಿಂದಾಗಿ ಟೋಯಿಂಗ್ ಅನ್ನು ಮತ್ತೆ ಶುರು ಮಾಡಲುನ ಸರ್ಕಾರ ಚಿಂತಿಸುತ್ತಿದೆ. ಖುದ್ದು ಗೃಹ ಸಚಿವರಾದ ಜಿ ಪರಮೇಶ್ವರ್ ಇಂಥಾದ್ದೊಂದು ಸೂಚನೆ ನೀಡಿದ್ದಾರೆ.
ಅದೊಂದು ಮಾಫಿಯಾ
ಕಳೆದ ಕೆಲ ದಿನಗಳಿಂದ ಬೆಂಗಳೂರು ಸೀಮೆಯಲ್ಲಿ ಟೋಯಿಂಗ್ ಮಾಫಿಯಾದ ಸುತ್ತ ಮಾತುಗಳು ಸುಳಿದಾಡುತ್ತಿವೆ. ಬೆಂಗಳೂರಿನ ಟ್ರಾಫಿಕ್ಕು, ಆ ಜಂಜಾಟಗಳ ಅರಿವಿರುವವರಿಗೆ ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಎತ್ತಾಕಿಕೊಂಡು ಗಾಯಬ್ ಆಗುವ ಟೋಯಿಂಗ್ ತಲೆನೋವು ಚಿರಪರಿಚಿತ. ಈ ಬಗ್ಗೆ ಪ್ರತೀ ಬೆಂಗಳೂರಿಗರೊಳಗೂ ಅಸಹನೆಯಿದೆ. ಆಕ್ರೋಶವೂ ಇದೆ. ಆದರೆ ಒಂದಿಡೀ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಮೇಲೆಯೇ ನಾಗರಿಕರಲ್ಲಿಮ ಅಸಮಾಧಾನವಿತ್ತು. ಆದರೆ ಜನರ ಆಶೋತ್ತರಗಳಿಗೆ ಕಿಲುಬುಗಾಸಿನ ಕಿಮ್ಮತ್ತೂ ಇಲ್ಲವಾಗಿದೆ. ಈ ಕಾರಣದಿಂದಲೇ ಟ್ರಾಫಿಕ್ ಅನ್ನು ಹತೋಟಿಯಲ್ಲಿಡಲು ಬೇರೆ ಮಾರ್ಗ ಹುಡುಕುವ ಬದಲಾಗಿ ಅತ್ಯಂತ ಡೇಂಜರಸ್ ಆದ ಟೋಯಿಂಗ್ ಅನ್ನು ಮತ್ತೆ ತರಲು ಸರ್ಕಾರ ಚಿಂತಿಸುತ್ತಿರೋದು ಸರಿಯಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೋ ಪಾರ್ಕಿಂಗ್ ಅಂತಿರುವ ಪ್ರದೇಶಗಳಲ್ಲಿ ವಾಹನ ನಿಲ್ಲಿಸೋದು ಅಪರಾಧ. ಹಾಗೆ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ಸಿಬ್ಬಂದಿ ತೆಗೆದುಕೊಂಡು ಹೋಗಿ ಆಯಾ ಪೊಲೀಸ್ ಠಾಣೆಗಳ ಮುಂದೆ ನಿಲ್ಲಿಸುತ್ತಾರೆ. ಜನ ಮಾಡಿದ ತಪ್ಪಿಗೆ ಜುಲ್ಮಾನೆ ತೆತ್ತು ವಾಹನ ಪಡೆದುಕೊಳ್ಳುತ್ತಾರೆ. ಇದು ಕಾನೂನು ಸಮ್ಮತವಾದ ಮಾದರಿ. ಆದರೆ ಅಂಥಾ ನೀತಿ ನಿಯಮಾವಳಿಗಳೆಲ್ಲವೂ ಟೋಯಿಂಗ್ ಮಾಫಿಯಾ ಮುಂದೆ ಮಂಡಿಯೂರುತ್ತೆ. ಟೋಯಿಂಗ್ ವಾಹನಗಳ ಟೆಂಡರಿನಿಂದ ಆರಂಭವಾಗಿ, ಹಾದಿ ಬೀದಿಯಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡುವವರೆಗೂ ಈ ಮಾಫಿಯಾ ಮೇರೆ ಮೀರಿಕೊಂಡಿದೆ. ಇದರ ಹಿಂದೆ ಇಲಾಖೆಯೊಳಗೇ ಹಾಸು ಹೊಕ್ಕಾಗಿರುವಂಥಾ ಕಿಸುರುಗಳಿವೆ. ಕಳೆದೆರಡು ವರ್ಷಗಳಿಂದ ತಣ್ಣಗಾಗಿದ್ದ ಈ ದಂಧೆ ಇದೀಗ ಮತ್ತೆ ಶುರುವಾಗುವ ಭಯ ಚಾಲೂ ಆಗಿದೆ.
