-ಜೇನುಗಳ ಜೀವನ ಕ್ರಮ ನಿಜಕ್ಕೂ ಅದ್ಭುತ!
-ಅವುಗಳನ್ನು ಮೀರಿಸೋ ಶ್ರಮಜೀವಿಗಳಿಲ್ಲ!
ಜೇನು ತುಪ್ಪ ಅಂದಾಕ್ಷಣ ಬಾಯಲ್ಲಿ ನೀರೂರಿಸದಿರೋರ ಸಂಖ್ಯೆ ವಿರಳ. ರುಚಿಯಲ್ಲಿ, ಔಷಧೀಯ ಗುಣಗಳಲ್ಲಿ ಜೇನುತುಪ್ಪವನ್ನ ಮೀರಿಸುವ ಮತ್ತೊಂದು ಮದ್ದಿರಲಿಕ್ಕಿಲ್ಲ. ಈ ಕಾರಣದಿಂದಲೇ ಜೇನು ತುಪ್ಪ ತೆಗೆಯೋ ಕೆಲಸ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಆದ್ರೆ, ಹಾಗೆ ಜೇನು ತೆಗೆಯೋ ಕೆಲಸ ಜೇನು ತುಪ್ಪದಷ್ಟು ಸ್ವೀಟಾಗಿರೋ ಮ್ಯಾಟರ್ ಖಂಡಿತಾ ಅಲ್ಲ. ಅದು ಅಕ್ಷರಶಃ ಯುದ್ಧವಿದ್ದಂತೆ. ಯಾಕಂದ್ರೆ, ನೋಡಲು ಪುಟ್ಟ ಗಾತ್ರಕ್ಕಿರೋ ಜೇನು ನೊಣಗಳ ಸಿಟ್ಟಿನ ಮೊನೆ ಅಷ್ಟೊಂದು ಚೂಪಾಗಿದೆ. ಹಾಗಂತ ಈ ಜೇನು ಹುಳುಗಳೆಂದರೆ ಪಕ್ಕಾ ಆಕ್ರಮಣಕಾರಿ ಜೀವಿಗಳು ಮಾತ್ರ ಅಂದುಕೊಳ್ಳಬೇಕಿಲ್ಲ. ಅವುಗಳಷ್ಟು ನಿಸ್ವಾರ್ಥ ಮತ್ತು ಅವಿರತ ಕೆಲಸಗಾರರು ಈ ಜಗತ್ತಿನಲ್ಲಿ ಮತ್ಯಾರೂ ಇರಲು ಸಾಧ್ಯವೇ ಇಲ್ಲ!

ನಿಖರವಾಗಿ ಹೇಳ ಬೇಕಂದ್ರೆ ಈ ಪುಟ್ಟ ಜೇನ್ನೊಣಗಳಿಗೆ ಮೈ ತುಂಬಾ ಸಿಟ್ಟಿರುತ್ತೆ. ಸಾಮಾನ್ಯವಾಗಿ ಜೇನ್ನೊಣಗಳು ಕಚ್ಚುತ್ತವೆಂಬ ತಪ್ಪು ಕಲ್ಪನೆಯಿದೆ. ಅಸಲಿಗೆ ಅವು ಕಚ್ಚೋದಿಲ್ಲ. ಬದಲಾಗಿ ಚೂಪಾದ ಈಟಿಯಂಥಾ ಪಂಜಿನಿಂದ ಚುಚ್ಚುತ್ತವೆ. ಹೆಜ್ಜೇನಿನಂಥಾ ಜೇನು ನೊಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದ್ರೆ ಅದೆಂಥಾ ಗಟ್ಟಿ ಆಸಾಮಿಗಳೇ ಆದ್ರೂ ಬದುಕೋದು ಕಷ್ಟವಿದೆ. ಸಿಹಿಯಾದ ಜೇನು ಕೊಡೋ ಈ ಜೇನ್ನೊಣಗಳು ಯಾಮಾರಿದ್ರೆ ಅಷ್ಟೊಂದು ಡೇಂಜರಸ್ ಈಗಿ ಬಿಡುತ್ವೆ. ಈವತ್ತಿಗೂ ನಮ್ಮ ನಡುವೆ ಜೇನು ಹುಳುಗಳ ಬಗ್ಗೆ ಅಗಾಧ ಭಯ ಇದ್ದೇ ಇದೆ. ಅಂಥಾ ಭಯ ಬಿಟ್ಟು ನೋಡಿದರೆ ಖಂಡಿತವಾಗಿಯೂ ಅವುಗಳ ಜೀವನ ಕ್ರಮವೇ ಬೆರಗಾಗಿ ಕಾಡುತ್ತೆ.
