-ಮನುಷ್ಯನ ಪಾಲಿಗೂ ಹಕ್ಕಿಗಳು ಅನಿವಾರ್ಯ!
-ನಮ್ಮ ಸುತ್ತಾ ಎಂತೆಂಥಾ ಹಕ್ಕಿಗಳಿದ್ದಾವೆ ಗೊತ್ತಾ?
ಇದು ಶರವೇಗದಲ್ಲಿ ಚಲಿಸುವ ಜಗತ್ತು. ಬದುಕಿನಲ್ಲಿ ನೆಲೆ ಕಂಡುಕೊಳ್ಳಬೇಕೆಂಬುದರಿಂದ ಹಿಡಿದು, ದುಡ್ಡೂ, ಕಾಸು ಮಣ್ಣು ಮಸಿಗಳು ಸೇರಿದಂತೆ ರೇಸಿಗೆ ನಿಂತವರ ಗುರಿ ನಾನಾ ರೀತಿಯಲ್ಲಿದೆ. ಹೀಗೆ ರೇಸಿಗೆ ಬಿದ್ದ ಮಂದಿ ತಮ್ಮ ಮೇಲೆ ತಮಗೇ ರೇಜಿಗೆ ಹುಟ್ಟುವ ಮಟ್ಟಿಗೆ ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿರುತ್ತಾರೆ. ಇಂಥಾ ಜಿದ್ದಾಜಿದ್ದಿಯ ಬದುಕಿನ ಫಲವಾಗಿ ಒತ್ತಡ ಅತಿಯಾಗಿ, ಮಾತು ಮಾತಿಗೂ ಬಿಪಿ ಏರಿಸಿಕೊಂಡು ನಾನಾ ರೀತಿಯ ಕಾಯಿಲೆ ಕಸಾಲೆಗಳಿಗೆ ಗುರಿಯಾಗುತ್ತಿದ್ದಾರೆ. ಇಂಥಾ ಜಂಜಾಟಗಳ ನಡುವೆ ಈ ಪ್ರಕೃತಿಯ ವಿಸ್ಮಯಗಳಿಗೆ ಕಣ್ತೆರೆದು ನೋಡುವ ಶಕ್ತಿಯನ್ನೇ ಬಹುತೇಕರು ಕಳೆದುಕೊಂಡಿದ್ದಾರೆ. ಒಂದರೆಕ್ಷಣ ಈ ಪ್ರಕೃತಿಯತ್ತ ಒಮ್ಮೆ ತಣ್ಣಗೆ ದಿಟ್ಟಿಸಿದರೂ ಸಾಕು, ಮನಸೆಲ್ಲ ಹಗುರಾಗುತ್ತೆ. ಆ ಬಗೆಗೊಂದು ಕುತೂಹಲ ಮೂಡಿಸಿಕೊಂಡರಂತೂ ನಮ್ಮೆಲ್ಲ ಹಳವಂಡಗಳಿಗೂ ಮದ್ದೆಂಬುದು ತಾನೇ ತಾನಾಗಿ ಸೃಷ್ಟಿಯಾಗುತ್ತೆ.

ನೀವೇನಾದರೂ ನಗರ ಪ್ರದೇಶಗಳಲ್ಲಿರುವವರಾದರೂ ಕೂಡಾ ನೋಡೋ ಕಣ್ಣಿದ್ದರೆ ಪ್ರಕೃತಿ ಬೇರೆಯದ್ದೇ ತೆರನಾಗಿ ಅಚ್ಚರಿ ಮೂಡಿಸುತ್ತೆ. ಈ ಜಗತ್ತಿನಲ್ಲಿರುವ ಪಕ್ಷಿ ಲೋಕದ ಬಗ್ಗೆ ಅರಿತುಕೊಳ್ಳುವ ಕುತೂಹಲವೊಂದನ್ನು ಸಾಕಿಕೊಂಡರೂ ಸಾಕು, ಆಹ್ಲಾದವೊಂದು ತಾನೇ ತಾನಾಗಿ ನಿಮ್ಮನ್ನು ಆವರಿಸಿಕೊಳ್ಳುತ್ತೆ. ಪುಸ್ತಕ ಮೊಬೈಲು ಸೇರಿದಂತೆ ಈಗಂತೂ ಪಕ್ಷಿ ಲೋಕದ ಅಚ್ಚರಿಗಳನ್ನ ತಣಿಸಿಕೊಳ್ಳಲು ನಾನಾ ದಾರಿಗಳಿದ್ದಾವೆ. ಒಂದಷ್ಟು ದಿನ ಈ ಬಗ್ಗೆ ತಿಳಿದುಕೊಳ್ಳೋದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮನ್ನು ಇಡಿಯಾಗಿ ಮತ್ಯಾವುದೋ ಲೋಕವೊಂದು ಒಳ ಸೆಳೆದುಕೊಳ್ಳುತ್ತೆ. ಅಂಥಾ ಪಕ್ಷಿಗಳ ಕೆಲವಾರು ವಿಸ್ಮಯಗಳನ್ನಿಲ್ಲಿ ಹರವಲಾಗಿದೆ. ಅಂದಹಾಗೆ, ಪಕ್ಷಿಗಳ ಬಗ್ಗೆ ಅದೇನೇ ಬರೆದರೂ ಮಾತಾಡಿದರೂ ಸಾಗರದ ಸಣ್ಣ ಹನಿಯೊಂದನ್ನು ಬೊಗಸೆಗಿಟ್ಟುಕೊಂಡಂತಾಗುತ್ತೆ.
ವಿಸ್ಮಯ ಜಗತ್ತು

ಈ ಜಗತ್ತಿನಲ್ಲಿ ಸಾವಿರಾರು ಬಗೆಯ ಪಕ್ಷಿಗಳಿವೆ. ಅವುಗಳ ಜೀವನ ಕ್ರಮ, ಹೆಸರು, ಪ್ರಬೇಧಗಳನ್ನೆಲ್ಲ ಅನೇಕ ಪಕ್ಷಿ ಶಾಸ್ತ್ರಜ್ಞರು ಅಭ್ಯಸಿಸಿ ಗುರುತಿಸಿದ್ದಾರೆ. ಈ ಹಕ್ಕಿಗಳಲ್ಲಿ ಅನೇಕಾನೇಕ ಪ್ರಬೇಧಗಳಿದ್ದಾವೆ. ಹಾರಾಡುವ ಪಕ್ಷಿಗಳು, ಹಾರಲಾರದ ಪಕ್ಷಿಗಳು, ನೀರಿನಲ್ಲಿ ಈಜಾಡುವ ಹಕ್ಕಿಗಳು, ಬೆಟ್ಟದ ತುದಿಯಲ್ಲಿ ಗೂಡು ಕಟ್ಟಿಕೊಳ್ಳುವ ಪಕ್ಷಿಗಳು, ಗೂಡನ್ನೇ ಕಟ್ಟದೇ ಬೇರೆ ಪಕ್ಷಿಯ ಗೂಡಲ್ಲಿ ಮೊಟ್ಟೆ ಇಡುವ ಹಕ್ಕಿ, ಪುಟ್ಟ ಹಕ್ಕಿ, ಬೃಹತ್ ಗಾತ್ರದ ಹಕ್ಕಿ, ಹಿಮದಲ್ಲಿ ವಾಸಿಸುವ ಹಕ್ಕಿ ಹೀಗೆಲ್ಲಾ ವಿಧದ ಹಕ್ಕಿಗಳು ನಮ್ಮ ಸುತ್ತಮುತ್ತಲಿನಲ್ಲೇ ಇವೆ. ಕೆಲವು ಹಕ್ಕಿಗಳನ್ನು ನಾವು ಪ್ರಾಣಿ ಸಂಗ್ರಹಾಲಯದಲ್ಲೋ ಹಾಗೂ ಕೆಲವನ್ನು ದೂರದರ್ಶನದಲ್ಲೋ, ಚಿತ್ರದಲ್ಲೋ ನೋಡಿ ಖುಷಿ ಪಡಬೇಕು. ಇನ್ನೊಂದಷ್ಟನ್ನು ಕಾಣಬೇಕೆಂದರೆ ಬೆರಗಿನ ಕಣ್ಣಿರಬೇಕಷ್ಟೆ!
