ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

weird facts: ಈ ಸುದ್ದಿಗಳು ನಿಮ್ಮನ್ನು ಅಚ್ಚರಿಗೀಡು ಮಾಡುತ್ತವೆ!

Majja Webdeskby Majja Webdesk
10/04/2025
in Majja Special
Reading Time: 1 min read
weird facts: ಈ ಸುದ್ದಿಗಳು ನಿಮ್ಮನ್ನು ಅಚ್ಚರಿಗೀಡು ಮಾಡುತ್ತವೆ!

-ಈ ಜಗತ್ತಲ್ಲಿ ಇಂಥಾದ್ದೆಲ್ಲ ನಡೆಯುತ್ತಾ?

-ಇದು ಗಾಬರಿ ಹುಟ್ಟಿಸೋ: ಅಚ್ಚರಿ ಮೂಡಿಸೋ ಮ್ಯಾಟರ್! 

 

‘ಜೇನಿನಗೂಡು ನಾವೆಲ್ಲಾ..ಬೇಯಾದರೆ ಜೇನಿಲ್ಲಾ..’ ಎಂಬ ಹಾಡನ್ನು ತಿದ್ದಿಕೊಂಡು… ‘ಹಾಡು ಹಕ್ಕಿಗಳು ನಾವು ಬೇರೆಯಾದರೆ ಗೂಡಿಲ್ಲಾ…’ ಎಂದು ಬೃಹತ್ ಗೂಡಿನ ಫ್ಲಾಟ್ ನಿರ್ಮಿಸಿಕೊಳ್ಳುತ್ತಿರುವ ಸುದ್ದಿಯಿದು… ಹಾಡುಹಕ್ಕಿಗೆ ಬೇಕು ಗೂಡು, ಗೂಡು ಕಟ್ಟಲು ಮರಬೇಕು. ಮರಗಳೇ ಅಪರೂಪ. ಮನುಷ್ಯರನ್ನು ಕಂಡಿರುವ ಹಾಡುಹಕ್ಕಿಗಳು ಇದೀಗ ಥೇಟ್ ನಮ್ಮನ್ನು ಕಾಪಿ ಹೊಡೆಯುತ್ತಿವೆ. ನಾವು ಫ್ಲಾಟ್‌ಗಳನ್ನು ನಿರ್ಮಿಸಿಕೊಳ್ಳುವಂತೆ ಈ ಹಕ್ಕಿಗಳು ಬಹುಗೂಡು ಸಂಸ್ಕೃತಿಯನ್ನು ಅನುಸರಿಸುತ್ತಿವೆ. ೧೦ ಅಡಿ ಅಗಲ, ೨೦ ಅಡಿ ಎತ್ತರದವರೆಗೆ ಸೂರು ಕಟ್ಟುತ್ತವೆ. ಸುಮಾರು ೧ ಟನ್‌ಗಳ ಭಾರವಿದೆ. ದೂರದ ಸ್ಥಳಗಳಿಂದ ಕಡ್ಡಿ, ಹುಲ್ಲುಗಳನ್ನು ತಂದು, ಮರದಲ್ಲಿ ಬೆಸೆದು ಗೂಡು ಕಟ್ಟಿ ಸಂಸಾರ ಮಾಡುತ್ತಿವೆ. ಈ ಬೃಹತ್ ಗೂಡಿನ ಸಮುಚ್ಚದಲ್ಲಿ ಕನಿಷ್ಠವೆಂದರೂ ಒಂದರಿಂದ ಒಂದೂವರೆ ಸಾವಿರ ಹಕ್ಕಿಗಳು ಸಂಸಾರ ನಡೆಸುತ್ತಿವೆ!

ಹಕ್ಕಿಗಳ ಅಪಾರ್ಟ್‌ಮೆಂಟ್! 

