ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

wonderfull facts: ನಿಮ್ಮನ್ನು ಚಕಿತಗೊಳಿಸಬಲ್ಲ ಚಿತ್ರವಿಚಿತ್ರ ಸುದ್ದಿಗಳು!

Majja Webdeskby Majja Webdesk
25/03/2025
in Majja Special
Reading Time: 1 min read
wonderfull facts: ನಿಮ್ಮನ್ನು ಚಕಿತಗೊಳಿಸಬಲ್ಲ ಚಿತ್ರವಿಚಿತ್ರ ಸುದ್ದಿಗಳು!

-ಓದಿದರೆ ಬೆರಗಾಗೋದು ಗ್ಯಾರಂಟಿ!

-ಜಗತ್ತಿನಲ್ಲಿ ಇಂಥಾದ್ದೆಲ್ಲ ನಡೆಯುತ್ತಾ? 

 

ಸಣ್ಣದೊಂದು ಕುತೂಹಲವನ್ನು ನಮ್ಮೊಳಗೆ ಸದಾ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳದೇ ಹೋದರೆ ಬದುಕು ಒಂದೊಂದು ಘಟ್ಟದಲ್ಲಿ ತೀರಾ ಬೋರು ಹೊಡೆಸಿ ಬಿಡುತ್ತೆ. ಹೊಸತನ್ನು ಧ್ಯಾನಿಸುವ ಮನಸೊಂದಿದ್ದರೂ ಸಾಕು; ನಮ್ಮೊಳಗೊಂದು ಉತ್ಸಾಹ ಸದಾ ಜೀವಂತವಾಗಿರುತ್ತೆ. ನಿಮ್ಮೊಳಗೂ ಅಂಥಾದ್ಗದೊಂದು ಬೆರಗಿನ ಭಾವ ಇದೆಯೆಂದಾದರೆ, ಕೆಳಗೆ ಕೊಟ್ಟಿರುವ ಒಂದಷ್ಟು ವಿಚಾರಗಳು ನಿಜಕ್ಕೂ ನಿಮ್ಮನ್ನು ಅಚ್ಚರಿಗೆ ದೂಡುತ್ತವೆ. ನಾನಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚುತ್ತವೆ. ಈ ಜೀವನದಲ್ಲೇನಿದೆ ಎಂಬ ನಿರಾಶಾ ಭಾವವನ್ನೆಲ್ಲ ಒಂದೇ ಸಲಕ್ಕೆ ನಿವಾಳಿಸಿ ಎಸೆಯಬಲ್ಲ ಸಂಗತಿಗಳು ಈ ಜಗತತ್ತಿನಲ್ಲಿದ್ದಾವೆ.

ಅದರಲ್ಲೊಂದಷ್ಟು ನಮ್ಮ ಬದುಕಿನ ಭಾಗವಾಗಿದ್ದರೂ ಕೂಡಾ ನಾವು ಯಾವತ್ತಿಗೂ ಅದರತ್ತ ಅಪ್ಪಿ ತಪ್ಪಿಯೂ ಆಲೋಚಿಸಿರೋದಿಲ್ಲ. ನಿಖರವಾಗಿ ಹೇಳಬೇಕೆಂದರೆ ನಮ್ಮ ಸುತ್ತಮುತ್ತಲಿರುವ ಅನೇಕ ವಿದ್ಯಮಾನಗಳ ಹಿಂದೆ, ಜೀವಿಗಳ ಹಿಂದೆ ಚಕಿತಗೊಳಿಸಬಲ್ಲ ಅದೆಷ್ಟೋ ವಿಚಾರಗಳಿರುತ್ತವೆ. ಆ ಬಗ್ಗೆ ಒಂದಷ್ಟು ಮಂದಿ ಅವಿರತವಾಗಿ ಸಂಶೋಧನೆ, ಅಧ್ಯಯನಗಳನ್ನು ನಡೆಸುತ್ತಿರುಉತ್ತಾರೆ. ಅದರ ಫಲವಾಗಿಯೇ ಒಂದಷ್ಟು ಚೆಂದದ ವಿಚಾರಗಳು ಆಗಾಗ ನಮ್ಮೆಲ್ಲರ ಬೊಗಸೆ ತುಂಬಿಕೊಳ್ಳುತ್ತವೆ.

ಪಾರಿವಾಳದ ಕಕ್ಕದ ಕಿಮ್ಮತ್ತು!