ಕೊಂಚ ಹಳ್ಳಿಗಾಡಿನವರಾದರೂ ಕೂಡಾ ನಮ್ಮ ಸುತ್ತಮುತ್ತಲಿರುವ ಹಲವಾರು ಪಕ್ಷಿಗಳನ್ನು ಗುರುತಿಸುವುದೇ ಇಲ್ಲ. ಹುಡುಕಿದರೆ ನಮ್ಮ ಮನೆಯ ಸುತ್ತಲೂ ಹಲವಾರು ಹಕ್ಕಿಗಳು ಸಿಕ್ಕೇ ಸಿಗುತ್ತವೆ. ಗುಬ್ಬಚ್ಚಿಯಿಂದ ಹಿಡಿದು ಈಗ ನವಿಲೂ ಮನೆಯ ಅಂಗಳಕ್ಕೆ ಬಂದು ಕುಳಿತಿದೆ. ಅರಣ್ಯ ನಾಶದಿಂದ, ಹಣ್ಣು ಬಿಡುವ ಮರಗಳು ಕಮ್ಮಿಯಾಗಿವೆ. ಹಣ್ಣು ತಿನ್ನುವ ಹಕ್ಕಿಗಳು ನಾಶವಾಗುತ್ತಿವೆ. ಕೆಲವು ಹಕ್ಕಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಇದೇ ಕಾರಣದಿಂದ ನಗರದಲ್ಲಿ ನವಿಲುಗಳು ಕಾಣ ಸಿಗುತ್ತಿವೆ. ಅವುಗಳಿಗೆ ಕಾಡು ಇಲ್ಲವಾಗಿದೆ. ಆಹಾರ ಕಮ್ಮಿಯಾಗಿದೆ. ಅದಕ್ಕೇ ಊರಿಗೆ ಬಂದಿದೆ. ಒಂದೆರಡು ಇದ್ದರೆ ಚಂದ ಸುಂದರ. ಆದರೆ ಹಲವಾರು ನವಿಲುಗಳು ಬಂದರೆ ನಿಮ್ಮ ಬೆಳೆ ಮಂಗಮಾಯ. ಆನ ಈಗ ಹೀಗೆ ಫಸಲಿಗೆ ತೊಂದರೆ ಕೊಡುವ ಪಕ್ಷಿಗಳನ್ನು ನಾಶಗೊಳಿಸುವತ್ತ ಗಮನ ನೆಟ್ಟಿದ್ದಾರೇ ಹೊರತು, ಪಕ್ಷಿ ಪ್ರಬೇಧಗಳನ್ನು ಮನಗಂಡು ಅವುಗಳ ಉಳಿವಿನ ಬಗ್ಗೆ ಚಿಂತಿಸುವವರ ಸಂಖ್ಯೆ ಕಡಿಮೆಯಿದೆ.
ನಿಶಾಚರ ಜಗತ್ತು!

ಹೀಗೆ ಹಗಲು ಹೊತ್ತಿನಲ್ಲಿರುವ ಪಕ್ಷಿಗಳದ್ದು ಒಂದು ಲೋಕವಾದರೆ, ರಾತ್ರಿ ಮಾತ್ರವೇ ಸಂಚರಿಸುವಂಥಾ ನಿಶಾಶರ ಪಕ್ಷಿಗಳದ್ದು ಮತ್ತೊಂದು ಬೆರಗಿನ ಲೋಕ. ರಾತ್ರಿಯಲ್ಲಿ ಸಂಚಾರ ಮಾಡುವ ನಿಶಾಚರ ಹಕ್ಕಿಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಲು ನಿಂತರೆ ಅನೇಕಾನೇಕ ಅಚ್ಚರಿಗಳು ಎದೆತುಂಬುತ್ತವೆ. ರಾತ್ರಿಯ ಹೊತ್ತು ಸಕ್ರಿಯವಾಗಿದ್ದುಕೊಂಡು ಆಹಾರವನ್ನು ಅರಸುವ ಹಕ್ಕಿಗಳನ್ನು ನಿಶಾಚರ ಹಕ್ಕಿಗಳು ಎನ್ನುತ್ತೇವೆ. ಇವು ಹಗಲು ವೇಳೆ ಸೊಗಸಾಗಿ ನಿದ್ರೆ ಮಾಡುತ್ತವೆ. ಕತ್ತಲಿನಲ್ಲಿ ಕೆಲವು ಹಕ್ಕಿಗಳು ಉತ್ತಮ ದೃಷ್ಟಿಯನ್ನು ಹೊಂದಿದ್ದರೂ ಹಗಲಿನಲ್ಲಿ ಇದರ ದೃಷ್ಟಿ ಮಂದವಾಗಿರುತ್ತದೆ. ಈ ಹಕ್ಕಿಗಳಲ್ಲಿ ಪ್ರಮುಖವಾದ ಹಕ್ಕಿಗಳೆಂದರೆ ಗೂಬೆ ಮತ್ತು ಬಾವಲಿ. ಇವೆರಡೂ ಕೂಡಾ ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅವುಗಳ ಜೀವನ ಕ್ರಮ ಅಪರಿಚಿತವಾಗಿಯೇ ಉಳಿದುಕೊಂಡಿದೆ.