ಬೆಳಿಗ್ಗೆ ಡ್ಯೂಟಿಗೆ ತೆರಳುವ ಹಕ್ಕಿಗಳು ಸಂಜೆಯಾಗುತ್ತಿದ್ದಂತೆ ಗೂಡಿಗೆ ಮರಳುತ್ತವೆ. ರಾತ್ರಿಯಾಗುತ್ತಾ ಹೋದಂತೆ ಇವುಗಳ ಕಲರವ ಸುಮಾರು ೧ಕಿ.ಮೀವರೆಗು ಕೇಳಲಿದೆ. ೮ಡಿಗ್ರಿ ಸೆ. ಉಷ್ಣಾಂಶವಿದ್ದರೂ ಈ ಗೂಡುಗಳು ಬೆಚ್ಚಗಿರಲಿದೆ. ಕೂಡಿ ಬಾಳುತ್ತಿರುವುದರಿಂದ ಶತ್ರುಗಳ ದಾಳಿಯೂ ತಗ್ಗಿದೆಯಂತೆ. ಅದೆಲ್ಲಾ ಏನಾದರೂ ಇರಲಿ… ಸುಮಾರು ೧ಟನ್ ಬಾರದ ಗೂಡು, ಜೊತೆಗೆ ಹಕ್ಕಿಗಳ ಭಾರಕ್ಕೆ ಮರಗಳು ಬಸವಳಿಯುತ್ತಿವೆ. ಗಾಳಿ ಮಳೆಗೆ ಇಡೀ ಮರದ ಟೊಂಗೆಗಳು ಮುರಿದು ಬೀಳುತ್ತಿವೆ. ಒಂದು ಟೊಂಗೆ ಕುಸಿದ ನಂತರ ‘ಟೊಂಗ್’ ಎಂದು ಮತ್ತೊಂದಕ್ಕೆ ನಮ್ಮ ರಾಜಕಾರಣಿಗಳಂತೆಯೇ ಹಾರಿ ಗೂಡಿನ ಸಮುಚ್ಛಯ ನಿರ್ಮಿಸುತ್ತವೆ. ಕೆಲವೇ ದಿನಗಳಲ್ಲಿ ಆ ರೆಂಬೆಯೂ ಕುಸಿಯುತ್ತದೆ…. ಒಟ್ಟಾರೆಯಾಗಿ ವರ್ಷದಲ್ಲಿ ಹಲವು ಮರಗಳನ್ನು ಈ ಹಕ್ಕಿ ಸಂಸಾರ ಕೆಡವಿಹಾಕುತ್ತಿವೆಯಂತೆ. ‘ತಾಯಿಗೆ ಮಗ ಭಾರ ಅಲ್ಲ. ಮರಕ್ಕೆ ಹಕ್ಕಿ ಭಾರ ಅಲ್ಲ’ ಎನ್ನುವ ಗಾದೆ ಮಾತು ಅಕ್ಷರಶಃ ಸುಳ್ಳಾಗಿವೆ. ನೆರಳು ಕೊಟ್ಟಿದಕ್ಕೆ ತನ್ನ ಉಸಿರನ್ನೇ ಕಸಿಯುತ್ತಿರುವ ಹಕ್ಕಿಗಳು ಮತ್ತು ಅವುಗಳ ಗೂಡು ನೋಡಲು ದಕ್ಷಿಣ ಆಫ್ರಿಕಾದ ಮರಳಗಾಡಿನ ತೀರ ಪ್ರದೇಶಗಳಿಗೆ ತೆರಳಬೇಕು. ಅಷ್ಟು ದೂರ ತೆರಳಲು ಸಾಧ್ಯವಿಲ್ಲವದವರು ಇಲ್ಲೇ ಸುದ್ದಿ – ಚಿತ್ರಗಳನ್ನು ಓದಿ ಆನಂದಿಸಬಹುದು. ‘ಹಕ್ಕಿ ಮರವನ್ನೇ ನುಂಗಿತ್ತಾ…ನೋಡವ್ವಾ ತಂಗೀ…’

ಸ್ಟ್ಯಾಚು ಮ್ಯಾನ್!


ಇವನೇನು ಸಪರ್ ಮ್ಯಾನ್ ಅಲ್ಲ. ಅಥವಾ ಸ್ಪೈಡರ್ ಮ್ಯಾನ್ ಅಲ್ಲ… ಬ್ಯಾಟ್ ಮ್ಯಾನೂ ಅಲ್ಲ… ಅದರೂ ಇವನ್ನು ನೀವು ನೋಡಲೇಬೇಕು. ಏಕೆಂದರೆ ಇವನು ಸ್ಟ್ಯಾಚುಮ್ಯಾನ್. ಈತನ ಸ್ಥಿರತೆಗೆ, ಭದ್ರತೆಗೆ ಭೇಷ್ ಎನ್ನಬೇಕು. ನಿತ್ಯ ೬ ತಾಸು ಗೊಂಬೆಯಂತೆ ನಿಲ್ಲುತ್ತಾನೆ. ರೆಪ್ಪೆಯೂ ಮಿಟುಕದು. ಒಮ್ಮೆ ನಿಂತರೆ ಊಟ, ತಿಂಡಿಯ ಪರಿವೆಯೂ ಇರದು. ನೊಣ, ಸೊಳ್ಳೆ, ಕೀಟಗಳ ಕಾಡುತ್ತಿದ್ದರೂ ಇವನ ಚಿತ್ತ ಅತ್ತ ಹರಿಯದು. ೩೨ ವರ್ಷಗಳಿಂದಲೂ ಈತನಿಗೆ ಇದೇ ವೃತ್ತಿ-ಪ್ರವೃತ್ತಿ. ನಗುವುದೂ ಇಲ್ಲ. ನಗಿಸಿದವರಿಗೆ ೧೦ ಸಾವಿರ ರೂಪಾಯಿಗಳ ಬಹುಮಾನವಿದೆ. ಬಂದವರೆಲ್ಲಾ ಫೇಲ್ ಆಗಿದ್ದಾರೆ. ಈ ಸ್ಥಬ್ಧ ಮಾನವನ ದರ್ಶನ ಮನೋಬಲಕ್ಕೆ ಹಲವರು ಮೂಕ ವಿಸ್ಮಿತರಾಗಿದ್ದಾರೆ.
ಲಂಡನ್‌ನ ಬಂಕಿಂಗ್ ಹ್ಯಾಂಮ್ ಅರಮನೆಯ ಮುಂದೆ ಕೂಡ ಇದೇರೀತಿ ಬೊಂಬೆಯಂತೆ ‘ಸ್ಟ್ಯಾಚುಗಳಾಗಿ’ ಅನೇಕರು ನಿಲ್ಲುತ್ತಾರೆ. ಆದರೆ ಅವರು ಎರಡು ಗಂಟೆಗಳಿಗೊಮ್ಮೆ ವಿಶ್ರಾಂತಿ ಪಡೆಯುತ್ತಾರೆ. ಮಹಾರಾಜರ ಆಸ್ತಾನದಲ್ಲಿನ ಸೇವಕರು ಧರಿಸುವ ಮಿರ ಮಿರ ಮಿಂಚುವ ಬಟ್ಟೆಗಳನ್ನೇ ಧರಿಸುವ ಈತ. ಸೇವಕನಲ್ಲದಿದ್ದರೂ ಮಾಲೀಕನಂತು ಅಲ್ಲ. ಆದರೆ ತನ್ನ ದಣಿಗೂ ಮಿಗಿಲಾಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧನಾಗಿದ್ದಾನೆ. ಈತನ ಕಾಣಲು ಚೆನ್ನೈನ ವಿಜಿಪಿ ಗೋಲ್ಡನ್ ಬೀಚ್‌ಗೆ ತೆರಳಬೇಕು. ಅಂದಹಾಗೆ ಈ ಸ್ಟ್ಯಾಚೂ ಮ್ಯಾನ್ ಹೆಸರು ಅಬ್ದುಲ್ ಅಜೀಜ್. ಆದರೆ ಬಾಬು ಎಂದೇ ಪ್ರಸಿದ್ಧ. ನಿತ್ಯ ಯೋಗ, ವಾಕಿಂಗ್ ಮಾಡುತ್ತಾ ಈ ಮನೋಬಲ ಸಾಧಿಸಿದ್ದಾರೆ.