ಪಾರಿವಾಳಗಳು ಎಲ್ಲ ಕಾಲಮಾನದಲ್ಲಿಯೂ ಪರಿಚಿತವಾಗಿದ್ದ, ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ಪರಿಚಿತ ಪಕ್ಷಿಗಳು. ಪಾರಿವಾಳ ಈವತ್ತಿಗೂ ಶಾಂತಿಯ ಸಂಕೇತವಾಗಿಯೇ ಬಿಂಬಿಸಿಕೊಂಡಿದೆ. ಕೊಂಚ ಜಾಗ ಸಿಕ್ಕರೆ ಮನುಷ್ಯರಿರೋ ವಾತಾವರಣದಲ್ಲಿಯೇ ಗೂಡು ಕಟ್ಟಿಕೊಂಡು ಬಿಡಾರ ಹೂಡುವ, ಅಲ್ಲಿಯೇ ಸಂತಾನಾಭಿವೃದ್ಧಿಯನ್ನೂ ನಡೆಸಿಬಿಡುವ ಪಾರಿವಾಳಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮನೆಯ ವಾತಾವರಣದಲ್ಲಿ ಅವಿದ್ದರೆ ಖುಷಿಯೇ. ಆದ್ರೆ ಅವುಗಳ ಹಿಕ್ಕೆಯ ಕಾಟವನ್ನ ಮಾತ್ರ ಸಹಿಸೋಕಾಗೋದಿಲ್ಲ ಅನ್ನೋದು ಪಾರಿವಾಳಗಳ ಮೇಲಿರೋ ಕಾಮನ್ ಕಂಪ್ಲೇಂಟು!

ಆದ್ರೆ ಪಾರಿವಾಳಗಳ ಹಿಕ್ಕೆ, ಅರ್ಥಾತ್ ಕಕ್ಕ ನೀವೆಣಿಸಿರುವಷ್ಟು ನಿಕೃಷ್ಟವಲ್ಲ. ನಿಮ್ಮ ಕಣ್ಣಿಗೆ ಅಸಹ್ಯವಾಗಿ ಕಾಣಿಸೋ ಪಾರಿವಾಳದ ಹಿಕ್ಕೆಗೆ ಒಂದು ಕಾಲದಲ್ಲಿ ಅದೆಂಥಾ ಗೌರವ ಇತ್ತನ್ನೋದು ಗೊತ್ತಾದರೆ ಯಾರಿಗೇ ಆದ್ರೂ ಪಾಪಪ್ರಜ್ಞೆ ಕಾಡದಿರೋದಿಲ್ಲ. ಯಾಕಂದ್ರೆ ಹದಿನೆಂಟನೇ ಶತಮಾನದಲ್ಲಿ ಒಬ್ಬ ರಾಜ ಪಾರಿವಾಳದ ಕಕ್ಕವನ್ನು ಅಪಾರವಾಗಿ ಗೌರವಿಸಿದ್ದ. ಆತನಿಗೆ ಯಾವ ಪರಿ ಗೌರವ ಇತ್ತೆಂದರೆ, ಪಾರಿವಾಳದ ಹಿಕ್ಕೆಯನ್ನು ರಾಜ ಸಂಪತ್ತೆಂದು ಘೋಷಣೆ ಮಾಡಿ ಬಿಟ್ಟಿದ್ದ!

ಒಂದು ಸಂಸ್ಥಾನದ ರಾಜನೇ ಈ ಪರಿಯಾಗಿ ಗೌರವ ಕೊಡಬೇಕೆಂದರೆ ಪಾರಿವಾಳದ ಹಿಕ್ಕೆಗೆ ಎಂಥಾ ಪವರ್ ಇರಬೇಡ. ಹಾಗಾದ್ರೆ ಪಾರಿವಾಳಗಳ ಹಿಕ್ಕೆಯಲ್ಲಿ ಆ ಥರದ ಪವರ್ ಏನಿತ್ತು ಅನ್ನೋ ಪ್ರಶ್ನೆ ಮೂಡಿಕೊಳ್ಳುತ್ತೆ. ಈ ನಿಟ್ಟಿನಲ್ಲಿ ಹೇಳೋದಾದ್ರೆ ಪಾರಿವಾಳದ ಹಿಕ್ಕೆಗಳನ್ನು ಆ ಕಾಲದಲ್ಲಿ ಗನ್ ಪೌಡರ್ ಮಾಡಲು ಬಳಸುತ್ತಿದ್ದರಂತೆ. ಯುದ್ಧ ಕಾಲದಲ್ಲಿ ಅದರ ಅವಶ್ಯಕತೆ ತೀವ್ರವಾಗಿದ್ದರಿಂದ ಪಾರಿವಾಳದ ಹಿಕ್ಕೆಗಳಿಗೆ ಭಾರೀ ಬೇಡಿಕೆ ಬಂದಿತ್ತಂತೆ. ಶತ್ರು ಪಾಳೆಯದ ವಿರುದ್ಧ ಯುದ್ಧ ಸಾರಲು ಬೇಕಾದ ಐಟಮ್ಮಿನ ಕಚ್ಚಾ ವಸ್ತುವಾದ ಪಾರಿವಾಳದ ಹಿಕ್ಕೆಯನ್ನ ಆ ರಾಜ ರಾಜ ಸಂಪತ್ತೆಂದು ಘೋಷಣೆ ಮಾಡಿದ್ದನೆಂಬ ಉಲ್ಲೇಖವಿದೆ!

ಅಪಹರಣವೂ ಲೀಗಲ್!