ಇದರಲ್ಲಿ ಬಾವಲಿಯ ವಿಚಾರಕ್ಕೆ ಬಂದರೆ, ಬಾವಲಿ ಅತ್ಯಂತ ವಿಶಿಷ್ಟ ಹಕ್ಕಿ. ಇದು ಸಸ್ತನಿ ಸಮೂಹಕ್ಕೆ ಸೇರಿಕೊಳ್ಳುತ್ತೆ. ಅಂದರೆ ಮೊಟ್ಟೆಯಿಡದೇ ನೇರವಾಗಿ ಮರಿ ಹಾಕುತ್ತದೆ. ಹಾರಾಡುವ ಸಸ್ತನಿ ಎಂದೂ ಇದನ್ನು ಕರೆಯುತ್ತಾರೆ. ಬಾವಲಿಗಳ ದೃಷ್ಟಿ ಮಂದವಾಗಿರುತ್ತೆ. ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಆ ಕಾರಣದಿಂದ ಅವುಗಳು ಬಾಯಿಯ ಮೂಲಕ ಶಬ್ದವನ್ನು ಹೊರಡಿಸಿ ಅದರ ಮೂಲಕ ಬೇಟೆಯನ್ನು ಹುಡುಕುತ್ತವೆ. ಶ್ರವಣಾತೀತ ಶಬ್ಧ ತರಂಗಗಳನ್ನು ಹೊರಡಿಸಿ ಆ ಮೂಲಕ ತಾವು ಹಾರ ಬೇಕಾದ ದೂರ, ದಾರಿಯನ್ನು ಅಂದಾಜು ಮಾಡಿಕೊಳ್ಳುತ್ತದೆ. ಈ ಶಬ್ದ ಕಂಪನಗಳು ಬಾವಲಿಯ ಆಹಾರಕ್ಕೆ ತಗುಲಿ, ಮತ್ತೆ ಮರಳಿ ಪ್ರತಿಸ್ಪಂದನೆಯಾಗುವುದನ್ನು ಗಮನಿಸಿ ಆ ಮೂಲಕ ಬೇಟೆಯಾಡುತ್ತವೆ. ಬಾವಲಿಗಳು ಈ ಮೂಲಕ ಸಣ್ಣ ಸಣ್ಣ ಜೀವಿಗಳು, ಕೀಟಗಳನ್ನು ತಿನ್ನುತ್ತವೆ. ಬಾವಲಿಗಳ ಈ ತಂತ್ರಜ್ಞಾನವನ್ನೇ ಬಳಸಿ ನಾವು ರಾಡಾರ್ ಸಂಶೋಧನೆ ಮಾಡಿದ್ದು. ಹೀಗೆ ಪಕ್ಷಿಗಳು ಅನೇಕ ಆಧುನಿಕ ಆವಿಷ್ಕಾರಗಳಿಗೂ ಸ್ಫೂರ್ತಿಯಾಗಿವೆ.
ಬಾವಲಿಗಳೆಂದರೆ ಬೆರಗಿಗಿಂತಲೂ ಭಯವೇ ಜಾಸ್ತಿ. ಬಾವಲಿಗಳು ಹಗಲಿನಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ತಲೆ ಕೆಳಗಾಗಿ ಮಲಗುತ್ತವೆ. ಬಾವಲಿಯ ರೆಕ್ಕೆಗಳಲ್ಲಿ ಗರಿಗಳಿಲ್ಲ, ಒಂದು ರೀತಿಯ ಹಾಳೆಯಂತಹ ವ್ಯವಸ್ಥೆ ಇರುತ್ತದೆ. ಇದಕ್ಕೆ ಏನಾದರೂ ತಗುಲಿ ತೂತಾದರೆ ಮತ್ತೆ ಬಾವಲಿಗೆ ಹಾರಾಟ ಸಾಧ್ಯವಾಗುವುದಿಲ್ಲ. ಬಾವಲಿಗಳಲ್ಲಿ ಕೆಲವು ರಕ್ತ ಹೀರುವ ಜಾತಿಯವೂ ಇರುತ್ತದೆ. ಬಾವಲಿಗಳಿಗೆ ಬಾಯಿಯಲ್ಲಿ ಹಲ್ಲಿನಂತಹ ರಚನೆ ಇರುತ್ತದೆ. ಕೆಲವು ಮಂದಿ ಬಾವಲಿಗಳನ್ನು ಬೇಟೆಯಾಡಿ ಕೊಂದು ತಿನ್ನುತ್ತಾರೆ. ಸಾಮಾನ್ಯವಾಗಿ ಬಾವಲಿಗಳ ಸುತ್ತಾ ಒಂದಷ್ಟು ಮಾಂತ್ರಿಕ ಜಗತ್ತಿನ ಕಥೆಗಳಿದ್ದಾವೆ. ಈ ಕಾರಣದಿಂದಲೇ ಅವುಗಳನ್ನು ನೋಡಿದರೆ ಭಯ ಪಡುವವರೇ ಹೆಚ್ಚು. ಇನ್ನು ಆಧುನಿಕ ಜಗತ್ತಿನಲ್ಲಂತೂ ಬಾಲಲಿಗಳು ವೈರಸ್ ಹರಡುವ ವಾಹಕಗಳಂತೆ ಬಿಂಬಿತವಾಗಿವೆ. ಇವುಗಳನ್ನು ತಿನ್ನುವವರ ಸಂಖ್ಯೆ ವಿರಳವಾದರೂ, ಅವುಗಳ ಅವಸಾನ ಇಂಥಾ ಭಕ್ಷಣೆಯಿಂದಲೇ ಹೆಚ್ಚಾಗಿ ನಡೆಯುತ್ತಿದೆ.
ಬೆರಗಿನ ಗೂಬೆ

ಗೂಬೆ ಅಂದರೆ ಮಂದ ಸ್ವಭಾವದ ಪಕ್ಷಿ ಎಂಬಂತೆ ಬಿಂಬಿಸಿಕೊಂಡಿದೆ. ಆದರೆ ಈ ಗೂಬೆ ನಿಜಕ್ಕೂ ಸುಂದರ ಪಕ್ಷಿ. ಆದರೆ ಈ ಪಕ್ಷಿಯ ದೇಹ ರಚನೆಯನ್ನು ಗಮನಿಸಿದಾಗ ಹೆದರಿಕೆಯಾಗುತ್ತದೆ. ಮಾನವರಂತೆಯೇ ಎದುರು ಬದಿಯಲ್ಲೇ ಇದರ ದೊಡ್ಡದಾದ ತೀಕ್ಷ್ಣ ಕಣ್ಣುಗಳು ಇರುತ್ತವೆ. ರಾತ್ರಿಯ ವೇಳೆ ಗೂಬೆಯ ಕಣ್ಣುಗಳು ತುಂಬಾ ಚುರುಕಾಗಿ ಕೆಲಸ ಮಾಡುತ್ತವೆ. ಗೂಬೆಯನ್ನು ಬಹಳಷ್ಟು ಮಂದಿ ಅಪಶಕುನ ಹಕ್ಕಿ ಎನ್ನುತ್ತಾರೆ. ಆದರೆ ಅದು ನಮ್ಮ ಬೆಳೆಗೆ ಹಾನಿ ಮಾಡುವ ಇಲಿ, ಹೆಗ್ಗಣ ಮುಂತಾದ ಪುಟ್ಟ ಪುಟ್ಟ ಜೀವಿಗಳನ್ನು ತಿನ್ನುತ್ತವೆ. ಇದು ಒಂದು ರೀತಿಯಲ್ಲಿ ರೈತ ಮಿತ್ರ. ಗೂಬೆಯ ಕತ್ತಿನ ವಿಶೇಷವೆಂದರೆ ಅದರ ಕತ್ತು ಸುಮಾರು ಸುತ್ತಲೂ ತಿರುಗುತ್ತದೆ. ಗೂಬೆಯು ಕುಳಿತಲ್ಲಿಂದಲೇ ತನ್ನ ಕತ್ತನ್ನು ಹಿಂದಿನ ಭಾಗಕ್ಕೆ ತಿರುಗಿಸಬಲ್ಲುದು. ಗೂಬೆಯ ಶರೀರದ ರಚನೆಯೂ ರಾತ್ರಿ ಸಂಚಾರಕ್ಕೆ ಅನುಕೂಲಕರವಾಗಿದೆ. ಗೂಬೆ ಅಪಶಕುನವೆಂದು ಅದನ್ನು ಕೊಂದು ಹಾಕುತ್ತಾರೆ. ಗೂಬೆಯ ಸಂತತಿಯು ಕಮ್ಮಿಯಾದರೆ ಇಲಿ ಮತ್ತು ಹೆಗ್ಗಣಗಳ ಸಂಖ್ಯೆ ಹೆಚ್ಚಾಗುತ್ತದೆ. ಒಂದು ವೇಳೆ ಮೂಢ ನಂಬಿಕೆಯಿಂದ ಗೂಬೆಗಳ ಸಂತತಿ ನಾಶವಾದರೆ ಕೃಷಿಕರು ತಡೆದುಕೊಳ್ಳಲಾರದಂಥಾ ಕಂಟಕಗಳಿಗೆ ಎದೆ ಕೊಡಬೇಕಾಗುತ್ತದೆ.