ಒಂದ್ ‘ಹೊಳ್ಳೆ’ ಕೆಲಸ


ನಮಗೆ ಸಣ್ಣದೊಂದು (ಬೆಲೂನ್) ಪುಗ್ಗೆಗೆ ಗಾಳಿ ಊದಿ ದೊಡ್ಡದು ಮಾಡುವುದೇ ಕಷ್ಟ. ಕೆಲವರಿಗೆ ಪಂಪ್‌ನಿಂದ ಸೈಕಲ್ ಟ್ಯೂಬ್‌ಗೆ ಗಾಳಿ ಹೊಡೆಯುವಷ್ಟರಲ್ಲಿಯೇ ಸಾಕಾಗಿರುತ್ತದೆ. ಆದರೆ ಫಾಂಗ್ ಜುನ್ಹಾಯಿ ಮೂಗಿನ ಒಂದೇ ಹೊಳ್ಳೆಯಿಂದ ಕಾರ್ ಟ್ಯೂಬ್‌ಗೆ ಗಾಳಿ ತುಂಬಿಸುತ್ತಾನೆ. ಫಾಂಗ್ ಜುನ್ಹಾಯೇ ವಿಶ್ವದ ಮೊಟ್ಟಮೊದಲ ‘ಹ್ಯೂಮನ್ ಪಂಪ್’ ಏನೂ ಅಲ್ಲ. ಇವನಂತೆ ಅನೇಕರು ಚೀನಾ ದೇಶದಲ್ಲಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಗ್ಸಿ ಕ್ವಾಂಗೋ ಎಂಬ ಗಾಳಿ’ಪಂಪ’ ಕೇವಲ ೧೫ ಉಸಿರಲ್ಲೇ ಟ್ಯೂಬ್ ತುಂಬಿಸಿ ಸುದ್ದಿ ಮಾಡಿದ್ದ. ಆದರೆ ಅವರ್‍ಯಾರು ಫಾಂಗ್‌ನಂತೆ ಏಕ ಹೊಳ್ಳೆ ಬಳಸಿ ಟ್ಯೂಬ್ ತುಂಬಿಸಿರಲಿಲ್ಲ. ಹೀಗಾಗಿ ಜುನ್ಹಾಯಿ ವಿಶೇಷವಾಗಿ ಕಾಣುತ್ತಾನೆ.
ಕುಂಗ್‌ಫು ಮಾಸ್ಟರ್ ಆಗಿರುವ ಜುನ್ಹಾಯಿ ೧೦ ವರ್ಷಗಳಿಂದ ಕರುಳು, ಶ್ವಾಸಕೋಶ ಹಾಗೂ ಹೃದಯಗಳಿಗೆ ಸಾಕಷ್ಟು ತಾಲೀಮು ಮಾಡಿಸಿದ್ದಾನೆ. ಕುಂಗ್‌ಫು ಆಡುವಷ್ಟೇ ಸಲೀಸಾಗಿ ಮೂಗಿನ ಒಂದೇ ಹೊಳ್ಳೆಯಿಂದ ಟ್ಯೂಬ್ ತುಂಬಿಸುತ್ತಾನೆ. ೪೪ವರ್ಷಗಳ ಜುನ್ಹಾಯಿ ಮಾಡಿದ ಸಾಹಸವನ್ನು ನಾವು ಮಾಡಿದರೆ ಕಾದಿದೆ ಆಪತ್ತು. ಅಭ್ಯಾಸವಿಲ್ಲದೆ ಇಂತಹ ಗಾಳಿ ಊದುವ ಕೆಲಸಕ್ಕೆ ಕೈ ಹಾಕಿದರೆ ದೇಹದ ‘ಗಾಳಿ’ಯೇ ಹಾರಿ ಹೋಗಿರುತ್ತದೆ! ಈತನಿಂದ ‘ಗಾಳಿ’ಊದುವುದನ್ನು ಕಲಿಯ ಬಯಸುವವರು ಚೀನಾದ ಪಶ್ಚಿಮೋತ್ತರ ಭಾಗದ ಜ್ಸಿಯಾನ್ ಪಟ್ಟಣಕ್ಕೆ ತೆರಳಬೇಕು. ನಮ್ಮ ಕನ್ನಡನಾಡಿನಲ್ಲಿ ಈತ ಇದ್ದಿದ್ದರೆ ಅಭಿನವ ‘ಪಂಪ’ ಎನ್ನಬಹುದಿತ್ತು. ಅದೆಲ್ಲಾ ಏನಾದ್ರೂ ಇರ್‍ಲಿ…ಒಂದೊಳ್ಳೆ ಕಾರ್ಯಕ್ರಮ ಮಾಡುವ ಜನಶ್ರೀ ಚಾನಲ್‌ನವರು ಇವನ ಸಾಧನೆ ಕಂಡರೆ ಏನಂದಾರು? ಒಂದ್ ‘ಹೊಳ್ಳೆ’ ಕೆಲಸ!