ಜಗತ್ತು ಅದೇನೇ ಮುಂದುವರೆದಿದೆ ಅಂದ್ರೂ ಹಲವಾರು ವಿಷಯಗಳಲ್ಲದು ಹಿಂದೆಯೇ ನಿಂತು ಬಿಟ್ಟಿದೆ. ಕೆಲ ಪಿಡುಗುಗಳಿಂದ ಅದೆಷ್ಟೇ ವಿಮೋಚನೆಗೊಳ್ಳಲು ಹವಣಿಸಿದ್ರೂ ಆಚರಣೆಗಳ ಹಣೆಪಟ್ಟಿಯಡಿಯಲ್ಲಿ ಅವು ಜೀವಂತವಾಗಿವೆ. ಇಡೀ ಜಗತ್ತಿನ ತುಂಬಾ ಹೆಣ್ಣನ್ನು ಭೋಗದ ವಸ್ತುವಾಗಿಯಷ್ಟೇ ಕಾಣೋ ಮನಸ್ಥಿತಿ ಕೂಡಾ ಆ ಲಿಸ್ಟಿಗೆ ಖಂಡಿತಾ ಸೇರಿಕೊಳ್ಳುತ್ತೆ. ಈವತ್ತಿಗೆ ಹೆಣ್ಣು ಯಾವುದರಲ್ಲಿಯೂ ಪುರುಷರಿಗೆ ಕಡಿಮೆಯಲ್ಲ ಅನ್ನೋದು ಸಾಬೀತಾಗಿದೆ. ಆದರೂ ಹೆಣ್ಣನ್ನು ಅಡಿಯಾಳಾಗಿಸಿಕೊಳ್ಳೋ ಹುನ್ನಾರಗಳು ಮಾತ್ರ ಹಲವು ಮುಖವಾಡ ಧರಿಸಿ ಜೀವಂತವಾಗಿವೆ.

ಪ್ರಸ್ತುತ ಪ್ರತೀ ದೇಶಗಳಲ್ಲಿಯೂ ಹೆಣ್ಣು ಮಕ್ಕಳ ಮೇಲಾಗೋ ದೌರ್ಜನ್ಯ ತಡೆಗೆ ಬಿಗುವಾದ ಕಾನೂನು ಕಟ್ಟಳೆಗಳಿವೆ. ಭಾರತವೂ ಅದಕ್ಕೆ ಹೊರತಾಗಿಲ್ಲ. ಮಹಿಳೆಯರನ್ನು ಕಿಡ್ನಾಪ್‌ನಂಥಾ ಹಿಂಸೆಗೊಳಪಡಿಸಿದರಂತೂ ಕಾನೂನು ನರಕ ತೋರಿಸುತ್ತೆ. ಈವತ್ತಿಗೆ ಮಹಿಳಾ ಸಂಕುಲ ಒಂದಷ್ಟು ನಿರಾಳವಾಗಿರೋದು ಇಂಥಾದ್ದರಿಂದಲೇ. ಹೀಗೆ ಜಗತ್ತೆಲ್ಲ ಹೆಣ್ಣಿನ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವಾಗ ಅದೇ ಜಗತ್ತಿನ ಭಾಗವಾಗಿರೋ ಒಂದು ದೇಶದಲ್ಲಿ ಹುಡುಗೀರನ್ನ ಕಿಡ್ನಾಪ್ ಮಾಡೋದು ಲೀಗಲ್ ಆಗಿದೆ ಅಂದ್ರೆ ಅಚ್ಚರಿಯಾಗದಿರೋದಿಲ್ಲ.

ಇಂಥಾದ್ದೊಂದು ಅನಿಷ್ಟದ ರಿವಾಜು ಜಾರಿಯಲ್ಲಿರೋದು ಕಿರ್ಗಿಸ್ತಾನ್ ದೇಶದಲ್ಲಿ. ಸಾಮಾನ್ಯವಾಗಿ ಹೆಣ್ಣೊಬ್ಬಳನ್ನು ಒಲಿಸಿಕೊಂಡು ಜೊತೆಯಾಗಿ ಬದುಕೋದೊಂದು ಸಾಹಸ. ಹಾಗೊಂದು ವೇಳೆ ಪ್ರೀತಿ ಫಲಿಸಿದರೂ ಮದುವೆಯ ಹೊಸ್ತಿಲು ದಾಟೋದು ಮತ್ತೊಂದು ಸಾಹಸ. ಆದ್ರೆ ಕಿರ್ಗಿಸ್ತಾನದಲ್ಲಿ ಮಾತ್ರ ಮನಸು ಗೆದ್ದ ಹುಡುಗಿಯನ್ನು ಸ್ವಂತವಾಗಿಸಿಕೊಳ್ಳೋದು ಸಲೀಸು. ಯಾವುದೇ ಹುಡುಗನಿಗೆ ಹುಡುಗಿಯೊಬ್ಬಳು ಇಷ್ಟವಾದರೆ ಆಕೆಯನ್ನು ಕಿಡ್ನಾಪ್ ಮಾಡಿ ನಾಲಕೈದು ದಿನ ಅಜ್ಞಾತ ಸ್ಥಳದಲ್ಲಿಟ್ಟರೆ ಮದುವೆಯ ಮೊದಲ ಹಂತ ಮುಕ್ತಾಯವಾದಂತೆಯೇ.