ಗೂಬೆ ಮತ್ತು ಬಾವಲಿಗಳು ಮಾತ್ರವೇ ನಿಶಾಚರ ಪಕ್ಷಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿವೆ. ಇವುಗಳನ್ನು ಹೊರತು ಪಡಿಸಿ ಇನ್ನೂ ಕೆಲವು ಹಕ್ಕಿಗಳು ರಾತ್ರಿ ಜಾಗರಣೆ ಮಾಡುವುದಿದೆ. ಕಕಾಪೊ ಎಂಬ ಜಾತಿಯ ಗಿಳಿಗಳು ರಾತ್ರಿಹೊತ್ತು ಎಚ್ಚರದಲ್ಲಿರುತ್ತವೆ. ಈ ಗಿಳಿಯ ವಾಸ ನೆಲದಲ್ಲೇ ಹೆಚ್ಚಿರುತ್ತೆ. ಕಲ್ಲುಗಳ, ಬಂಡೆಗಳ ಸಂದಿಗಳಲ್ಲಿರುವ ಬಿಲದಲ್ಲಿ ವಾಸಮಾಡುತ್ತವೆ. ಹಗಲು ಹೊತ್ತು ನಿದ್ರಿಸಿ ರಾತ್ರಿ ಹೊತ್ತು ಹೊರ ಬಂದು ತಮ್ಮ ಆಹಾರವನ್ನು ಅರಸುತ್ತವೆ. ಬೇರೆ ಎಲ್ಲಾ ಗಿಳಿಗಳು ಹಗಲು ಹೊತ್ತಿನಲ್ಲಿ ಮಾತ್ರ ಸಂಚಾರ ನಡೆಸುತ್ತವೆ. ಕಕಾಪೊ ಗಿಳಿ ನ್ಯೂಜಿಲ್ಯಾಂಡ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಗಿಡದ ಎಲೆ, ಚಿಗುರು, ಹಣ್ಣುಗಳನ್ನು ತಿನ್ನುತ್ತದೆ. ಇದು ನಮ್ಮ ದೇಶದಲ್ಲಾಗಲೆ, ಇತರೇ ದೇಶಗಳಲ್ಲಾಗಲಿ ಕಂಡು ಬರೋದು ವಿರಳ.
ಮತ್ತೊಂದು ನಿಶಾಚರಿ

ನಮ್ಮ ಪಾಲಿಗೆ ಗೂಬೆ ಮತ್ತು ಬಾವಲಿ ಮಾತ್ರವೇ ನಿಶಾಚರಿಗಳು. ಆದರೆ ಅವುಗಳೊಂದಿಗೇ ಗುರುತಿರದ ಅದೆಷ್ಟೋ ಪಕ್ಷಿಗಳು ನಿಶಾಚರಿಗಳಾಗಿ ಸಂಚರಿಸುತ್ತಿವೆ. ಆ ಸಾಲಿನಲ್ಲಿರುವ ಇನ್ನೊಂದು ರಾತ್ರಿ ಸಂಚಾರಿ ಹಕ್ಕಿಯೆಂದರೆ ಪೂರ್ವಿಲ್. ಈ ಹಕ್ಕಿ ಹಗಲಲ್ಲಿ ಚೆಂದಗೆ ನಿದ್ರಿಸಿ ರಾತ್ರಿ ಹೊತ್ತು ಸಂಚಾರ ಮಾಡುತ್ತದೆ. ಇದರ ವೈಶಿಷ್ಟ್ಯವೆಂದರೆ ಹಾರಾಡುವ ಸಮಯದಲ್ಲೇ ಅದು ಕೀಟವನ್ನು ಬಾಯಿಯ ಒಳಗೆ ಎಳೆದುಕೊಳ್ಳುತ್ತದೆ. ಹಾಗೆಯೇ ಅಮೇರಿಕಾದ ಆಯಿಲ್ ಬರ್ಡ್ ಸಹಾ ನಿಶಾಚರ ಪಕ್ಷಿ. ಈ ಪಕ್ಷಿಯೂ ಬಾವಲಿಯಂತೆ ಶಬ್ಧ ತರಂಗಗಳನ್ನು ಹೊರಡಿಸಿ ಬೇಟೆಯಾಡುತ್ತದೆ. ನ್ಯೂಜಿಲ್ಯಾಂಡಿನಲ್ಲಿರುವ ಹಾರಲಾಗದ ಹಕ್ಕಿ ಕಿವಿ ಯೂ ರಾತ್ರಿ ವೇಳೆ ಮಣ್ಣಿನಲ್ಲಿ ಹುದುಗಿರುವ ಹುಳುಗಳನ್ನು ತಿನ್ನುತ್ತವೆ. ಈ ಹಕ್ಕಿಗಳಿಗೆ ವಾಸನೆ ಕಂಡು ಹಿಡಿಯುವ ಶಕ್ತಿ ಚೆನ್ನಾಗಿರುತ್ತದೆ. ವಿಶ್ವದ ನಾನಾ ಭಾಗಗಳಲ್ಲಿ ಇಂಥಾ ವಿರಳವಾದ ನಿಶಾಚರ ಹಕ್ಕಿಗಳು ಜೀವಿಸುತ್ತವೆ.
ಹುಡುಕುತ್ತಾ ಹೋದರೆ ವಿಶ್ವದಲ್ಲಿ ಹಗಲು ಹೊತ್ತಲ್ಲಿ ಸಕ್ರಿಯವಾಗಿರುವಷ್ಟೇ ಸಂಖ್ಯೆಯಲ್ಲಿ ನಿಶಾಚರ ಪಕ್ಷಿಗಳು ಜೀವಿಸುತ್ತಿವೆ. ಬೇರೆ ಬೇರೆ ದೇಶಗಳ ಪಕ್ಷಿ ತಜ್ಞರು ಶತಮಾನಗಳಿಂದಲೂ ಇಂಥಾ ನಿಶಾಚರ ಪ್ರಬೇಧಗಳ ಬಗ್ಗೆ ಅಧ್ಯಯನ ನಡೆಸುತ್ತಾ ಬರುತ್ತಿದ್ದಾರೆ. ಬೇರೆ ದೇಶಗಳ ಕಥೆ ಹಾಗಿರಲಿ; ನಮ್ಮ ದೇಶದಲ್ಲಿಯೇ ಪಕ್ಷಿ ಪ್ರೇಮಿಗಳ ಕಣ್ಣಿಗೆ ಬೀಳದ ಅದೆಷ್ಟೋ ನಿಶಾಚರಿಗಳಿದ್ದಾವೆ. ನಿಸರ್ಗದ ಸಮತೋಲನವನ್ನು ಕಾಪಾಡಲು ಈ ರೀತಿಯ ಹಕ್ಕಿಗಳು ಬಹಳ ಉಪಕಾರಿ. ಇಲ್ಲವಾದಲ್ಲಿ ನಮಗೆ ಬಹಳ ತೊಂದರೆ ಕೊಡುವ ಇಲಿ, ಹೆಗ್ಗಣಗಳಂತಹ ಜೀವಿಗಳ ಸಂಖ್ಯೆ ವಿಪರೀತವಾಗುತ್ತಿತ್ತು. ನಿಶಾಚರ ಪಕ್ಷಿಗಳು ರಾತ್ರಿ ವೇಳೆ ಚುರುಕಾಗಿದ್ದುಕೊಂಡು ಬೇಟೆಯಾಡುವುದರಿಂದ ಹಲವಾರು ಉಪದ್ರ ಕೊಡುವ ಜೀವಿಗಳ ಸಂಖ್ಯೆ ನಿಯಂತ್ರಣದಲ್ಲಿ ಇರುತ್ತದೆ. ಇಂಥಾ ಅನೇಕ ಪಕ್ಷಿಗಳು ರಾತ್ರಿ ಸಂಚಾರ ನಡೆಸುತ್ತಾ ಕೃಷಿಗೆ, ಮನುಷ್ಯರಿಗೆ ಸಹಾಯವಾಗುವಂಥಾ ಜೀವನ ಕ್ರಮವನ್ನು ಅಳವಡಿಸಿಕೊಂಡಿರುತ್ತವೆ.