ಮನುಷ್ಯರನ್ನೇ ಅದುರಿಸುತ್ತೆ!

ವಿಷಯ ಅದಲ್ಲ, ಜೇನು ನೊಣಗಳು ಕೇವಲ ಮನುಷ್ಯರಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಮಾತ್ರವೇ ಕಚ್ಚೋದಿಲ್ಲ. ಬದಲಾಗಿ ತನ್ನ ಮೇಲೆ ದಾಳಿ ನಡೆಸೋ ತಮ್ಮದೇ ಪ್ರಬೇಧದ ಜೇನ್ನೊಣಗಳ ಮೇಲೆಯೂ ಅವು ಪ್ರಹಾರ ನಡೆಸುತ್ತವೆ. ಪ್ರತೀ ಜೇನು ಗೂಡಿನಲ್ಲಿಯೂ ಇಂಥಾ ಆಪತ್ತಿಗಾಗೋ ಸೈನಿಕ ಹುಳುಗಳದ್ದೊಂದು ಪಡೆಯೇ ಇರುತ್ತೆ. ಅವು ಬೇರೆ ಪ್ರಬೇಧದ ಜೇನು ನೊಣಗಳು ದಾಳಿಯಿಟ್ಟಾಗ ಪ್ರವೇಶ ದ್ವಾರದಲ್ಲಿಯೇ ತಡೆದು ಹೀನಾಮಾನ ಚುಚ್ಚುತ್ತವಂತೆ. ಮನುಷ್ಯರನ್ನೇ ಮಲಗಿಸಬಲ್ಲಷ್ಟು ವಿಷ ಹೊಂದಿರೋ ಇತರೇ ಹುಳುಗಳೂ ಕೂಡಾ ಈ ಕಾರಣದಿಂದಾನೇ ಜೇನುಗಳ ತಂಟೆಗೆ ಹೋಗಲು ಹಿಂದೇಟು ಹಾಕುತ್ವೆ. ಒಟ್ಟಾರೆಯಾಗಿ ಹೇಳೋದಾದ್ರೆ, ಜೇನೆಂಬುದು ಸ್ವೀಟೂ ಹೌದು, ಘಾಟೂ ಹೌದು!
ಆದರೆ, ಈ ಜೇನು ನೊಣಗಳಿಲ್ಲದೇ ಹೋದರೆ ಈ ಜಗತ್ತಿನ ಆಹಾರ ಚಕ್ರ ಸಾರಾಸಗಟಾಗಿ ಸರ್ವನಾಶವಾಗುತ್ತೆ. ಇಂಥಾ ಜೇನು ನೊಳಗಳಿಂದಲೇ ಪ್ರಕೃತಿಯ ಬಹುಪಾಲು ಪರಾಗಸ್ಪರ್ಶ ಕ್ರಿಯೆ ನಡೆಯುತ್ತೆ. ನಮ್ಮಲ್ಲಿರುವ ಬಹುತೇಕ ಬೆಳೆಗಳು, ಕಾಡಿನ ಸಸ್ಯಗಳು ಹೂ ಬಿಟ್ಟು ಹಣ್ಣಾಗಿ ಬೀಜೋತ್ಪತ್ತಿಯಾಗಬೇಕೆಂದರೆ, ಜೇನಿನ ಇರುವಿಕೆ ಅಪೇಕ್ಷಣೀಯ. ಯಾಕೆಂದರೆ, ಬಹುತೇಕ ಹೂವುಗಳು ಪ್ರಾಕೃತಿಕವಾಗಿ ಸ್ವಯಂ ಪರಾಗ ಸ್ಪರ್ಶ ಮಾಡಿಕೊಳ್ಳುವ ಗುಣ ಹೊಂದಿರೋದಿಲ್ಲ. ಅದಕ್ಕೆ ಜೇನಿನ ಸಾಥ್ ಬೇಕೇ ಬೇಕು. ಒಂದು ವೇಳೆ ಒಂದಸು ಪ್ರದೇಶದಲ್ಲಿ ಜೇನು ಸುಳಿಯದೇ ಹೋದರೆ ಅದೆಷ್ಟೋ ಸಂತತಿಯ ಗಿಡ ಮರಗಳ ಸಂತಾನ ಅಲ್ಲಿಗೇ ನಿಂತು ಹೋಗುತ್ತೆ. ಅರಳಿದ ಹೂಗಳು ಫಲ ಕಟ್ಟದೆಯೇ ಭೂಮಿ ಸೇರುತ್ತೆ. ಹೀಗೇ ಒಂದಷ್ಟು ವರ್ಷ ಮುಂದುವರೆದರೆ ಬಹುಪಾಲು ಕಾಡು ಸರ್ವನಾಶವಾಗುತ್ತೆ.