ಹೀಗೆ ಮನ ಗೆದ್ದ ಹುಡುಗಿಯನ್ನು ಕಿಡ್ನಾಪ್ ಮಾಡೋಕೆ ಹುಡುನಿಗೆ ಆತನ ಸ್ನೇಹಿತರು ಸಹಾಯ ಮಾಡ್ತಾರಂತೆ. ಹಾಗೆ ಯಶಸ್ವಿಯಾಗಿ ಕಿಡ್ನಾಪ್ ಮಾಡಿದ ನಂತರ ಸ್ನೇಹಿತರೇ ಹುಡುಗಿಯ ಮನೆ ಮಂದಿಗೆ ವಿಷಯ ಮುಟ್ಟಿಸ್ತಾರೆ. ಒಂದು ವೇಳೆ ಕಿಡ್ನಾಪ್ ಆದ ಹುಡುಗಿಗೆ ಆ ಹುಡುಗ ಇಷ್ಟವಾಗಿಲ್ಲ ಅಂತಿಟ್ಕೊಳ್ಳಿ, ಆ ನಂತರದಲ್ಲಿ ನೆಮ್ಮದಿಯಾಗಿರೋ ಅವಕಾಶವನ್ನಾಕೆ ಕಳೆದುಕೊಳ್ತಾಳೆ. ಆಕೆಯನ್ನು ಆ ನಂತರದಲ್ಲಿ ಯಾರೂ ಮದುವೆಯಾಗೋದಿಲ್ಲ. ದುರಂತವೆಂದರೆ, ಹೆಣ್ಣುಮಕ್ಕಳನ್ನು ನರಕಕ್ಕೆ ತಳ್ಳುವ ಈ ಪ್ರಕ್ರಿಯೆಯನ್ನು ಆ ದೇಶ ಇನ್ನೂ ಕಾನೂನುಸಮ್ಮತವಾಗಿ ಕಾಯ್ದುಕೊಂಡು ಬಂದಿದೆ.