ವಾಹನವೇ ಮಾಯ
ನೀವು ಸರಿಯಾಗಿ ನೋಡಿಕೊಂಡೇ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿ ತುರ್ತಿನ ಕೆಲಸಕ್ಕೆಂದು ಹೋಗಿರುತ್ತೀರಿ. ಕೆಲಸ ಮುಗಿಸಿ ತರಾತುರಿಯಿಂದ ವಾಪಾಸಾಗುವ ಹೊತ್ತಿಗೆಲ್ಲ ಅಲ್ಲಿಂದ ನಿಮ್ಮ ವಾಹನ ಮಾಯವಾಗಿರುತ್ತದೆ. ಇದೆಂಥಾ ಅನ್ಯಾಯ ಅಂತ ಮರುಗುತ್ತೀರಿ. ಬೇರೆ ನಿರ್ವಾಹವಿಲ್ಲದೆ ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ಹೋದರೆ ಟೋಯಿಂಗ್ ಮಾಫಿಯಾದ ಬ್ರೋಕರುಗಳು ಚೌಕಾಸಿ ವ್ಯಾಪಾರಕ್ಕೆ ನೂಕು ನುಗ್ಗಲು ಮಾಡಿ ಬಿಡುತ್ತಾರೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದರೆ ಟೋಯಿಂಗ್ ಸಿಬ್ಬಂದಿ ದುಂಡಾವರ್ತನೆ ತೋರಿ ಬಿಡುತ್ತಾರೆ. ಆ ಟೋಯಿಂಗ್ ವಾಹನದ ದೇಖಾರೇಖಿ ನೋಡಿಕೊಳ್ಳುವ ಸಬ್ ಇನ್ಸ್ಪೆಕ್ಟರ್ ಕೂಡಾ ಟೋಯಿಂಗ್ ಸಿಬ್ಬಂದಿ ಹಾಕೋ ತಾಳಕ್ಕೆ ಲಗಾಟಿ ಹೊಡೆದು ಕುಣಿಯುತ್ತಾನೆ. ಯಾಕೆ ಹೀಗಾಗುತ್ತದೆ? ಪೊಲೀಸ್ ಠಾಣೆಯೆದುರೇ ಚೌಕಾಸಿ ನಡೆಸಿ ಐನೂರು, ಸಾವಿರ ಜೇಬಿಗಿಳಿಸಿಕೊಳ್ಳುವ ದಂಧೆ ಹೇಗೆ ನಡೆಯುತ್ತದೆ? ಹಾಗೆ ಜನರನ್ನು ಮುಂಡಾಯಿಸಿದ ಕಾಸು ಯಾರ್ಯಾರ ತಿಜೋರಿ ಸೇರುತ್ತದೆ? ಇಂಥಾ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ತಲಾಷಿಗಿಳಿದರೆ ಇಡೀ ಬೆಂಗಳೂರನ್ನು ಅಪಾದಮಸ್ತಕ ಆವರಿಸಿಕೊಂಡಿರುವ ಟೋಯಿಂಗ್ ಮಾಫಿಯಾದ ದಿಗ್ಧರ್ಶನವಾಗುತ್ತದೆ!