ಅದ್ಭುತ ಜೀವನಕ್ರಮ!

ನಮ್ಮ ನಡುವೆ ಅಂದಾಜಿಗೆ ನಿಲುಕದಷ್ಟು ಪ್ರಮಾಣದ ಕೀಟಗಳಿದ್ದಾವೆ. ವಿವಿಧ ಉತ್ಪನ್ನಗಳ ಸಲುವಾಗಿ ಮುಖ್ಯವಾಗಿ ಮೂರು ರೀತಿಯ ಕೀಟಗಳನ್ನು ಅವಲಂಬಿಸಲಾಗಿದೆ. ರೇಷ್ಮೆ ಹುಳು, ಅರಗು ಕೀಟ ಹಾಗೂ ಮಧು ಜೇನು. ಇವುಗಳಲ್ಲಿ ಜೇನುನೊಣದ ದಣಿವರಿಯದ ಜೀವನದಿಂದ ಉಂಟಾಗುವ ಲಾಭಗಳ ಋಣ ನಮ್ಮೆಲ್ಲರ ಮೇಲಿದೆ. ಜೇನುನೊಣದ ದುಡಿಮೆ ಮತ್ತು ಉಪಯುಕ್ತತೆಯ ಬಗ್ಗೆ ಅನೇಕ ಕಥೆಗಳು ಜಾನಪದದಲ್ಲಿವೆ. ಅವುಗಳ ಜೀವನ ಕ್ರಮದ ಬಗ್ಗೆ ಕಣ್ಣಿಟ್ಟಿದ್ದ ವಿಜ್ಞಾನಿಗಳೇ ಬೆಕ್ಕಸ ಬೆರಗಾಗಿದ್ದೂ ಇದೆ. ಸಾಮಾನ್ಯವಾಗಿ ಎಲ್ಲ ಕ್ರಿಮಿ ಕೀಟ, ಜೀವಿಗಳಿಗೂ ಕೂಡಾ ತಮ್ಮದೇ ಆದಂಥಾ ಜೀವನ ಕ್ರಮಗಳಿರುತ್ತವೆ. ಅವುಗಳ ಆಹಾರ ಪದ್ಧತಿ, ಅದನ್ನು ಸಂಪಾದಿಸುವ ರೀತಿಯೆಲ್ಲ ಭಿನ್ನವಾಗಿರುತ್ತವೆ. ಆದರೆ ಈ ಜೇನುಗಳು ಮಾತ್ರ ಎಲ್ಲವನ್ನೂ ಮೀರಿದ ಬೆರಗಿನ ಜೀವಿಗಳಾಗಿ ಗೋಚರಿಸುತ್ತವೆ.