ಐಸ್ ಕ್ರೀಮಿನ ಜನನ


ಐಸ್‌ಕ್ರೀಮ್ ಎಂದಾಕ್ಷಣ ಬಾಯಲ್ಲಿ ನೀರೂರಿಸಿಕೊಳ್ಳದಿರುವವರೇ ವಿರಳ. ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೂ ಐಸ್ ಕ್ರೀಂ ಅಭಿಮಾನಿಗಳಿದ್ದಾರೆ. ಈಗಂತೂ ನಾನಾ ವೆರೈಟಿಗಳ ಈಸ್ ಕ್ರೀಂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದು ಫ್ಲೇವರ್ ಇಷ್ಟವಿಲ್ಲದಿದ್ದರೆ ನೂರಾರು ಫ್ಲೇವರುಗಳು ನಿಮಗಾಗಿ ಕಾದು ಕೂತಿರುತ್ತವೆ. ಅದರಲ್ಲಿ ಒಂದಷ್ಟು ಫ್ಲೇವರುಗಳು ಇಷ್ಟವಿಲ್ಲ ಅನ್ನುವವರು ಸಿಗಬಹುದು. ಆದರೆ ಸಾರಾಸಗಟಾಗಿ ಐಸ್ ಕ್ರೀಮನ್ನೇ ಒಲ್ಲೆ ಅನ್ನುವರು ಸಿಗೋದು ಅಪರೂಪ. ಇಂಥಾದ್ದೊಂದು ಸಾರ್ವಕಾಲಿಕ ಫೇವರಿಟ್ ತಿನಿಸು ಹುಟ್ಟಿಕೊಂಡಿದ್ದು ಹೇಗೆ? ಇಂಥಾ ಕಲ್ಪನೆ ಮೊದಲು ಮೂಡಿಕೊಂಡಿದ್ದು ಯಾವ ಕಾಲಮಾನದಿಂದ ಅನ್ನೋ ಬೆಚ್ಚಗಿನ ಆಲೋಚನೆಗೆ ತಣ್ಣಗಿನ ಐಸ್‌ಕ್ರೀಮು ಕಿಚ್ಚು ಹಚ್ಚುತ್ತೆ.
ಈ ನಿಟ್ಟಿನಲ್ಲಿ ಹುಡುಕಾಡಿದರೆ ಇಂಥಾದ್ದೇ ಕಾಲಮಾನದಲ್ಲಿ ಐಸ್ ಕ್ರೀಂ ಆವಿಷ್ಕರಿಸಲ್ಪಟ್ಟಿತು ಅಂತ ನಿಖರವಾಗಿ ಹೇಳುವಂಥಾ ಅಂಶಗಳು ಪತ್ತೆಯಾಗೋದಿಲ್ಲ. ಯಾಕಂದ್ರೆ, ಅದರ ಹುಟ್ಟು ಮನುಷ್ಯನ ರೂಪಾಂತರಗಳಷ್ಟೇ ಸಂಕೀರ್ಣವಾಗಿದೆ. ನಾನಾ ಬಗೆಯಲ್ಲಿ ಟ್ರೈ ಮಾಡುತ್ತಾ, ಹಲವಾರು ಕಾಲಮಾನಗಳಲ್ಲಿ ಹೈ ಫೈ ಜನರ ನಾಲಗೆಗಳನ್ನು ತಣ್ಣಗಾಗಿಸುತ್ತಾ ರುಚಿ ಹತ್ತಿಸಿದ ಐಸ್ ಕ್ರೀಮಿಗೆ ಶತಮಾನಗಳಷ್ಟು ಹಿಂದಿನ ಐತಿಹ್ಯವಿದೆ!
ಅದರ ಜಾಡು ಕ್ರಿಸ್ತಪೂರ್ವ ೨೦೦ನೇ ಶತಮಾನಕ್ಕೆ ಕೊಂಡೊಯ್ದು ನಿಲ್ಲಿಸುತ್ತೆ. ಆಹಾರಪ್ರಿಯರ ದೇಶವಾದ ಚೀನಾದಲ್ಲಿಯೇ ಅದರ ಮೂಲ ಬೇರುಗಳೂ ಪತ್ತೆಯಾಗುತ್ತವೆ. ಆ ಕಾಲಮಾನದಲ್ಲಿ ಮೊದಲು ಐಸ್ ಕ್ರೀಂನ ಕಲ್ಪನೆ ಒಂದು ಮಟ್ಟಿಗೆ ವಾಸ್ತವ ರೂಪಕ್ಕಿಳಿಯಿತು ಅನ್ನಲಾಗುತ್ತೆ. ಹಾಲು ಮತ್ತು ಅಕ್ಕಿಯನ್ನು ಒಟ್ಟಿಗೆ ಬೆರೆಸಿ ಅದನ್ನು ಹಿಮದಲ್ಲಿ ಪ್ಯಾಕ್ ಮಾಡೋ ಮೂಲಕ ಮೊದಲ ಐಸ್ ಕ್ರೀಂ ಆವಿಷ್ಕರಿಸಲಾಗಿತ್ತಂತೆ. ಇನ್ನುಳಿದಂತೆ ರೋಮನ್ ರಾಜರುಗಳಿಗೆ ತಾಜಾ ಐಸ್ ಅನ್ನು ಇಂದಿನ ಐಸ್ ಕ್ರೀಮಿನಂತೆಯೇ ಮೆಲ್ಲುವ ಶೋಕಿ ಇತ್ತು. ಅದಕ್ಕಾಗಿ ಹಿಮ ಗಿರಿಗಳ ನೆತ್ತಿಗೆ ಗುಲಾಮರನ್ನು ಕಳಿಸಿ ತಾಜಾ ಐಸ್‌ಗಳನ್ನು ತರಿಸುತ್ತಿದ್ದರಂತೆ.
ಮಾರ್ಕೋ ಪೋಲೋ ಎಂಬಾತ ಚೀನಾ ಪ್ರವಾಸದ ವೇಳೆ ಐಸ್ ಕ್ರೀಮ್ ನ ಸವಿಯುಂಡು ಅದನ್ನು ಇಟಲಿಗೆ ಪರಿಚಯಿಸಿದ ಎಂಬ ನಂಬಿಕೆಯೂ ಇದೆ. ಇನ್ನು ಹತ್ತೊಂಬತ್ತನೇ ಶತನಾನದಲ್ಲಿ ಅಮೆರಿಕಾದ ಬೀದಿಗಳಲ್ಲಿ ಬಾನುವಾರದಂದು ಐಸ್ ಕ್ರೀಂ ಸೋಡಾಗಳನ್ನು ಮಾರಾಟ ಮಾಡಲಾಗುತ್ತಿತ್ತಂತೆ. ಹಾಗೆ ಕಾಲದಿಂದ ಕಾಲಕ್ಕೆ ಸಾಗಿ ಬಂದ ಐಸ್ ಕ್ರೀಮ್ ಇಂದು ಪಕ್ಕಾ ಆಧುನಿಕ ಅವತಾರದಲ್ಲಿ ಎಲ್ಲೆಡೆ ಪ್ರಚಲಿತದಲ್ಲಿದೆ. ಬಹುಶಃ ಅದೀಗ ಸ್ವಾದ ಹರಡದ ಭೂಭಾಗಗಳೇ ಪ್ರಪಂಚದಲ್ಲಿ ಸಿಗಲಿಕ್ಕಿಲ್ಲವೇನೋ…