ಮನುಷ್ಯರಂದ್ರೆ ಭೀತಿ!

ಸಾಮಾನ್ಯವಾಗಿ ಎಲ್ಲ ಹಕ್ಕಿಗಳಿಗೂ ಮನುಷ್ಯರೆಂದರೆ ಭಯ ಇದ್ದೇ ಇರುತ್ತೆ. ಹೇಳಿಕೇಳಿ ಈ ಹಕ್ಕಿಗಳು ತುಂಬಾನೇ ಸೂಕ್ಷಸ್ವಭಾವದವು. ಎಲೆಯೊಂದು ಸರಿದ ಸದ್ದನ್ನೂ ಕೂಡಾ ಗ್ರಹಿಸುವ ಗುಣ ಇವುಗಳಿಗಿರುತ್ತೆ. ಪಕ್ಷಿಗಳ ಲೋಕದಲ್ಲಿ ಇಂಥಾ ಅನೇಕ ಪಕ್ಷಿಗಳಿದ್ದಾವೆ. ಅದರಲ್ಲಿ ಟಿಟ್ಟಿಭ ಅಂತ ಕರೆಸಿಕೊಳ್ಳುವ ಪಕ್ಷಿ ಮುಂಚೂಣಿಯಲ್ಲಿದೆ. ಸಂಸ್ಕೃತದಲ್ಲಿ ಟಿಟ್ಟಿಭ ಅಂತಲೂ ಕರೆಸಿಕೊಳ್ಳುವ ಇದು, ಮನುಷ್ಯರನ್ನು ಕಂಡರೆ ಬೆದರಿ ಮಾರುದೂರ ಓಡುತ್ತವೆ. ಎಷ್ಟೇ ದೂರದಲ್ಲಿದ್ದರೂ, ಅದನ್ನು ಸಮೀಪಿಸುತ್ತಿದ್ದೇವೆ ಅನ್ನುವುದು ಅದರ ಗಮನಕ್ಕೆ ಬಂದರೆ ಕೂಗುತ್ತಾ ಜಾಗ ಬದಲಿಸುತ್ತವೆ. ಈ ಮೂಲಕ ಜನರೆಲ್ಲರಿಗೂ ಪರಿಚಿತವಾಗಿರುವ ಈ ಹಕ್ಕಿಗಳು ಒಂದು ಪ್ರದೇಶದಲ್ಲಿ ನೆಲೆಗೊಂಡು ಅಪರೂಪಕ್ಕೆ ಮಾತ್ರವೇ ಜನಸಂದಣಿಗೆ ದರ್ಶನ ಕೊಡೋದಿದೆ.
ಹಾಗಂತ ಇವು ದಟ್ಟ ಕಾಡಿನ ಗರ್ಭದಲ್ಲೇನೂ ವಾಸಿಸೋದಿಲ್ಲ. ಬಯಲೇ ಇವುಗಳ ಆಲಯ. ಬಯಲಿನಲ್ಲಿ ವಾಸಿಸುವ ಈ ಹಕ್ಕಿಗಳ ಗೂಡು ಕಲ್ಲುಗಳನ್ನು ವೃತ್ತಾಕಾರವಾಗಿ ಜೋಡಿಸಿಟ್ಟಂತೆ ಇರುತ್ತದೆ. ಸಮೀಪ ಹೋದರಷ್ಟೇ ಅಲ್ಲಿ ಮೊಟ್ಟೆಗಳಿರುವುದು ತಿಳಿಯುತ್ತದೆ. ತಾಯಿ ಹಕ್ಕಿಗಳು ಮರಿಗಳ ಸಮೀಪವೇ ಇದ್ದು ಜತನದಿಂದ ಕಾಯುತ್ತವೆ. ಅವುಗಳಿಗೆ ಅಪಾಯ ಒದಗಿದಂತೆ ಕಂಡು ಬಂದರೆ ದಾಪುಗಾಲಿಟ್ಟು ಓಡಿ ಬರುತ್ತವೆ.ಹಲವರು ತೇನೆಹಕ್ಕಿಯು ಶಕುನದ ಹಕ್ಕಿಯೆಂದು ನಂಬುತ್ತಾರೆ. ತೇನೆ ಹಕ್ಕಿ ಮೊಟ್ಟೆಗಳನ್ನಿಟ್ಟರೆ ಮಳೆಬರುವ ಸೂಚನೆ, ರಾತ್ರಿಯ ಹೊತ್ತು ಯಾರ ಮನೆಯ ಹತ್ತಿರವಾದರೂ ಸುತ್ತಿದರೆ ಅದು ಅಶುಭದ ಸೂಚನೆ ಎನ್ನುವ ನಂಬಿಕೆ ಹಲವು ಸಮುದಾಯಗಳಲ್ಲಿ ಇದೆ. ಇಂಥಾ ಶಕುನದ ನಂಬಿಕೆಯೇ ಒಮ್ಮೊಮ್ಮೆ ಈ ಸಂತತಿಗೆ ಶಾಪವಾಗೋದೂ ಇದೆ!
ಇವುಗಳ ದೇಹ ರಚನೆ ಮತ್ತು ಆಕಾರ, ವರ್ತನೆಗಳು ಇತರೆ ಹಕ್ಕಿಗಳಿಗಿಂತಲೂ ಭಿನ್ನವಾಗಿರುತ್ತೆ. ಕೆಂಪು ಕಣ್ಣು, ಉದ್ದ ಕಾಲು, ಸದಾ ಎಚ್ಚರದ ಸ್ಥಿತಿಯಲ್ಲಿರುವ ಹಕ್ಕಿ, ಊರ ಕೋಳಿಗಳನ್ನು ನೆನಪಿಸುತ್ತದೆ. ಕೋಳಿಗಳಂತೆ ಹಗುರವಾದ ಹೆಜ್ಜೆಗಳನಿಡುತ್ತಾ, ಓಡುತ್ತವೆ. ಮನುಷ್ಯನಿಂದ ತನಗೆ ಅಪಾಯ ಒದಗಿದೆ ಅನ್ನಿಸಿದಾಗ ಅಥವ ತನ್ನ ಗೂಡಿನ, ಮರಿಗಳನ್ನು ರಕ್ಷಿಸಲು ಕೂಗುತ್ತಾ ಸುತ್ತುತ್ತಾ ವೈರಿಯ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ವೈರಿಯ ಇರುವಿನ ಬಗ್ಗೆ ಇತರ ಹಕ್ಕಿಗಳಿಗೂ ಎಚ್ಚರಿಕೆ ಕೊಡುತ್ತ ಒಟ್ಟಿಗೆ ಹಾರಿಹೋಗುವ ಇವುಗಳದ್ದು ನಿಜಕ್ಕೂ ಬೆರಗು ಹುಟ್ಟಿಸುವಂಥಾ ಬುದ್ಧಿಮತ್ತೆ ಅನ್ನೋದರಲ್ಲಿ ಸಂಶಯವೇನಿಲ್ಲ.