ಮೇಲು ನೋಡಕ್ಕೆ ಮಾತ್ರವೇ ಜೇನು ನೊಣಗಳು ಸಾಮಾನ್ಯ ಕೀಟಗಳಂತೆ ಕಾಣಿಸುತ್ತವೆ. ಜಗತ್ತಿನಲ್ಲಿರುವ ನಾನಾ ವೆರೈಟಿಯ ಕೀಟಗಳಂತೆ, ಜೇನುನೊಣಗಳೂ ಕೂಡಾ ತಲೆ, ಎದೆ, ಹೊಟ್ಟೆ ಎಂಬ ಮೂರು ಪ್ರತ್ಯೇಕ ಬಾಗಗಳುಳ್ಳ ದೇಹವನ್ನು ಒಳಗೊಂಡಿರುತ್ತವೆ. ತಲೆಯಿಂದ ಒಂದು ಜೊತೆ ಮೀಸೆಯಂಥಾ ರಚನೆಗಳು ಉತ್ಪತ್ತಿಯಾಗಿರುತ್ತವೆ. ಎದೆಯ ಭಾಗದಲ್ಲಿ ಮೂರು ಜೊತೆ ಒಂದಕ್ಕೊಂದು ಹೊಂದಿಕೊಂಡಂಥಾ ಕಾಲುಗಳು ಇರುತ್ತವೆ. ಇದಲ್ಲದೆ ಇತರ ಕೀಟಗಳಂತೆ ಜೇನುನೊಣ ಕೂಡಾ ಭ್ರೂಣ ಹಾಗೂ ಪ್ರೌಢಾವಸ್ಥೆಗಳ ನಡುವಿನ ನೇಕ ಹಂತಗಳನ್ನು ಹಾದು ಹೋಗುತ್ತವೆ. ಆದರೆ ಈ ಜೇನಿನ ಜೀವನ ಕ್ರಮ ಮತ್ತು ಶ್ರಮವಿರದ ದುಡಿಮೆಯ ಗುಣ ಮಾತ್ರ ಜಗತ್ತಿನ ಕೋಟ್ಯಂತರ ಕೀಟ ಪ್ರಬೇಧಗಳಲ್ಲಿ ಅವುಗಳನ್ನು ಭಿನ್ನವಾಗಿಸಿವೆ.
ಒಟ್ಟಾರೆಯಾಗಿ ಈ ಜೇನುಗಳ ಜೀವನ ಕ್ರಮವೇ ಸಂಪೂರ್ಣವಾಗಿ ಭಿನ್ನವಾಗಿದೆ. ಆಹಾರದ ಸಂಗ್ರಹ, ಗೂಡು ಹಾಗೂ ಸ್ವಂತದ ಜೀವದ ರಕ್ಷಣೆಗಳೇ ಮೇಲ್ಮಟ್ಟದ ಪ್ರಾಣಿಗಳ ಪ್ರಧಾನ ಆಧ್ಯತೆಗಳಾಗಿರುತ್ತವೆ. ಇದೆಲ್ಲದರ ಜೊತೆಗೆ ವಂಶ ಅಡೆತಡೆಯಿಲ್ಲದೇ ಅಭಿವೃದ್ಧಿ ಹೊಂದಬೇಕೆಂಬ ನಿಟ್ಟಿನಲ್ಲಿ ಒಂದಷ್ಟು ನಿಯಮಿತ ಜೀವನ ಪದ್ಧತಿಗಳು ಪ್ರಾಣಿಗಳ ಕ್ರಮವಾಗಿರುತ್ತದೆ. ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳಲ್ಲಿ ಬಲವಿರುವುದರಿಂದ ಇವು ಸಮಸ್ಯೆಯಾಗಿರುವುದಿಲ್ಲ. ಆದರೆ ಸಣ್ಣ ಪ್ರಾಣಿಗಳಲ್ಲಿ ವೈರಿಗಳನ್ನು ಎದುರಿಸುವ ಸಾಮಾನ್ಯ ಸಾಮರ್ಥ್ಯವಿರುವುದಿಲ್ಲ. ಜೀವನದ ಪ್ರತಿಯೊಂದು ಪ್ರಕ್ರಿಯೆ ಸಹ ಇವುಗಳಿಗೆ ದೊಡ್ಡ ಪ್ರಾಣಿಗಳಿಗಿಂತಲೂ ಕಷ್ಟ. ಆದರೆ ಪುಟ್ಟದಾಗಿರುವ ಕೀಟಗಳೇ ಪ್ರಾಣಿಗಳಿಗಿಂತಲೂ ಹೆಚ್ಚಾಗಿ ಈ ಪ್ರಕೃತಿಗೆ ಸಹಾಯಕವಾಗಿರುತ್ತವೆ. ಅನಿವಾರ್ಯವಾಗಿರುತ್ತವೆ.