ಈ ಮಾಫಿಯಾದ ಹಿಂದೆ ಟೋಯಿಂಗ್ ಟೆಂಡರ್ ತೆಗೆದುಕೊಂಡವರ ತಪ್ಪು ಮಾತ್ರವೇ ಇರುತ್ತದೆ ಅಂದುಕೊಂಡರೆ ಅದು ಅರ್ಧ ಸತ್ಯ. ಅದರ ಹಿಂದೆ ಡಿಪಾರ್ಟ್ ಮೆಂಟ್ ಕಡೆಯಿಂದ ರವಾನೆಯಾಗೋ ಒತ್ತಡ, ಟಾರ್ಚರ್ ಮತ್ತು ಕೆಲ ಅಧಿಕಾರಿಗಳ ಅಮೋಘ ಸಹಕಾರಗಳ ಪಾಲೂ ದೊಡ್ಡದಿದೆ. ಇಡೀ ಬೆಂಗಳೂರಿನಲ್ಲಿ ಈವತ್ತಿಗೆ ಹತ್ತತ್ತಿರ ನೂರರಷ್ಟು ಟೋಯಿಂಗ್ ವಾಹನಗಳಿದ್ದಾವೆ. ಅಂಥಾ ವಾಹನಗಳನ್ನು ಬಿಟ್ಟು ಟೆಂಡರ್ ಪಡೆದುಕೊಳ್ಳೋದೇ ಒಂದು ಸಾಹಸ. ಮುಂಗಡವಾಗಿ ಒಂದು ಲಕ್ಷದಷ್ಟನ್ನು ಇಟ್ಟೇ ಟೆಂಡರ್ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಇಡೀ ಬೆಂಗಳೂರಿನ ಟೋಯಿಂಗ್ ಮಾಫಿಯಾವನ್ನುಂದಷ್ಟು ಮಂದಿ ಕಂಟ್ರೋಲಿಲ್ಲಿಟ್ಟುಕೊಂಡಿರೋ ಗುಮಾನಿಗಳಿದ್ದಾವೆ.
ಎಲ್ಲವೂ ಕಾನೂನು ಬಾಹಿರ
ಸಾಮಾನ್ಯವಾಗಿ ಟೋಯಿಂಗ್ ಮಾಡುವಾಗ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಬಾರದೆಂಬ ನಿಯಮವಿದೆ. ಒಂದು ವೇಳೆ ಹಾಗೆ ವರ್ತಿಸಿದರೆ ಅಂಥಾ ಟೋಯಿಂಗ್ ವಾಹನಕ್ಕೆ ಟ್ರಾಫಿಕ್ ಪೊಲೀಸ್ ಇಲಾಖೆಯ ಕಡೆಯಿಂದ ನೊಟೀಸ್ ಜಾರಿಯಾಗುತ್ತದೆ. ಹಾಗೆ ಒಂದು ಸಲ ನೊಟೀಸ್ ಜಾರಿಯಾಯಿತೆಂದರೆ ಆ ಟೋಯಿಂಗ್ ಟೆಂಡರ್ ರದ್ದಾಗುತ್ತೆ. ಮತ್ತೆಂದೂ ಅದರ ಮಾಲೀಕರು ಟೆಂಡರ್ ಪಡೆದು ಟೋಯಿಂಗ್ ನಡೆಸುವುದಕ್ಕೆ ಅವಕಾಶವಿರುವುದಿಲ್ಲ. ಫೈಜಲ್ ವಿಚಾರದಲ್ಲಿ ಇದೆಲ್ಲವೂ ಉಲ್ಟಾ ಹೊಡೆದಿದೆ. ಈವತ್ತಿಗೆ ಬೇನಾಮಿಯಾಗಿ ಸಾಕಷ್ಟು ವಾಹನಗಳು ಟೋಯಿಂಗ್ ಗೆ ಇಳಿಯೋದು ಪಕ್ಕಾ. ಆ ಮೂಲಕವೇ ಒಂದಷ್ಟು ಮಂದಿ ಬೆಂಗಳೂರಿಗರನ್ನು ಸುಲಿದು ಕಾಸು ಸಂಪಾದಿಸುವ ತವಕ ಹೊಂದಿದ್ದಾರೆ.