ನಾಯಿಯಾಕಾರದ ದನಗಳು


‘ಶ್ವಾನದಂತೆ ಬದಲಾಯಿತೋ… ನಮ್ಮ ದನವು…ನಾಯಿಯಂತೆ ಗಿಡ್ಡದಾಯಿತೋ…’ ಎಂದು ಹಾಡಬೇಕಾದ ಸಮಯವಿದು. ಹಾಗೆಂದು ಇದು ದನಗಳಿಗೆ ದೊರೆತ ಸೌಭಾಗ್ಯವಲ್ಲ. ದೌರ್ಭಾಗ್ಯವೇ ಸರಿ. ಮನುಷ್ಯ ತನ್ನ ತೆವಲಿಗಾಗಿ ಕುಂಡಗಳಲ್ಲೇ ಬೆಳೆಯಬಹುದಾದ ಮಾವು, ತೆಂಗಿನ ಮರಗಳನ್ನು ಸೃಷ್ಟಿಸತೊಡಗಿದ. ಫಲ ಬಂದರೂ ಇವು ಪ್ರಯೋಜನವಿಲ್ಲ. ಮರಕ್ಕೂ ಮನುಜರಿಗೂ ಉಪಯೋಗವಿಲ್ಲ. ಆದರೆ, ತನ್ನ ಶೋಕಿಗೆ ಇವು ಬೇಕು. ಇದೀಗ ಪ್ರಾಣಿಗಳ ಮೇಲೂ ವಿಶ್ವಾದ್ಯಂತ ಪ್ರಯೋಗಗಳು ಜರುಗಿವೆ. ಹಾಲು ನೀಡುವ ಆಳೆತ್ತರದ ಗೋವುಗಳು ಈಗ ಶ್ವಾನಗಳ ಎತ್ತರಕ್ಕೆ ಕುಸಿದಿವೆ. ಅಸಹಜ ಆಕಾರ ಮಾತ್ರವಲ್ಲದೆ ಅಲ್ಪ ಹಾಲಿನ ಇಳುವರಿ! ಇಂತಹ ಅನಗತ್ಯ ಪ್ರಯೋಗಗಳು ಬೇಕಿಲ್ಲ. ಆದರೆ ಮನುಷ್ಯನ ಮನೋ ವಿಕಾರಗಳು ಹೆಚ್ಚಿದಂತೆ ಇಂತಹ ಶ್ವಾನದ ಅಳತೆಯ ದನಗಳಿಗೂ ಮೌಲ್ಯ ಬಂದಿವೆ. ಇದಕ್ಕಾಗಿ ಈಗ ಜಾನುವಾರು ತಳಿಗಳನ್ನು ಸೃಷ್ಟಿಸಲಾಗುತ್ತಿದೆ.
ಅಮೆರಿಕದ ಟೆಕ್ಸಾಸ್ ಸಮೀಪ ಕುಬ್ಜ ದನಗಳಿಗೆ ವಿಶೇಷ ಕೊಟ್ಟಿಗೆಗಳು ಇವೆ. ಅಲ್ಲಿ ಇವುಗಳ ಸೃಷ್ಟಿ, ಪ್ರತಿ ಸೃಷ್ಟಿಗಳು ನಡಯುತ್ತಿವೆ. ೩೬ ಇಂಚು ಎತ್ತರದ ಕೇವಲ ೨೨೭ ಕೆ.ಜಿ. ತೂಗಬಲ್ಲ ದನಗಳು ಮಾತ್ರವೇ ಇಲ್ಲಿ ಲಭ್ಯ. ಹೆಚ್ಚು ಕಮ್ಮಿ ಬೆಳೆದು ನಿಂತ ನಾಯಿ ಎತ್ತರದ ಈ ಹಸುಗಳನ್ನು ಕೊಳ್ಳಲು ಜನ ಮುಗಿಬಿದ್ದು ಬರುತ್ತಿದ್ದಾರಂತೆ. ಕೊಳ್ಳುವರಿದ್ದಾರೆಂದು ಇಂತಹ ಅನೈಸರ್ಗಿಕ ದನಗಳ ಉತ್ಪಾದನೆ ನಡೆಯುತ್ತಿದೆ. ಮಾರುವವರು ಇರುವ ಕಾರಣ ಕೊಳ್ಳುಗರೂ ಇದ್ದಾರೆ. ಪ್ರಕೃತಿಗೆ ವಿರುದ್ಧದ ಬೊವೈನ್ ದಿನಗಳು ಅನಗತ್ಯ ಎಲ್ಲಿದೆ? ವಿಪರ್ಯಾಸ: ಮನುಷ್ಯ ತಾನು ಎತ್ತರಕ್ಕೆ ಬೆಳೆಯಲು ಹಂಬಲಿಸುತ್ತಾನೆ. ಅದಕ್ಕಾಗಿ ಇಲ್ಲದ ಟಾನಿಕ್, ಕಸರತ್ತು ನಡೆಸುತ್ತಾನೆ. ಆದರೆ ಬೆಳೆದು ನಿಂತ ಪ್ರಾಣಿಗಳನ ಎತ್ತರವನ್ನು ಗಿಡ್ಡವಾಗಿಸಲು ಇಲ್ಲದ ಸಂಶೋಧನೆ ನಡೆಸುತ್ತಾನೆ. ಇದಕ್ಕಿಂತಲೂ ವಿಪರ್ಯಾಸ ಮತ್ತೊಂದಿಲ್ಲ!