ಸಾವಿನ ಮೀನು


ಮೀನು ಅಂದ್ರೆ ಬಾಯಲ್ಲಿ ನೀರೂರಿಸಿಕೊಳ್ಳೋರು ವಿಶ್ವದ ತುಂಬೆಲ್ಲ ತುಂಬಿಕೊಂಡಿದ್ದಾರೆ. ನಮಗೆ ಗೊತ್ತಿರೋ ಒಂದಷ್ಟು ಮೀನುಗಳನ್ನು ಹೊರತು ಪಡಿಸಿಯೂ ರುಚಿಕಟ್ಟಾದ ಇನ್ನೆಷ್ಟೋ ಮೀನುಗಳಿದ್ದಾವೆ. ಅದನ್ನು ರುಚಿಕಟ್ಟಾಗಿ ಮತ್ತೆ ಮತ್ತೆ ತಿನ್ನುವಂತೆ ಮಾಡಬಲ್ಲಂಥಾ ನಾನಾ ಪಾಕ ವಿಧಾನಗಳೂ ಇದ್ದಾವೆ. ಅಷ್ಟಕ್ಕೂ ಇಂಥಾ ಮೀನುಗಳು ಬರೀ ಬಾಯಿ ರುಚಿಗೆ ಮಾತ್ರವಲ್ಲದೆ ನಾನಾ ಔಷದೀಯ ಗುಣಗಳನ್ನೂ ಹೊಂದಿವೆ. ಆದರೆ ಕೆಲ ಮೀನುಗಳು ಕಾರ್ಕೋಟಕ ವಿಷವನ್ನೇ ಮೈ ತುಂಬಾ ತುಂಬಿಕೊಂಡಿವೆ. ಆ ಮೀನನ್ನು ತಿಂದರೆ ಮರಣ ಖಚಿತ!

ನಾವು ಪ್ರತೀ ಮೀನುಗಳೂ ತಿನ್ನಲು ಯೋಗ್ಯವಾದವುಗಳೇ ಅಂದುಕೊಂಡಿರುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಕೊಂಚ ಯಾಮಾರಿದರೂ ಕೆಲ ಮೀನುಗಳು ಜೀವವನ್ನೇ ಕಿತ್ತುಕೊಂಡು ಬಿಡುತ್ತವೆ. ಅದಕ್ಕೆ ತಾಜಾ ಉದಾಹರಣೆಯಂತಿರೋದು ಪಫರ್ ಫಿಶ್. ಇಂಥಾ ಮೀನುಗಳು ಆಗಾಗ ಮೀನುಗಾರರ ಬಲೆಗೆ ಸಿಕ್ಕಿ ಸುದ್ದಿಯಲ್ಲಿರುತ್ತವೆ. ಬಾಲ್‌ನಂಥಾ ಆಕಾರದಲ್ಲಿ ಮೈ ತುಂಬಾ ಮುಳ್ಳುಗಳನ್ನ ಹೊಂದಿರೋ ಈ ಮೀನುಗಳನ್ನ ನೋಡಿದರೇನೇ ಭಯವಾಗುತ್ತೆ. ಒಂದು ವೇಳೆ ಯಾರಾದರೂ ಮೂರ್ಖತನದಿಂದ ಅದನ್ನು ಸಾಂಬಾರು ಮಾಡಿಒಕೊಂಡು ತಿಂದರೆ ಸಾಯೋದು ಗ್ಯಾರೆಂಟಿ.

ಯಾಕಂದ್ರೆ ಪಫರ್ ಪಿಶ್ ಮೈ ತುಂಬಾ ಕಾರ್ಕೋಟಕ ವಿಷವನ್ನಿಟ್ಟುಕೊಂಡಿದೆ. ಆ ವಿಷ ಎಷ್ಟು ಡೇಂಜರಸ್ ಅಂದ್ರೆ ಅದು ಏಕಕಾಲದಲ್ಲಿಯೇ ಮೂವತ್ತು ಮಂದಿಯನ್ನು ಬಲಿ ತೆಗೆದುಕೊಂಡು ಬಿಡಬಲ್ಲುದು. ಆದ್ದರಿಂದಲೇ ಈ ಮೀನನ್ನು ಯಾರೂ ಕೂಡಾ ಖಾದ್ಯ ಮಾಡಿಕೊಂಡು ಮೆಲ್ಲುವಂಥಾ ದುಸ್ಸಾಹಸಕ್ಕಿಳಿಯೋದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ತಿಂದವರನ್ನು ಯಾವ ಐಷಧಿಯೂ ಬದುಕಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಮೀನುಗಾರರು ಅಕಸ್ಮಾತಾಗಿ ಈ ಮೀನು ಸಿಕ್ಕರೆ ಅದನ್ನು ತಕ್ಷಣವೇ ವಿಲೇವಾರಿ ಮಾಡಿ ಬಿಡ್ತಾರೆ.

ಅವನ ಹೆಂಡತಿ ಫಿಜ್ಜಾ!