ಈವತ್ತಿಗೆ ಟೋಯಿಂಗ್ ಸಿಬ್ಬಂದಿ ಅಕ್ರಮವಾಗಿ ವಾಹನಗಳನ್ನು ಎತ್ತಾಕಿಕೊಂಡು ಹೋದರೆಂದರೆ, ಸಾರ್ವಜನಿಕರೊಂದಿಗೆ ಕಿರಿಕ್ಕು ಮಾಡಿಕೊಂಡರೆಂದರೆ ಅವರ ನೆಮ್ಮದಿ ಕೆಟ್ಟಿತೆಂದೇ ಅರ್ಥ. ಹಾಗಾದರೆ ಅಬ್ಬೇಪಾರಿ ಮಂದಿಗೆ ಅಂಥಾ ಪವರ್ ಎಲ್ಲಿಂದ ಬಂತು? ಆತನಿಗೆ ಒತ್ತಾಸೆಯಾಗಿ ಇಲಾಖೆಯೊಳಗಿಂದ ಕಾರ್ಯ ನಿರ್ವಹಿಸುತ್ತಿರುವವರು ಯಾರು? ಎಂಬೆಲ್ಲ ಪ್ರಶ್ನೆಗಳು ಸಹಜವಾಗಿಯೇ ಕಾಡುತ್ತವೆ. ಅದಕ್ಕುತ್ತರವಾಗಿ ಅನೇಕ ಸತ್ಯಗಳು ಎದುರಾಗುತ್ತವೆ. ಬೆಂಗಳೂರಿನಲ್ಲಿ ಟೋಯಿಂಗ್ ವಾಹನಗಳ್ನ್ನು ಬೀದಿಗೆ ಬಿಟ್ಟು, ಟ್ರಾಫಿಕ್ ಪೊಲೀಸ್ ವಿಭಾಗದಿಂದ ಟೆಂಡರ್ ಪಡೆದು ಸಾರ್ವಜನಿಕರನ್ನು ಮುಂಡಾಯಿಸುವ ಕಾರ್ಯ ಒಂದು ವ್ಯವಸ್ಥಿತ ಮಾಫಿಯಾ. ಆದರೆ ಕಳೆದ ಎರಡು ವರ್ಷಗಳಿಂದ ಅದಕ್ಕೆ ಬ್ರೇಕ್ ಬಿದ್ದಂತಾಗಿತ್ತು. ಅದಕ್ಕೀಗ ಮರು ಜೀವ ಬರೋದು ಬಹುತೇಕ ಖಚಿತವಾದಂತಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನೇ ಈ ಚಾಲಾಕಿ ಟೋಯಿಂಗ್ ಮಂದಿ ಯಾಮಾರಿಸುತ್ತಾರೆ. ಅವರ ಸುಲಿಗೆ ಟ್ರಾಫಿಕ್ ಪೊಲೀಸ್ ಇಲಾಖೆಯ ಆಣತಿಯ ಮೇರೆಗೆ ನಡೆಯುತ್ತದೆಂಬಂತೆ ಸಾರ್ವಜನಿಕರು ಅಂದುಕೊಳ್ಳುತ್ತಾರೆ. ಇಂಥಾ ಸುಲಿಗೆಯ ವೈಖರಿ ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ. ಯಾಕೆಂದರೆ, ಇದರಿಂದಾಗಿ ಇಡೀ ಟ್ರಾಫಿಕ್ ಪೊಲೀಸ್ ಇಲಾಖೆಗೇ ಕೆಟ್ಟ ಹೆಸರು ಮೆತ್ತಿಕೊಳ್ಳುವಂತೆ ಮಾಡಿ ಬಿಡೋದೂ ಇದೆ. ಸಾಮಾನ್ಯವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರತೀ ಕ್ಷಣವೂ ವಾಹನ ಸಂಚಾರ ದಟ್ಟಣೆ ಸೇರಿದಂತೆ ನಾನಾ ಸವಾಲುಗಳನ್ನು ನಿಭಾಯಿಸೋದರಲ್ಲಿಯೇ ಹೈರಾಣಾಗಿ ಬಿಟ್ಟಿರುತ್ತಾರೆ.
