ತಮ್ಮ ನಟನೆಯಿಂದ ಜನಮನ ಗೆದ್ದಿದ್ದ ನಟ ಚಿರಂಜೀವಿ ಸರ್ಜಾ, ಹಠಾತ್ ನಿಧನರಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಚಿರಂಜೀವಿ ಸರ್ಜಾ ತಮ್ಮ ನಿಧನಕ್ಕೂ ಮುಂಚೆ ‘ರಾಜಮಾರ್ತಾಂಡ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾದ ಚಿತ್ರೀಕರಣ ಸಹ ಮುಕ್ತಾಯವಾಗಿತ್ತು. ಆದರೆ ‘ರಾಜಮಾರ್ತಾಂಡ’ ಸಿನಿಮಾದ ಡಬ್ಬಿಂಗ್ ಪೂರ್ಣವಾಗುವುದರ ಹೊತ್ತಿಗೆ ಚಿರು ಇಹಲೋಕ ತ್ಯಜಿಸಿದ್ದರು.

ಹೀಗಾಗಿ ಚಿರು ಅಭಿನಯದ ‘ರಾಜಮಾರ್ತಾಂಡ’ ಸಿನಿಮಾ ಅರ್ಧಕ್ಕೆ ನಿಲ್ಲುವಂತಾಯಿತು. ಈ ವೇಳೆ ಚಿರಂಜೀವಿ ಸರ್ಜಾ ಸೋದರ ಧ್ರುವ ಸರ್ಜಾ ತಮ್ಮ ಅಣ್ಣನ ಸಿನಿಮಾಕ್ಕೆ ಹೆಗಲಾದರು. ಸಿನಿಮಾದಲ್ಲಿ ಧ್ರುವ ಸರ್ಜಾ ತಮ್ಮ ಅಣ್ಣನ ಪಾತ್ರಕ್ಕೆ ತಮ್ಮ ಧ್ವನಿ (ಡಬ್ಬಿಂಗ್) ನೀಡಿ, ಚಿತ್ರವನ್ನು ಪೂರ್ಣ ಮಾಡಲು ಚಿತ್ರತಂಡಕ್ಕೆ ಸಹಕಾರ ನೀಡಿದ್ದಾರೆ.

ಶಿವಕುಮಾರ್ ನಿರ್ಮಿಸಿರುವ, ರಾಮನಾರಾಯಣ್ ನಿರ್ದೇಶಿಸಿರುವ ಹಾಗೂ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ‘ರಾಜ ಮಾರ್ತಾಂಡ’ ಚಿತ್ರ ಸದ್ಯ ಬಿಡುಗಡೆಗೆ ಸಿದ್ದವಾಗಿದೆ. ಅಣ್ಣ ಚಿರು ಎಂದರೆ ತಮ್ಮ ಧ್ರುವ ಅವರಿಗೆ ತುಂಬಾ ಪ್ರೀತಿ. ಹಾಗಾಗಿ ‘ರಾಜ ಮಾರ್ತಾಂಡ’ ಚಿತ್ರವನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ದಿನವಾದ ಇದೇ ಅಕ್ಟೊಬರ್ 6 ರಂದು ಬಿಡುಗಡೆ ಮಾಡಲು ನಿರ್ಮಾಪಕ ಹಾಗೂ ನಿರ್ದೇಶಕರು ನಿರ್ಧರಿಸಿದ್ದಾರೆ.
‘ರಾಜಮಾರ್ತಾಂಡ’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ‘ರಾಜಮಾರ್ತಾಂಡ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.