ಬೆತ್ತಲೆ ಹೋಟೆಲ್!


ಅಕ್ಷರಶಃ ಇದು ಬೆತ್ತಲೇ ಹೋಟೆಲ್. ಇಲ್ಲಿ ಬೆತ್ತಲೆಯಲ್ಲಿ ಕೂತು ಉಣ್ಣಬಹುದು. ಕುಡಿಯಬಹುದು. ಸ್ವಾಭಾವಿಕವಾಗಿರಲು ಇಂತಹ ಹೋಟೆಲ್ ಆರಂಭಿಸಲಾಗಿದೆಯಂತೆ. ನ್ಯಾಚುರಲ್ ಆಗಿರಬೇಕೆಂದು ಹೀಗೆ ಬೆತ್ತಲೆಯಾಗಿದ್ದರೆ ಹೇಗೆ? ಕತ್ತಲೆ ಮಾಡಬಹುದಲ್ವಾ?ಇಲ್ಲ ಹಾಗೆ ಮಾಡಿದರೆ ಬೆತ್ತಲೆ ಇರೋದು ಗೊತ್ತೇ ಆಗೋದಿಲ್ಲ! ಹುಟ್ಟು ಬೆತ್ತಲೆ, ಸಾವು ಬೆತ್ತಲೆ ಅಂತಿರುವಾಗ ಉಣ್ಣುವಾಗ ಏಕೆ ಬಟ್ಟೆ? ಎಂಬ ಪಾರಮಾರ್ಥಿಕ ಚಿಂತನೆ ಹೋಟೆಲ್ ಮಾಲೀಕನದ್ದಾಗಿರಬೇಕು. ಪೂರ್ಣ ಬೆಳಕಿನಲ್ಲಿ ಬರಿಮೈಯ್ಯಲ್ಲಿ, ತಣ್ಣನೆಯ ವಾತಾವರಣದಲ್ಲಿ ಕೂತು ಉಂಡರೆ ಅದೇ ಚೆನ್ನಾ ಅನ್ನುತ್ತಾರೆ. ೨೦೧೬ರಲ್ಲಿ ಲಂಡನ್‌ನಲ್ಲಿ ಆರಂಭಗೊಂಡ ಸುದ್ದಿ ಕೇಳಿದ ಫ್ರಾನ್ಸಿಗರು ಇದೀಗ ಆ ದೇಶದಲ್ಲೂ ಇಂಥಾದ್ದೇ ಬೆತ್ತಲೆ ಹೋಟೆಲ್ ತೆಗೆದು ಗಿರಾಕಿಗಳಿಗೆ ಎದುರು ನೋಡುತ್ತಿದ್ದಾರೆ.
ಅಲ್ಲಾ ರೀ ಹೀಗೆಲ್ಲಾ ಮಾಡಿದರೆ…. ಕಾಮಕ್ಕೆ ಉತ್ತೇಜನ ದೊರೆಯುತ್ತದಲ್ಲವೇ? ಇಲ್ಲ… ಬೆತ್ತಲೆ ಇದ್ದ ಮಾತ್ರಕ್ಕೆ ಅದು ಕಾಮವಲ್ಲ. ಕಾಮವನ್ನು ಕಂಟ್ರೋಲ್ ಮಾಡಲು ಇಂತಹ ಹೋಟೆಲ್‌ಗಳು ಸಹಕಾರಿಯಂತೆ. ಸುಂದರಿಯೊಬ್ಬಳು ಬೆತ್ತಲೆ ಉಣ್ಣುತ್ತಿದ್ದರೆ… ಆಕೆಯ ಎದುರಿಗೆ ಕುಳಿತ ಪುರುಷನ ಕಾಮಪ್ರಮಾಣ ತಕ್ಷಣವೇ ತಿಳಿದೀತು! ಕಾಮಣ್ಣರು ಇಂತಹ ಹೋಟೆಲ್‌ಗಳಲ್ಲಿ ಜೋಪಾನವಾಗಿರಬೇಕು. ಇನ್ನು ತಾನು ಸುಂದರಿ ಎಂದುಕೊಂಡ ಹೆಣ್ಣೆದುರು ‘ಏನೂ ಆಗಿಲ್ಲದವರಂತೆ’ ಯುವಕರು ಕೂತಿದ್ದರೆ ಆಕೆಯ ಸೌಂದರ್ಯಕ್ಕೆ ಶೂನ್ಯ ಅಂಕ ಬಂದೀತು. ಮಹಿಳೆಯರಿಗೆ ಇಲ್ಲಿ ಡಿಸ್ಕೌಂಟ್ ಇಲ್ಲ ಎನ್ನುತ್ತಾರೆ ಮಾಲೀಕರು. ಮಾಣಿಗಳು, ಮ್ಯಾನೇಜರ್‌ಗಳಿಗೆ ವಸ್ತ್ರ ಸಂಹಿತೆ ಇಲ್ಲ. ಬಟ್ಟೆಯೇ ಇಲ್ಲದ ಹೋಟೆಲ್‌ಗೆ ಬರುವ ಗಿರಾಕಿಗಳು ತಿಂದು-ಕುಡಿದು ಬಿಲ್ ತುಂಬದೇ ರೈಟ್ ಹೇಳಿದರೇ…ಮಾಲೀಕನ ಗತಿ ಏನು? ಆತ ಬೀದಿಗೆ ಬಿದ್ದು ಬೆತ್ತಲಾಗುತ್ತಾನೆ ಬಿಡಿ!