ಇದು ಒಂದು ಮುಖವಾದರೆ ಮತ್ತೊಂದು ದಿಕ್ಕಿನಲ್ಲಿ ಇಲಾಖೆಯ ಕಡೆಯಿಂದಲೇ ಟೋಯಿಂಗ್ ವಾಹನ ಮಾಲೀಕರ ಮೇಲೆ ಒತ್ತಡಗಳಿದ್ದಾವೆ. ಪ್ರತೀ ಗಾಡಿಯಲ್ಲಿ ಎರಡ್ಮೂರು ಮಂದಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಪ್ರತೀ ನಿತ್ಯ ಪಗಾರ ಕೊಡುವ ಅನಿವಾರ್ಯತೆಯೂ ಮಾಲೀಕನಿಗಿರುತ್ತದೆ. ಇನ್ನುಳಿದಂತೆ ಇಲಾಖೆಯ ಕಡೆಯಿಂದಲೂ ದಿನಕ್ಕೆ ಇಂತಿಷ್ಟು ಕೇಸು ಹಿಡಿಯಲೇ ಬೇಕೆಂಬ ಟಾರ್ಗೆಟ್ ಕೂಡಾ ಇರುತ್ತದೆ. ಇಂಥಾ ಸಂದರ್ಭದಲ್ಲಿ ವಿನಾ ಕಾರಣ ರೊಳ್ಳೆ ತೆಗೆದು ಪಾರ್ಕಿಂಗ್ ಪ್ರದೇಶದಲ್ಲಿಯೇ ನಿಲ್ಲಿಸಿದ ವಾಹನಗಳನ್ನು ಎತ್ತಾಕಿಕೊಂಡು ಬರದೆ ಬೇರೆ ದಾರಿಗಳಿಲ್ಲ.
ಟ್ರಾಫಿಕ್ ಪೊಲೀಸರ ಅನಿವಾರ್ಯತೆಗಳು ಮತ್ತು ಒತ್ತಡಗಳಿಂದಾಗಿ ಟೋಯಿಂಗ್ ಸಿಬ್ಬಂದಿಗೆ ಪರೋಕ್ಷವಾಗಿ ಪರಮಾಧಿಕಾರ ಸಿಕ್ಕಂತಾಗುತ್ತದೆ. ಕೆಲ ಖದೀಮರು ಅದನ್ನು ಸರಿಯಾಗಿ ಬಳಸಿಕೊಂಡು ಕಾಸು ಪೀಕುತ್ತಿದ್ದಾರೆ. ಓರ್ವ ಆಸಾಮಿ ಒಂದು ಟೋಯಿಂಗ್ ವಾಹನ ಓಡಿಸಲು ಮಾತ್ರವೇ ಟೆಂಡರ್ ಕೊಡಲಾಗುತ್ತದೆ. ಆದರೆ ಈ ಟೋಯಿಂಗ್ ಮಂದಿ ಅಕ್ರಮವಾಗಿ ಸಿಕ್ಕ ಸಿಕ್ಕವರ ಹೆಸರಲ್ಲೆಲ್ಲ ಟೆಂಡರ್ ಪಡೆದು ಕಾರ್ಯ ನಿರ್ವಹಸಲಾರಂಭಿಸಿದ್ದಾರೆ. ಈ ಕಾರಣದಿಂದಲೇ ಸಾರ್ವಜನಿಕರೊಂದಿಗೆ ಕಿರಿಕ್ಕು ಮಾಡಿಕೊಂಡರೂ, ಪಾರ್ಕಿಂಗ್ ಸ್ಫಳದಲ್ಲಿಯೇ ಇದ್ದ ವಾಹನಗಳನ್ನು