ಇತ್ತೀಚಿನ ದಿನಗಳಲ್ಲಿಹಲವು ನಿರ್ದೇಶಕರು ತಮ್ಮ ವಿಭಿನ್ನ ರೀತಿಯ ಕಥೆಯನ್ನು ತೆರೆಮೇಲೆ ತರಲು ತಾವೇ ನಟನೆಗಿಳಿಯುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪೆಡೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಡಿ ಸತ್ಯಪ್ರಕಾಶ್. ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಮಾಡಿದ್ದ ಸತ್ಯಪ್ರಕಾಶ್ ತಮ್ಮ ಮೊದಲೆರೆಡು ಸಿನಿಮಾಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಇವರ ನಿರ್ದೇಶನಲ್ಲಿ‘ಮ್ಯಾನ್ ಆಫ್ ದಿ ಮ್ಯಾಚ್’ ಎಂಬ ಸಿನಿಮಾ ಮೂಡಿ ಬಂದಿತ್ತು. ನಿರ್ದೇಶನದ ಜತೆಗೆ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣವನ್ನು ಸಹ ಮಾಡುವ ಸತ್ಯ ಸಿನಿಮಾಗಳ ವಿತರಣೆಯನ್ನು ಸಹ ಕಳೆದ ಒಂದೂವರೆ ವರ್ಷಗಳಿಂದ ಮಾಡುತ್ತಿದ್ದಾರೆ.

ಈಗಾಗಲೇ 35ಕ್ಕೂ ಹೆಚ್ಚಿನ ಸಿನಿಮಾಗಳನ್ನು ‘ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್’ ವತಿಯಿಂದ ವಿತರಿಸಿದ್ದಾರೆ. ಈಗ ಸತ್ಯ ಪ್ರಕಾಶ್ ತಮ್ಮ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದು, ಈ ಚಿತ್ರದಲ್ಲಿ ತಾವೂ ಸಹ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕೊಂಚ ಫ್ಯಾಂಟಸಿ ಮತ್ತು ಕಮರ್ಷಿಯಲ್ ಎಲಿಮೆಂಟ್‌ಗಳಿರುವ ಈ ಹೊಸ ಸಿನಿಮಾದಲ್ಲಿ ಫ್ರೆಶ್ ಆಗಿರುವ ನಕ್ಕು ನಗಿಸುವಂತಹ ಕಥೆಯನ್ನು ಸಿನಿಮಾದಲ್ಲಿ ಸತ್ಯಪ್ರಕಾಶ್ ಹೇಳಲಿದ್ದಾರೆ.
ಈ ಚಿತ್ರದಲ್ಲಿ ಸತ್ಯ ಪ್ರಕಾಶ್ ಜತೆಗೆ ಅಥರ್ವ ಪ್ರಕಾಶ್ ಎಂಬ ಯುವಕ ಕೂಡಾ ನಟಿಸುತ್ತಿದ್ದಾರೆ. ಸತ್ಯಪ್ರಕಾಶ್ ಅವರೇ ನಿರ್ದೇಶನ ಮಾಡಿದ್ದ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾದಲ್ಲಿ ಅಥರ್ವ ಪ್ರಕಾಶ್ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು. ವಿಶೇಷ ಎಂದರೆ ಈ ಸಿನಿಮಾದಲ್ಲಿಸತ್ಯಪ್ರಕಾಶ್ ನಿರ್ದೇಶನ, ಮತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ಮಾಣವನ್ನು ಸಹ ಮಾಡುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಅನೌನ್ಸ್‌ಮೆಂಟ್ ಮಾತ್ರ ಈಗ ಮಾಡಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.