ಸಂಘ ಜೀವಿಗಳು

ಜೇನು ನೊಣಗಳು ಕೇವಲ ಕೆಲಸಗಾರಿಕೆಗೆ ಮಾತ್ರವಲ್ಲ, ಅದೇನೇ ಬಂದರೂ ಒಗ್ಗಟ್ಟಾಗಿರುವ ಗುಣಕ್ಕೂ ಕೂಡಾ ಹೆಸರುವಾಸಿಯಾಗಿವೆ. ಜೇನು ನೊಣಗಳು ಕೇವಲ ಆತ್ಮರಕ್ಷಣೆಯಷ್ಟೇ ಅಲ್ಲದೇ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಂಘ ಜೀವನವನ್ನು ಅವಲಂಬಿಸಿಕೊಂಡಿರುತ್ತವೆ. ಇವು ಅತ್ಯಂತ ಸಂಘಟಿತ ರೀತಿಯ ಕೆಲಸ ಕಾರ್ಯಗಳ ವಿಭಜನೆಯ ನೆಲೆಗಳಲ್ಲಿ ವಾಸಿಸುತ್ತವೆ. ಇಂಥಾ ಜೇನು ನೊಣಗಳಲ್ಲಿ ಮೂರು ವಿಭಾಗಗಳಿರುತ್ತವೆ. ರಾಣಿ ಜೇನುನೊಣ, ಕೆಲಸಗಾರ್ತಿ ಜೇನುನೊಣಗಳು ಮತ್ತು ಗಂಡು ಜೇನುನೊಣಗಳಾಗಿ ಅವುಗಳನ್ನು ವಿಂಗಡಿಸಬಹುದು. ಸಾಧಾರಣವಾಗಿ ಒಂದು ರಾಣಿ ಜೇನುನೊಣದ ಪರಿವಾರದಲ್ಲಿ ಮೂರು ಸಾವಿರದವರೆಗೆ ಕೆಲಸಗಾರ ಜೇನುನೊಣಗಳು ಹಾಗೂ ಸುಮಾರು ನೂರರಷ್ಟು ಗಂಡು ಜೇನುನೊಣಗಳೂ ಇರುತ್ತವೆ. ಇವೆಲ್ಲವುಗಳು ಕೆಲಸವನ್ನು ಹಂಚಿಕೊಂಡು, ತಮ್ಮ ಪಾಲಿನದ್ದನ್ನು ಅವಿರತವಾಗಿ ಮಾಡೋ ವಿಚಾರೆವೇ ನಿಜಕ್ಕೂ ಅಚ್ಚರಿ ಮೂಡಿಸುತ್ತೆ.
ಸಾಮಾನ್ಯವಾಗಿ, ಒಂದು ಜೇನುಸಂಸಾರದಲ್ಲಿ ಒಂದೇ ರಾಣಿ ನೊಣ ಇರುತ್ತದೆ. ಇದು ಉಳಿದೆರಡು ನೊಣಗಳಿಗಿಂತ ಆಕಾರದಲ್ಲಿ ದೊಡ್ಡದಾಗಿರುತ್ತದೆ. ಸ್ವಲ್ಪ ಉದ್ದವಾಗಿ ಮೈ ಬಣ್ಣ ಕಪ್ಪಾಗಿ ಫಳ ಫಳನೆ ಹೊಳೆಯುವಂತಿರುತ್ತೆ. ಇದರ ಕಾಲುಗಳು ತುಸು ಅರಶಿನ ಬಣ್ಣದಿಂದ ಕೂಡಿರುತ್ತದೆ. ಮೈ ಮೇಲೆ ಅತಿ ಸೂಕ್ಷ್ಮವಾದ ತೆಳ್ಳಗಿನ ಕೂದಲುಗಳು ಇರುತ್ತವೆ. ಈ ರಾಣಿ ನೊಣ ಗಂಡು ನೊಣಗಳೊಡನೆ ಕೂಡಿಕೊಂಡು ಆಕಾಶದಲ್ಲಿ ಜೋಡಿಯಾಗಲು ಗೂಡಿನಿಂದ ಮಧ್ಯಾಹ್ನದ ಮೇಲೆ ಹೊರಗೆ ಹಾರಿಹೋಗುತ್ತವೆ. ಯಾವ ಗಂಡು ನೊಣವೂ ರಾಣಿಯನ್ನು ಓಟದಲ್ಲಿ ಸೋಲಿಸಿ ಹಿಡಿಯುವುದೋ ಅದರೊಡನೆ ಸಂಸಾರ ನಡೆಸಲು ಅರ್ಹವಾಗುತ್ತದೆ. ರಾಣಿ ನೊಣ ಯಾವತ್ತಿಗೂ ಬಲಹೀನ ನೊಣಗಳಿಗೆ ಒಲಿಯೋದಿಲ್ಲ. ಬಲಿಷ್ಠ ಗಂಡು ಜೇನು ನೊಣಗಳು ಮಾತ್ರವೇ ರಾಣಿ ಜೇನು
ನೊಣವನ್ನು ಪಡೆಯಲು ಸಾಧ್ಯ!