ಎತ್ತಾಕಿಕೊಂಡು ಬಂದು ಸಾರ್ವಜನಿಕರಿಂದ ದೂರುಗಳು ಬಂದರೂ ಲ ಮಂದಿ ಬಚಾವಾಗುತ್ತಾರೆ. ಸದ್ಯ ಎರಡು ವರ್ಷಗಳಿಂದ ಅಂಥಾ ಹರಾಕಿರಿಗಳು ಬೆಂಗಳೂರು ಮಂದಿಯಿಂದ ದೂರಾಗಿದ್ದವು. ಇದೀಗ ಅದೆಲ್ಲವೂ ಮತ್ತೆ ವಾಪಾಸಾಗುವ ಲಕ್ಷಣಗಳು ಕಾಣಿಸಲಾರಂಭಿಸಿದ್ದಾವೆ.
ಇಂಥಾ ಟೋಯಿಂಗ್ ಕಾರಣದಿಂದ ಇದರಿಂದ ಸಾರ್ವಜನಿಕರು ಹೆಜ್ಜೆ ಹೆಜ್ಜೆಗೂ ತೊಂದರೆ ಅನುಭವಿಸುವಂತಾಗುತ್ತದೆ. ಅದೆಲ್ಲದರಾಚೆಗೆ ಹೈದ್ರಾಬಾದ್ ಮಾದರಿಯಲ್ಲಿ ಸರ್ಕಾರದ ಕಡೆಯಿಂದಲೇ ಟೋಯಿಂಗ್ ವಾಹನಗಳಿಗೆ ದಿನದ ಸಂಬಳ ಜಮೆಯಾಗುವಂತೆ ಶಿಫಾರಸ್ಸು ಮಾಡಿದರೆ ಬೆಂಗಳೂರಿಗರ ಪಾಲಿಗೆ ನೆಮ್ಮದಿ ದೊರಕುತ್ತದೆ. ಈ ಥರದ್ದೊಂದು ವಾದ ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದೀಗ ಗೃಹ ಸಚಿವರೇ ಮತ್ತೆ ಟೋಯಿಂಗ್ ಬಗ್ಗೆ ಮಾತಾಡಿದ್ದಾರೆ. ಈ ಸಲ ಒಂದು ವೇಳೆ ಟೋಯಿಂಗ್ ಶುರುವಾದರೆ ಅದ್ಯಾವ ಮಾದರಿಯಲ್ಲಿರುತ್ತದೋ ಗೊತ್ತಿಲ್ಲ. ಆದರೆ, ಈ ಹಿಂದಿನ ಮಾದರಿಯಲ್ಲಿದ್ದರೆ ಮಾತ್ರ ಖಂಡಿತವಾಗಿಯೂ ಈ ಬಾರಿ ಜನ ರೊಚ್ಚಿಗೇಳದಿರೋದಿಲ್ಲ. ಟೋಯಿಂಗ್ ಅನನು ಮತ್ತೆ ಏಕಾಏಕಿ ಅನುಷ್ಠನಕ್ಕೆ ತರುವ ಮುನ್ನ ಹತ್ತಾರು ದಿಕ್ಕಿನಿಂದ ಆಲೋಚಿಸಬೇಕಿದೆ. ಸದ್ಯದ ಮಟ್ಟಿಗೆ ಪರ್ಯಾಯ ಮಾರ್ಗಗಳ ಅನ್ವೇಷಣೆಯೇ ಸಂದರ್ಭೋಚಿತ ಅನ್ನಿಸುತ್ತಿರೋದು ಸುಳ್ಳಲ್ಲ!