ಬರಬರುತ್ತಾ ಜನ ತುಂಬಾನೇ ವಿಚಿತ್ರವಾಗ ತೊಡಗಿದ್ದಾರೆ. ಯಾವ ಕಲ್ಪನೆಗೂ ನಿಲುಕದಂಥಾ ವಿಚಿತ್ರ ನಡವಳಿಕೆಗಳ ಮೂಲಕ ಸದ್ದು ಮಾಡಲಾರಂಭಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಆಧುನಿಕ ಮಾನವರು ಸಂಬಂಧಗಳ ಬಗ್ಗೆಯೇ ನಂಬಿಕೆ ಕಳೆದುಕೊಂಡು ಅಕ್ಷರಶಃ ಅಂತರ್ ಪಿಶಾಚಿಗಳಂತಾಡತೊಡಗಿದ್ದಾರೆ. ಹಾಗಿದ್ದ ಮೇಲೆ ಎಲ್ಲ ಬಂಧಗಳನ್ನೂ ಗಟ್ಟಿಗೊಳಿಸುವ, ಒಚಿಟಿ ಬದುಕಿಗೆ ಟಿಸಿಲು ಮೂಡಿಸುವ ಮದುವೆಯೆಂಬೋ ಪಾರಂಪರಿಕ ಸಂಪ್ರದಾಯದ ಮೇಲೆ ಯುವ ಸಮೂಹ ನಂಬಿಕೆ ಇಡೋದು ಸಾಧ್ಯವೇ.

ಈಗಂತೂ ಯುವ ಜನತೆ ಮದುವೆಯನ್ನು ಸಂಕೋಲೆ ಎಂದೇ ಭಾವಿಸುತ್ತಿದ್ದಾರೆ. ಯಾವ ಬಂಧನವೂ ಇಲ್ಲದಿರೋ ಸ್ವಚ್ಛಂದ ಜೀವನದತ್ತ ಹಾತೊರೆಯುತ್ತಿದ್ದಾರೆ. ಮದುವೆ, ಗಂಡ ಹೆಂಡತಿ ಅಂದರೆ ಸ್ವಾತಂತ್ರ್ಯದ ಎದೆಗೆ ನಾಟಿಕೊಳ್ಳೋ ಬಂಧನದ ಮುಳ್ಳೆಂದೇ ಭಾವಿಸುತ್ತಿದ್ದಾರೆ. ಅಂಥಾದ್ದೇ ಮನಸ್ಥಿತಿಯಲ್ಲಿ ಮನುಷ್ಯ ಸಂಬಂಧಗಳ ಮೇಲೆ ನಂಬಿಕೆ ಕಳೆದುಕೊಂಡ ಆಸಾಮಿಯೊಬ್ಬ ಇಡೀ ಜಗತ್ತನ್ನೇ ಬೆಚ್ಚಿಬೀಳಿಸುವಂತೆ ಮದುವೆಯಾಗಿಬಿಟ್ಟಿದ್ದಾನೆ. ಆತನ ಮದುವೆ ಆ ಪರಿ ಸೆನ್ಸೇಷನ್ ಆಗಿರೋದಕ್ಕೆ ಕಾರಣವಿದೆ. ಯಾಕಂದ್ರೆ ಇಪ್ಪತ್ತೆರಡು ವರ್ಷದ ಆ ಯುವಕ ಮದುವೆಯಾಗಿರೋದು ಬಹುತೇಕರು ಚಪ್ಪರಿಸಿ ತಿನ್ನೋ ಫಿಜ್ಜಾ ಕೇಕ್ ಅನ್ನು!

ರಷ್ಯಾದ ಆ ಪುಣ್ಯಾತ್ಮನಿಗೆ ಇಪ್ಪತ್ತೆರಡರ ಹೊತ್ತಿಗೆಲ್ಲ ಏಕಾಂಗಿ ಜೀವನ ಬೋರು ಹೊಡೆಸಿತ್ತು. ಹಾಗಂತ ಹುಡುಗಿಯನ್ನು ಮದುವೆಯಾಗೋದು ಅವನಿಗಿಷ್ಟ ಇರಲಿಲ್ಲ. ಯಾಕಂದ್ರೆ ಅಲ್ಲಿ ವಿನಾ ಕಾರಣ ಜಗಳ, ನಂಬಿಕೆ ದ್ರೋಹ ಸಂಭವಿಸುತ್ತೆ ಅನ್ನೋದು ಅವನ ನಂಬಿಕೆ. ಆದ್ದರಿಂದಲೇ ಸೀರಿಯಸ್ಸಾಗಿ ಆತ ಫಿಜ್ಜಾ ಕೇಕನ್ನೇ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾನಂತೆ. ಆದರೆ ಆ ದೇಶದ ಅಧಿಕಾರಿಗಳು ಈ ಮದುವೆಗೆ ಕಾನೂನು ಮಾನ್ಯತೆ ಕೊಟ್ಟಿಲ್ಲ. ಅದಕ್ಕೂ ಕೇರು ಮಾಡದ ಈ ಹುಡುಗ ಫಿಜ್ಜಾವನ್ನು ಪ್ರೀತಿಯಿಂದ ವರಿಸಿದ್ದಾನೆ. ಆದರೆ ಮುಂಬರುವ ಖಾಸಗೀ ಅಗತ್ಯಗಳಿಗೆ ಅದೇನು ಮಾಡುತ್ತಾನೋ ಭಗವಂತನೇ ಬಲ್ಲ!