ಸಾವಿನ ಮನೆ ಸೇರಿದ


ನಮ್ಮ ಜ್ಯೋತಿ ರಾಮ ಅಲಿಯಾಸ್ ಕೋತಿ ರಾಮನೂ ನಾಚಿಕೊಳ್ಳುವಂತೆ ವೂ ಯಾಂಗಿಂಗ್ ಸಾಹಸ ಮಾಡುತ್ತಾನೆ. ಗಗನ ಚುಂಬಿ ಕಟ್ಟಡಗಳ ಮೇಲೆ ಈತ ಚೇಷ್ಟೆ ಮಾಡುತ್ತಿದ್ದರೆ ನೋಡುಗರ ಬಾಯಿಗೆ ಕರಳು ಬಂದಂತಾಗಲಿದೆ. ‘ವೊ’ಗೆ ಮಾತ್ರ ಈ ಕುರಿತು ಭೀತಿಯಿರಲಿಲ್ಲ. ಆದರೆ ಅದೃಷ್ಟ ಕೈ ಕೊಟ್ಟರೆ, ನಸೀಬು ಕೈ ಬಿಟ್ಟರೆ ಅನಾಹುತ ಗ್ಯಾರಂಟಿ. ಇದಕ್ಕೆ ವೊ ಯಾಂಗಿಂಗ್ ಕೂಡ ಹೊರತಲ್ಲ. ಹುವಾಯಾನ್ ಪ್ರಾಂತ್ಯದಲ್ಲಿ ನವೆಂಬರ್ ೮ರಂದು ೬೨ ಅಂತಸ್ತುಗಳ ಕಟ್ಟಡದ ಮೇಲೆ, ಅರವತ್ತು ಅಡಿಗಳ ಎತ್ತರದಲ್ಲಿ ಈತ ಸಾಹಸ ಮಾಡಿದ. ನೋಡುಗರ ಜೀವವೆಲ್ಲಾ ಈತನತ್ತಲೇ ನೆಟ್ಟಿತ್ತು. ಈ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದರೆ ೮೦,೦೦೦ಯನ್ (ರೂ. ೭.೭ಲಕ್ಷ) ಈತನ ಪಾಲಾಗಬೇಕಿತ್ತು. ಆದರೆ ಆಯತಪ್ಪಿ ಕೆಳಗೆ ಬಿದ್ದ. ಪಕ್ಕನೆ ಪ್ರಾಣ ಪಕ್ಷಿ ಹಾರಿಹೋಗಿತ್ತು.
೩೦೦ಕ್ಕೂ ಹೆಚ್ಚು ತನ್ನ ಸಾಹಸದ ವಿಡಿಯೋ ಮಾಡಿರುವ ವೊ ವಿಶ್ವಾದ್ಯಂತ ೧೦ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ವೊ ಹೊಂದಿದ್ದಾನೆ. ಈಚೆಗೆ ಯಾವುದೇ ವಿಡಿಯೋ ಬಾರದ ಕಾರಣ ಆತಂಕಗೊಂಡು ಅಭಿಮಾನಿಗಳು ತಲಾಶ್ ಮಾಡಲು ಹೊರಾಟಾಗ ಈತನ ಸಾವಿನ ಪ್ರಕರಣ ಡಿಸೆಂಬರ್ ೮ರಂದು ಬಹಿರಂಗವಾಗಿದೆ. ಯಾರೋ ಮಾಡಿದ್ದ ವಿಡಿಯೋ ತುಣುಕುಗಳು ಸಾಕ್ಷಿಯಾಗಿವೆ. ಇಂತಹ ಸಾಹಸಗಳು ರೋಚಕವಾಗಿರುತ್ತವೆ. ಆದರೆ ಆಯತಪ್ಪಿದರೆ ಮರಳಿ ಬಾರದ ಲೋಕ ಗ್ಯಾರಂಟಿ. ಹೀಗೆ ಸಾಹಸ ಮಾಡುತ್ತಲೇ ಸಾವಿನ ಮನೆಯ ಕದ ತಟ್ಟಿದವರೂ ಸಾಕಷ್ಟು ಜನ ಇದ್ದಾರೆ. ಆದರೂ ಹೊಸ ಹೊಸ ಸಾಹಸಿಗರು ಇತ್ತ ಹೊರಳುತ್ತಲೇ ಇರುವುದು ಸೋಜಿಗದ ಸಂಗತಿ.
ಅಂದಹಾಗೆ ವೋನ ಪ್ರೇಯಸಿ ಕೂಡ ಇದೇ ರೀತಿಯ ಸಾಹಸಿಗಳು. ಇವರಿಬ್ಬರ ಕಂಕಣ ಕೂಡಿ ಬಂದಿತ್ತು. ಇನ್ನೇನು ವೈವಾಹಿಕ ಜೀವನ ನಡೆಸಬೇಕೆನ್ನುವಷ್ಟರಲ್ಲಿಯೇ ವೋ ವಿಧಿಯ ಬಾಯಿಗೆ ಆಹಾರವಾದ. ಈತನ ಸಾಹಸಗಳನ್ನು ಬಿತ್ತರಿಸುವ ‘ವಾಲ್ಕ್ಯನಾ’ ಎಂಬ ಸಂಸ್ಥೆ ಸುಮಾರು ೫೫,೦೦೦ ಯನ್ ನೀಡಿದೆ. ಆದರೇನು ಎತ್ತರದಲ್ಲಿ ಸಾಹಸ ಮಾಡಿ ಪಾತಾಳಕ್ಕೆ ಬಿದ್ದು ಯಾರಿಗೂ ನಿಲುಕದ ಎತ್ತರಕ್ಕೆ ಹಾರಿ ಹೋದ ‘ವೊ’ ಮಾತ್ರ ಮರಳಿ ಬರುವುದಿಲ್ಲ.