ಮಳೆ ಮುಗಿಯತ್ತಲೇ ಹಾಜರ್

ಸಾಮಾನ್ಯವಾಗಿ ಮಳೆಗಾಲದಲ್ಲಿ ಇಂಥಾ ಹಕ್ಕಿಗಳ ಓಡಾಟ ತುಸು ಕಡಿಮೆ. ಮಳೆಯಿಂದ ರಕ್ಷಿಸಿಕೊಳ್ಳೋದರತ್ತಲೇ ಅವುಗಳ ಗಮನ ಇರುತ್ತೆ. ಸೆಪ್ಟ್ಂಬರ್ ಮುಗಿದು ಅಕ್ಟೋಬರ್ ಪ್ರಾರಂಭವಾಗುತ್ತಲೇ ಮನೆ ಸುತ್ತ ಮುತ್ತ ಹಕ್ಕಿ ಗಳ ಕಲರವ ಮೊದಲಿಗಿಂತ ತುಸು ಜಾಸ್ತಿಯಿರುತ್ತೆ. ಅಕ್ಟೋಬರ್ ನವೆಂಬರದಲ್ಲಂತೂ ಇದು ದುಪ್ಪಟ್ಟಾಗುತ್ತೆ. ಏಪ್ರಿಲಿನಿಂದ ಸೆಪ್ಟ್ಂಬರ್ ತಿಂಗಳವರೆಗೆ ಕೇಳದ ಅನೇಕ ಸ್ವರಗಳು ಕಿವಿಗಾಗ ಹೊಸ ಇಂಪು ಕೊಡುತ್ತವೆ. ಮನೆಯಿಂದ ತುಸು ಹೊರ ಹೋದರೆ ಈ ಪಕ್ಷಿಗಳ ಅದ್ಭುತ ಜಗತ್ತೊಂದು ಕಣ್ಮುಂದೆ ತೆರೆದುಕೊಳ್ಳುತ್ತೆ. ಆಕಾಶದ ತುಂಬೆಲ್ಲಾ ಕವಲುಗಳು, ಆಕಾಶದಿಂದ ನೆಲಕ್ಕೆ ಜಿಗಿಯುವ ಜೇನ್ನೊಣ ಬಾಕಗಳು, ನೆಲದಿಂದ ಆಕಾಶಕ್ಕೆ ಚಿಮ್ಮುವ ಕಾಜಾಣಗಳು, ಎಲೆಯ ಮರಯಲ್ಲಿ ಕುಳಿತು ಗುನುಗುವ ಉಲಿ ಹಕ್ಕಿಗಳು, ಅಲ್ಲೇ ಇರುವ ಪೊದಯೊಳಗಿಂದ ಬರುವ ಇಂಪಾದ ಹಾಡು, ಇಣುಕಿ ನೋಡಿದರೆ ಕಾಣುವ ನೊಣಹಿಡುಕಗಳು… ಬೆರಗಿನ ಕಣ್ಣಿದ್ದರೆ ಈ ಹಕ್ಕಿಗಳು ಬದುಕನ್ನು ನಿಜಕ್ಕೂ ಸುಂದರವಾಗಿಸುತ್ತವೆ!
ಇಂಥಾ ಹಕ್ಕಿಗಳ ಬಗ್ಗೆ ನಮ್ಮಲ್ಲಿ ಅನೇಕಾನೇಕ, ಚಿತ್ರವಿಚಿತ್ರವಾದ ನಂಬಿಕೆಗಳಿದ್ದಾವೆ. ಕವಲುತೋಕೆ, ಕಮರಿ ತೋಕೆಯಂಥಾ ಹಕ್ಕಿಗಳು ಮಳೆಗಾಲದಲ್ಲಿ ಮಣ್ಣಿನ ಒಳಗೆ ಹೋಗಿ ಅವಿತು ಬಿಡುತ್ತವೆ. ಚಳಿಗಾಲ ಬಂದಾಕ್ಷಣ ಕೀಟಗಳು ಹೆಚ್ಚಿದಾಕ್ಷಣ ಮಣ್ಣು ಬಗೆದು ಬಾನು ಸೇರುತ್ತವೆ ಎಂಬ ಕಲ್ಪನೆ ಇತ್ತು. ಯಾವ ಕಲ್ಪನೆಗೂ ಸ್ಪಷ್ಟತೆಯಿರಲಿಲ್ಲ. ವರ್ಷದಿಂದ ವರ್ಷಕ್ಕೆ ಪಕ್ಷಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಹಕ್ಕಿಗಳ ಬಗೆಗಿನ ಕೌತುಕ ಸಂಗತಿಗಳು ಅನಾವರಣಗೊಳ್ಳುತ್ತಾ ಹೋದುವು. ನಾವು ವಾಸಿಸುವ ಪ್ರದೇಶದಲ್ಲಿ, ಚಳಿಗಾಲದಲ್ಲಿ ಹಕ್ಕಿಗಳ ಪ್ರಬೇಧ ಮತ್ತು ಸಂಖ್ಯೆ ಏರಲು ರೆಕ್ಕೆಯ ಹಕ್ಕಿಗಳ ವಲಸೆ ಕಾರಣ ಎಂಬ ಸಂಗತಿ ಬೆಳಕಿಗೆ ಬರುತ್ತಾ ಸಾಗುತ್ತಿದೆ. ಆದರೆ, ಈ ಕ್ಷಣಕ್ಕೂ ಅದೆಷ್ಟೋ ಪಕ್ಷಿಗಳು ಹೊರ ಜಗತ್ತಿಗೆ ಪರಿಚಯವಾಗದೇ ಉಳಿದುಕೊಂಡಿವೆ.