ರಕ್ಕಸ ಮರುಭೂಮಿ


ಮರುಭೂಮಿ ಅಂತೊಂದು ಪದ ಕಿವಿ ಸೋಕಿದಾಕ್ಷಣವೇ ಎಲ್ಲರ ಮನಸಲ್ಲಿಯೂ ಸಹಾರಾ ಮರುಭೂಮಿಯ ಚಿತ್ರ ಮೂಡಿಕೊಳ್ಳುತ್ತೆ. ಮೈ ತುಂಬಾ ಮರಳು ಮತ್ತು ಅದರ ಮೇಲೆ ರೌರವ ಬಿಸಿಲಿನಿಂದ ಭಣಗುಡುವ ಸಹಾರಾ ನಾನಾ ಬಗೆಯಲ್ಲಿ ಜನರನ್ನು ಆಕರ್ಷಿಸುತ್ತೆ. ಆದರೆ ಯಾರೊಬ್ಬರೂ ಕೂಡಾ ಅಲ್ಲಿ ಹೋಗಿ ಬದುಕಬೇಕಂತ ಕನಸು ಕಾಣೋದು ಡೌಟು. ಸಹಾರ ಅಂಥಾ ಎಲ್ಲ ಅಂಶಗಳನ್ನೂ ತನ್ನದಾಗಿಸಿಕೊಂಡಿದೆ. ಆದರೆ ಅದೇನು ವಿಶ್ವದ ದೊಡ್ಡ ಮರುಭೂಮಿಯಲ್ಲ. ಅಕ್ಷರಶಃ ಎದೆ ಅದುರಿಸುವಷ್ಟು ವಿಶಾಲವಾಗಿ ಹಬ್ಬಿಕೊಂಡಿರೋ ಪ್ಯೂರ್ ಮರುಭೂಮಿಯೊಂದಿದೆ!

ಹಾಗೆ ನೋಡಿದರೆ ನಮ್ಮ ಸಹಾರಾ ಮರುಭೂಮಿಯ ಕಾಲ ಭಾಗವಷ್ಟೇ ಮರಳಿನಿಂದ ಆವೃತವಾಗಿದೆ. ಮಿಕ್ಕುಳಿದ ಭಾಗಗಳು ಜಲ್ಲಿ ಕಲ್ಲುಗಳು ಮತ್ತು ಗುಡ್ಡಗಳ ರಚನೆಯನ್ನೊಳಗೊಂಡಿದೆ. ಅಷ್ಟೇ ಪ್ರಮಾಣದಲ್ಲಿ ಓಯಾಸಿಸ್‌ಗಳೂ ಕೂಡಾ ಸಹಾರಾದ ಒಡಲಲ್ಲಿವೆ. ಈ ಸಹಾರಾವನ್ನೇ ಮೀರಿಸುವಂಥಾ, ಅಗಾಧ ಪ್ರದೇಶದಲ್ಲಿ ಮೈಚಾಚಿಕೊಂಡಿರುವಂಥಾ ಮತ್ತೊಂದು ಮರುಭೂಮಿ ಇದೆ ಅದು ಅಂಟಾರ್ಟಿಕ್ ಪೋಲಾರ್ ಮರುಭೂಮಿ. ವಿಶೇಷ ಅಂದ್ರೆ ಈ ಮರುಭೂಮಿ ಹಿಮಚ್ಛಾದಿತವಾಗಿದೆ.

ಹಿಮದಿಂದಲೇ ಆವೃತವಾಗಿರೋ ಈ ಮರುಭೂಮಿ ಒಂದು ಕಾಲಮಾನದಲ್ಲಿ ಹಿಮ ಕರಗಿ ತನ್ನ ನೈಜ ಸ್ವರೂಪವನ್ನ ಪ್ರದರ್ಶಿಸುತ್ತೆ. ಆಗ ಅದರ ಮೈತುಂಬಾ ಮರಳಿನ ಹೊದಿಕೆ ಗೋಚರಿಸುತ್ತೆ. ಅದು ಜಗತ್ತಿನ ಅತೀ ದೊಡ್ಡ ನೈಜ ಮರುಭೂಮಿ ಅನ್ನೋ ಖ್ಯಾತಿಯನ್ನೂ ತನ್ನದಾಗಿಸಿಕೊಂಡಿದೆ. ಅದು ೫.೫ ದಶಲಕ್ಷ ಚದರ ಮೈಲಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಸಹಾರಾ ಮರುಭೂಮಿ ಕೇವಲ ೩.೬ ದಶಲಕ್ಷ ಚದರ ಮೈಲಿಗಳಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ಎಲ್ಲ ನಿಟ್ಟಿನಲ್ಲಿಯೂ ಅಂಟಾರ್ಟಿಕ್ ಪೋಲಾರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತೆ.

Tags: #weirdfacts#weirdthings#wonderfacts

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
unbelievable but true facts: ತಲೆಗೆ ಹುಳ ಬಿಡುವ ಸುದ್ದಿಗಳು!

unbelievable but true facts: ತಲೆಗೆ ಹುಳ ಬಿಡುವ ಸುದ್ದಿಗಳು!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.