ಇದು ‘ಕಾಮ’ನ್ ವೃತ್ತಿ!


ತಾಳಿ ಕಟ್ಟಿದ ಗಂಡನೆ ಪಿಂಪ್. ಅಲಿಯಾಸ್ ತಲೆ ಹಿಡುಕ ಮತ್ತೊಮ್ಮೆ ಅಲಿಯಾಸ್ ಮಾಮ! ಪತ್ನಿಯೇ ಇಲ್ಲಿ ವೇಶ್ಯೆ. ಸಂಜೆ ೭ರ ನಂತರ ಇಲ್ಲಿ ಕೆಲಸ ಆರಂಭವಾಗುತ್ತದೆ ಬೆಳಗಿನವರೆಗೂ ಡ್ಯೂಟಿ.ಇದು ಇಲ್ಲಿ ‘ಕಾಮ’ನ್. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ, ಕಾಡುತ್ತಿರುವ ಚಿಕಿತ್ಸೆಗೆ ಮದ್ದು ಎಲ್ಲಕ್ಕೂ ಹಣ ಒದಗಿ ಬರುವುದು ಹೆಣ್ಣಿನಿಂದಲೇ ಕಟ್ಟಿಕೊಂಡ ಗಂಡ ಗಿರಾಕಿಗಳನ್ನು ಹುಡುಕಿ ತರುವುದರಲ್ಲೇ ಬ್ಯುಸಿ! ಅಥವಾ ಅದೇ ಅವನ ಪವಿತ್ರ ಕಾರ್ಯ. ಬಿಹಾರದಲ್ಲೋ ಅಥವಾ ಜಾರ್ಖಂಡ್ ಅಥವಾ ಛತ್ತೀಸ್‌ಗರ್‌ನ ದೂರದ ಹಳ್ಳಿಗಳಲ್ಲಿನ ಧಾರುಣ ಬದುಕಲ್ಲ. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿಯೇ ಇಂಥಾದ್ದೊಂದು ಅಡ್ಡ ಇದೆ ಎಂದು ‘ಅಪನೇ ಆಪ್’ ಎಂಬ ಸ್ವಯಂಸೇವಾ ಸಂಸ್ಥೆ ವರದಿ ಮಾಡಿದೆ. ದೆಹಲಿಯಲ್ಲಿ ಒಂದು ರೇಪ್ ಜರುಗಿ ಹೋದರೆ… ಭಾರತವೇ ಬೆಚ್ಚಿ ಬೀಳುತ್ತದೆ. ಆದರೆ ಇಲ್ಲಿ ನಿತ್ಯ ಮಡದಿಯರ ರೇಪ್ ನಡೆಯುತ್ತಿರುತ್ತದೆ. ಗಂಡ ಮೂಕ ಪ್ರೇಕ್ಷಕ. ಮಕ್ಕಳಿಗೆ ಅರ್ಥವಾಗದು. ಅರ್ಥವಾದವರು ಅಸಹಾಯಕರು!
ಬೇಕಿದ್ದರೆ ರಾಣಿಯನ್ನೇ ಕೇಳಿ… ದಶಕಗಳ ಹಿಂದೆ ಎಳೇ ಪ್ರಾಯದಲ್ಲಿ ಮದುವೆಯಾಗಿ ಬಂದ ಇವಳು ೬ ಮಕ್ಕಳ ತಾಯಿ. ರೂ. ೨೦೦ಕ್ಕೆ ೮-೧೦ ಗಿರಾಕಿಗಳನ್ನು ತೃಪ್ತಿ ಪಡಿಸಬೇಕು. ಎಷ್ಟೋ ವೇಳೆ ದುಡಿದ ಕಾಸು ಕೂಡ ಇವರ ಕೈಗೆ ಎಟುಕುವುದಿಲ್ಲ. ಮಧ್ಯವರ್ತಿ ದೋಚರಿ ಪರಾರಿಯಾಗುತ್ತಾನೆ. ಆತ ಹಾಗೆ ಸುಮ್ಮನೆ ಹೋಗುವುದಿಲ್ಲ. ಮನ ಬಂದಂತೆ ಅನುಭವಿಸಿ ಹೋಗುತ್ತಾನೆ. ಒಂದು ರೀತಿಯಲ್ಲಿ ರೇಪ್. ಆದರೂ ರಾಣಿಯತರಹದವರು ಯಾರಿಗೂ ದೂರುವುದಿಲ್ಲ. ನೋವೆಂದು ಅಬ್ಬರಿಸವುದಿಲ್ಲ. ಕೆಲವೊಮ್ಮೆ ಸಂಜೆ ೭ರಿಂದ ಮರುದಿನ ಬೆಳಗಿನ ೭ಗಂಟೆಯವರೆಗೆ ಇವಳ ಕಾಯಕವಿರಲಿದೆ! ನಂತರ ಗಂಡ, ತನ್ನ ಆರು ಮಕ್ಕಳ ಆಹಾರ ಸಿದ್ದಪಡಿಸಿ ಅವರನ್ನು ಶಾಲೆಗೆ ಕಳುಹಿಸಬೇಕು. ಕೆಲವೇ ತಾಸುಗಳ ನಿದ್ದೆ ಮಾತ್ರ ಇವಳದ್ದು. ಉಳಿದಂತೆ ರೆಟ್ಟೆ ಮುರಿಯುವ ಕೆಲಸ. ಕಾಡುವ ವಿಟಪುರುಷರನ್ನು ಸಂಭಾಳಿಸುವುದರಲ್ಲೇ ಈಕೆಯ ಜೀವನ ಸವೆದು ಹೋಗುತ್ತಿದೆ.