ವಲಸೆ ಹಕ್ಕಿಗಳು

ಸಾಮಾನ್ಯವಾಗಿ ಮನುಷ್ಯರು ಅತಿ ಸೆಖೆ ಚಳಿ ಮುಂತಾದವು ಆವರಿಸಿದಾಗ ಕೊಂಚ ವಲಸೆ ಹೋಗುವ ಗುಣ ಹೊಂದಿದ್ದಾರೆ. ನಾವಿರುವ ಪ್ರದೇಶದಲ್ಲಿ ವಾತಾವರಣದ ಅಥವಾ ಆಹಾರದಲ್ಲಿ ಅಭಾವವಾದಾಗ ಸಮೃದ್ಧಿಯನ್ನು ಅರಸುವುದು, ಅದನ್ನು ಅರಸುತ್ತ ವಲಸೆ ಹೋಗುವುದು ಯಾರಿಗಾದರೂ ಸ್ವಾಭಾವಿಕ ಮತ್ತು ಅನಿವಾರ್ಯ. ಈ ವಲಸೆ ಎಲ್ಲಾ ಜೀವಿಗಳಲ್ಲೂ ಇವೆ. ಆಫ್ರಿಕಾದ ಮಾಸೈ ಮಾರಾದಲ್ಲಿ ಲಕ್ಷಗಟ್ಟಲೆ ಪ್ರಾಣಿಗಳು ಮಾರಾ ನದಿಯನ್ನು ಮಳೆಗಾಲಕ್ಕೆ ಮುಂಚೆ ದಾಟುತ್ತವೆ. ಇದು ಪ್ರತೀ ವರ್ಷ ಪುನರಾವರ್ತಿಸುವುದು. ಈ ನೋಡಲೆಂದೇ ಲಕ್ಷಗಟ್ಟಲೆ ಛಾಯಾಗ್ರಾಹಕರು ಮಾಸೈ ಮಾರಾಕ್ಕೆ ಪ್ರಪಂಚದ ಮೂಲೆ ಮೂಲೆಯಿಂದ ಆಗುತ್ತಾರೆ. ಇಂಥಾ ಅತ್ಯಪರೂಪದ ವಲಸೆ ಪಕ್ಷಿ ತಾಣಗಳು ಮಂದ್ಯದ ಮದ್ದೂರು ಸೇರಿದಂತೆ ಅನೇಕ ಕಡೆಗಳಲ್ಲಿವೆ.
ಅಂಥಾ ವಲಸೆ ಹಕ್ಕಿಗಳ ಜಗತ್ತು, ಜೀವನ ಕ್ರಮವಂತೂ ಇನ್ನೂ ಬೆರಗಿನದ್ದು. ಭಾರತಕ್ಕೆ ವಲಸೆ ಬರುವ ಪಕ್ಷಿಗಳೆಲ್ಲಾ ಬಹುತೇಕ ಯುರೋಪ್ ಮೂಲದವುಗಳು. ಸೆಪ್ಟ್ಟೆಂಬರ್, ಅಕ್ಟೋಬರ್ ಬಂತೆಂದರೆ ಯೂರೋಪಿಲ್ಲಿ ಭಯಂಕರ ಚಳಿ ಇರುತ್ತೆ. ಎಲ್ಲೆಲ್ಲೂ ಹಿಮ, ಮಂಜು ಆವರಿಸಿಕೊಳ್ಳುತ್ತೆ. ಈ ಸ್ಥಿತಿಯಲ್ಲಿ ಅಲ್ಲಿ ಎಲ್ಲವೂ ಸ್ಥಬ್ಧ. ಗಿಡಗಳಲ್ಲಿ ಹಣ್ಣಿನ ಅಭಾವವಿರುತ್ತೆ. ಇಂಥಾ ಸ್ಥಿತಿಯಲ್ಲಿ ಹಕ್ಕಿಗಳು ಅಲ್ಲಿಂದ ವಲಸೆ ಬಯಸುತ್ತವೆ. ಎಲ್ಲಿ ಚಳಿ ಕಡಿಮೆ ಇರುತ್ತದೋ, ಎಲ್ಲಿ ಯಥೇಚ್ಛ ಆಹಾರ ಲಭ್ಯವೋ ಅಲ್ಲಿಗೆ ವಲಸೆ ಬರುತ್ತವೆ . ಅಂಥಾ ಪ್ರದೇಶ ನಮ್ಮ ಏಷಿಯಾ ಖಂಡವಾಗಿದೆ. ಅದರಲ್ಲೂ ನಮ್ಮ ಭಾರತ ವಲಸೆ ಹಕ್ಕಿಗಳಿಗೆ ಅತೀ ಪ್ರಿಯವಾದ ಜಾಗ. ಭಾರತದಲ್ಲಿ ಈ ಹೊತ್ತಿಗೆ ಅಕ್ಕಿ, ಗೋಧಿ, ರಾಗಿ ಎಲ್ಲಾ ಕಠಾವಿಗೆ ಸಿದ್ಧವಿರುತ್ತವೆ. ಆಹಾರ ಧಾನ್ಯಗಳಿಗೆ ಬಾಧಿಸುವ ಕೀಟಗಳೂ ಹೇರಳವಾಗಿರುತ್ತವೆ. ಇಂಥಾ ಅನುಕೂಲಕರ ವಾತಾವರಣವಿರುವುದರಿಂದ ನಮ್ಮಲ್ಲಿಗೆ ಕೋಟಿಗಟ್ಟಲೆ ಹಕ್ಕಿಗಳು ಪ್ರತೀ ವರ್ಷ, ಒಂದೇ ಅವಧಿಯಲ್ಲಿ ವಲಸೆ ಬರುತ್ತವೆ!
ಅದು ಪ್ರಕೃತಿಯ ವಿಸ್ಮಯ

ಹೀಗೆ ಪ್ರತೀ ವರ್ಷ ಅದೆಷ್ಟೋ ಸಾವಿರ ಕಿಲೋಮೀಟರುಗಳಿಂದ ಒಂದೇ ಬಗೆಯ ಹಕ್ಕಿಗಳು ನಮ್ಮಲ್ಲಿಗೆ ಹಾರಿ ಬರೋದೇ ಒಂದು ವಿಸ್ಮಯ. ವಲಸೆಗೆ ವಾತಾವರಣದಲ್ಲಿನ ಬದಲಾವಣೆಯೇ ಕಾರಣವೆಂದು ಸುಲಭವಾಗಿ ಗ್ರಹಿಸಬಹುದಾದರೂ, ಆ ಚಳಿಗೂ ಅಲ್ಲಿ ಕೆಲವೊಂದು ಜೀವಿಗಳು ಬದುಕುವುದಿಲ್ಲವೇ? ಎಂಬ ವಿಚಾರ ಮೂಡಿಕೊಳ್ಳಬಹುದು. ಅಂಥಾ ವಿಷಮ ಸನ್ನಿವೇಶದಲ್ಲಿಯೂ ಕೂಡಾ ಅಲ್ಲಿ ಅನೇಕ ಜೀವಿಗಳು ಬದುಕುತ್ತವೆ. ಕೆಲ ಜೀವಿಗಳು ಚಲಿಸದೇ ಒಂದೆ ಕಡೆಯಲ್ಲಿ ಒಂದಷ್ಟು ತಿಂಗಳು ಬದುಕುವ ಶಕ್ತಿ ಹೊಂದಿರುತ್ತವೆ. ತಮ್ಮ ದೇಹದ ಚಟುವಟಿಕೆಯನ್ನು ಸ್ಥಬ್ಧಗೊಳಿಸಿ ಹೃದಯ ಮಾತ್ರ ಬಡಿದುಕೊಂಡಿರುತ್ತದೆ. ಹಕ್ಕಿಗಳು ಈ ವಿಧಾನವನ್ನು ಅನುಸರಿಸಿ ತಾನಿರುವಲ್ಲೇ ಬದುಕುವ ಸಾಧ್ಯತೆಗಳಿದ್ದವು. ಆದರೆ ಪ್ರಕೃತಿಯ ಎಂಜಿನೀರಿಂಗ್ ವಿಸ್ಮಯ ಬೇರೆಯದ್ದೇ ರೀತಿಯಲ್ಲಿದೆ. ಅದು ಸಾವಿರಾರು ಕಿಲೋಮೀಟರ್ ದೂರ ಹಾರಿ ಹೋಗುವಂಥಾ ಶಕ್ತಿಯೊಂದನ್ನು ಕೆಲ ಹಕ್ಕಿಗಳಿಗೆ ಕರುಣಿಸಿ ಬಿಟ್ಟಿದೆ. ಅಂಥಾ ಹಕ್ಕಿಗಳ ರೆಕ್ಕೆಗಳಿಗೆ ಅಮೋಘ ಶಕ್ತಿಯನ್ನೂ ಕರುಣಿಸಿ, ಅದರ ಮುಂದೆ ನಮ್ಮನ್ನೆಲ್ಲ ಕುಬ್ಜವಾಗಿಸಿದೆ.