ಹೀಗೆ ರಾಣಿ ನೊಣಕ್ಕೆ ಸಂಗಾತಿ ಸಿಕ್ಕ ನಂತರ ಗೂಡೊಳಗಿನ ವಾತಾವರಣವೇ ಬದಲಾಗುತ್ತೆ. ರಾಣಿ ನೊಣ ಗಂಡು ನೊಣದೊಡನೆ ಜೋಡಿಯಂತೆ ಗೂಡಿನೊಳಗೆ ಪ್ರವೇಶಿಸಿದಾಗ ರಾಣಿಯ ಶುಶ್ರೂಷೆ ಗೆ ಕೆಲಸಗಾರ ನೊಣಗಳು ಮುಂದಾಗುತ್ತವೆ. ನಂತರ ರಾಣಿ ಮೊಟ್ಟೆಯಿಡಲು ಪ್ರಾರಂಭಿಸಿದ ನಂತರ ದು ಮತ್ತೆ ಗಂಡು ನೊಣಗಳೊಡನೆ ಜೋಡಿಯಾಗಲು ಸಾಧ್ಯವಾಗೋದಿಲ್ಲ. ಹೀಗೆ ಗಂಡು ನೊಣಕ್ಕೆ ಜೋಡಿಯಾಗಿ ಒಂದೆರಡು ದಿನಗಳಲ್ಲಿ ರಾಣಿ ಜೇನು ಗರ್ಭಗಟ್ಟುತ್ತೆ. ನಂತರ ಪ್ರಕೃತಿ ನಿಯಮದಂತೆ ಗರ್ಭಿಣಿಯಾದ ರಾಣಿನೊಣ ಕೆಲಸಗಾರ ನೊಣಗಳನ್ನು ಸಂಪೂರ್ಣವಾಗಿ ಅವಲಂಬಿಸುತ್ತೆ. ಅವು ಕೊಡುವ ಆಹಾರದ ಪ್ರಮಾಣ ಮತ್ತು ಗುಣಮಟ್ಟದ ಆಧಾರದಲ್ಲಿ ಎರಿಯಲ್ಲಿರುವ ಖಾಲಿ ಕಣಗಳಲ್ಲಿ ಸೂಜಿಯಾಕಾರದ ಮೊಟ್ಟೆಗಳನ್ನಿಡುತ್ತದೆ. ಹೀಗೆ ಗರ್ಭಿಣಿಯಾದ ರಾಣಿ ನೊಣದಲ್ಲಿ ಲಕ್ಷಾಂತರ ಮೊಟ್ಟೆಗಳನ್ನಿಡುವಷ್ಟು ಗಂಡು ನೊಣದ ವೀರ್ಯಾಣುಗಳು ಸಂಗ್ರಹವಾಗಿರುತ್ತದೆ. ಅದೂ ಕೂಡಾ ಈ ಪ್ರಕೃತಿಯ ಅಚ್ಚರಿಯಾಗಿ ಕಾಣುತ್ತೆ.
ರಾಣಿಯೇ ಜೀವಾಳ