‘ಇದು ಇಲ್ಲಿನ ಹೆಣ್ಣಿನ ಕರ್ತವ್ಯ’ ಎನ್ನುತ್ತಾಳೆ ಹೊರಬಿ ಎಂಬ ಮತ್ತೊಬ್ಬ ವೇಶ್ಯೆ! ಈಕೆಗೆ ಈ ವೃತ್ತಿ ಇಷ್ಟವಿಲ್ಲ. ತನ್ನ ಮಕ್ಕಳಿಗೆ ಈ ದುರ್ಗತಿ ಬಾರದಿರಲೆಂದೇ ಇಲ್ಲಿನ ವೇಶ್ಯೆಯರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಕೆಲವರು ಎಳೇ ವಯಸ್ಸಿಗೆ ತಮ್ಮ ಮಕ್ಕಳನ್ನು ಮದುವೆ ಮಾಡಿಕೊಟ್ಟು ಈ ಕೂಪದಿಂದ ಹೊರಗೆ ಹಾಕುತ್ತಿದ್ದಾರೆ… ಆದರೂ ಕೆಲವೊಮ್ಮೆ ಕಾಡುವ ಕಾಮುಕರು ೯ರ ಬಾಲೆಯಿಂದ ಹಿಡಿದು ಹಲವರನ್ನು ತಮ್ಮ ದಾಹ ನೀಗಿಸಿಕೊಳ್ಳಲು ಬರುತ್ತಾರಂತೆ. ಇಲ್ಲಿ ಗಂಡು ಮಕ್ಕಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡುತ್ತಾರಂತೆ. ಏಕೆಂದರೆ ಕಾಮುಕರ ಕಾಟವಿರದು. ಹೆಣ್ಣುಮಕ್ಕಳು ಅಪೌಷ್ಟಿಕವಾಗಿಯೇ ಇರುವಂತೆ ನೋಡಿಕೊಳ್ಳುತ್ತಾರಂತೆ. ಬೇಗ ಸತ್ತು ಸ್ವರ್ಗ ಸೇರಲಿ. ಎಂಬ ನೋವಿನಲ್ಲಿ ಹೀಗೆ ಮಾಡುತ್ತಾರೆಯೇ ವಿನಃ ಗಂಡುಮಗುವೆಂಬ ಮಮಕಾರವಲ್ಲ. ಹೆಣ್ಣು ಇಲ್ಲಿ ನೆಮ್ಮದಿಯಾಗಿರಬೇಕೆಂದರೆ ಆಕೆ ಸತ್ತು ಹೆಣವಾದಾಗ ಮಾತ್ರ ಸಾಧ್ಯವೆನ್ನುತ್ತಾರೆ ಇಲ್ಲಿನ ಮಹಿಳೆಯರು. ಮಹಿಳಾ ಸ್ವಾವಲಂಬನೆ, ಮಹಿಳಾದಿನಾಚರಣೆ… ಮಹಿಳಾ ಮೀಸಲಾತಿ ಎಂಬ ದೊಡ್ಡ ದೊಡ್ಡ ಪದಗಳು ಕೇಳಿ ಬರುವ ದೆಹಲಿಯಲ್ಲಿಯೆ ‘ಮಸಣದ ಹೂ’ಗಳು ಕೂಡ ಇರುವುದು ವಿಪರ್ಯಾಸವೇ ಸರಿ.

Tags: #interestingfacts#weirdfacts#wondernews

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
magicl umbrella: ಮಳೆಯಾಗದಂತೆ ತಡೆಯೋ ಮ್ಯಾಜಿಕಲ್ ಕೊಡೆ!

magicl umbrella: ಮಳೆಯಾಗದಂತೆ ತಡೆಯೋ ಮ್ಯಾಜಿಕಲ್ ಕೊಡೆ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.