ಇಂಥಾ ಹಕ್ಕಿಗಳು ಈ ಪ್ರಕೃತತಿಯ ಅತ್ಯಂತ ತೇಜಸ್ಸಿನ ಜೀವಿಗಳು. ಪ್ರಕೃತಿಯ ಸಮತೋಲನ, ಬೆಳವಣಿಗೆಯಲ್ಲಿ ಈ ಪುಟ್ಟ ಜೀವಗಳ ಪಾತ್ರ ದೊಡ್ಡದಿದೆ. ಎಲ್ಲೋ ಇದ್ದ ಹಕ್ಕಿ ಇನ್ನೊಂದು ಕಡೆಗೆ ಬರುವ ದಾರಿಯಲ್ಲಿ ಅನೇಕ ಬೆಟ್ಟ ಗುಡ್ಡಗಳ ಮೇಲೆ ಹಾದು ಹೋಗುತ್ತೆ. ಹಾಗೆ ಹಾರುವಾಗ ವಾಯುಮಾರ್ಗದಲ್ಲಿ ಹಿಕ್ಕೆ ಹಾಕುವಾಗ ಅನೇಕ ಬೀಜಗಳು ಸುಲಭವಾಗಿ ಪ್ರಸಾರಗೊಳ್ಳುತ್ತದೆ. ಹಾಗೆ ನೋಡಿದರೆ, ನಮ್ಮಲ್ಲಿಗೆ ಹಾರಿ ಬರುವ ವಲಸೆ ಹಕ್ಕಿಗಳಿಗೆ ಇಲ್ಲಿ ಸಂತಾನೋತ್ಪತ್ತಿ ಬಿಟ್ಟರೆ ಇನ್ನೇನು ಕೆಲಸವಿಲ್ಲ. ಪಕ್ಷಿಗಳ ವಲಸೆ ಸಾಧಾರಣವಾಗಿ ಉತ್ತರದಿಂದ ದಕ್ಷಿಣಕ್ಕೆ ಇರುವುದಾದರೂ, ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಕೂಡಾ ಕೆಲವು ಹಕ್ಕಿಗಳು ವಲಸೆ ಹೋಗುತ್ತವೆ. ನಮ್ಮಲ್ಲಿ ಕಾಣುವ ಅನೇಕ ವಲಸೆ ಪಕ್ಷಿಗಳು ಉತ್ತರದಿಂದ ದಕ್ಷಿಣಕ್ಕೆ ಬಂದವು. ಉತ್ತರದ ಯುರೋಪ್ ನಿಂದ ಅನೇಕ ಕಡಲ ಹಕ್ಕಿಗಳು ಹಿಂಡು ಹಿಂಡಾಗಿ ಬರುತ್ತವೆ. ಆದರೆ ಅವುಗಳ ತವರು ಸಾಮಾನ್ಯವಾಗಿ ಯುರೋಪ್ ಖಂಡವಾಗಿರುತ್ತೆ.

ಕೇವಲ ಯುರೋಪ್ ಖಂಡದಿಂದ ಮಾತ್ರವೇ ನಮ್ಮಲ್ಲಿಗೆ ಹಕ್ಕಿಗಳು ವಲಸೆ ಬರುತ್ತವೆ ಅಂದುಕೊಳ್ಳುವಂತಿಲ್ಲ. ಹಿಮಾಲಯದಿಂದ ಅನೇಕ ಪಕ್ಷಿಗಳು ಚಳಿಗಾಲದಲ್ಲಿ ದಕ್ಷಿಣ ಭಾರತಕ್ಕೆ ಬರುತ್ತವೆ. ಪೂರ್ವದಿಂದ ಪಶ್ಚಿಮಕ್ಕೆ ವಲಸೆ ಹೋಗುವ ಹಕ್ಕಿಗಳಲ್ಲಿ ಒಂದು ಸೋಜಿಗದ ಸಂಗತಿ ಗೋಚರಿಸುತ್ತೆ. ಇಲ್ಲಿ ಕೆಲವು ಪಕ್ಷಿಗಳು ತಾವಿರುವ ತಾಣದಿಂದ ಅದೇ ರೀತಿ ಹವಾಮಾನವಿರುವ ಇನ್ನೊಂದು ಪ್ರದೇಶಕ್ಕೆ ಅಥವಾ ಕೆಲವು ದೂರದಲ್ಲಿರುವ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಇಂಥ ವಲಸೆಯನ್ನು ಮನುಷ್ಯರು ಖುಷಿಗಾಗಿ ತೀರ್ಥಯಾತ್ರೆಯೊಂದಿಗೆ ಹೋಲಿಸಬಹುದು. ಹಾಗಲ್ಲದೆ ಬೀಜ ಪ್ರಸಾರದ ಉದ್ದೇಶವಂತೂ ಪ್ರಕೃತಿಗೆ ಇದ್ದೇ ಇರುತ್ತದೆ. ಇದುವೇ ವಲಸೆಯ ಹಿಂದಿರುವ ಅಸಲೀ ಫಾರ್ಮುಲಾ!
ಇನ್ನು ಕೆಲವು ಪಕ್ಷಿಗಳು ಭಾರತದ ಮೂಲಕ ಇತರೆ ದೇಶಕ್ಕೆ ಪ್ರಯಾಣ ಬೆಳೆಸುತ್ತವೆ. ಮಾರ್ಗ ಮಧ್ಯೆ ನಮ್ಮ ದೇಶದಲ್ಲಿ ಕೆಲ ದಿನ ಅಲ್ಲಲ್ಲಿ ವಿಶ್ರ್ರಾಂತಿಯಲ್ಲಿರುವುದನ್ನು ಕಾಣಬಹುದು. ಇವನ್ನು ಮಧ್ಯಂತರ ವಲಸಿಗಳು ಎನ್ನುವರು. ಇನ್ನು ಕೆಲವು ಹಿಮಾಲಯದ ಹಕ್ಕಿಗಳು ಹಿಮದ ದಟ್ಟಣೆಯ ಅನುಸಾರ ಬೆಟ್ಟದ ತುದಿಯಿಂದ ಬುಡಕ್ಕೆ, ಬುಡದಿಂದ ತುದಿಗೆ ವಲಸೆ ಹೋಗುತ್ತವೆ. ಇಲ್ಲಿಗೇ ಮುಗಿದಿಲ್ಲ, ವಲಸೆ ಹೋಗೋದು ಅಂದ್ರೆ ಸುಮ್ಮನೇ ಆಗತ್ತಾ? ನಾವು ಒಂದೆರಡು ದಿನದ ಟ್ರಿಪ್ ಹೋಗ್ಬೇಕು ಅಂದ್ರೆ ಎಷ್ಟೆಲ್ಲಾ ತಯಾರಿ ಮಾಡ್ಕೊಳ್ತೇವೆ, ಅದಕ್ಕಿಂತ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತವೆ ಹಕ್ಕಿಗಳ ಪ್ರಪಂಚ.